ಹನಿಟ್ರ್ಯಾಪ್ ಮೂಲಕ ಮತಾಂತರ! ಮದುವೆಯ ಆಮಿಷ
ಐಸಿಸ್, ಐಎಸ್-ಕೆಪಿಗೆ ಸೇರುವಂತೆ ಪ್ರಚೋದನೆ
Team Udayavani, Jan 5, 2022, 7:00 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಐಸಿಸ್ ಸಂಘಟನೆ ಸಂಪರ್ಕದ ಆರೋಪದಲ್ಲಿ ಸೋಮವಾರ ಮಂಗಳೂರಿನ ಉಳ್ಳಾಲದಲ್ಲಿ ಬಂಧನಕ್ಕೊಳಗಾದ ದಂತ ವೈದ್ಯೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ “ಹನಿಟ್ರ್ಯಾಪ್’ ಮೂಲಕ ಹಿಂದೂ ಯುವಕರನ್ನು ಸೆಳೆದು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಸ್ಫೋಟಕ ವಿಚಾರ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಐದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ಮಾದೇಶ್ ಪೆರುಮಾಳ್ ಅಲಿಯಾಸ್ ಅಬ್ದುಲ್ ಎಂಬಾತ ದೀಪ್ತಿ ಮಾರ್ಲಳ ಹನಿಟ್ರ್ಯಾಪ್‌ಗೆ
ಒಳಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಮಡಿಕೇರಿ ಮೂಲದ ದೀಪ್ತಿ ಮೂಲತಃ ಹಿಂದೂ ಆಗಿದ್ದು, ಮಂಗಳೂರಿನ ದೇರಳಕಟ್ಟೆಯಲ್ಲಿ ಬಿಡಿಎಸ್ ವ್ಯಾಸಂಗ ಸಂದರ್ಭದಲ್ಲಿ ಮಾಜಿ ಶಾಸಕ ಇದಿನಬ್ಬ ಅವರ ಮೊಮ್ಮಗ ಅನಾಸ್ ಅಬ್ದುಲ್ ರೆಹಮಾನ್‌ನನ್ನು ಪ್ರೀತಿಸಿ, ಇಸ್ಲಾಂಗೆ ಮತಾಂತರಗೊಂಡು ಮದುವೆಯಾಗಿದ್ದಳು.
ಅನಂತರ “ಕ್ರೋನಿಕಲ್ ಫೌಂಡೇಶನ್’ ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಐಸಿಸ್ ಪರ ಕೆಲಸ ಮಾಡುತ್ತಿದ್ದಳು. ಈ ವೇಳೆ ಸಂಬಂಧಿ ಅಮ್ಮರ್ ಅಬ್ದುಲ್ ರೆಹಮಾನ್ ಸೂಚನೆ ಮೇರೆಗೆ ರಾಜ್ಯದಲ್ಲಿ ಹಿಂದೂ ಯುವಕರನ್ನು “ಹನಿಟ್ರ್ಯಾಪ್’ ಮೂಲಕ ಮತಾಂತರಗೊಳಿಸಿ ಐಸಿಸ್ ಸಂಘಟನೆ ಸೇರುವಂತೆ ಪ್ರಚೋದಿಸುತ್ತಿದ್ದಳು.
ಇದನ್ನೂ ಓದಿ:ಕೋವಿಡ್ ಹೆಚ್ಚಳ : ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ಬೆಂಗಳೂರಿನಲ್ಲಿ 2 ವಾರ ಶಾಲೆ ಬಂದ್
15ಕ್ಕೂ ಹೆಚ್ಚು ಖಾತೆಗಳು
ಮರಿಯಂ ಪತಿ ಅನಾಸ್ ಅಬ್ದುಲ್ ರೆಹಮಾನ್ ಹಾಗೂ ಸಂಬಂಧಿ ಅಮ್ಮರ್ ಅಬ್ದುಲ್ ರೆಹಮಾನ್‌ನ ಪ್ರಚೋದನೆಯಿಂದ ಇಸ್ಲಾಂ ಧರ್ಮದ ಬಗ್ಗೆ ಒಲವು ಬೆಳೆಸಿಕೊಂಡಿದ್ದಳು. ಅಮ್ಮರ್ ರೆಹಮಾನ್ ಸೂಚನೆ ಮೇರೆಗೆ ಯುವಕರನ್ನು ಸೆಳೆಯಲು ಆರಂಭಿಸಿದ್ದಳು. ಆದರೆ ಮೊದಲ ಒಂದೆರಡು ಪ್ರಯತ್ನಗಳು ವಿಫಲಗೊಂಡಿದ್ದವು. ಹೀಗಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂಗಳಲ್ಲಿ ಹಿಂದೂ ಹಾಗೂ ಮುಸ್ಲಿಂ ಹೆಸರಿನಲ್ಲಿ “15’ಕ್ಕೂ ಅಧಿಕ ಖಾತೆಗಳನ್ನು ತೆರೆದಿರುವ ದೀಪ್ತಿ, ಹಿಂದೂ ಯುವಕರಿಗೆ ಹಿಂದೂ ಎಂದೂ ಮುಸ್ಲಿಂ ಯುವಕರಿಗೆ ಮುಸ್ಲಿಂ ಎಂದೂ ಪರಿಚಯಿಸಿಕೊಳ್ಳುತ್ತಿದ್ದರು. ಈಕೆಯ “ಲೈಂಗಿಕ ಪ್ರಚೋದನೆ’ ಚಾಟಿಂಗ್‌ಗಳು ಯುವಕರನ್ನು ಆಕರ್ಷಿತರನ್ನಾಗಿಸುತ್ತಿದ್ದವು.
ಆಕೆ ಜತೆ ಆತ್ಮೀಯತೆ ಬೆಳೆಸಿಕೊಂಡ ಹಿಂದೂ ಯುವಕರಿಗೆ ವೀಡಿಯೊ ಕರೆ ಮಾಡಿ ಮದುವೆಯಾಗುವುದಾಗಿ ತಿಳಿಸಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಪ್ರೇರಣೆ ನೀಡುತ್ತಿದ್ದರು. ಜತೆಗೆ ಕೆಲವೊಂದು ಆಮಿಷಗಳನ್ನೂ ಒಡ್ಡುತ್ತಿದ್ದಳು.
ಇನ್ನು ಮುಸ್ಲಿಂ ಯುವಕರಿಗೂ ಮದುವೆ ಹಾಗೂ ಪ್ರೀತಿಯ ಆಮಿಷವೊಡ್ಡಿ, ಜೆಹಾದಿ ಬಗ್ಗೆ ಪ್ರಚೋದಿಸಿ ಐಸಿಸ್ ಸಂಘಟನೆ ಸೇರುವಂತೆ ಪ್ರೇರಣೆ ನೀಡುತ್ತಿದ್ದಳು. ಇದರಿಂದ 2020 ಮತ್ತು 2021ರಲ್ಲಿ ನಾಲ್ಕೈದು ಯುವಕರು ಕೇರಳದಿಂದ ಸಿರಿಯಾಕ್ಕೆ ಭೇಟಿ ನೀಡಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಮದುವೆಯಾಗುವುದಾಗಿ ನಂಬಿಸಿ ಮತಾಂತರ
ಐದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಮಾದೇಶ್ ಪೆರುಮಾಳ್ ಕೂಡ ದೀಪ್ತಿಯ ಪ್ರಚೋದನೆಯಿಂದ ಮತಾಂತರಗೊಂಡು “ಅಬ್ದುಲ್’ ಆಗಿ ಮತಾಂತರಗೊಂಡಿದ್ದ. ಕುಟುಂಬದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಮಾದೇಶ್ ಪೆರುಮಾಳ್‌ನನ್ನು ಇನ್‌ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡಿದ್ದ ದೀಪ್ತಿ, ಆತನಿಗೆ ಬದಲಾವಣೆ ಬಗ್ಗೆ ಪ್ರಚೋದಿಸಿದ್ದರು. ಅನಂತರ “ನಿನ್ನ ಸಮಸ್ಯೆಗೆ ನನ್ನ ಬಳಿ ಪರಿಹಾರವಿದೆ. ಆಫ್ಘಾನಿಸ್ಥಾನ ಮತ್ತು ಸಿರಿಯಾದಲ್ಲಿ ನಮ್ಮ ಸಮುದಾಯದವರು ದೊಡ್ಡ ಮಟ್ಟದಲ್ಲಿ ಬದಲಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಅವರೊಂದಿಗೆ ಸೇರಿದರೆ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಜತೆಗೆ ನಾನು ನಿನ್ನನ್ನು ಮದುವೆಯಾಗುತ್ತೇನೆ’ ಎಂದು ಪ್ರೇರೇಪಿಸಿದ್ದಳು. ಆತ ಅಬ್ದುಲ್ ಆಗಿ ಮತಾಂತರಗೊಂಡು ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗುವುದಾಗಿ ಸಂಘಟನೆ ಸದಸ್ಯರಿಗೆ ಆನ್‌ಲೈನ್ ಮೂಲಕವೇ ಭರವಸೆ ನೀಡಿದ್ದ. ಈ ಕೃತ್ಯಕ್ಕೆ ಮರಿಯಾ ಸುಮಾರು 10 ಲಕ್ಷ ರೂ. ಖರ್ಚು ಮಾಡಿದ್ದಳು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಕಾಶ್ಮೀರದಲ್ಲೂ ನಕಲಿ ಹೆಸರಿನಲ್ಲಿ ಪರಿಚಯ
ಮರಿಯಂ ಮತ್ತು ಪತಿ ರೆಹಮಾನ್ ಹಾಗೂ ಮೊಹಮ್ಮದ್ ಅಮೀನ್ 2020ರಲ್ಲಿ ಕಾಶ್ಮೀರದಲ್ಲಿ ನಡೆದ ನಡೆದ ಹಿಜ್ರಾ ಅಥವಾ ವಲಸಿಗರ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆಯೂ ಮರಿಯಂ ನಕಲಿ ಹೆಸರಿನ ಮೂಲಕ ಸ್ಥಳೀಯರನ್ನು ಪರಿಚಯಿಸಿಕೊಂಡಿದ್ದರು. ಅನಂತರ ಅಲ್ಲಿನ ಯುವಕರ ಜತೆ ಸಾಮಾಜಿಕ ಜಾಲತಾಣದ ಮೂಲಕ ಬೇರೆ ಬೇರೆ ಹೆಸರಿನಲ್ಲಿ ಚಾಟಿಂಗ್ ಮಾಡಿ, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್) ಅಥವಾ ಅಫ್ಘಾನಿಸ್ಥಾನದ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್-ಕೊರಸನ್ ಪ್ರಿವೆಟ್(ಐಎಸ್-ಕೆಪಿ) ಸಂಘಟನೆಗೆ ಸೆಳೆಯುತ್ತಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ 10ಕ್ಕೂ ಅಧಿಕ ಯುವಕರು ಗಾಳಕ್ಕೆ?
ಮರಿಯಂ, ಮಾದೇಶ್ ಪೆರುಮಾಳ್ ಮಾತ್ರವಲ್ಲದೆ ಕರಾವಳಿ ಭಾಗ ಸೇರಿ ರಾಜ್ಯದ ವಿವಿಧೆಡೆ 10ಕ್ಕೂ ಅಧಿಕ ಹಿಂದೂ ಯುವಕರನ್ನು ಇಸ್ಲಾಂಗೆ ಮತಾಂತರಕ್ಕೆ ಯತ್ನಿಸಿದ್ದಳು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ದಿಲ್ಲಿಯಲ್ಲಿ ಮರಿಯಂಳ ವಿಚಾರಣೆ ನಡೆಯುತ್ತಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
-ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.