ಅಕ್ರಮ ಅಂಕಪಟ್ಟಿಯಿಂದ ಕೆಲಸ ಗಿಟ್ಟಿಸಿಕೊಂಡವರಿಗೆ ಕಾದಿದೆ ಸಂಕಷ್ಟ!
ನೂರಾರು ಉದ್ಯೋಗಿಗಳಿಗೆ ಸಿಸಿಬಿ ತನಿಖೆಯ ಉರುಳು
Team Udayavani, Jul 24, 2023, 7:15 AM IST
ಬೆಂಗಳೂರು: ಅಕ್ರಮ ಅಂಕಪಟ್ಟಿ ಆಧರಿಸಿ ದೇಶ-ವಿದೇಶಗಳ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿರುವ ನೂರಾರು ಮಂದಿಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ತನಿಖೆಯ ಸಂಕಷ್ಟ ಎದುರಾಗಲಿದೆ. ನಕಲಿ ಉದ್ಯೋಗಿಗಳ ಅಸಲಿಯತ್ತು ಬಯಲಾದರೆ ತಕ್ಕ ಶಾಸ್ತಿ ಮಾಡಲು ಸಿದ್ಧತೆ ನಡೆದಿದೆ.
ರಾಜ್ಯಾದ್ಯಂತ ಅಕ್ರಮ ಅಂಕಪಟ್ಟಿಗಳ ಜಾಲ ವಿಸ್ತರಿಸಿದ್ದು, ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ನಕಲಿ ಅಥವಾ ಅಕ್ರಮ ಅಂಕಪಟ್ಟಿ ತೋರಿಸಿ ನೂರಾರು ಮಂದಿ ಉದ್ಯೋಗ ಗಿಟ್ಟಿಸಿಕೊಂಡಿರುವ ಸುಳಿವು ಸಿಕ್ಕಿದೆ. ಮಾರ್ಕ್ಸ್ ಕಾರ್ಡ್ ದಂಧೆಯಲ್ಲಿ ಬಂಧನಕ್ಕೆ ಒಳಗಾದವರಿಂದ ಖರೀದಿದಾರರ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಂಪೆನಿಗಳು ದೂರು ನೀಡಿದರೂ ಉದ್ಯೋಗಿಗಳಿಗೆ ನೋಟಿಸ್ ನೀಡಿ ಸಿಸಿಬಿ ಬಿಸಿ ಮುಟ್ಟಿಸಲಿದೆ. ಇಂತಹ ಉದ್ಯೋಗಿಗಳ ವಿರುದ್ಧ ಸಾಕ್ಷ್ಯ ಕಲೆ ಹಾಕುವ ಕಾರ್ಯವೂ ಸದ್ದಿಲ್ಲದೆ ನಡೆಯುತ್ತಿದೆ.
ಮೂರೂವರೆ ವರ್ಷಗಳಲ್ಲಿ ರಾಜ್ಯ ಪೊಲೀಸ್ ಇಲಾಖೆ 32 ನಕಲಿ ಅಂಕಪಟ್ಟಿ ಜಾಲ ಬೇಧಿಸಿದೆ. ಇತ್ತೀಚೆಗೆ ಪತ್ತೆಯಾದ 6 ಪ್ರಕರಣಗಳಲ್ಲಿ 16,297 ನಕಲಿ ಅಂಕಪಟ್ಟಿಗಳ ನ್ನು ಜಪ್ತಿ ಮಾಡಲಾಗಿದೆ. ಶಿಕ್ಷಣ ಇಲಾಖೆ ಗಮನಕ್ಕೆ ತಂದು ಸೂಕ್ತ ಕಾನೂನು ಕ್ರಮಕ್ಕಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ವಿದೇಶಗಳಲ್ಲಿ ಕೆಲಸ
ಅಕ್ರಮ ಅಂಕಪಟ್ಟಿ ಪಡೆದವರು ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಅರಬ್ ದೇಶಗಳು, ಯೂರೋಪ್‌ನ ವಿವಿಧ ಕಂಪೆನಿಗಳಲ್ಲಿ ಎಂಜಿನಿಯರ್, ಮ್ಯಾನೇಜರ್ ಇತ್ಯಾದಿ ಉನ್ನತ ಹುದ್ದೆ ಅಲಂಕರಿಸಿರುವುದು ಗೊತ್ತಾಗಿದೆ. ಮತ್ತೂಂದೆಡೆ ಉತ್ತರ ಭಾರತದ ಕೆಲವು ಪ್ರತಿಷ್ಠಿತ ವಿ.ವಿ.ಗಳು ಜಾಲದಲ್ಲಿ ಕೈ ಜೋಡಿಸಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಮೂರಕ್ಕೂ ಹೆಚ್ಚಿನ ವಿ.ವಿ.ಗಳಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೇಳಿದ್ದಾರೆ. ಆದರೆ ಪ್ರತಿಕ್ರಿಯೆ ಬಂದಿಲ್ಲ. ಕೆಲವು ಸಂಸ್ಥೆಗಳು ಶಿಕ್ಷಣ ಕೋರ್ಸ್ ನಡೆಸುವ ನೆಪದಲ್ಲಿ ಅಥವಾ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಹೆಸರು ದುರ್ಬಳಕೆ ಮಾಡಿ ಒಂದೇ ವರ್ಷದಲ್ಲಿ ಪದವಿ, ಪಿಯುಸಿ ಅಂಕಪಟ್ಟಿ ಪಡೆಯಬಹುದೆಂದು ಜಾಹೀರಾತು ನೀಡಿ ವಂಚಿಸುತ್ತಿದೆ. ಈ ಬಗ್ಗೆ ಸಿಸಿಬಿ ನಿಗಾ ಇರಿಸಿದೆ. 2022ರಲ್ಲಿ 16 ಪ್ರಕರಣ, 2023 (ಜೂ. 4ರವ ರೆ ಗೆ) 4 ಪ್ರಕರಣ ದಾಖಲಾಗಿದೆ.
(ಎ. 28) ಸರಕಾರದಿಂದ ಮಾನ್ಯತೆ ಪಡೆಯದೆ ಕೆಐಒಎಸ್ ಸಂಸ್ಥೆ ತೆರೆದು ಎಸೆಸೆಲ್ಸಿ, ಪಿಯುಸಿ ತತ್ಸಮಾನ ಎಂದು ನಮೂದಿಸಿ ಅಂಕಪಟ್ಟಿ ವಿತರಿಸುತ್ತಿದ್ದ ಪ್ರಕರಣ ಪತ್ತೆ.
(ಜ. 27) ವಿವಿಧ ವಿ.ವಿ.ಗಳ ಹೆಸರಲ್ಲಿ 20 ಸಾವಿರ ರೂ.ಗಳಿಗೆ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ 5 ಸಂಸ್ಥೆಗಳ ಮೇಲೆ ಸಿಸಿಬಿ ದಾಳಿ.
(2022 ಡಿ. 5) ದೇಶದ ಪ್ರತಿ ಷ್ಠಿತ 25 ವಿ.ವಿ.ಗಳ ನಕಲಿ ಅಂಕ ಪಟ್ಟಿ ಮಾರಾಟ ದಂಧೆ ಪತ್ತೆ.
25 ಸಾವಿರದಿಂದ 1 ಲಕ್ಷ
ರೂ.ಗೆ ಅಕ್ರಮ ಅಂಕಪಟ್ಟಿ
ಎಸೆಸೆಲ್ಸಿಯಿಂದ ಹಿಡಿದು ಎಂ.ಟೆಕ್, ಎಂಬಿಎ, ಎಂಎಸ್ಸಿ, ಎಂಕಾಂ ಸಹಿತ ವಿವಿಧ ಸ್ನಾತ ಕೋತ್ತರ ಪದವಿಯ ಅಕ್ರಮ ಅಂಕಪಟ್ಟಿಗಳು 25 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳಿಗೆ ಬಿಕರಿಯಾಗುತ್ತಿವೆ. ಪದವಿಗೆ ಅನುಗುಣವಾಗಿ ದರ ನಿಗದಿಪಡಿಸಲಾಗುತ್ತದೆ. ಕೆಲವು ಪ್ರಕರಣ ಗಳಲ್ಲಿ ಅಂಕಪಟ್ಟಿಗೆ ಬೇಡಿಕೆಯಿರುವ ಗ್ರಾಹಕರ ಹೆಸರಿನಲ್ಲಿ ಕೋರ್ಸ್‌ಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ. ಬುದ್ಧಿವಂತ ಯುವಕ-ಯುವತಿಯರಿಗೆ ದುಡ್ಡಿನ ಆಮಿಷವೊಡ್ಡಿ ಪರೀಕ್ಷೆ ಬರೆಸಿ ಅಂಕಪಟ್ಟಿ ಮಾರಾಟ ಮಾಡಿ ವಾರ್ಷಿಕ ಲಕ್ಷಾಂತರ
ರೂಪಾಯಿ ಸಂಪಾದಿಸುತ್ತಾರೆ.
ಹಾಟ್‌ಸ್ಪಾಟ್‌ಗಳು
ರಾಜಧಾನಿ ಬೆಂಗಳೂರು ಮೈಸೂರು,ಮಂಗಳೂರು ,ದಾವಣಗೆರೆ ,ಹುಬ್ಬಳ್ಳಿ ,ಧಾರವಾಡ ,ಬಾಗಲಕೋಟೆ
(ಇವು ನಕಲಿ ಅಂಕಪಟ್ಟಿ ಮಾರಾಟದ ಹಾಟ್‌ಸ್ಪಾಟ್ ಆಗಿವೆ ಎಂದು ಹೇಳಲಾಗಿದೆ.)
ಅಕ್ರಮ ಅಂಕಪಟ್ಟಿ ಖರೀದಿ ಮಾಡಿದವರ ಮಾಹಿತಿ ಸಿಕ್ಕಿದರೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗು ವುದು. ಸದ್ಯ ನಕಲಿ ಅಂಕಪಟ್ಟಿ ಖರೀದಿಸಿದವರ ವಿರುದ್ಧ ದೂರುಗಳು ಬಂದಿಲ್ಲ. ಬಂಧಿತ ಆರೋಪಿಗಳು ತಮ್ಮಿಂದ ಅಂಕಪಟ್ಟಿ ಖರೀದಿಸಿದವರ ಮಾಹಿತಿ ಸಂಗ್ರಹಿಸಿಟ್ಟು ಕೊಂಡಿಲ್ಲ. ಹೀಗಾಗಿ ಅಂಥವರ ಪತ್ತೆ ಸವಾಲಾಗಿದೆ.
– ಡಾ| ಎಸ್.ಡಿ. ಶರಣಪ್ಪ,
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ
-ಅವಿನಾಶ ಮೂಡಂಬಿಕಾನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.