ಡಿ ನೋಟಿಫಿಕೇಷನ್ ಆರೋಪ;ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕು: ಸಿದ್ದರಾಮಯ್ಯ
ವಿಶೇಷವಾಗಿ ನನ್ನನ್ನು ಗುರಿಯಾಗಿರಿಸಿಕೊಂಡು ಅಪಪ್ರಚಾರ ಪ್ರಾರಂಭಿಸಿದ್ದಾರೆ...
Team Udayavani, Oct 17, 2022, 4:20 PM IST
ಬೆಂಗಳೂರು : ಲಾಲ್‍ಭಾಗ್ ಸಿದ್ಧಾಪುರದ ಜಮೀನುಗಳ ಕುರಿತು ಸುಳ್ಳು ಮಾಹಿತಿಯನ್ನು ಬಿಡುಗಡೆ ಮಾಡಿರುವವರ ಕುರಿತು ಸರ್ಕಾರ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕೆಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ಮೂಲಕ, 2008 ರಿಂದ ಇದುವರೆಗೆ ಬೆಂಗಳೂರು ಮತ್ತು ರಾಜ್ಯದ ವಿವಿಧ ನಗರಗಳಲ್ಲಿ ಮಾಡಿರುವ ಭೂ ಉಪಯೋಗ ಬದಲಾವಣೆಯ (ಚೇಂಜ್ ಆಫ್ ಲ್ಯಾಂಡ್ ಯೂಸ್) ಪ್ರತಿ ಪ್ರಕರಣದ ಮಾಹಿತಿಯನ್ನೂ ಕೂಡಲೆ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಜನಪ್ರಿಯತೆಯನ್ನು ಸಹಿಸದ ಬಿಜೆಪಿಯವರಿಗೆ ಮೆದುಳು ಮತ್ತು ನಾಲಿಗೆಯ ಮಧ್ಯದ ಸಂಪರ್ಕವು ಸಂಪೂರ್ಣ ಕಡಿದು ಹೋಗಿದೆ. ಅದರಲ್ಲೂ ವಿಶೇಷವಾಗಿ ನನ್ನನ್ನು ಗುರಿಯಾಗಿರಿಸಿಕೊಂಡು ಅಪಪ್ರಚಾರ ಪ್ರಾರಂಭಿಸಿದ್ದಾರೆ.ಅದರ ಭಾಗವಾಗಿಯೆ ಕಳೆದ ವಾರ ಬಿಜೆಪಿಯ ಸುಳ್ಳಿನ ಮರಿ ಯಂತ್ರವೊಂದು ಲೋಕಾಯುಕ್ತಕ್ಕೆ ಅರ್ಜಿ ಸಲ್ಲಿಸಿದೆಯೆಂದು ಕೆಲವು ಮಾಧ್ಯಮಗಳು ಅದಕ್ಕೆ ಭರಪೂರ ಪ್ರಚಾರ ಕೊಟ್ಟವು. ಚುನಾವಣೆ ಹತ್ತಿರಕ್ಕೆ ಬಂದಂತೆಲ್ಲ ಬಿಜೆಪಿಯ ಸುಳ್ಳಿನ ಅಭಿಯಾನ ತೀವ್ರಗೊಳ್ಳುತ್ತದೆ. ಆದ್ದರಿಂದ ಜನರು ಮೆದುಳು ಮತ್ತು ಹೃದಯ ಎರಡನ್ನೂ ಕಳೆದುಕೊಂಡಿರುವ ಬಿಜೆಪಿಯ ಸುಳ್ಳಿನ ಯಂತ್ರಗಳು ಹರಿ ಬಿಡುವ ಮಾತುಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕೆಂದು ಕೋರುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ವಾರ ನಾನು ಪಾದಯಾತ್ರೆಯಲ್ಲಿದ್ದಾಗ ಬಿಜೆಪಿಯವರು ಬಿಡುಗಡೆ ಮಾಡಲಾದ ಮಾಹಿತಿ- ಲಾಲ್‍ಭಾಗ್ ಸಿದ್ಧಾಪುರ ಗ್ರಾಮದ ಸರ್ವೆನಂ 27/1, 28/4, 5,6 ರಲ್ಲಿನ 2 ಎಕರೆ 39.5 ಗುಂಟೆ ಜಮೀನನ್ನು ಸಿದ್ದರಾಮಯ್ಯನವರು ಡಿನೋಟಿಫಿಕೇಷನ್ ಮಾಡಿದ್ದಾರೆ, ರೀಡೂ ಮಾಡಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.ಹಾಗಿದ್ದರೆ ವಾಸ್ತವ ಸಂಗತಿ ಏನು? ಬಿಡಿಎನಿಂದ ನಾನು ಪಡೆದುಕೊಂಡ ಮಾಹಿತಿ ಪ್ರಕಾರ, ಈ ಜಮೀನುಗಳನ್ನು 1948 ರಲ್ಲಿ ಕನಕನಪಾಳ್ಯ 8 ನೇ ಬ್ಲಾಕ್‍ಗೆಂದು ಭೂ ಸ್ವಾಧೀನಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಯಾವ ಕಾರಣದಿಂದಲೊ ಏನೊ ಸದರಿ ಜಮೀನುಗಳನ್ನು ಭೂಸ್ವಾಧೀನದಿಂದ ಕೈ ಬಿಟ್ಟು 11/2/1954 ಮತ್ತು 28/12/1954 ರ ದಿನಾಂಕಗಳಂದು ‘ದಿ ಮೈಸೂರು ಗೆಜೆಟ್’ ನಲ್ಲಿ ಪ್ರಕಟವಾಗಿದೆಯೆಂಬ ಮಾಹಿತಿ ಇದೆ.ಬಿಜೆಪಿಯವರಿಗೆ ಈ ಎಲ್ಲ ವಾಸ್ತವಾಂಶಗಳು ಗೊತ್ತಿದ್ದರೂ ಸಹ ಸುಳ್ಳಿನ ದುರ್ಗಂಧದ ವಿಷವನ್ನು ಜನರ ಮನಸ್ಸಿನಲ್ಲಿ ತುಂಬಲು ಪ್ರಯತ್ನಿಸುತ್ತಿದ್ದಾರೆ. 1954 ರಲ್ಲೆ ಡಿ ನೋಟಿಫಿಕೇಷನ್ ಆಗಿರುವ ಜಮೀನುಗಳನ್ನು ಸಿದ್ದರಾಮಯ್ಯನವರು ಡಿನೋಟಿಫಿಕೇಷನ್ ಮಾಡಿದ್ದಾರೆ ಎನ್ನುವವರು ಎಂಥಾ ನೀಚರು ಹಾಗೂ ಅನೈತಿಕ ವ್ಯಕ್ತಿಗಳು ಎಂಬುದನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.
1954 ರಲ್ಲಿ ಈ ಜಮೀನುಗಳನ್ನು ಡಿನೋಟಿಫಿಕೇಷನ್ ಮಾಡಿದ ನಂತರ ಅವು ಸಂಬಂಧಿತ ಭೂ ಮಾಲಿಕರ ಜಮೀನುಗಳಾಗುತ್ತವೆ. ಈ ಜಮೀನುಗಳನ್ನು 2007 ರಲ್ಲಿ ನಗರದ ಮಾಸ್ಟರ್ ಪ್ಲಾನ್ ಮಾಡುವಾಗ (ಆರ್ ಎಂಪಿ) ಸದರಿ ಜಾಗವನ್ನು ಪಾರ್ಕಿಗೆಂದು ಗುರ್ತಿಸಲಾಗಿದೆ. ಖಾಸಗಿಯವರ ಜಾಗದಲ್ಲಿ ಪಾರ್ಕು ಮಾಡುವುದಿದ್ದರೆ ಆ ಜಾಗವನ್ನು ಭೂಸ್ವಾಧೀನ ಮಾಡಿಕೊಂಡು ಭೂ ಮಾಲಿಕರಿಗೆ ಪರಿಹಾರ ಕೊಡಬೇಕು ಎಂದಿದ್ದಾರೆ.
ಬಿಜೆಪಿಯವರೆ ಹೇಳುವ ಪ್ರಕಾರ ಈ ಜಮೀನುಗಳ ಬೆಲೆ 200 ಕೋಟಿ ರೂಪಾಯಿ ಬೆಲೆ ಬಾಳುವುದಿದ್ದರೆ, 3 ಎಕರೆ ಜಾಗವನ್ನು ವಶಪಡಿಸಿಕೊಂಡು ಪಾರ್ಕು ಮಾಡಲು ಬಿಡಿಎ ಬಳಿಯಾಗಲಿ, ಬಿಬಿಎಂಪಿ ಬಳಿಯಾಗಲಿ ಹಣ ಇದೆಯೆ? 2007 ರಲ್ಲಿ ಮಾಡಿದ ಆರ್‍ಎಂಪಿಯು ಕೆಟಿಸಿಪಿ ಕಾಯ್ದೆಯ ಪ್ರಕಾರ 5 ವರ್ಷಗಳ ಒಳಗೆ ಅನುಷ್ಠಾನಗೊಳ್ಳಬೇಕು. ಆದರೆ ಬಿಜೆಪಿ ಸರ್ಕಾರವು ಸದರಿ ಜಮೀನುಗಳನ್ನು ಭೂ ಸ್ವಾಧೀನ ಪಡಿಸಿಕೊಂಡು ಪಾರ್ಕು ಮಾಡಲಿಲ್ಲ. ಬದಲಾಗಿ ವಸತಿ ಉದ್ದೇಶಕ್ಕಾಗಿ ಪರಿವರ್ತನೆ ಮಾಡಬಹುದೆಂದು 18/01/2013 ರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ. ಅದಾದ ಮೇಲೆ ಸರ್ಕಾರಕ್ಕೆ 18/02/2014 ರಲ್ಲಿ ಭೂ ಉಪಯೋಗದ ಬದಲಾವಣೆ ಮಾಡಲು ಶಿಫಾರಸ್ಸು ಮಾಡಿದ್ದಾರೆ. ಬಿಡಿಎ ಕಳಿಸಿದ್ದ ಶಿಫಾರಸ್ಸನ್ನು ಪರಿಶೀಲಿಸಿ ದಿನಾಂಕ 18/11/2014 ರಂದು ಭೂ ಉಪಯೋಗವನ್ನು ವಸತಿ ಉದ್ದೇಶಕ್ಕಾಗಿ ಬದಲಾಯಿಸಿ ಅನುಮತಿ ನೀಡಲಾಗಿರುತ್ತದೆ. ಆದರೆ ಸರ್ಕಾರವು ಈ ಜಮೀನುಗಳಿಗೆ ನೀಡಿರುವ ಭೂ ಉಪಯೋಗವನ್ನು ಬದಲಾಯಿಸಿ ಕೊಟ್ಟದ್ದರ ಬಗ್ಗೆ ಕೆಲವರು ಅಪಸ್ವರ ಎತ್ತಿದ ಕಾರಣಕ್ಕೆ ಮತ್ತೊಮ್ಮೆ ಮರುಪರಿಶೀಲಿಸಿ ದಿನಾಂಕ 13/3/2015 ರಂದು ವಸತಿ ಉದ್ದೇಶಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರ ಭೂ ಉಪಯೋಗ ಬದಲಾವಣೆಯನ್ನು ಹಿಂಪಡೆದ ಕಾರಣಕ್ಕೆ ಅರ್ಜಿದಾರರು ರಾಜ್ಯದ ಗೌರವಾನ್ವಿತ ಉಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ದಾಖಲಿಸಿದ್ದರು. ಉಚ್ಛನ್ಯಾಯಾಲಯವು ರಿಟ್ ಪಿಟಿಷನ್ ಸಂ/ 17446-53/2015 ರಲ್ಲಿ ಸರ್ಕಾರವು ಕೈಗೊಂಡಿದ್ದ ಭೂ ಉಪಯೋಗ ಬದಲಾವಣೆಯ ತೀರ್ಮಾನವನ್ನು ರದ್ದು ಮಾಡಿ ಆದೇಶ ಹೊರಡಿಸಿರುತ್ತದೆ. ಆನಂತರ ಆಕಾಶ್ ರಂಕಾ ಎನ್ನುವವರು ರಿಟ್ ಅಪೀಲನ್ನು ದಾಖಲಿಸಿರುತ್ತಾರೆ. ಉಚ್ಛ ನ್ಯಾಯಾಲಯವು ರಿಟ್ ಅಪೀಲನ್ನೂ ಸಹ ವಜಾ ಮಾಡಿರುತ್ತದೆ. ಅದಾದ ಮೇಲೆ ಉಚ್ಛ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್‍ಎಲ್‍ಪಿ ದಾಖಲಿಸಿದ್ದಾರೆ. ಇದಿಷ್ಟು ವಾಸ್ತವ. ಬಿಜೆಪಿಯವರಿಗೆ ಇದಿಷ್ಟು ಸಂಗತಿ ಗೊತ್ತಿದರೂ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ 3 ತಿಂಗಳಾಯಿತು. ಆದರೆ ಇದುವರೆಗೂ ಕೂಡ ಸಿಡಿಪಿಗೆ ಅನುಮೋದನೆ ನೀಡಿಲ್ಲ. ಸಿಡಿಪಿಯನ್ನು ಅಂತಿಮಗೊಳಿಸದ ಕಾರಣ ನಗರದ ಬೆಳವಣಿಗೆ ಅಡ್ಡಾದಿಡ್ಡಿಯಾಗಿದೆ. ಆದ್ದರಿಂದ ಕೂಡಲೆ ಸಿಡಿಪಿಯನ್ನು ಅಂತಿಮಗೊಳಿಸಿ ಗೆಜೆಟ್ ಹೊರಡಿಸಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ
H. D. Deve Gowda: ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ತಂದವರು ಸಿಂಗ್: ದೇವೇಗೌಡ
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Politics: ಖರ್ಗೆ ತಳ್ಳಿದ ಡಿಕೆಶಿ; ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಟೀಕಿಸಿದ ಬಿಜೆಪಿ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.