ಮನೆ ಅಂಗಳವೇ ಪ್ಯಾಲೇಸು; ಸರಳ ಹಬ್ಬವೇ ಲೇಸು: ಡಾ.ಸಿ.ಎನ್.ಮಂಜುನಾಥ್
Team Udayavani, Oct 16, 2020, 9:09 AM IST
ದಸರಾ… ಎಂದಾಕ್ಷಣ ಜಂಬೂಸವಾರಿ, ಬನ್ನಿಮಂಟಪ, ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳ ಮೆರವಣಿಗೆಯ ಮೆರುಗು, ಬೊಂಬೆಗಳ ಪ್ರದರ್ಶನ, ನೂರಾರು ಜನ ಒಂದೆಡೆ ಸೇರಿ ಬನ್ನಿ ಮುಡಿಯುವುದು, ಸ್ನೇಹಿತರು-ಸಂಬಂಧಿಕರೊಂದಿಗೆ ಸಡಗರ, ಪ್ರವಾಸ ಮೋಜು ಸೇರಿದಂತೆ ಹತ್ತಾರು ಚಿತ್ರಗಳು ಕಣ್ಮುಂದೆ ಬರುತ್ತವೆ. ಆದರೆ, ಈ ಬಾರಿಯ ನಾಡಹಬ್ಬ ದಸರಾ? `ಮನೆಯಲ್ಲಿಯೇ ಸುರಕ್ಷಿತವಾಗಿರುವುದು; ನಮ್ಮ, ನಮ್ಮವರ ಆರೋಗ್ಯ.. ಜತೆ ಜತೆಗೆ ಇತರರ ಆರೋಗ್ಯ ರಕ್ಷಣೆ’.
ಆರೋಗ್ಯ ಕ್ಷೇತ್ರದ ಪ್ರತಿನಿಧಿಯಾಗಿ ಈ ಬಾರಿ ನಾಡಹಬ್ಬಕ್ಕೆ ನಾನು ಚಾಲನೆ ನೀಡುತ್ತಿರಬಹುದು. ಹಾಗಂತ ಇದು ಸಂಭ್ರಮಿಸುವ ಸಂದರ್ಭವಲ್ಲ. ಸಾಂಕ್ರಾಮಿಕ ತಡೆಗೆ ನಿರಂತರವಾಗಿ ಶ್ರಮಿಸುತ್ತಿರುವ ವಾರಿಯರ್‌ಗಳ ಪರವಾಗಿ ನಾನು ಅತಿಥಿಯಾಗಿ ಭಾಗವಹಿಸುತ್ತಿದ್ದೇನೆ. ಇದು ಸರ್ಕಾರ ನಮಗೆ ನೀಡುತ್ತಿರುವ ಗೌರವ ಅಷ್ಟೇ. ಆ ಗೌರವಕ್ಕೆ ಇನ್ನಷ್ಟು ಬೆಲೆ ತಂದುಕೊಡುವಲ್ಲಿ ಸಾರ್ವಜನಿಕರ ಪಾತ್ರ ಬಹುದೊಡ್ಡದು. ಕೋವಿಡ್-19 ಸೋಂಕಿಗೆ ಹಾದಿ ಮಾಡಿಕೊಡದಂತೆ ಎಚ್ಚರ ವಹಿಸಬೇಕಿದೆ. ಈ ನಿಟ್ಟಿನಲ್ಲಿ ನಾಡಹಬ್ಬದ ಆಚರಣೆಯ ಪರಿಕಲ್ಪನೆಯೇ ಬದಲಾಗಬೇಕಿದೆ.
ಹಬ್ಬಗಳು ಸಂತಸ ತಂದು ಮನಸ್ಸು, ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತವೆ. ಆದರೆ, ಈಗ ಪರಿಸ್ಥಿತಿ ವಿರುದ್ಧವಾಗಿದೆ. ನಿತ್ಯ ರಾಜ್ಯದಲ್ಲಿ ಸಾವಿರಾರು ಮಂದಿಗೆ ಸೋಂಕು ತಗುಲುತ್ತಿದ್ದು, ನೂರಾರು ಮಂದಿ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ಬದುಕುಳಿಯುವುದೇ ದೊಡ್ಡ ಹಬ್ಬ. ಆರೋಗ್ಯ, ಆಯುಷ್ಯ ಇದ್ದರೆ ಮುಂದಿನ ದಿನಗಳಲ್ಲಿ ಹತ್ತಾರು ಹಬ್ಬಗಳನ್ನು ಕಣ್ತುಂಬಿಕೊಳ್ಳಬಹುದು. ಇದಕ್ಕಾಗಿ ನಿಮ್ಮ ಎಲ್ಲಾ ಆಚರಣೆಗಳು ಮನೆಯಂಗಳಕ್ಕೆ ಸೀಮಿತಗೊಳಿಸಿಕೊಳ್ಳುವ ಅನಿವಾರ್ಯತೆ ಇದೆ.
ಪರಿಸ್ಥಿತಿಗೆ ಅನುಗುಣವಾಗಿ ಮನಸ್ಥಿತಿ ಬದಲಾಗಲಿ
ನನ್ನ ಪದವಿಪೂರ್ವ ಮತ್ತು ವೈದ್ಯಕೀಯ ಶಿಕ್ಷಣ ಆಗಿದ್ದು ಮೈಸೂರಿನಲ್ಲಿಯೇ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ದೂರದ ಊರುಗಳಿಂದ ಹತ್ತಾರು ಸ್ನೇಹಿತರು, ಸಂಬಂಧಿಕರನ್ನು ಕರೆಸಿ ಹಾಸ್ಟೆಲ್‌ಗಳಲ್ಲಿ ಉಳಿಸಿಕೊಂಡು ಅರಮನೆ ಮಾತ್ರವಲ್ಲದೆ ಊರು ಸುತ್ತಿ ಜಂಬೂಸವಾರಿ ಕಣ್ತುಂಬಿಕೊಳ್ಳುತ್ತಿದೆವು. ದಸರಾ ರಜೆಗೆ ಪ್ರವಾಸ ತೆರಳುತ್ತಿದ್ದೆವು. ಈ ಹಿಂದಿನ ವರ್ಷಗಳಲ್ಲಿಯೂ ಸ್ನೇಹಿತರೊಟ್ಟಿಗೆ ಮೈಸೂರು ದಸರಕ್ಕೆ ತೆರಳಿ ಸುತ್ತಾಡಿ ಸಂಭ್ರಮಿಸಿದ್ದೆ. ಇದೇ ರೀತಿ ಅನೇಕರು ಕೂಡಾ ತಮ್ಮ ಸ್ನೇಹಿತರು, ಸಂಬಂಧಿಗಳೊಂದಿಗೆ ಹಬ್ಬವನ್ನು ಸಂಭ್ರಮಿಸುತ್ತಾರೆ. ಆದರೆ, ಈಗ ಸ್ನೇಹಿತರು, ಸಂಬಂಧಿಕರು ಸೇರಿ ಹಬ್ಬ ಮಾಡುವ ಪರಿಸ್ಥಿತಿ ಇಲ್ಲ. ಲಕ್ಷಣವಿಲ್ಲದ ಸೋಂಕಿತರೇ ಹೆಚ್ಚಿದ್ದು, ಒಬ್ಬರಿಗೆ ಸೋಂಕು ಬಂದರೆ ಕುಟುಂಬ, ನೆರೆ ಹೊರೆಯವರ ಆರೋಗ್ಯದ ಮೇಲೆ ಭಾರೀ ಪ್ರಭಾವ ಬೀರಿತ್ತದೆ. ಹೀಗಾಗಿ, `ಕುಟುಂಬದವರೊಟ್ಟಿಗೆ ಮಾತ್ರ ಹಬ್ಬ` ಎಂಬ ಮನಸ್ಥಿತಿ ಇರಲಿ.
`ಸುರಕ್ಷಿತ’ ಎಂಬ ಸಂಪ್ರದಾಯ ಪಾಲಿಸೋಣ
ಹಬ್ಬದ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಬನ್ನಿ ಮುಡಿಯುವುದು, ಹಿರಿಯರ ಆಶೀರ್ವಾದ ಪಡೆಯುವ, ಊರ ಜನರೆಲ್ಲಾ ಸೇರಿ ದೇವರ ಜಾತ್ರೆ, ಮೆರವಣಿಗೆಗಳನ್ನು ಮಾಡುವ ವಿವಿಧ ಸಂಪ್ರದಾಯಗಳಿವೆ. ಈ ಒಂದು ವರ್ಷ ಈ ರೀತಿಯ ಸಂಪ್ರದಾಯಗಳಿಂದ ದೂರ ಉಳಿದು, ನನ್ನ, ನನ್ನವರ ಹಾಗೂ ಸುತ್ತಲಿನವರ ಆರೋಗ್ಯ ಸುರಕ್ಷಿತೆ ಎಂಬ ಅತಿ ಮುಖ್ಯ ಸಂಪ್ರದಾಯ ಪಾಲಿಸೋಣ.
ಅನಿಷ್ಟ ಕೋವಿಡ್ ವೈರಸ್‌ಗೆ ಗುಂಪುಗೂಡಿರುವವರನ್ನು ಕಂಡರೆ ಇಷ್ಟ! ಅವರೊಂದಿಗೆ ಸೇರಿಬಿಡುತ್ತದೆ. ಹೀಗಾಗಿ, ನಾವೆಲ್ಲಾ ಜಾಗರೂಕರಾಗಿರಬೇಕು. ಹಬ್ಬ, ಪೂಜೆಗಳ ನೆಪದಲ್ಲಿ ಗುಂಪುಗೂಡುವುದು ಬೇಡ. ಹಬ್ಬದ ತಯಾರಿಗಾಗಿ ಮಾರುಕಟ್ಟೆಗಳಿಗೆ ತೆರಳಿದ ಸಂದರ್ಭದಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಸರ್ಕಾರವು ಕೂಡಾ ಅತ್ಯಂತ ಸುರಕ್ಷಿತ ಮತ್ತು ಸರಳ ದಸರಾಗೆ ಮುಂದಾಗಿದ್ದು, ದಸರಾವನ್ನು ಮಾಧ್ಯಮಗಳ ಮೂಲಕ ಮನೆಯಲ್ಲಿಯೇ ಕುಳಿತು ಕಣ್ತುಂಬಿಕೊಳ್ಳೋಣ.
ಇನ್ನು ಕೋವಿಡ್ ಈ ವರ್ಷ ಪೂರ್ತಿ ರಾಜ್ಯವನ್ನು ಕಾಡುವ ಸಾಧ್ಯತೆಗಳಿವೆ. ಹೀಗಾಗಿ, ಸಂಪೂರ್ಣ ವರ್ಷವನ್ನೇ ಸುರಕ್ಷತೆಗೆ ಮೀಸಲಿಡೋಣ.
ಡಾ.ಸಿ.ಎನ್.ಮಂಜುನಾಥ್, ನಿರ್ದೇಶಕರು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
(ನಿರೂಪಣೆ- ಜಯಪ್ರಕಾಶ್ ಬಿರಾದಾರ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.