ಕೊರೊನಾ: ನಾರದ ಪಾಯಿಂಟ್
Team Udayavani, Mar 16, 2020, 3:06 AM IST
ಒಂದೇ ಫ್ರೇಮ್‌ನಲ್ಲಿ ನಗದವರು!
ವಿಧಾನಸಭೆಯ ಅಧಿವೇಶನ ನಡಿಯೋ ಟೈಮ್‌ನಲ್ಲಿಯೇ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಘೋಷಣೆ ಮಾಡಿದ್ದು, ರಾಜ್ಯ ಕಾಂಗ್ರೆಸ್ ನಾಯಕರ ಎರಡು ರೀತಿಯ ಮುಖಗಳು ದರ್ಶನ ಆಗುವ ಹಾಗಾಯಿತು. ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿರುವುದಕ್ಕೆ ರಾಜ್ಯ ಕಾಂಗ್ರೆಸ್ ನಾಯಕರೊಳಗ ಯಾರ್ ಯಾರಿಗೆ ಖುಷಿ ಆಯ್ತು, ಯಾರಿಗೆ ಬೇಸರ ಆಗಿತ್ತು ಎನ್ನೊದು ಘೋಷಣೆಯಾದ ಅರ್ಧ ಗಂಟೆಯಲ್ಲಿ ಅವರ ಮುಖಗಳನ್ನು ನೋಡಿದಾಗ ಕಾಣಿಸುತ್ತಿತ್ತು. ಆದರೆ, ಈ ಬೆಳವಣಿಗೆ ಎಲ್ಲರಿಗೂ ಸಂತೋಷ ತಂದಿದೆ ಎನ್ನುವುದನ್ನು ಮಾಧ್ಯಮಗಳ ಮುಂದೆ ತೋರಿಸಲು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಪ್ತರು ಕಸರತ್ತು ನಡೆಸುವಂತಾಯಿತು. ಸಿದ್ದರಾಮಯ್ಯ ಅವರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಹೂಗುತ್ಛ ಕೊಡಿಸಿ ಫೋಟೊ ತೆಗೆಸಲು ಅವರ ಆಪ್ತ ಬಳಗ ಇಬ್ಬರನ್ನೂ ಒಂದೇ ಫ್ರೇಮ್‌ನಲ್ಲಿ ನಿಲ್ಲಿಸಲು ಪರದಾಡುವಂತಾಯಿತು. ವಿಧಾನಸಭೆಯ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಕುಳಿತುಕೊಂಡಿದ್ದರು. ಅಲ್ಲಿಗೆ ಸದನದ ಒಳಗೆ ಹೋಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಹೊರಗೆ ಕರೆಸಲು ಸಿದ್ದರಾಮಯ್ಯ ಆಪ್ತರು ಮಾಧ್ಯಮದವರ ಸಹಕಾರ ಪಡೆದು ಚೀಟಿ ಕಳುಹಿಸಿ ಹೊರ ಕರೆಸುವಲ್ಲಿ ಯಶಸ್ವಿಯಾಗಿ ಅಕ್ಕ-ಪಕ್ಕ ನಿಲ್ಲಿಸಿದರೂ ಇಬ್ಬರೂ ಒಬ್ಬರನ್ನೊಬ್ಬರು ನಗುಮುಖದಿಂದ ನೋಡಿದ ಫೋಟೊ ಸಿಗಲಿಲ್ಲ. ಕಡೆಗೆ ಅಕ್ಕಪಕ್ಕ ಕುಳಿತುಕೊಂಡಿದ್ದನ್ನೇ ಒಂದೇ ಫ್ರೇಮ್‌ನಲ್ಲಿ ಹಿಡಿದು ಅದೇ ಫೋಟೊ ನೋಡಿ ಖುಷಿ ಪಟ್ಟು ಅವರಿಬ್ಬರ ನಡುವೆ ಒಗ್ಗಟ್ಟಿದೆ ಎಂದು ತಾವೇ ಸಮಾಧಾನ ಪಟ್ಟುಕೊಳ್ಳುವಂತಾಯಿತು.
ಸಾವ್ಕಾರನಿಗೆ ಸಿದ್ದು ಮೇಲೆ ಲವ್!
ಸಚಿವ ಡಾ.ಕೆ.ಸುಧಾಕರ್ ಹಾಗೂ ಸ್ಪೀಕರ್ ರಮೇಶ್‌ಕುಮಾರ್ ಅವರ ಪರಸ್ಪರ ಹಕ್ಕುಚ್ಯುತಿ ಕಳೆದ ವಾರ ವಿಧಾನಸಭೆಯಲ್ಲಿ ದೊಡ್ಡ ಸದ್ದು ಮಾಡಿತ್ತು. ಡಾ.ಕೆ.ಸುಧಾಕರ್ ವಿರುದ್ಧದ ಹಕ್ಕುಚ್ಯುತಿ ಪ್ರಸ್ತಾಪ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿದರು. ರಮೇಶ್ ಜಾರಕಿಹೊಳಿ, ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಟಾರ್ ಸಹಿತ ಬಿಜೆಪಿ ಸದಸ್ಯರು ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಅವರ ವಿರುದ್ಧ ಮುಗಿಬಿದ್ದಾಗ ಕಾಂಗ್ರೆಸ್‌ನ ಇತರ ಸದಸ್ಯರು ಹೆಚ್ಚಾಗಿ ಯಾರೂ ಮಾತನಾಡಲಿಲ್ಲ. ಮಧ್ಯಾಹ್ನ ಭೋಜನಾ ವಿರಾಮದ ನಂತರ ಸದನ ಆರಂಭಕ್ಕೆ ಮುಂಚೆ ಪ್ರತಿಪಕ್ಷ ಸಾಲಿನತ್ತ ಆಗಮಿಸಿದ ಸಚಿವ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರಿಗೆ ನಮಸ್ಕರಿಸಿ, “ಏನಪ್ಪಾ ನಮ್ ನಾಯಕರೊಬ್ಬರೇ (ಸಿದ್ದರಾಮಯ್ಯ) ಮಾತನಾಡ ಬೇಕಾ..ಎಲ್ಲಾ ಅವರ ಮೇಲೆ ಬಿಟ್ಟಿದ್ದೀರಿ , ನೀವ್ಯಾರೂ ಮಾತಾಡಲಿಲ್ಲ ಯಾಕೆ’ ಎಂದು ಪೂರ್ವಾಶ್ರಮದ ಗೆಳೆಯರಾದ ಕಾಂಗ್ರೆಸ್ ಸದಸ್ಯರತ್ತ ನೋಡಿ ಹೇಳಿದರು. ಆಗ ಬಿಜೆಪಿ ಸದಸ್ಯರು, “ನೋಡಿ ಸಾರ್, ಈಗಲೂ ನಿಮ್ಮ ಬಗ್ಗೆ ಎಷ್ಟು ಪ್ರೀತಿಯಿದೆ ರಮೇಶ್ ಜಾರಕಿಹೊಳಿ ಅವರಿಗೆ’ ಎಂದು ಹೇಳಿದಾಗ, “ಹೌದಪ್ಪಾ….’ಎಂದು ಸಿದ್ದರಾಮಯ್ಯ ಸ್ಟೈಲ್ ಮಾಡಿ ಸುಮ್ಮನಾದರು.
ಕೊರೊನಾ.. ಪೊಲೀಸರಿಗೆ ವರದಾನ?
ವಿವಿಧ ದೇಶಗಳಲ್ಲಿ ಕ್ರೌರ್ಯ ಪ್ರದರ್ಶಿಸಿದ ಕೊರೊನಾ ವೈರಸ್ ಬೆಂಗಳೂರು ಪೊಲೀಸರ ಪಾಲಿಗೆ ವರದಾನವಾಗಿದೆಯಂತೆ!. ಈ ವೈರಸ್‌ಗೆ ಹೆದರಿ ಕಳ್ಳರು, ಮನೆಗಳ್ಳತನ, ವಾಹನ ಕಳವು ಮಾಡುವುದನ್ನು ಕಡಿಮೆ ಮಾಡಿದ್ದಾರಂತೆ. ಒಟ್ಟಾರೆ ಕೆಲ ದಿನಗಳಿಂದ ಕಳ್ಳತನದ ಪ್ರಕರಣ ಕ್ಷೀಣಿಸಿರುವುದಂತು ಸುಳ್ಳಲ್ಲ. ಒಂದೆಡೆ ಇದೇ ಸುಸಂದರ್ಭ ಎಂದು ಹಳೇ ಪ್ರಕರಣಗಳ ಪತ್ತೆಗೆ ಕಾರ್ಯಪ್ರವೃತ್ತರಾದರೆ, ಮತ್ತೂಂದೆಡೆ, ಆರೋಪಿ ಯಾವ ವೈರಸ್ ಅಟ್ಟಿಸಿಕೊಂಡಿದ್ದಾನೋ? ಎಂಬ ಆತಂಕದಲ್ಲಿ ಪೊಲೀಸರಿದ್ದಾರೆ. ಹೀಗಾಗಿ, ಯಾರು ಎಲ್ಲೇ ಹೋಗ ಬೇಕಾದರೂ ಮುಖಕ್ಕೆ ಮಾಸ್ಕ್, ಜತೆಗೆ, ಸ್ಯಾನಿಟೈಜರ್ ಕೊಂಡೊಯ್ಯಬೇಕು. ಠಾಣೆಗೆ ಬಂದವರಿಗೂ ಮಾಸ್ಕ್ ಕೊಟ್ಟು, ಸ್ಯಾನಿಟೈಜರ್ ಮೂಲಕ ಕೈತೊಳೆದುಕೊಂಡು ಒಳಗಡೆ ಹೋಗುಲು ಸೂಚಿಸಬೇಕು ಅಂತಾ ಹಿರಿಯ ಅಧಿಕಾರಿಗಳು ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಈ ಮೂಲಕ, ಕೊರೊನಾ ವೈರಸ್ ಆತಂಕದ ಕಾರ್ಮೋಡ ಮೂಡಿಸಿದೆ.
ಮದುವೆಯಲ್ಲಿ ಕೊರೊನಾ ಕಣ್ಣೀರು!
ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಶುಭರಾಮ್ ಕಲ್ಯಾಣ ಮಂಟಪದಲ್ಲಿ ಶನಿವಾರ ಸತ್ಯನಾರಾಯಣ್ ಕುಟುಂಬದ ಮದುವೆ ಸಮಾರಂಭ ನಡೆಯಿತು. ಮದುವೆಗೆ ಅಂದಾಜು 500ರಿಂದ 600ಜನ ಬರಬಹುದು ಎಂಬ ನಿರೀಕ್ಷೆಯಲ್ಲಿ ವಧು-ವರನ ಕುಟುಂಬಸ್ಥರು ಊಟ, ತಿಂಡಿಯ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮದುವೆಗೆ ಕೇವಲ 70-80 ಮಂದಿ ಮಾತ್ರ ಆಗಮಿಸಿ ದರು. ಇದಕ್ಕೆ ವಧು-ವರನ ಕುಟುಂಬಸ್ಥರು ಕಣ್ಣೀರು ಸುರಿಸಿದ ಘಟನೆ ನಡೆಯಿತು. ಮದುವೆಗೆ 2018ರಲ್ಲಿ ಕಲ್ಯಾಣ ಮಂಟಪ ಬುಕ್ ಮಾಡಲಾಗಿತ್ತು. ಆದರೆ, ವರನ ತಂದೆ ಮೃತಪಟ್ಟಿದ್ದರಿಂದ ಮದುವೆ ಮುಂದೂಡಲಾಗಿತ್ತು. ಶನಿವಾರ ಮದುವೆಗೆ ನಿರ್ಧರಿಸಲಾಗಿತ್ತು. ಎರಡು ವರ್ಷದಿಂದ ಕಾದು ನಡೆಸಿದ ಮದುವೆಗೆ ಬೆರಳೆಣಿಕೆಯ ಮಂದಿ ಬಂದದ್ದಕ್ಕೆ ಮದುವೆಯ ಕಳೆಯನ್ನೇ ಕುಂದಿಸಿತು.
ಎಸಿ ಬೇಡ.. ಬಿಸಿ ಇರಲಿ….ಸಾಕು
ಬಟ್ಟೆಯ ಮಳಿಗೆಯೊಂದಕ್ಕೆ ವೀಕೆಂಡ್ ಶಾಪಿಂಗ್‌ಗೆ ಟೆಕ್ಕಿಯೊಬ್ಬರು ಕುಟುಂಬದೊಂದಿಗೆ ಬಂದರು. ಮೈಯಲ್ಲೆಲ್ಲಾ ಇಳಿಯುತ್ತಿದ್ದ ಬೆವರು ನೋಡಿ, ಅಂಗಡಿ ಮಾಲೀಕ ಗಿರೀಶ್, ಗಿರಾಕಿಗಳು ತಂಪಾಗಲೆಂದು ಥಟ್ಟನೆ ಎಸಿ ಆನ್ ಮಾಡುವಂತೆ ಏರುದನಿಯಲ್ಲಿ ಜೋರು ಮಾಡಿದ. ಇನ್ನೇನು ಅಂಗಡಿ ಆಳು ಎಸಿ ಗುಂಡಿ ಒತ್ತಬೇಕು ಎನ್ನುವಷ್ಟರಲ್ಲಿ “ದಯವಿಟ್ಟು ಬೇಡ ಸರ್. ನಮಗೆ ಈಗಿರುವುದೇ ಹಿತವಾಗಿದೆ’ ಎಂದು ಗಿರಾಕಿ ಸುಮೀತ್ ಕರ ವಸ್ತ್ರದಿಂದ ಮುಖ ಒರೆಸಿಕೊಳ್ಳುತ್ತಾ ಹೇಳಿದರು. “ಹೇ ತುಂಬಾ ಹೀಟ್ ಇದೆ ಸರ್, ಎಸಿ ಹಾಕಿಸ್ತೀನಿ ಸ್ವಲ್ಪ ಆರಾಮಾಗಿರುತ್ತೆ’ ಎಂದು ಪುಸಲಾಯಿಸಿದರು. ಆದರೆ, “ಏ ಬೇಡ ರೀ…’ ಎಂದು ತುಸು ಖಾರವಾಗಿ ನುಡಿದು “ಅಯ್ಯೋ ಈ ಕೊರೊನಾ ವೈರಸ್‌ಗೂ, ಕರೆಂಟ್‌ಗೂ ನಂಟಿದೆ ರೀ. 27 ಡಿಗ್ರಿಗಿಂತ ಕಡಿಮೆ ತಾಪಮಾನ ಇದ್ದರೆ, ಅದು ಕೊರೊನಾ ವೈರಸ್‌ಗೆ ಹೇಳಿ ಮಾಡಿಸಿದ ವಾತಾವರಣ ಅಂತೆ. ಹಾಗಾಗಿ, ನಮ್ಮ ಕಂಪನಿಯಲ್ಲಿ ಎಸಿ ಇದ್ರೂ ಕಳೆದ ಮೂರ್‍ನಾಲ್ಕು ದಿನಗಳಿಂದ ಧಗೆಯಲ್ಲೇ ಕೆಲಸ ಮಾಡುತ್ತಿದ್ದೇವೆ. ಒಟ್ಟಾರೆ ಈ ವೈರಸ್ ನಮ್ಮ ಬೆವರಿಳಿಸುತ್ತಿದೆ ರೀ’ ಎಂದು ಎಸಿ ನಿರಾಕರಣೆ ಹಿಂದಿನ ಗುಟ್ಟನ್ನು ಗ್ರಾಹಕ ಬಿಚ್ಚಿಟ್ಟ.
ಅಚ್ಚರಿ ಮೂಡಿಸಿದ ದೇಹ ದಾನ?
ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿಯಲ್ಲಿ ಕೊರೊನಾ ಸೋಂಕಿನಿಂದ ವೃದ್ಧ ಸಾವಿಗೀಡಾಗಿರುವ ಕುರಿತು ಮಾಹಿತಿ ನೀಡುವಾಗ ಸಂಬಂಧಪಟ್ಟ ಸಚಿವರು ಸುರಕ್ಷಿತವಾಗಿ ವೃದ್ಧನ “ದೇಹ ದಹಾ’ (ದೇಹ ದಹನ)ಮಾಡಲಾಗಿದೆ ಎಂದು ಹೇಳಿಕೆ ನೀಡಿದರು. ಆ ಹೇಳಿಕೆ ನೆರೆದಿದ್ದ ಪತ್ರಕರ್ತರಿಗೆ ದೇಹ ದಾನ ಎಂದು ಕೇಳಿಸಿ ಅಚ್ಚರಿ ಉಂಟು ಮಾಡಿತ್ತು. ಅನೇಕರು ಪತ್ರಿಕಾಗೋಷ್ಠಿ ಮುಗಿದ ಕೂಡಲೇ ಯಾವ ವೈದ್ಯಕೀಯ ಕಾಲೇಜಿಗೆ, ಯಾವ ಸಂಶೋಧನೆಗೆ ಎಂಬೆಲ್ಲಾ ಪ್ರಶ್ನೆಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮುಗಿಬಿದ್ದು ಕೇಳಿದರು. ಆದರೆ, ಅವರ ಉತ್ತರ “ಸಂವಹನ ಕೊರತೆ’ ಎಂಬುದಾಗಿತ್ತು. ಅಲ್ಲಿದ್ದ ಅನೇಕರು “ಸಚಿವರು ಕನ್ನಡ ಕಲಿತುಕೊಳ್ಳುವುದು ಇನ್ನೂ ಯಾವಾಗ’ ಎಂದುಕೊಂಡು ಮುಂದೆ ನಡೆದರು.
ಪ್ರಶಸ್ತಿಯಿಲ್ಲ.. “ಜೈ’ ಕೂಡಾ ಇಲ್ಲ!
ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿತು. ಇಲಾಖೆ ಸಚಿವರು, ಮೊದಲಿಗೆ “ಭಾರತ್ ಮಾತಾಕೀ’ ಎಂದು ಘೋಷಣೆ ಕೂಗಿದರು. ನೆರೆದಿದ್ದ ಮಹಿಳೆಯರು “ಜೈ’ ಎಂದು ಜೋರಾಗಿ ಕೂಗಲಿಲ್ಲ. ಅದಕ್ಕೆ ಸಚಿವರು “ಇಷ್ಟೇ ನಾ ನಿಮ್ಮ ಧ್ವನಿ’ ಎಂದು ಹೇಳಿದ್ದೇ ತಡ ವೇದಿಕೆ ಮುಂಭಾಗ ಕುಳಿತಿದ್ದ ಮಹಿಳೆ “ಮೇಡಂ, ಅಂಗನವಾಡಿ ಕಾರ್ಯಕರ್ತರಿಗೆ ಪ್ರಶಸ್ತಿಯೇ ಬಂದಿಲ್ಲ, ಅದಕ್ಕೆ ಜೋರಾಗಿ ಶಬ್ದ ಬರಲಿಲ್ಲ’ ಎಂದು ಹೇಳಿ ಬಿಟ್ಟರು. ಅದಕ್ಕೆ ಸಚಿವರು ಉತ್ತರಿಸಲಾಗದೆ ಮೌನಕ್ಕೆ ಜಾರಿದರು.
* ಲಕ್ಷ್ಮಿ, ಪಾಗೋಜಿ, ಚಂದರಗಿ, ಬಿರಾದಾರ್, ಮೋಹನ್, ಹಿತೇಶ್, ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.