![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 27, 2020, 1:35 PM IST
ಬೆಂಗಳೂರು: ರಾಜ್ಯದಲ್ಲಿ ಮುಂದಿನ ವರ್ಷದ ಆರಂಭದಲ್ಲೇ ಕೋವಿಡ್ -19 ಲಸಿಕೆ ಲಭ್ಯವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುಧಾಕರ್, ಅಸ್ಟ್ರಾಜನಿಕಾ ಸಂಸ್ಥೆ ಎಂಡಿ ಗಗನ್ ದೀಪ್ ಸೇರಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಅಕ್ಸಫರ್ಡ್ ವಿವಿ ಲಸಿಕೆ ಪ್ರಯೋಗ ಮೊದಲ ಹಂತ ಮುಕ್ತಾಯವಾಗಿದ್ದು, 2021 ಆರಂಭದಲ್ಲೇ ರಾಜ್ಯದ ಜನತೆಗೆ ಕೋವಿಡ್ ಲಸಿಕೆ ಸಿಗಲಿದೆ ಎಂದರು.
ಆಕ್ಸಫರ್ಡ್ ವಿವಿ ಅಸ್ಟ್ರಾಜನಿಕಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಸಂಶೋಧನೆ ಮಾಡುತ್ತಿದ್ದಾರೆ. ಇಂದು ಅವರ ಜೊತೆಗೆ ನಡೆಸಿದ ಸಮಾಲೋಚನೆ ತೃಪ್ತಿದಾಯಕವಾಗಿದೆ. ಆದಷ್ಟು ಬೇಗ ಈ ಲಸಿಕೆ ಬರುವ ವಿಶ್ವಾಸ ಇದೆ. 2021ರ ಆರಂಭದಲ್ಲಿಯೇ ಈ ರೋಗಕ್ಕೆ ಲಸಿಕೆ ಬರುವ ಸಾಧ್ಯತೆ ಇದೆ ಎಂದರು.
ಭಾರತದಲ್ಲಿ 1600 ಜನರಿಗೆ ಲಸಿಕೆ ನೀಡಿ ಪ್ರಯೋಗ ಮಾಡಲಾಗುತ್ತಿದೆ. ಐದು ವರ್ಷದವರಿಂದ ಹಿಡಿದು ವಯೋವೃದ್ದರವರೆಗೂ ಎಲ್ಲ ವಯೋಮಾನದವರಿಗೆ ಲಸಿಕೆ ನೀಡುವ ಪ್ರಯೋಗ ಮಾಡಲಾಗುತ್ತಿದೆ. ಲಸಿಕೆ ಕೊಟ್ಟ 28 ದಿನದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಎರಡು ಮತ್ತು ಮೂರನೇ ಹಂತದಲ್ಲಿ ಮತ್ತೊಂದು ರೀತಿ ನೀಡಿ ಪ್ರಯೋಗ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ:ಕೋವಿಡ್ ಹಿನ್ನೆಲೆ: ಧಾರವಾಡ ಬಂಡೆಮ್ಮ ದೇವಸ್ಥಾನದಲ್ಲಿ ಕೃತಕ ಆನೆ ಬಳಸಿ ಜಂಬೂ ಸವಾರಿ!
ಯಾವುದೇ ರೋಗಕ್ಕೆ ಲಸಿಕೆ ಕಂಡು ಹಿಡಿಯಲು ಕನಿಷ್ಠ 5-6 ವರ್ಷ ಬೇಕಾಗುತ್ತದೆ. ಆದರೆ, ನಮ್ಮ ದೇಶದಲ್ಲಿಏಳೆಂಟು ತಿಂಗಳಲ್ಲಿ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ. ಹೈದರಾಬಾದ್ ಸಂಸ್ಥೆಯೂ ಪ್ರಯೋಗ ಮಾಡುತ್ತಿದೆ. ಅವರ ಜೊತೆಯೂ ಚರ್ಚೆ ಮಾಡುತ್ತೇವೆ ಎಂದರು.
ಲಸಿಕೆಗೆ ದರ ನಿಗದಿ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಇಲ್ಲ. ಇನ್ನೂ ಪ್ರಯೋಗದ ಹಂತದಲ್ಲಿದೆ. ಸಂಸ್ಥೆಯವರು ಇದರಲ್ಲಿ ಯಾವುದೇ ಲಾಭ ಪಡೆಯುವುದಿಲ್ಲ. ಲಸಿಕೆಗೆ ತಗಲುವ ವೆಚ್ಚವನ್ನು ಮಾತ್ರ ಪಡೆಯುವುದಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ಜೊತೆ ಮಾತನಾಡಿ ದರ ನಿಗದಿ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ರಾಜ್ಯ ಸರ್ಕಾರ ಕೋವಿಡ್ ಚಿಕಿತ್ಸೆಗೆ ಇದುವರೆಗೂ ಯಾವುದೇ ದರ ವಿಧಿಸಿಲ್ಲ. ಲಸಿಕೆ ಬಂದ ಮೇಲೆ ಮುಂದಿನ ತೀರ್ಮಾನ ಮಾಡಲಾಗುವುದು. ಲಸಿಕೆ ಯಾವಾಗ ಸಿಗುತ್ತದೆ ಎನ್ನುವ ಬಗ್ಗೆ ಸ್ಪಷ್ಟವಾಗಿ ಹೇಳಲಾಗುವುದಿಲ್ಲ ಎಂದು ಸುಧಾಕರ್ ಹೇಳಿದರು.
ಕೋವಿಡ್ ವಾರಿಯರ್ಸ್ ಗೆ ಮೊದಲು ಚಿಕಿತ್ಸೆ: ಎಪಿಡಾಮಿಕ್ ಟೆಕ್ನಿಕ್ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಕೋವಿಡ್ ವಾರಿಯರ್ಸ್ ಮೊದಲು ಈ ಚಿಕಿತ್ಸೆಗೆ ಒಳ ಪಡುತ್ತಾರೆ. ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅವರಿಗೆ ಮೊದಲು ನೀಡಲಾಗುತ್ತಿದೆ ಎಂದರು.
You seem to have an Ad Blocker on.
To continue reading, please turn it off or whitelist Udayavani.