ಕಾರ್ಪೊರೇಟ್ ಶೈಲಿಯ ರಾಜಕಾರಣಕ್ಕೆ ಬೆಲೆ ತೆತ್ತ ಡಿಸಿಎಂ
Team Udayavani, Jul 24, 2019, 3:05 AM IST
ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಕಾರ್ಪೊರೇಟ್ ಶೈಲಿಯ ರಾಜಕಾರಣ ಮಾಡಿ, ಮುಖ್ಯಮಂತ್ರಿಯ ಹಿಂಬಾಲಕರಂತೆಯೇ ನಡೆದುಕೊಂಡು ಬಂದ ಡಾ.ಜಿ.ಪರಮೇಶ್ವರ್, ಮೈತ್ರಿ ಪಕ್ಷದ ಪರ್ಯಾಯ ನಾಯಕರಂತೆ ಗುರುತಿಸಿಕೊಳ್ಳದೆ ಕುಮಾರಸ್ವಾಮಿಯೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದರು ಎನ್ನುವ ಆರೋಪ ಕಾಂಗ್ರೆಸ್‌ನಲ್ಲಿ ಕೇಳುವಂತಾಯಿತು.
ಮೈತ್ರಿ ಸರ್ಕಾರದಲ್ಲಿ 80 ಶಾಸಕರಿದ್ದರೂ, ಕಾಂಗ್ರೆಸ್ ಶಾಸಕರ ಹಿತ ಕಾಯುವಲ್ಲಿ ಡಾ.ಜಿ.ಪರಮೇಶ್ವರ್ ಆಸಕ್ತಿ ತೋರದೆ ಅಧಿಕಾರದಲ್ಲಿ ಕಾಲ ತಳ್ಳುವ ಪ್ರಯತ್ನ ಮಾಡಿದರು ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುವಂತಾಯಿತು. ಪಕ್ಷದ ಶಾಸಕರ ಕೆಲಸಗಳು ಮೈತ್ರಿ ಸರ್ಕಾರದಲ್ಲಿ ಆಗದಿದ್ದಾಗ ಉಪ ಮುಖ್ಯ ಮಂತ್ರಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗಮನಕ್ಕೆ ತಂದು ಪಕ್ಷದ ಶಾಸಕರ ಹಿತ ಕಾಯದೆ, ತಮಗೂ, ಶಾಸಕರಿಗೂ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಂಡರು ಎನ್ನುವ ಆರೋಪ ಕೇಳಿ ಬಂತು.
ಅಲ್ಲದೇ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾಂಗ್ರೆಸ್ ಶಾಸಕರನ್ನು ನಿರ್ಲಕ್ಷ್ಯ ಮಾಡಿದಂತೆ ಪರಮೇಶ್ವರ್ ಕೂಡ ಅವರನ್ನು ಗಮನಕ್ಕೆ ತೆಗೆದುಕೊಳ್ಳದೇ ದೂರ ಇಡುವ ಪ್ರಯತ್ನ ಮಾಡಿದರು. ಅಲ್ಲದೇ ತಮ್ಮ ಅಧಿಕಾರವನ್ನು ಕಾರ್ಪೊರೇಟ್ ಶೈಲಿಯಲ್ಲಿ ನಡೆಸಿದರು ಎನ್ನುವ ಮಾತುಗಳು ಕಾಂಗ್ರೆಸ್ ಶಾಸಕರಿಂದ ವ್ಯಕ್ತವಾದವು. ಶಾಸಕರಷ್ಟೇ ಅಲ್ಲದೇ ಕಾಂಗ್ರೆಸ್ ಸಚಿವರ ಇಲಾಖೆಗಳಿಗೆ ಸರಿಯಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂಬ ಆರೋಪ ಇದ್ದರೂ, ಸಂಬಂಧಪಟ್ಟ ಇಲಾಖೆಗಳಿಗೆ ಮುಖ್ಯಮಂತ್ರಿಯಿಂದ ಸರಿಯಾಗಿ ಅನುದಾನ ಕೊಡಿಸುವ ಕೆಲಸ ಮಾಡಲಿಲ್ಲ ಎಂಬ ಮಾತುಗಳು ಸ್ವಪಕ್ಷದ ಸಚಿವರಿಂದಲೇ ಕೇಳಿ ಬಂದವು.
ಉಪಹಾರ ಕೂಟಕ್ಕೆ ಸೀಮಿತವಾದ ಡಿಸಿಎಂ: ಪರಮೇಶ್ವರ್ ಅವರ ನಿರ್ಲಕ್ಷ್ಯ ಧೋರಣೆ ಹಾಗೂ ಜೆಡಿಎಸ್ ನಾಯಕರ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವುದನ್ನು ಕೆಲವು ಕಾಂಗ್ರೆಸ್ ಶಾಸಕರು ಪಕ್ಷದ ಹೈಕಮಾಂಡ್ ಗಮನಕ್ಕೂ ತರುವ ಪ್ರಯತ್ನ ಮಾಡಿದರು. ಶಾಸಕರು ಹಾಗೂ ಸಚಿವರ ಅಸಮಾಧಾನದ ಹಿನ್ನೆಲೆಯಲ್ಲಿ ಪ್ರತಿ ವಾರ ಸಂಪುಟ ಸಭೆಗೂ ಮುನ್ನ ಕಾಂಗ್ರೆಸ್ ಶಾಸಕರ ಬೇಡಿಕೆಗಳು ಹಾಗೂ ಸಚಿವರ ಇಲಾಖೆಗಳಿಗೆ ಸಂಬಂಧ ಪಟ್ಟ ಕಡತಗಳನ್ನು ಸಂಪುಟದಲ್ಲಿ ಒಕ್ಕೋರಲಿನಿಂದ ಚರ್ಚಿಸಿ ಅನುಮತಿ ಪಡೆಯುವ ನಿಟ್ಟಿನಲ್ಲಿ ಸಚಿವರಿಗಾಗಿ ಉಪಾಹಾರ ಕೂಟ ಏರ್ಪಡಿಸುವ ಯತ್ನ ಆರಂಭಿಸಿದರು. ಆದರೂ, ಪಕ್ಷದ ಸಚಿವರಿಗೆ ಪರಮೇಶ್ವರ್ ಅವರು ಮೈತ್ರಿ ಸರ್ಕಾರದಲ್ಲಿ ತಮ್ಮ ನಾಯಕ ಎನ್ನುವ ಭಾವನೆಯನ್ನು ಕಾಂಗ್ರೆಸ್‌ನ ಸಚಿವರಿಗೆ ಮೂಡಿಸುವಲ್ಲಿ ವಿಫಲರಾದರು ಎನ್ನುವ ಮಾತು ಕೇಳಿ ಬರುತ್ತಿದೆ.
ಪರಮೇಶ್ವರ್ ಅವರ ಅಸಹಾಯಕತೆಯಿಂದ ಬೇಸತ್ತ ಸಚಿವರುಗಳೂ ಕೂಡ ತಮ್ಮ ಕೆಲಸ ಕಾರ್ಯಗಳಿಗೆ ಸಿದ್ದರಾಮಯ್ಯ ಅವರ ಮೂಲಕವೇ ಒತ್ತಡ ಹೇರುವ ಕಾರ್ಯತಂತ್ರಕ್ಕೆ ಮುಂದಾಗಿದ್ದು, ಪರಮೇಶ್ವರ್ ನೆಪ ಮಾತ್ರಕ್ಕೆ ಉಪ ಮುಖ್ಯಮಂತ್ರಿ ಎನ್ನುವುದು ಪಕ್ಷದ ವಲಯದಲ್ಲಿ ಕ್ರಮೇಣ ಬಲಗೊಳ್ಳುವಂತಾಯಿತು. ಅದು ಸರ್ಕಾರದ ನಿರ್ಣಯಗಳು, ಪಕ್ಷದ ತೀರ್ಮಾನ ಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿಯೂ ಪರಮೇಶ್ವರ್ ಅವರನ್ನು ನೆಪ ಮಾತ್ರಕ್ಕೆ ಪರಿಗಣಿಸುವಂತ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಯಿತು.
ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ನಿರ್ಮಾಣ ವಾದರೆ, ತಾವೇ ಮುಂದೆ ನಿಂತು ಶಾಸಕರನ್ನು ಸಮಾಧಾನ ಪಡಿಸುವ, ಅವರ ಕೆಲಸಗಳನ್ನು ಮುಖ್ಯಮಂತ್ರಿಯಿಂದ ಮಾಡಿಸಿ ಕೊಡುವ ಪ್ರಯತ್ನ ಮಾಡದೇ ಎಲ್ಲದಕ್ಕೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಹಿಂಬಾಲಿಸಿದ್ದು, ಕಾಂಗ್ರೆಸ್‌ನಲ್ಲಿಯೇ ತಮ್ಮ ನಾಯಕತ್ವವನ್ನು ಗಟ್ಟಿಗಳಿಸಿಕೊಳ್ಳುವಲ್ಲಿ ತಾವೇ ಅಸಮರ್ಥರು ಎನ್ನುವುದನ್ನು ಪರೋಕ್ಷವಾಗಿ ತೋರಿಸಿದಂತಿತ್ತು.
ಸಿಎಂ ಗಾದಿಯ ಕನಸು: ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ಉಂಟಾದಾಗ, ಮುಖ್ಯಮಂತ್ರಿ ಬದಲಾವಣೆಯ ಮಾತುಗಳು ಕೇಳಿ ಬಂದಾಗಲೆಲ್ಲಾ ಪರಮೇಶ್ವರ್ ತಾವೇ ಪರ್ಯಾಯ ನಾಯಕರಾಗುವ ಕನಸು ಕಂಡಿದ್ದರು. ಅದೇ ಕಾರಣಕ್ಕೆ ದೇವೇಗೌಡರ ಕುಟುಂಬದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದರು ಎನ್ನುವ ಆರೋಪವೂ ಅವರ ವಿರುದ್ಧ ಕೇಳಿ ಬಂತು. ದಲಿತ ಮುಖ್ಯಮಂತ್ರಿ ಮಾಡುವ ಪ್ರಸಂಗ ಬಂದರೆ, ದೇವೇಗೌಡರು ತಮ್ಮನ್ನೇ ಪರಿಗಣಿಸುತ್ತಾರೆ ಎಂಬ ಆಶಾಭಾವನೆ ಇಟ್ಟುಕೊಂಡಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾನೂನು ಸಚಿವರಾಗಿಯೂ ಮೌನ: ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಸದನದಲ್ಲಿ ದೇಶದಲ್ಲಿ ನಡೆದ ಎಲ್ಲ ರೀತಿಯ ವಿಶ್ವಾಸ ಮತ ಯಾಚನೆ, ಸಂವಿಧಾನದಲ್ಲಿನ ಗೊಂದಲಗಳು, ಕಾನೂನಿನಲ್ಲಿರುವ ತೊಡಕುಗಳು, ಸ್ಪೀಕರ್ ಹಾಗೂ ರಾಜ್ಯಪಾಲರ ನಡುವಿನ ಸಾಂವಿಧಾನಿಕ ಅಧಿಕಾರದ ವ್ಯಾಪ್ತಿ, ಶಾಸಕಾಂಗ ಹಾಗೂ ನ್ಯಾಯಾಂಗದ ನಡುವಿನ ಅಧಿಕಾರ ವ್ಯಾಪ್ತಿಯ ಸಂಘರ್ಷದ ಬಗ್ಗೆ ಆಡಳಿತ ಮತ್ತು ಪ್ರತಿಕ್ಷಗಳ ಶಾಸಕರ ನಡುವೆ ವಿಸ್ತೃತ ಚರ್ಚೆ ನಡೆಯುತ್ತಿದ್ದರೂ, ಪ್ರತಿಪಕ್ಷದ ಶಾಸಕರ ವಿರುದ್ದ ಮೈತ್ರಿ ಪಕ್ಷಗಳ ಶಾಸಕರು ಬಹಿರಂಗ ವಾಗ್ಧಾಳಿ ನಡೆಸಿ, ಆಪರೇಷನ್ ಕಮಲದ ವಿರುದ್ಧ ಆರೋಪ ಮಾಡಿದರೂ, ಉಪ ಮುಖ್ಯಮಂತ್ರಿ ಹಾಗೂ ವಿಶೇಷವಾಗಿ ಕಾನೂನು ಸಚಿವರಾಗಿರುವ ಪರಮೇಶ್ವರ್ ಒಂದೇ ಒಂದು ಮಾತನಾಡದೇ ಮೌನ ವಹಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಮಾಧ್ಯಮಗಳಿಂದ ಅಂತರ: ಡಾ.ಜಿ. ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಎನ್ನುವ ಹುದ್ದೆ ಅಲಂಕರಿಸಿದ ಮೇಲೆ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದರು ಎಂಬ ಆರೋಪ ಕೇಳಿ ಬಂತು. ಅಲ್ಲದೇ ಪರಮೇಶ್ವರ್ ಅವರು ಮಾಧ್ಯಮಗಳಿಂದಲೂ ಅಂತರ ಕಾಯ್ದುಕೊಂಡು ಕಾರ್ಪೊರೇಟ್ ಮಾದರಿಯಲ್ಲಿ ಮಾಧ್ಯಮಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ಪ್ರಯತ್ನ ನಡೆಸಿದರು ಎಂಬ ಆರೋಪವೂ ಕೇಳಿ ಬರುವಂತಾಯಿತು. ಅದೂ ಕೂಡ ಪರಮೇಶ್ವರ್ ನಾಯಕತ್ವದ ಮೇಲೆ ಪರಿಣಾಮ ಬೀರುವಂತಾಯಿತು ಎಂಬ ಮಾತುಗಳು ಕೇಳಿ ಬಂದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.