ಎಂಡಿ ಸೇರಿ ಕೆಎಸ್‌ಡಿಎಲ್‌ನ 6 ಅಧಿಕಾರಿಗಳಿಂದ ಭ್ರಷ್ಟಾಚಾರ
ನಿಗಮದ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ರೆಡ್ಡಿ
Team Udayavani, Mar 5, 2023, 5:12 AM IST
ಬೆಂಗಳೂರು: ಕೆಎಸ್‌ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳು ಲೋಕಾಯುಕ್ತ ಬಲೆಗೆ ಬಿದ್ದ ಬೆನ್ನಲ್ಲೇ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್) ವ್ಯವಸ್ಥಾಪಕ ನಿರ್ದೇಶಕ ಸೇರಿ ಇನ್ನೂ 6 ಮಂದಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ನಿಗಮದ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ರೆಡ್ಡಿ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಅಧಿಕಾರಿಗಳು ಕೆಎಸ್‌ಡಿಎಲ್‌ನ ಟೆಂಡರ್ ಅವ್ಯವಹಾರ ಬಯಲಿಗೆಳೆದಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ| ಮಹೇಶ್, ಖರೀದಿ ಕಮಿಟಿ ಅಧ್ಯಕ್ಷ ಹಾಗೂ ಪ್ರಧಾನ ವ್ಯವಸ್ಥಾಪಕ ಉಮಾಶಂಕರ್ ಅಪಾಲಿ, ಆರ್ ಮತ್ತು ಡಿ ವ್ಯವಸ್ಥಾಪಕ ಡಾ| ಚಿದಾನಂದ್, ಕ್ಯೂಸಿಡಿ ವ್ಯವಸ್ಥಾಪಕ ನಾಗರಾಜ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಮೆಟೀರಿಯಲ್ಸ ಹಾಗೂ ಹಣಕಾಸು ವಿಭಾಗದ ವ್ಯವಸ್ಥಾಪಕ ಸುಂದರ್ ಮೂರ್ತಿ, ನಿಗಮದ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕ ಅವಿನಾಶ್ ಗುಪ್ತಾ ಅವ್ಯವಹಾರ, ಭ್ರಷ್ಟಾಚಾರ ನಡೆಸಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮ ಜರಗಿಸಿದರೆ ಸತ್ಯ ಸಂಗತಿ ಹೊರ ಬರಲಿದೆ ಎಂದರು.
ಅಧಿಕಾರಿಗಳ ಕರ್ತವ್ಯ ಲೋಪ
ಕೆಎಸ್‌ಡಿಎಲ್ ಕಾರ್ಖಾನೆಯಲ್ಲಿ ಖರೀದಿ, ಉಗ್ರಾಣ, ಕೆಲವೊಂದು ಸ್ಥಾಯಿ ಆದೇಶಗಳು ಸೇರಿ ಎಲ್ಲ ನಿಯಮಾವಳಿಗಳನ್ನು ಸರಕಾರದ ಸಾರ್ವಜನಿಕ ಸಂಸ್ಥೆಯಾದ ಕೆಎಸ್‌ಡಿಎಲ್ ಹೊಂದಿದೆ. ಈ ಎಲ್ಲ ನಿಯಮ ಉಲ್ಲಂಘಿಸಲಾಗಿದೆ. ಮೇಲಿನ 6 ಜನ ಅಧಿಕಾರಿಗಳು ಮಾರುಕಟ್ಟೆಯಲ್ಲಿರುವ ದರ ಪರಿಶೀಲಿಸಿ ಅದಕ್ಕೆ ಅನುಗುಣವಾಗಿ ಚೌಕಾಶಿ ಮಾಡಬೇಕು. ಆ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು ಈ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಈ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಈಗಾಗಲೇ ಲೋಕಾಯುಕ್ತಕ್ಕೆ ಅಧಿಕಾರಿಗಳ ವಿರುದ್ಧ ನೌಕರರ ಸಂಘ ದೂರು ನೀಡಿದೆ ಎಂದು ತಿಳಿಸಿದರು.
2023-24 ಸಾಲಿನಲ್ಲೇ 15 ಕಚ್ಚಾ ವಸ್ತುಗಳ ಖರೀದಿಯಲ್ಲಿ 139 ಕೋಟಿ ಕಿಕ್ ಬ್ಯಾಕ್ ಹೋಗಿದೆ. ಸೋಪು ತಯಾರಿಕೆಯಲ್ಲಿ ಬೆಲೆ ಹೆಚ್ಚಳ ಆಗಿ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಭ್ರಷ್ಟಾಚಾರದಿಂದ 10 ಸಾವಿರ ಕಾರ್ಮಿಕರಿಗೆ ಸಮಸ್ಯೆ ಆಗಿದೆ ಎಂದರು.
ಬೈರತಿ ಬಸವರಾಜ್ ವಿರುದ್ಧ ಆರೋಪ
ಈಗಿನ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಹಿಂದೆ ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದಾಗ 3.75 ಕೋಟಿ ರೂ. ಶಾಲೆ ನಿರ್ಮಾಣಕ್ಕೆಂದು ಸಿಎಸ್‌ಆರ್ ಹಣ ತೆಗೆದುಕೊಂಡಿದ್ದರು. ಅದು ಸರಿಯಾಗಿ ಬಳಕೆ ಆಗಿದೆಯೇ, ಸಿಎಸ್‌ಆರ್ ಫಂಡ್ ಯಾವ ರೀತಿ ಉಪಯೋಗ ಆಗುತ್ತಿದೆ ಎನ್ನುವ ಮಾಹಿತಿಯೇ ಇಲ್ಲ. ಈ ಅಧಿಕಾರಿಗಳನ್ನು ಬಂಧಿಸಿದರೆ ಸತ್ಯ ಹೊರಗೆ ಬರಲಿದೆ ಎಂದು ಶಿವಶಂಕರ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.