DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ
ಈ ಸರಕಾರಕ್ಕೆ ಆಡಿಯೋಕ್ಕಿಂತ ಇನ್ನೇನು ಸಾಕ್ಷಿ ಬೇಕು?
Team Udayavani, May 21, 2024, 11:10 PM IST
ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ ಬಿಡುಗಡೆ ಪ್ರಕರಣದಲ್ಲಿ ಭಾಗಿಯಾಗಿರುವ ಡಿ.ಕೆ. ಶಿವಕುಮಾರ್ ಅವರನ್ನು ಸರಕಾರ ಇನ್ನೂ ಮುಂದುವರಿಸುವ ಮೂಲಕ ತಪ್ಪಿತಸ್ಥರಿಗೆ ರಕ್ಷಣೆ ಕೊಡುತ್ತಿದೆ. ಇದೇ ರೀತಿ ರಕ್ಷಣೆ ಮಾಡಿದರೆ ಸರಕಾರ ಮುಂದೆ ದೊಡ್ಡ ಮಟ್ಟದ ಬೆಲೆ ತೆರಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ್ ವಿರುದ್ಧದ ಆರೋಪಕ್ಕೆ ಸಾಕ್ಷಿ ಇದೆಯೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ದೇವರಾಜೇಗೌಡ ಜತೆಗೆ ಅರ್ಧ ನಿಮಿಷವಷ್ಟೇ ಮಾತನಾಡಿದ್ದು ಎಂದು ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ನಾನು ಡಿಸಿಎಂ, ಕೆಟ್ಟವರು ಒಳ್ಳೆಯವರು ಎಲ್ಲರೂ ನನ್ನನ್ನು ಭೇಟಿಯಾಗುತ್ತಿರುತ್ತಾರೆ ಎಂದಿದ್ದಾರೆ.
ದೂರುದಾರರನ್ನು ಕರೆತಂದು ಇಷ್ಟಾದರೂ ಪ್ರಕರಣ ಮಾಡಿಸಿದ್ದೆವಲ್ಲ. ಇನ್ನೂ ಏನೇನು ಮಾಹಿತಿ ಇದೆಯೋ ಕೊಡು ಎಂದು ಆಡಿಯೋದಲ್ಲಿ ಕೇಳಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು? ಇಂತಹವರನ್ನು ಇಟ್ಟುಕೊಂಡು ರಾಜ್ಯ ಕಟ್ಟುತ್ತೀರಾ ಎಂದು ಪ್ರಶ್ನಿಸಿದರು.
ಎಸ್‌ಐಟಿಯವರು 7 ಜನರನ್ನು ಯಾವ ಸಾಕ್ಷಿಯ ಆಧಾರದ ಮೇಲೆ ಬಂಧಿಸಿದ್ದಾರೆ. ಪ್ರತಿನಿತ್ಯ ಅನೇಕರನ್ನು ಕರೆತಂದು ಹಿಂಸೆ ಕೊಡುತ್ತಿದ್ದಾರಲ್ಲಾ ಅದಕ್ಕೆಲ್ಲ ಏನಿದೆ ಸಾಕ್ಷಿ? ಬಿಡುಗಡೆಯಾಗಿರುವ ವೀಡಿಯೋದಲ್ಲಿ ಪುರುಷರ ಮುಖವೇ ಇಲ್ಲ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ. ಹಾಗಿದ್ದರೆ ಪ್ರಜ್ವಲ್, ರೇವಣ್ಣ ವಿರುದ್ಧ ಆರೋಪ ಏಕೆ? ಅವರು ಆರೋಪಿಗಳೇ ಹೊರತು ಅಪರಾಧಿಯಲ್ಲ. ಆದರೂ ಅಪರಾಧಿಗಳಂತೆ ಬಿಂಬಿಸುತ್ತಿರುವುದೇಕೆ? ರೇವಣ್ಣ ಮನೆಯಲ್ಲಿ ಏಳೆಂಟು ವರ್ಷದಿಂದ ಕೆಲಸ ಮಾಡಿಕೊಂಡಿದ್ದವರು ದೂರು ಕೊಟ್ಟಿದ್ದಾಗಿ ಹೇಳಿದ್ದೀರಿ. ಇಷ್ಟು ವರ್ಷ ಅವರೇಕೆ ದೂರು ಕೊಟ್ಟಿರಲಿಲ್ಲ ಎಂದು ಕೇಳಿದರು.
“ಹಲೋ ಅಪ್ಪ’ ಪ್ರಕರಣ ಪ್ರಸ್ತಾವ
ಪ್ರಜ್ವಲ್ ರೇವಣ್ಣ ತಪ್ಪಿಲ್ಲದಿದ್ದರೆ ಆತನನ್ನು ಪಕ್ಷದಿಂದ ಅಮಾನತು ಮಾಡಿದ್ದೇಕೆ ಎಂದು ಸಿಎಂ ಪ್ರಶ್ನಿಸಿದ್ದಾರೆ. ನೈತಿಕತೆ ಉಳಿಸಬೇಕೆಂದು ಆರೋಪ ಬಂದ ಕೂಡಲೇ ಅಮಾನತು ಮಾಡಿದ್ದೇವೆ. ನಿಮ್ಮಂತೆ ಭಂಡತನ ಮಾಡಿಲ್ಲ. ನಿಮ್ಮ ದೂರವಾಣಿ ಕರೆ ಮಾಡಿ, ಹಲೋ ಅಪ್ಪ… ನಾನು ಕೊಟ್ಟಿದ್ದೇ 5 ಹೆಸರು, 6 ಹೆಸರು ಹೇಗೆ ಬಂತು ಎಂದಿದ್ದನ್ನು ಸಿಎಸ್‌ಆರ್ ಫಂಡ್‌ಗೆ ಸಂಬಂಧಿಸಿದ ವಿಷಯ ಎಂದು ತಿರುಚಲಿಲ್ಲ. ಸಿಎಂ ಆಗಿ ಯಾವ ರೀತಿ ಸಾಕ್ಷಿ ನಾಶ ಮಾಡಿದಿರಿ, ಅಧಿಕಾರ ದುರುಪಯೋಗ ಮಾಡಿಕೊಂಡು ಯಾವ ರೀತಿ ಮಾಹಿತಿ ತಿರುಚಿದಿರಿ ಎಂಬುದು ಗೊತ್ತಿದೆ. ದೇವೇಗೌಡರು, ಪಕ್ಷದ ಕಾರ್ಯಕರ್ತರಿಗೆ ಗೌರವ ತರುವ ರೀತಿಯಲ್ಲಿ ಪ್ರಜ್ವಲ್ ತೀರ್ಮಾನ ಕೈಗೊಳ್ಳುತ್ತಾನೆ. ಆತ ಸಂಪರ್ಕದಲ್ಲಿ ಇಲ್ಲದೆ ಇರುವುದರಿಂದ ಮಾಧ್ಯಮಗಳ ಮೂಲಕ ಈಗಲೂ ವಾಪಸ್ ಬಂದು ತನಿಖೆಗೆ ಸಹಕರಿಸುವ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಎಸ್‌ಐಟಿ ತಂಡವಲ್ಲ ದಂಡ
ಪೆನ್‌ಡ್ರೈವ್ ಬಿಟ್ಟವರ ಮೇಲೆ ಕ್ರಮ ಆಗಿಲ್ಲ. ಬಂಧಿಸಿಲ್ಲ, ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ. ಇದರ ಹಿಂದೆ ಏನು ಹುನ್ನಾರ ಇದೆ? ಈ ಪ್ರಕರಣವನ್ನು ಪ್ರಚಾರಕ್ಕಾಗಿ ಇಟ್ಟುಕೊಂಡಿದ್ದೀರಿ. ಯಾರಿಗೂ ನ್ಯಾಯ ಕೊಡುವ ನಿಟ್ಟಿನಲ್ಲಿ ತನಿಖೆ ಆಗುತ್ತಿಲ್ಲ. ಅದು ಎಸ್‌ಐಟಿ ತಂಡವಲ್ಲ, ದಂಡ. ಈ ದಂಡವನ್ನು ಯಾರ ಮೇಲೆ ಹೇಗೆ ಪ್ರಯೋಗಿಸುತ್ತಿದ್ದೀರಿ ಎಂಬುದು ಗೊತ್ತಿದೆ. ಕಾನೂನು ಚೌಕಟ್ಟಿನಲ್ಲಿ ಸತ್ಯಾಂಶ ಹೊರತರಲು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.