ದಲಿತ ನಾಯಕರಿಗೆ ನಕ್ಸಲ್ ಹಣೆಪಟ್ಟಿ: ಎ ಕೆ ಸುಬ್ಬಯ್ಯ ಕಿಡಿ
Team Udayavani, Jun 9, 2018, 7:01 PM IST
ಬೆಂಗಳೂರು : ದಲಿತ ಚಳವಳಿ ನಾಯಕರಿಗೆ ನಕ್ಸಲ್ ಹಣೆಪಟ್ಟಿ ಹಚ್ಚುವ ಸರಕಾರದ ಯತ್ನಕ್ಕೆ ವಿಚಾರವಾದಿ ಎ ಕೆ ಸುಬ್ಬಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ನಡೆದ ಕೋರೆಗಾಂವ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಲಿತ ಚಳವಳಿ ನಾಯಕ ಪ್ರಕಾಶ್ ಅಂಬೇಡ್ಕರ್ ಮತ್ತು ಗುಜರಾತ್ ಪಕ್ಷೇತರ ಶಾಸಕರಾಗಿರುವ ದಲಿತ ನಾಯಕ ಜಿಗ್ನೇಶ್ ಮೇವಾನಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ ಎಂಬ ಮಾವೋ ವಾದಿ ನಾಯಕರ ಪತ್ರದಲ್ಲಿ ಈ ಇಬ್ಬರೂ ದಲಿತ ನಾಯಕರ ಹೆಸರಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ದಲಿತ ಚಳವಳಿಯನ್ನು ನಾಶ ಮಾಡುವ ಪಿತೂರಿ ದೇಶದಲ್ಲಿ ನಡೆಯುತ್ತಿದೆ ಎಂದು ಸುಬ್ಬಯ್ಯ ಅವರು ನಗರದ ಪ್ರಸ್ ಕ್ಲಬ್‌ನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಧಾನಿಯವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಬಗ್ಗೆ ಯಾವದೇ ವಿಶ್ವಾಸವಿಲ್ಲ. ಈ ಬಗ್ಗೆ ನಿಷ್ಪಕ್ಷ ತನಿಖೆ ನಡೆಯಬೇಕು; ತಪ್ಪುಗಾರರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸುಬ್ಬಯ್ಯ ಆಗ್ರಹಿಸಿದರು.
ಪ್ರಧಾನಿ ಮೋದಿ ಅವರಿಗೆ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯು ನುಂಗಲಾರದ ತುತ್ತಾಗಿದೆ. ಅವರ ನಾಲ್ಕು ವರ್ಷಗಳ ಅವಧಿಯಲ್ಲಿ ಯಾವೆಲ್ಲ ಭರವಸೆಗಳು ಈಡೇರಿವೆ ಎಂದು ಜನರೀಗ ಪ್ರಶ್ನಿಸುತ್ತಿದ್ದಾರೆ. ಮೋದಿ ವೈಫಲ್ಯವನ್ನು ಮುಚ್ಚಿ ಹಾಕಲು ದಲಿತ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಸುಬ್ಬಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೋಮು ಸೌಹಾರ್ದ ವೇದಿಕೆಯ ತ್ರಿಮೂರ್ತಿ, ದಲಿತ ಮುಖಂಡರಾದ ಎನ್ ವೆಂಕಟೇಶ್, ಕೃಷ್ಣಾ ರೆಡ್ಡಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.