![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 8, 2022, 6:45 AM IST
ಬೆಂಗಳೂರು: ಸಮಾಜದಲ್ಲಿ ಅಶಾಂತಿ, ಜಾತಿ- ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸಲು ಪ್ರಚೋದನಕಾರಿ ಹೇಳಿಕೆ ಕೊಡುತ್ತಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತತ್‌ಕ್ಷಣ ಸಂಪುಟದಿಂದ ವಜಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಆಯುಕ್ತರು ಗೃಹ ಸಚಿವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ನಾವೇ ಪಕ್ಷದ ವತಿಯಿಂದ ದೂರು ಸಲ್ಲಿಸುತ್ತೇವೆ. ಜನರ ಮುಂದೆ ಹೋಗುತ್ತೇವೆ ಎಂದು ಹೇಳಿದರು.
ನಮ್ಮ ರಾಜ್ಯದ ಗೃಹ ಸಚಿವರಿಗೆ ಸಾಮಾನ್ಯ ಪ್ರಜ್ಞೆ ಎಂಬುದೇ ಇಲ್ಲವಾಗಿದೆ. ಅವರು ಗೃಹ ಸಚಿವರಾಗಿ ಮಾತನಾಡುತ್ತಿದ್ದಾರಾ ಅಥವಾ ಬಿಜೆಪಿ ಪರವಾಗಿ ಹೇಳಿಕೆ ನೀಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ ಎಂದರು.
ಜೆಜೆ ನಗರ ಕೊಲೆ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಇಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಆದರೆ ಪ್ರಕರಣದ ತನಿಖೆಯಾಗುವ ಮುನ್ನವೇ ಉರ್ದು ಬರುವುದಿಲ್ಲ ಎಂದು ಹೇಳಿದ್ದಕ್ಕೇ ಆ ಯುವಕನನ್ನು ಚುಚ್ಚಿ, ಚುಚ್ಚಿ ಕೊಂದಿದ್ದಾರೆ ಎಂದು ಗೃಹ ಸಚಿವರು ಮೊದಲು ಹೇಳಿಕೆ ನೀಡಿ, ಅನಂತರ ತಮ್ಮ ಹೇಳಿಕೆ ಬದಲಾಯಿಸಿದರು.
ಇದೆಲ್ಲವೂ ಆದ ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಹೋಗಿ ಅವರ ಕುಟುಂಬದವರಿಗೆ ಹೀಗೆ ಹೇಳಿ ಎಂದು ಹೇಳಿಕೊಡುತ್ತಾರೆ. ಇವರೆಲ್ಲರೂ ಕರ್ನಾಟಕ ರಾಜ್ಯವನ್ನು ಏನು ಮಾಡಲು ಹೊರಟಿದ್ದಾರೆ ಎಂಬುದು ಅರ್ಥವಾಗುತ್ತಿಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಯುವತಿ ಮುಸ್ಕಾನ್ ವಿಚಾರವಾಗಿ ವಿದೇಶದ ಸಂಘಟನೆಯ ವ್ಯಕ್ತಿಯೊಬ್ಬ ಹೇಳಿಕೆ ನೀಡಿರುವುದನ್ನು ನಾವು ಖಂಡಿಸುತ್ತೇವೆ. ನಮ್ಮ ದೇಶದ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಬೇರೆ ಯಾರಿಗೂ ಅಧಿಕಾರವಿಲ್ಲ. ನಮ್ಮ ದೇಶದ ಏಕತೆ, ಸಮಗ್ರತೆ, ಶಾಂತಿ ವಿಚಾರದಲ್ಲಿ ಬೇರೆಯವರು ತಲೆ ಹಾಕಲು ಸರಕಾರ ಅವಕಾಶ ನೀಡಬಾರದು. ಈ ಸಂಘಟನೆಗಳನ್ನು ಈಗಾಗಲೇ ನಿಷೇಧಿಸಲಾಗಿದೆ ಎಂದು ಹೇಳಿದರು.
ಪ್ರತಿಭಟನೆ:
ನಿರಂತರ ಬೆಲೆ ಏರಿಕೆ ವಿಚಾರವನ್ನು ಖಂಡಿಸಿ ಇದೇ ತಿಂಗಳು 11ರಂದು ಬೆಂಗಳೂರು ನಗರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳಗ್ಗೆ 11 ಗಂಟೆಗೆ ರಾಜ್ಯ ಮಟ್ಟದ ಪ್ರತಿಭಟನೆ ಮಾಡಲು ಚಿಂತನೆ ನಡೆಸಿದ್ದೇವೆ. ಇದರ ನಡುವೆ ಒಂದು ದಿನ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸುವಂತೆ ನಾಯಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬಿಜೆಪಿಯವರು ಈ ಎಲ್ಲ ವಿಚಾರಗಳನ್ನು ಚುನಾವಣೆಗಾಗಿ ತರುತ್ತಿದ್ದಾರೆ. ಕೋಳಿ, ಕುರಿ ಸಾಕುವುದು ರೈತರು. ಇವರ ಹಲಾಲ್ ವಿಚಾರದಿಂದ ನಷ್ಟ ಅನುಭವಿಸಿದ್ದು ರೈತರು. ಮುಸಲ್ಮಾನರಿಂದ ಮಾವು ಖರೀದಿ ಮಾಡಬಾರದು, ವ್ಯಾಪಾರಿಗಳಿಗೆ ರೈತರು ಮಾವು ಕೊಡಬಾರದು ಎನ್ನುತ್ತಿದ್ದಾರೆ. ರೈತನ ಬದುಕು ನಾಶ ಮಾಡಲು ಇವರು ಪ್ರಯತ್ನಿಸುತ್ತಿದ್ದಾರೆ. – ಡಿ.ಕೆ.ಶಿವಕುಮಾರ್
ಜಮೀರ್ ಮುನಿಸು? :
ಹಿಜಾಬ್ ಕುರಿತು ಮಾತನಾಡಬಾರದು ಎಂದು ಸೂಚನೆ ನೀಡಿದ ಬಳಿಕ ಅಂತರ ಕಾಯ್ದುಕೊಂಡಿರುವ ಮಾಜಿ ಸಚಿವ ಜಮೀರ್ ಅಹಮದ್ ಇತ್ತೀಚೆಗೆ ರಾಹುಲ್ ಗಾಂಧಿಯವರ ಸಭೆಗೆ ಗೈರಾಗಿರುವುದು ಅವರು ಪಕ್ಷದಲ್ಲಿ ಮುನಿಸಿಕೊಂಡಿರುವುದರ ಸಂಕೇತವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, “ಅದರ ಬಗ್ಗೆ ನನಗೆ ಗೊತ್ತಿಲ್ಲ. ನಿಮ್ಮ ಬಳಿ ಮಾಹಿತಿ ಇದ್ದರೆ ಕೊಡಿ’ ಎಂದರು.
You seem to have an Ad Blocker on.
To continue reading, please turn it off or whitelist Udayavani.