![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 14, 2019, 3:07 AM IST
ಬೆಂಗಳೂರು: ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತ ಹೀನತೆ, ಕಡಿಮೆ ತೂಕ ಸಮಸ್ಯೆ ನಿವಾ ರಣೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ “ಪೋಷಣ್ ಅಭಿಯಾನ್’ ರಾಜ್ಯದಲ್ಲೂ ಸಮರ್ಪಕ ಜಾರಿ ಸಂಬಂಧ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮತಿ ಇರಾನಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಸಮಾಲೋಚಿಸಿದರು.
ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಅವರು, ಪೋಷಣ್ ಅಭಿಯಾನ್ ಯೋಜನೆ ಮೂಲಕ ಮಕ್ಕಳು ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳುವ ಗುರಿ ಕೇಂದ್ರ ಸರ್ಕಾರದ್ದಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕೆಂದು ಹೇಳಿದರು. ಜತೆಗೆ ರಾಜ್ಯದ ಸಾಮಾಜಿಕ ಸಂಘ- ಸಂಸ್ಥೆಗಳು ಸಹ ಯೋಜನೆಯ ಜತೆ ಕೈ ಜೋಡಿಸಿ ಪ್ರತಿ ಕುಟುಂಬದಲ್ಲೂ ಆಪೌಷ್ಠಿಕತೆ, ರಕ್ತ ಹೀನತೆ, ಕಡಿಮೆ ತೂಕದ ಮಕ್ಕಳು ಇದ್ದರೆ ಅವರಿಗೆ ಜಾಗೃತಿ ಮೂಡಿಸಿ ಸರ್ಕಾರದ ಕಾರ್ಯಕ್ರಮ ತಲುಪುವಂತೆ ಮಾಡಬೇಕು ಎಂದರು.
ಪೋಷಣ್ ಅಭಿಯಾನದಡಿ ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು, ದೇಶದ ಹಲವು ರಾಜ್ಯಗಳಲ್ಲಿ ಅಲ್ಲಿನ ರಾಜ್ಯ ಸರ್ಕಾರಗಳ ಸಹಕಾರ, ಯೋಜನೆಯಿಂದ ಅನುಕೂಲವಾಗಿರುವ ಮಕ್ಕಳ ವಿವರಗಳನ್ನು ಇದೇ ಸಂದರ್ಭದಲ್ಲಿ ಸ್ಮತಿ ಇರಾನಿ ಅವರು ಮುಖ್ಯಮಂತ್ರಿ ಯವರಿಗೆ ನೀಡಿದರು. ಸಿಎಂ ಯಡಿಯೂರಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಯವರ ಸ್ವಾಸ್ಥ್ಯ ಭಾರತ ನಿರ್ಮಾಣದ ಕನಸು ನನಸಾಗುವ ಕಾರ್ಯಕ್ರಮ ಇದಾಗಿದ್ದು, ಇದಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ಈಗಾಗಲೇ 19 ಜಿಲ್ಲೆಗಳಲ್ಲಿ ಪೋಷಣ್ ಅಭಿಯಾನ್ ಯೋಜನೆ ಜಾರಿ ಸಂಬಂಧ ಸಂಪುಟ ಸಭೆಯಲ್ಲೂ ತೀರ್ಮಾನ ಕೈಗೊಂಡಿದೆ. ಉಳಿದ 11 ಜಿಲ್ಲೆಗಳಲ್ಲೂ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಸದ್ಯದಲ್ಲೇ ಅಧಿಕಾರಿಗಳ ಸಭೆ ನಡೆಸಿ ಪೋಷಣ್ ಅಭಿಯಾನ್‌ಗೆ ಎಲ್ಲ ರೀತಿಯ ಸಹಕಾರ ನೀಡಿ ಯಶಸ್ವಿಯಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಲಿದ್ದೇನೆ ಎಂದು ಹೇಳಿದರು. ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಹಿರಿಯ ಅಧಿಕಾರಿಗಳು ಸಮಾಲೋಚನಾ ಸಭೆಯಲ್ಲಿ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.