ರಾಜ್ಯದಲ್ಲಿ ಇಳಿಮುಖದತ್ತ ಕೋವಿಡ್ ಸೋಂಕು
Team Udayavani, Oct 23, 2020, 10:18 PM IST
ಸಾಂದರ್ಭಿ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಶುಕ್ರವಾರ ರಾಜ್ಯಾದ್ಯಂತ 108356 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಕೇವಲ 5,356 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ 7.93 ಲಕ್ಷ ತಲುಪಿದೆ.
ಐದು ದಿನಗಳಲ್ಲಿ 28,321 ಮಂದಿಗೆ ಕೋವಿಡ್ ದೃಢಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 5,664 ಮಂದಿ ಸೋಂಕಿತರಾಗಿದ್ದಾರೆ. ಕೋವಿಡ್ ಸೋಂಕಿತರಲ್ಲಿ ಬೆಂಗಳೂರಿನ 21 ಮಂದಿ ಸೇರಿದಂತೆ ರಾಜ್ಯದಲ್ಲಿ 51 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 10,821ಕ್ಕೆ ತಲುಪಿದೆ.
ಶುಕ್ರವಾರ 86,741 ಆರ್‌ಟಿಪಿಸಿಆರ್ ಸೇರಿದಂತೆ 1.08 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ 71.68 ಲಕ್ಷ ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಕೋವಿಡ್ ಸೋಂಕಿತರಲ್ಲಿ ಬೆಂಗಳೂರಿನ 4,335 ಮಂದಿ ಸೇರಿದಂತೆ ರಾಜ್ಯದಲ್ಲಿ 8,749 ಮಂದಿ ಸೋಂಕು ಮುಕ್ತರಾಗಿದ್ದಾರೆ. 89,483 ಮಂದಿ ಸೋಂಕಿತರು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇವರಲ್ಲಿ 940 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 14 ದಿನಗಳ ಅವಧಿಯಲ್ಲಿ 4.77 ಲಕ್ಷ ನೇರ ಸಂಪರ್ಕಿತರು ಹಾಗೂ 4.43 ಲಕ್ಷ ಪರೋಕ್ಷ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ. 7 ದಿನಗಳ ಅವಧಿಯಲ್ಲಿ 79,457 ಮಂದಿಯನ್ನು ಹೋಂಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಬೆಂಗಳೂರಿನಲ್ಲಿ 2,668 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3.21 ಲಕ್ಷ ದಾಟಿದೆ. ದಕ್ಷಿಣ ಕನ್ನಡದಲ್ಲಿ ಹೊಸದಾಗಿ 329 ಪ್ರಕರಣಗಳು ಪತ್ತೆಯಾಗಿವೆ. ದಾವಣಗೆರೆಯಲ್ಲಿ 298, ಮೈಸೂರಿನಲ್ಲಿ 220, ಮಂಡ್ಯದಲ್ಲಿ 168 ಸೇರಿರಂತೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಅಧಿಕ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಬೇರೆಲ್ಲ ಜಿಲ್ಲೆಯಲ್ಲಿ ಪ್ರಕರಣ ಇಳಿಮುಖವಾಗುತ್ತಿದೆ. ಹಾಗೆಯೇ ಇಲಾಖೆಯಿಂದ ಸುರಕ್ಷಿತ ಸೂಚನೆಗಳನ್ನು ಆಗಿಂದಾಗೆ ನೀಡಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯ 150 ಜ್ವರ ಚಿಕಿತ್ಸಾಲಯದಲ್ಲಿ 4397 ಮಂದಿಯನ್ನು, ರಾಜ್ಯದ 618 ಜ್ವರ ಚಿಕಿತ್ಸಾಲಯದಲ್ಲಿ 9915 ಮಂದಿಯನ್ನು ಪರಿಶೀಲಿಸಲಾಗಿದೆ. 69 ಖಾಸಗಿ ಜ್ವರ ಚಿಕಿತ್ಸಾಲಯದಲ್ಲಿ 227ಮಂದಿಯನ್ನು ಪರಿಶೀಲಿಸಲಾಗಿದೆ. ಹಾಗೆಯೇ 6682 ಮಂದಿಗೆ ಆಪ್ತ ಸಮಾಲೋಚನೆಯ ಸೇವೆ ಒದಗಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.