9,600 ಮಂದಿಗೆ ಜಿಎಸ್‌ಟಿಎನ್ ಸಂಖ್ಯೆ ಹಂಚಿಕೆ
Team Udayavani, Jul 11, 2017, 2:20 AM IST
ಬೆಂಗಳೂರು: ಜಿಎಸ್‌ಟಿ ಜಾರಿಯಾಗಿ 10 ದಿನ ಕಳೆದರೂ ತಾಂತ್ರಿಕ ದೋಷ ಕಾರಣಕ್ಕೆ ಜಿಎಸ್‌ಟಿಐಎನ್ ಸಂಖ್ಯೆ ಸಿಗದೆ
ಪರದಾಡುತ್ತಿದ್ದ ಸುಮಾರು 9,600 ಮಂದಿಗೆ ಸೋಮವಾರ ಜಿಎಸ್‌ಟಿಐಎನ್ ಸಂಖ್ಯೆ ದೊರಕಿದ್ದು, ವ್ಯವಹಾರ
ಮುಂದುವರಿಸಲು ಅನುಕೂಲವಾಗಿದೆ. ಹೊಸ ತೆರಿಗೆ ಪದ್ಧತಿಯಡಿ ನೋಂದಣಿಗೆ ಮುಂದಾದರೂ ಕೆಲ ತಾಂತ್ರಿಕ ದೋಷ ಕಾರಣಕ್ಕೆ ಜಿಎಸ್‌ಟಿಐಎನ್ (ಜಿಎಸ್‌ಟಿನ್) ಸಂಖ್ಯೆ ದೊರಕದ ಕಾರಣ ಸುಮಾರು 10,000ಕ್ಕೂ ಹೆಚ್ಚು ವ್ಯಾಪಾರಿಗಳು
ಪರದಾಡುವಂತಾಗಿತ್ತು. ಇದರ ನೆಪದಲ್ಲೇ ಕೆಲವರು ನಿಯಮಾನುಸಾರ ಜಿಎಸ್‌ಟಿಯಡಿ ವ್ಯವಹರಿಸದೆ ಹಳೆಯ ಪದ್ಧತಿಯಂತೆ ರಸೀದಿ ನೀಡಿ ವ್ಯವಹಾರ ನಡೆಸಲು ಮುಂದಾಗುತ್ತಿರುವುದು ಕಂಡುಬಂದಿತ್ತು. ಇದೀಗ ಜಿಎಸ್‌ಟಿನ್ ಸಂಖ್ಯೆ ಹಂಚಿಕೆಯಾಗಿರುವುದರಿಂದ ಗೊಂದಲ ನಿವಾರಣೆಯಾಗಿದೆ.
ತಾಂತ್ರಿಕ ದೋಷ: ರಾಜ್ಯದಲ್ಲಿ ಜಿಎಸ್‌ಟಿಯಡಿ ನೋಂದಣಿ ಪ್ರಕ್ರಿಯೆ ಚುರುಕಾಗಿ ನಡೆದಿದ್ದು, ಈವರೆಗೆ ಸುಮಾರು
6.50 ಲಕ್ಷಕ್ಕೂ ಹೆಚ್ಚು ಮಂದಿ ಜಿಎಸ್‌ಟಿಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 5.5 ಲಕ್ಷಕ್ಕೂ ಹೆಚ್ಚು ಮಂದಿ
ವ್ಯಾಟ್ ವ್ಯವಸ್ಥೆಯಿಂದ ವರ್ಗಾವಣೆಗೊಂಡವರು ಎಂಬ ಮಾಹಿತಿ ಇದೆ. ಜೂನ್ ಅಂತ್ಯದಲ್ಲಿ ಜಿಎಸ್‌ಟಿಯಡಿ
ನೋಂದಣಿಗೆ ಪ್ರಸ್ತಾವ ಸಲ್ಲಿಸಿದರೂ ಜಿಎಸ್‌ಟಿನ್ ಸಂಖ್ಯೆ ಸೃಷ್ಟಿಯಾಗದ ಕಾರಣ ವ್ಯಾಪಾರಿಗಳಿಗೆ ತೊಂದರೆಯಾಗಿತ್ತು.
ಏಕೆಂದರೆ ಜಿಎಸ್‌ಟಿನ್ ಸಂಖ್ಯೆಯಿಲ್ಲದೆ ಸರಕು ಖರೀದಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.
“ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ನಡೆಸುತ್ತಿದ್ದು, ಜಿಎಸ್‌ಟಿಯಡಿ ನೋಂದಣಿ ಮಾಡಿಕೊಂಡರೂ ಜಿಎಸ್‌ಟಿನ್ ಸಂಖ್ಯೆ ಸೃಷ್ಟಿಯಾಗಿಲ್ಲ. ಇದರಿಂದ ನಿತ್ಯ ವಿತರಕರು, ಸಗಟು ವ್ಯಾಪಾರಿಗಳಿಂದ ಯಾವುದೇ ವಸ್ತು ಖರೀದಿಸಲು ಸಾಧ್ಯವಾಗದೆ ಶೇ.50ರಷ್ಟು ವ್ಯವಹಾರ ಕುಸಿದಿದೆ. ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ ಗಣಕೀಕೃತ ವಿಭಾಗದವರನ್ನು ಸಂಪರ್ಕಿಸುವಂತೆ ಸೂಚಿಸುತ್ತಾರೆ. ಅವರನ್ನು ಸಂಪರ್ಕಿಸಿದರೆ ಕೆಲ ತಾಂತ್ರಿಕ ದೋಷದ ಕಾರಣ ನೀಡುತ್ತಿದ್ದಾರೆ’ ಎಂದು ಅವೆನ್ಯೂ ರಸ್ತೆಯ ಮಳಿಗೆ ಮಾಲೀಕರೊಬ್ಬರು ತಿಳಿಸಿದರು.
ಹಳೆಯ ರಸೀದಿ ವ್ಯವಹಾರ ಅನಿವಾರ್ಯ
ಜಿಎಸ್‌ಟಿಯಡಿ ನೋಂದಣಿಯಲ್ಲಿ ಸಣ್ಣ ಪುಟ್ಟ ದೋಷಗಳ ನೆಪದಲ್ಲಿ ಜಿಎಸ್‌ಟಿನ್ ಸಂಖ್ಯೆ ದೊರೆಯದ ಕಾರಣ ತೊಂದರೆ ಅನುಭವಿಸುವಂತಾಗಿದೆ. ನಮ್ಮ ಗ್ರಾಹಕರ ವಿಶ್ವಾಸ ಕಾಯ್ದುಕೊಳ್ಳಲು ನಿರಂತರವಾಗಿ ಅವರಿಗೆ ಸರಕು- ಸೇವೆ ಪೂರೈಸಬೇಕಾಗುತ್ತದೆ. ಒಂದು ವಸ್ತು ಇಲ್ಲವೆಂದರೆ ಇತರೆ ವಸ್ತು ಖರೀದಿಗೂ ಆಸಕ್ತಿ ತೋರುವುದಿಲ್ಲ.
ಹೀಗಾಗಿ ಅನಿವಾರ್ಯವಾಗಿ ಹಳೆಯ ರಸೀದಿ ವ್ಯವಹಾರ ನಡೆಸಲು ಪ್ರೇರಣೆ ನೀಡಿದಂತಾಗುತ್ತದೆ. ರಸೀದಿ ವ್ಯವಹಾರವೂ ಅಪಾಯಕಾರಿಯಾಗಿದ್ದು, ಜಾಗೃತ ಅಧಿಕಾರಿಗಳಿಗೆ ಸಿಕ್ಕಿಬಿದ್ದರೆ ದುಬಾರಿ ದಂಡ ತೆರಬೇಕಾಗುತ್ತದೆ. ಹಾಗಾಗಿ ಸಮಸ್ಯೆ ನಿವಾರಿಸಿ ತ್ವರಿತವಾಗಿ ಜಿಎಸ್‌ಟಿನ್ ಸಂಖ್ಯೆ ಸಿಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೆ.ಆರ್.ಮಾರುಕಟ್ಟೆಯ ಸಗಟು ವ್ಯಾಪಾರಿಯೊಬ್ಬರು ಹೇಳಿದರು. ಪ್ಯಾನ್‌ಕಾರ್ಡ್ ಸೇರಿ ದಾಖಲೆಗಳಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೂ ಜಿಎಸ್‌ಟಿಯಡಿ ನೋಂದಣಿಯಾಗುತ್ತಿಲ್ಲ. ಸುಮಾರು 15,000ಕ್ಕೂ ಹೆಚ್ಚು ಮಂದಿಗೆ ಜಿಎಸ್‌ಟಿನ್ ಸಂಖ್ಯೆ ದೊರೆತಿಲ್ಲ ಎಂಬ ಮಾಹಿತಿ ಇದೆ. ಇಲಾಖೆಯು ಸ್ಪಂದಿಸುತ್ತಿದ್ದು, ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಎಲ್ಲ ವ್ಯಾಪಾರಿಗಳು ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವುದರಿಂದ ಬೆಲೆಗಳು ಇಳಿಕೆಯಾಗುವ ನಿರೀಕ್ಷೆಯಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.