ಸಮನ್ವಯಕ್ಕೆ ಆಗ್ರಹ: 40ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರಿಂದ ಒತ್ತಡ ಸುರ್ಜೇವಾಲಗೂ ಮನವರಿಕೆ
Team Udayavani, Aug 4, 2023, 1:20 AM IST
ಬೆಂಗಳೂರು: ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಮ್ಮುಖದಲ್ಲಿ ಬುಧವಾರ ನಡೆದ ಸಭೆ ಯಲ್ಲಿ ಹಿರಿಯ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಒಡಕಿನ ಮಾತುಗಳು ಮುಂದುವರಿದಿವೆ. ಸರಕಾರ ಮತ್ತು ಪಕ್ಷದ ನಡುವೆ ಸಂಪರ್ಕ ಸೇತುವಾಗಿ ಕೆಲಸ ಮಾಡಲು ಸಮನ್ವಯ ಸಮಿತಿಯನ್ನು ರಚಿಸಬೇಕೆಂಬ ಕೂಗಿಗೆ ಹೈಕಮಾಂಡ್ ಸೊಪ್ಪು ಹಾಕದಿದ್ದರೂ ಇದಕ್ಕಾಗಿ ಶಾಸಕರ ವಲಯದಿಂದ ಒತ್ತಡ ಹೆಚ್ಚಾಗುತ್ತಿದೆ.
ಶಾಸಕಾಂಗ ಪಕ್ಷದ ಸಭೆ ಕರೆಯ ಬೇಕೆಂದು ಒತ್ತಾಯಿಸುವ ಪತ್ರಕ್ಕೆ ಸಹಿ ಸಂಗ್ರಹಿಸಿದ್ದ ಶಾಸಕರೇ ಈಗ ಸಮನ್ವಯ ಸಮಿತಿ ರಚನೆಯ ಅಗತ್ಯವಿದೆ ಎಂದು ಪ್ರತಿಪಾದಿಸತೊಡಗಿದ್ದಾರೆ. ಇದರ ಅಗತ್ಯ ಏನು ಎಂಬುದನ್ನು ಸಾರ್ವಜನಿಕವಾಗಿ ಮನದಟ್ಟು ಮಾಡಿಕೊಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಮನ್ವಯ ಸಮಿತಿ ರಚನೆ ಅಗತ್ಯವಿಲ್ಲವೆಂದು ಪ್ರತಿ ಪಾದಿಸುತ್ತಿದ್ದರೆ ಅಂದಾಜು 40ಕ್ಕೂ ಹೆಚ್ಚು ಮಂದಿ ಶಾಸಕರು ಸಮಿತಿ ರಚನೆ ಆಗಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ತಮ್ಮ ಬೇಡಿಕೆಯನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುಜೇìವಾಲ ಅವರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಸುಜೇìವಾಲ ಇದುವರೆಗೆ ಯಾವುದೇ ನಿಲುವು ವ್ಯಕ್ತಪಡಿಸಿಲ್ಲ.
ಪಕ್ಷದ ಹಿರಿಯ ನಾಯಕ ಬಸವರಾಜ ರಾಯರೆಡ್ಡಿ ಅವರು ಗುರುವಾರ ಕಲಬುರಗಿಯಲ್ಲಿ ನೀಡಿರುವ ಹೇಳಿಕೆ ಯಿಂದ ಸಮನ್ವಯ ಸಮಿತಿ ರಚನೆಯ ಆಗ್ರಹಕ್ಕೆ ಪುಷ್ಟಿ ಬಂದಂತೆ ಆಗಿದೆ.
ಸಿದ್ದರಾಮಯ್ಯ 2013ರಲ್ಲಿ ಸಿಎಂ ಆಗಿದ್ದಾಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ| ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಲಾಗಿತ್ತು. ಆಗ ಪಕ್ಷ ಹಾಗೂ ಸರಕಾರದ ನಡುವೆ ಸಮನ್ವಯ ಸಾಧಿಸಲು ಈ ರೀತಿಯ ಸಮಿತಿ ಅಗತ್ಯವೆಂದು ಪ್ರತಿಪಾದಿಸಲಾಗಿತ್ತು. ಆದರೆ ಈಗ ರಾಯರೆಡ್ಡಿ ಪ್ರತಿಪಾದಿಸುತ್ತಿರುವ ಸಮನ್ವಯ ಸಮಿತಿಯ ಸ್ವರೂಪವೇ ಬೇರೆ. ಸಚಿವರು ಹಾಗೂ ಶಾಸಕರ ನಡುವೆ ಒಮ್ಮತಾಭಿಪ್ರಾಯ ಮೂಡಿಸಲು ಸಮನ್ವಯ ಸಮಿತಿ ಇದ್ದರೆ ತಪ್ಪೇನು ಎಂದು ರಾಯರೆಡ್ಡಿ ಪ್ರಶ್ನಿಸಿದ್ದಾರೆ.
ಸಮಿತಿ ಏಕೆ ಬೇಕು?
ಶಾಸಕರ ಸಮ್ಮತಿ ಇಲ್ಲದೆ ಏಕಪಕ್ಷೀಯ ವಾಗಿ ಕೆಲವು ನಿರ್ಧಾರಗಳನ್ನು ತೆಗೆದು ಕೊಳ್ಳಲಾಗುತ್ತಿದೆ. ಇತ್ತೀಚೆಗಿನ ವರ್ಗಾವಣೆ ಪ್ರಕರಣಗಳನ್ನೇ ನಿದರ್ಶನವಾಗಿಟ್ಟು ಕೊಂಡು ಹೇಳುವುದಾದರೆ ಶಾಸಕರ ಶಿಫಾರಸುಗಳಿಗೆ ಮಾನ್ಯತೆ ಸಿಕ್ಕಿಲ್ಲ. ಇದು ಶಾಸಕರನ್ನು ಕೆರಳಿಸಿದೆ. ಸಚಿವರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಲು ಸಮನ್ವಯ ಸಮಿತಿ ಬೇಕೇ ಬೇಕು ಎಂಬುದು ಹಲವರ ಬೇಡಿಕೆ. ಅಸಮಾಧಾನಿತ ಶಾಸಕರ ಬೇಡಿಕೆಗಳಿಗೆ ಪಕ್ಷದ ಹೈಕಮಾಂಡ್ ಹೇಗೆ ಸ್ಪಂದಿಸುತ್ತದೆ ಎಂಬುದು ಮಾತ್ರ ಕುತೂಹಲ ಕೆರಳಿಸಿದೆ.
ಪಂಡೋರಾ ಪೆಟ್ಟಿಗೆ ತೆರೆದಂತೆ?
ಹೊಸದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಸಚಿವರ ಕಾರ್ಯವೈಖರಿ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಕ್ಷದ ಹೈಕಮಾಂಡ್ ರಾಜ್ಯದಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಣದೀಪ್ ಸಿಂಗ್ ಸುಜೇìವಾಲ ಅವ ರನ್ನು ಶಾಸಕರ ಅಹವಾಲು ಆಲಿಸು ವುದಕ್ಕಾಗಿ ಕಳುಹಿಸಿಕೊಡಲು ನಿರ್ಧರಿ
ಸಿದೆ. ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ವಿರುದ್ಧ ಶಾಸಕರು ತಿರುಗಿಬಿದ್ದಿರುವುದನ್ನು ಗಂಭೀ ರ ವಾಗಿ ಪರಿಗಣಿಸಿರುವ ಹೈಕಮಾಂಡ್ ಈಗ ಶಾಸಕರ ದೂರು ಆಲಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಬಹುತೇಕ ಮುಂದಿನ ವಾರ ಸುಜೇìವಾಲ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಶಾಸಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಆದರೆ ಇದು “ಪಂಡೋರಾ ಪೆಟ್ಟಿಗೆ’ಯನ್ನು ತೆರೆದಂತೆ ಆಗಲಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಇರುವಾಗ ಹೈಕಮಾಂಡ್ ಪ್ರತಿನಿಧಿಯಾಗಿ ಸುಜೇìವಾಲ ಬರುವ ಅಗತ್ಯ ಏನು? ಇದರಿಂದ ಶಾಸಕರು ಸಿಎಂ-ಡಿಸಿಎಂ ಮಾತು ಕೇಳುತ್ತಿಲ್ಲ ಎಂಬ ಸಂದೇಶ ಹೊರಬೀಳುವುದಿಲ್ಲವೇ ಎಂದು ಹೆಸರು ಹೇಳಲಿಚ್ಛಿಸದ ಶಾಸಕರು ಅಭಿಪ್ರಾಯಪಟ್ಟಿದ್ದಾರೆ.
ಸಮನ್ವಯ ಸಮಿತಿ ಇದ್ದರೆ ತಪ್ಪೇನು?
ಕಲಬುರಗಿ: ಸಚಿವರು ಹಾಗೂ ಶಾಸಕರ ನಡುವೆ ಒಮ್ಮತಾಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಸಮನ್ವಯ ಸಮಿತಿ ಇದ್ದರೆ ತಪ್ಪೇನು ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಬಸವರಾಜ ರಾಯರಡ್ಡಿ ಪ್ರಶ್ನಿಸಿದ್ದಾರೆ. ಕಲಬುರಗಿಯಲ್ಲಿ ಅವರು ಮಾತನಾಡಿದರು. ಪ್ರತೀ ಎರಡು ತಿಂಗಳಿಗೊಮ್ಮೆ ಸಚಿವರೊಂದಿಗೆ, ಶಾಸಕರೊಂದಿಗೆ ಸಭೆ ನಡೆಸಿದರೆ ಒಳ್ಳೆಯ ಆಡಳಿತ ನೀಡಲು ಸಾಧ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಇದಕ್ಕೆ ಒಪ್ಪಿದ್ದಾರೆ. ಪ್ರತೀ ಎರಡು ತಿಂಗಳಿಗೊಮ್ಮೆ ಸಿಎಂ ಕಡ್ಡಾಯವಾಗಿ ಸಭೆ ನಡೆಸಬೇಕು. ಸಚಿವರು ಹಾಗೂ ಶಾಸಕರ ನಡುವೆ ಅಸಮಾಧಾನವಿಲ್ಲ.
ಆದರೆ ಕಾರ್ಯವೈಖರಿಯ ಬಗ್ಗೆ ಹೇಳಲು ಶಾಸಕಾಂಗ ಸಭೆ ಕರೆಯುವಂತೆ ಪತ್ರ ಬರೆಯಲಾಗಿತ್ತು. ಸಭೆ ನಡೆದರೆ ಇತ್ತಂಡ ಗಳ ನಡುವೆ ಸೌಹಾರ್ದ ಮೂಡಲು ಸಾಧ್ಯವಾಗುತ್ತದೆ ಎಂದು ರಾಯರೆಡ್ಡಿ ಹೇಳಿದರು. ವರ್ಷಕ್ಕೊಮ್ಮೆ ಸಚಿವರ ಮೌಲ್ಯಮಾಪನ ನಡೆಯಲಿ. ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ವರ್ಷಕ್ಕೊಮ್ಮೆ ಸೇವಾ ಮೌಲ್ಯಮಾಪನ ನಡೆಯುತ್ತದೆ. ಅದೇ ರೀತಿ ಸಚಿವರ ಮೌಲ್ಯಮಾಪನ ನಡೆಯುವುದರಲ್ಲಿ ತಪ್ಪಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.