ಶೈಕ್ಷಣಿಕ ಅಭಿವೃದ್ಧಿ ಹರಿಕಾರ ಖಮರುಲ್
Team Udayavani, Sep 19, 2017, 8:51 AM IST
ಬೆಂಗಳೂರು: ಮುಸ್ಲಿಂ ಲೀಗ್ ಮೂಲಕ ರಾಜಕೀಯ ಪ್ರವೇಶಿಸಿ, ನಂತರ ಜನತಾ ಪರಿವಾರದಲ್ಲಿ ಈಜಾಡಿ, ಕಾಂಗ್ರೆಸ್ ಸೇರಿದ್ದ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರು ಕೇವಲ ರಾಜಕಾರಣಿಯಾಗಿರಲಿಲ್ಲ. ಅಲ್ಪಸಂಖ್ಯಾತ ಸಮುದಾಯ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನೂ ಆರಂಭಿಸಿದ್ದರು. ಜತೆಗೆ ಉದ್ಯಮ, ಕೈಗಾರಿಕೆ, ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದರು.
ನೂರುಲ್ ಇಸ್ಲಾಂ ದಂಪತಿ ಪುತ್ರನಾಗಿ 1948 ಜನವರಿ 27ರಂದು ಕಲಬುರಗಿಯಲ್ಲಿ (ಹಿಂದಿನ ಗುಲ್ಬರ್ಗಾ) ಜನಿಸಿದ್ದ ಖಮರುಲ್ ಇಸ್ಲಾಂ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಮುಖಂಡರಾಗಿ ಹೊರಹೊಮ್ಮಿದ್ದರು. ಕಲಬುರಗಿಯಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ್ದ ಅವರು, ಆ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತಮ್ಮಲ್ಲಿ ನಾಯಕತ್ವದ ಗುಣವಿದೆ ಎಂಬುದನ್ನು ತೋರಿಸಿಕೊಟ್ಟರು. 1978ರಲ್ಲಿ ಮುಸ್ಲಿಂ ಲೀಗ್‌ಗೆ ಸೇರ್ಪಡೆಯಾಗಿದ್ದ ಅವರು, ಅದೇ ವರ್ಷ ನಡೆದ ವಿಧಾನಸಭೆ ಚುನಾವಣೆಗೆ ಮುಸ್ಲಿಂ ಲೀಗ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಆ ಪಕ್ಷದಿಂದ ಎರಡು ಬಾರಿ ವಿಜಯಿಯಾಗಿದ್ದರು. ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜನತಾ ಪರಿವಾರಕ್ಕೆ ಸೇರಿ, ಅಲ್ಲೂ ಒಂದು ಬಾರಿ ಶಾಸಕರಾಗಿ, ಸಂಸದರಾಗಿಯೂ ಆಯ್ಕೆಯಾದರು. ಸಂಸದರಾಗಿದ್ದಾಗ ಜನತಾದಳ ಸಂಸದೀಯ ಕಾರ್ಯದರ್ಶಿಯೂ ಆಗಿದ್ದರು.
ನಂತರ ಜನತಾದಳ ಇಬ್ಭಾಗವಾದಾಗ ಕಲಬುರಗಿ ಜಿಲ್ಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂಸಿಂಗ್ ಅವರಿಂದ ಪ್ರೇರಿತರಾಗಿ ಕಾಂಗ್ರೆಸ್ ಸೇರಿದ ಖಮರುಲ್ ಇಸ್ಲಾಂ ಕಲಬುರಗಿ ಉತ್ತರ ಕ್ಷೇತ್ರದಿಂದ ಗೆದ್ದು ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಚಿವರಾದರು. 2004ರ ಚುನಾವಣೆಯಲ್ಲಿ ಸೋತ ಅವರು 2013ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವರಾಗಿದ್ದರು. ನಂತರದಲ್ಲಿ ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು.
ಶಿಕ್ಷಣ ಕ್ಷೇತ್ರದಲ್ಲೂ ಕೆಲಸ: ಸಮುದಾಯದ ಏಳಿಗೆಗಾಗಿ ಶಿಕ್ಷಣವೇ ಮದ್ದು ಎಂದರಿತಿದ್ದ ಅವರು, ಅದಕ್ಕಾಗಿ ಹಜರತ್ ಶೇಕ್-ಮಿನ್-ಹಜಾವುದ್ದೀನ್, ಅನ್ಸಾರಿ, ಕಲ್ಲೇರವನ್ ಚಾರಿಟಬಲ್ ಟ್ರಸ್ಟ್ ಮೂಲಕ ಕೆಸಿಟಿ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜು, ಗುಲ್ಬರ್ಗ, ಹೈದರಾಬಾದ್
ಕರ್ನಾಟಕ ಉರ್ದು ಫ್ರಂಟ್, ಮೀರಜ್‌ನೂರ್ ಶೈಕ್ಷಣಿಕ ಮತ್ತು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬಿ.ಇಡಿ, ಡಿ.ಫಾರ್ಮ, ಬಿ.ಫಾರ್ಮ, ನರ್ಸಿಂಗ್
ಕಾಲೇಜುಗಳನ್ನು ಸ್ಥಾಪಿಸಿದ್ದರು. ಜನತಾ ಪರಿವಾರದೊಂದಿಗೂ ಉತ್ತಮ ನಂಟು ಹೊಂದಿದ್ದರು ಸುಮಾರು 2 ದಶಕ ಕಾಂಗ್ರೆಸ್‌ನಲ್ಲಿದ್ದ ಖಮರುಲ್ ಇಸ್ಲಾಂ ಜನತಾಪರಿವಾರದೊಂದಿಗೂ ನಂಟು ಹೊಂದಿದ್ದರು.
1994ರಲ್ಲಿ ಸಿ.ಎಂ.ಇಬ್ರಾಹಿಂ ಜನತಾದಳದ ರಾಜ್ಯಾಧ್ಯಕ್ಷರಾಗಿ ದ್ದಾಗ ಆಗ ಮುಸ್ಲಿಂ ಲೀಗ್‌ನಲ್ಲಿದ್ದ ಖಮರುಲ್ ಇಸ್ಲಾಂ ಜನತಾದಳಕ್ಕೆ ಸೇರ್ಪಡೆಯಾದರು. 1996ರ ಲೋಕಸಭೆ ಚುನಾವಣೆಯಲ್ಲಿ ಶಾಸಕರಾಗಿದ್ದ ಕೆಲವರನ್ನು ಲೋಕಸಭೆಗೆ ಕಣಕ್ಕಿಳಿಸಲಾಯಿತು. ಅದರಲ್ಲಿ
ಖಮರುಲ್ ಇಸ್ಲಾಂ ಸಹ ಒಬ್ಬರು. 1996ರಲ್ಲಿ ಜನತಾದಳದಿಂದ ಲೋಕಸಭೆಗೆ ಕಣಕ್ಕಿಳಿದು ಗೆಲುವು ಸಾಧಿಸಿದ್ದರು.
ಬಿಜೆಪಿಯ ಬಸವರಾಜ ಪಾಟೀಲ್ ಸೇಡಂ ಅವರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ ಜನತಾದಳ ಸಂಸದೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ಆದರೆ, 1999ರ ವೇಳೆಗೆ ಜನತಾದಳವೇ ಇಬ್ಭಾಗದ ಹಾದಿ ಹಿಡಿದಾಗ ಖಮರುಲ್ ಕಾಂಗ್ರೆಸ್ ಸೇರಿದರು. ಎಸ್.ಎಂ.ಕೃಷ್ಣ ನೇತೃತ್ವ ದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಅವರ ಸಂಪುಟದಲ್ಲಿ ಸಚಿವರೂ ಆಗಿದ್ದರು. ಜನತಾದಳದಲ್ಲಿ ಇದ್ದದ್ದು ಮೂರೇ ವರ್ಷವಾದರೂ ಎಚ್.ಡಿ.ದೇವೇಗೌಡ ಸೇರಿ ಜನತಾಪರಿವಾರ ನಾಯಕರ ಜತೆಗೆ ಆತ್ಮೀಯ ನಂಟು ಹೊಂದಿದ್ದರು.
ಸಿಗದ ವಿಶೇಷ ವಿಮಾನ
ಖಮರುಲ್ ಇಸ್ಲಾಂ ಪಾರ್ಥಿವ ಶರೀರವನ್ನು ವಿಶೇಷ ವಿಮಾನದ ಮೂಲಕ ಕಲಬುರಗಿಗೆ ತೆಗೆದು ಕೊಂಡು ಹೋಗಲು ತೀರ್ಮಾನಿ ಸಲಾಗಿತ್ತು. ಅದಕ್ಕಾಗಿ ಸ್ವತಃ ಸಿಎಂ ಹಾಗೂ ಅವರ ಆಪ್ತ ಸಿಬ್ಬಂದಿ ಕೊಚ್ಚಿ ಮತ್ತು ಚೆನ್ನೈಗೆ ಸಂಪರ್ಕಿಸಿ ದರಾದರೂ ವಿಶೇಷ ವಿಮಾನ ಸಿಗಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ತನ್ವೀರ್ ಸೇಠ್ ಪ್ರಯತ್ನ ನಡೆಸಿದರೂ ವಿಮಾನ ಕಂಪನಿಗಳು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ವಿಶೇಷ ವಾಹನದಲ್ಲಿ ರಸ್ತೆ ಮಾರ್ಗವಾಗಿ ಪಾರ್ಥಿವ ಶರೀರವನ್ನು ಕಲಬುರಗಿಗೆ ತೆಗೆದು ಕೊಂಡು ಹೋಗಲಾಯಿತು.
ಖಮರುಲ್ ಹೆಜ್ಜೆ ಗುರುತು
ಆರು ಬಾರಿ ವಿಧಾನಸಭೆಗೆ ಆಯ್ಕೆ
ಒಂದು ಬಾರಿ ಲೋಕಸಭೆಗೆ ಆಯ್ಕೆ
ವಿಧಾನಸಭೆಯ ಸಾರ್ವಜನಿಕ ಲೆಕ್ಕ ಸಮಿತಿ, ಯೋಜನಾ ವೆಚ್ಚ ಸಮಿತಿ, ವಸತಿ ಮತ್ತು ನಗರಾಭಿವೃದ್ದಿ ಸಮಿತಿ ಸೇರಿ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಕೆಲಸ
ಜನತಾದಳ ಸಂಸದೀಯ ಪಕ್ಷದ ಪ್ರಧಾನ ಕಾರ್ಯದರ್ಶಿ
ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ ಮತ್ತು ಕೇರಳ ಕಾಂಗ್ರೆಸ್ ಉಸ್ತುವಾರಿ
ಸಂಪುಟದಿಂದಕೈಬಿಟ್ಟ ನಂತರಕುಗ್ಗಿದ್ದ ಖಮರುಲ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಸಂದರ್ಭದಲ್ಲಿ ಶ್ರೀನಿವಾಸ ಪ್ರಸಾದ್, ಅಂಬರೀಶ್, ಶಾಮನೂರು ಶಿವಶಂಕರಪ್ಪ, ಕಿಮ್ಮನೆ ರತ್ನಾಕರ್ ಸೇರಿ ಹಲವ ರನ್ನು ಸಂಪುಟದಿಂದ ಕೈ ಬಿಟ್ಟ ಸಂದರ್ಭದಲ್ಲಿ ಖಮರುಲ್ ಇಸ್ಲಾಂ ಅವರನ್ನೂ ಕೈ ಬಿಡಲಾಗಿತ್ತು. ಇದರಿಂದ ಕಲಬುರಗಿ ವಿಭಾಗದ ಮುಸ್ಲಿಂ ಮುಖಂಡರ ವಲಯದಲ್ಲಿ ಆಕ್ರೋಶವೂ ವ್ಯಕ್ತವಾಗಿತ್ತು. ಖುದ್ದು ಖಮರುಲ್ ಇಸ್ಲಾಂ, ತಮ್ಮನ್ನು ಸಂಪುಟದಿಂದ ಕೈ ಬಿಟ್ಟಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದರು. ಸಂಪುಟದಿಂದ ತೆಗೆದಿರುವುದರಿಂದ ಆ ಭಾಗದಲ್ಲಿ ಕಾಂಗ್ರೆಸ್‌ಗೆ ನಷ್ಟವಾಗಲಿದೆ ಎಂದು ಎಚ್ಚರಿಕೆ ಸಹ ನೀಡಿದ್ದರು.
ಸಂಪುಟದಿಂದ ಕೈ ಬಿಟ್ಟ ನಂತರ ಮಾನಸಿಕವಾಗಿಯೂ ಕುಗ್ಗಿದ್ದರು. ಸಚಿವ ಸ್ಥಾನ ಕಳೆದುಕೊಂಡು ಸಮಾನ ದುಃಖೀಯಾಗಿದ್ದ ಶ್ರೀನಿವಾಸ ಪ್ರಸಾದ್ ಅವರೊಂದಿಗೂ ಒಂದೆರಡು ಸಭೆ ನಡೆಸಿದರು. ಆ ಸಂದರ್ಭದಲ್ಲಿ ಖಮರುಲ್ ಪಕ್ಷ ಬಿಡಲಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಆ ನಂತರ ಅವರನ್ನು ಸಂಪರ್ಕಿಸಿದ ಹೈಕಮಾಂಡ್ ನಾಯಕರು ಎಐಸಿಸಿ ಕಾರ್ಯದರ್ಶಿ ಹುದ್ದೆ ನೀಡಿ ಕೇರಳ ಉಸ್ತುವಾರಿ ವಹಿಸಿದ್ದರು. ಇತ್ತೀಚೆಗೆ ಕೇರಳಕ್ಕೆ ಹೋಗಿ ಅಲ್ಲಿನ ರಾಜ್ಯ ನಾಯಕರ ಜತೆ ಸಭೆ ಸಹ ಮಾಡಿದ್ದರು. ಅಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷ ಸಜ್ಜುಗೊಳಿಸುವ ಸಂಬಂಧ ರೂಪುರೇಷೆ ಸಿದ್ಧಪಡಿಸಿದ್ದರು.
ಖಮರುಲ್ ನಿಧನದಿಂದ ತುಂಬಾ ನೋವಾಗಿದೆ. ರಾಜಕೀಯ ಒಡನಾಡಿ ಆಗಿ ನನ್ನೊಂದಿಗೆ ಸಾಕಷ್ಟು ಕೆಲಸ ಮಾಡಿದ್ದರು. ಕುಟುಂಬ ಸದಸ್ಯರಿಗೆ ದೇವರು ನೋವು ಭರಿಸುವ ಶಕ್ತಿ ನೀಡಲಿ.
●ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾಗಿದ್ದರು. ಕಲಬುರಗಿ ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದರು. ಅವರೊಬ್ಬ ಸಜ್ಜನ ರಾಜಕಾರಣಿ. ಇವರ ನಿಧನದಿಂದ ಕಾಂಗ್ರೆಸ್ ಪಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ.
●ಸಿದ್ದರಾಮಯ್ಯ, ಮುಖ್ಯಮಂತ್ರಿ
ಖಮರುಲ್ ಇಸ್ಲಾಂ ಅಲ್ಪಸಂಖ್ಯಾತರು ಹಾಗೂ ಅವಕಾಶವಂಚಿತ ವರ್ಗಗಳ ಹಕ್ಕುಗಳಿಗಾಗಿ ಸದಾ ಧ್ವನಿ ಎತ್ತುತ್ತಿದ್ದರು. ಜಾತ್ಯತೀತ ತತ್ವಗಳ ಪ್ರಬಲ ಪ್ರತಿಪಾದಕರಾಗಿದ್ದ ಅವರು ಅಲ್ಪಸಂಖ್ಯಾತ ಸಮುದಾಯದಲ್ಲಿನ ಮೂಲಭೂತವಾದದ ಚಿಂತನೆಗಳನ್ನು ಕಟುವಾಗಿ ವಿರೋಧಿಸುತ್ತಿದ್ದರು. ಅವರ ರಾಜಕೀಯ ಸೇವೆ ದೀರ್ಘ ಕಾಲ ನೆನಪಿನಲ್ಲಿ ಉಳಿಯುವಂತಹದ್ದು.
●ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಖಮರುಲ್ ಅಲ್ಪಸಂಖ್ಯಾತರ ಪ್ರಭಾವಿ ನಾಯಕ. ರಾಜ್ಯ ರಾಜಕಾರಣಕ್ಕೆ ಅವರ ಕೊಡುಗೆ ಅಪಾರ. ರಾಷ್ಟ್ರಮಟ್ಟದಲ್ಲಿ ಅವರನ್ನು ಬಳಸಿಕೊಳ್ಳಲು ಇತ್ತೀಚೆಗೆ ಎಐಸಿಸಿ ಕಾರ್ಯದರ್ಶಿ ಯಾಗಿ ನೇಮಕ ಮಾಡಲಾಗಿತ್ತು. ಅವರ ನಿಧನದಿಂದ ಪಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.
●ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ನಾನು ಜನತಾದಳದ ಅಧ್ಯಕ್ಷನಾಗಿದ್ದಾಗ ಖಮರುಲ್ ಹೈದರಾಬಾದ್ ಕರ್ನಾಟಕದಿಂದ ಸಂಸದರಾಗಿದ್ದರು. ನಂತರ ಅವರು ಕಾಂಗ್ರೆಸ್ ಸೇರಿ ಶಾಸಕರು, ಸಚಿವರಾದರು. ಅವರ ಆರೋಗ್ಯ ಕೆಟ್ಟಿತು. ಅದೇ ಅವರ ಸಾವಿಗೆ ಕಾರಣವಾಯಿತು.
●ಸಿ.ಎಂ.ಇಬ್ರಾಹಿಂ, ವಿಧಾನಪರಿಷತ್ ಸದಸ್ಯ
ಖಮರುಲ್ ಇಸ್ಲಾಂ ಸಾಹೇಬರು ನಮ್ಮ ಸಮಾಜದ ಹಿರಿಯ ಮತ್ತು ಪ್ರಭಾವಿ ನಾಯಕರಾಗಿದ್ದರು. ನನ್ನ ಮಾರ್ಗದರ್ಶಕರೂ ಆಗಿದ್ದರು. ಅವರ ಸಾವಿನಿಂದ ಅಲ್ಪಸಂಖ್ಯಾತ ಸಮುದಾಯ ಹಾಗೂ ವೈಯಕ್ತಿಕವಾಗಿ ನನಗೆ ತುಂಬಾ ನಷ್ಟವಾಗಿದೆ.
●ಜಮೀರ್ ಅಹ್ಮದ್, ಜೆಡಿಎಸ್ ಬಂಡಾಯ ಶಾಸಕ
ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಖಮರುಲ್ ಇಸ್ಲಾಂ ಅವರ ನಿಧನ ನೋವಿನ ಸಂಗತಿ. ಈ ನೋವು ಭರಿಸುವ ಶಕ್ತಿ ಕುಟುಂಬ ವರ್ಗಕ್ಕೆ ದೇವರು ನೀಡಲಿ.
●ರಾಮಲಿಂಗಾರೆಡ್ಡಿ, ಗೃಹ ಸಚಿವ
ಖಮರುಲ್ ಇಸ್ಲಾಂ ಒಬ್ಬ ಜನಾನುರಾಗಿ ರಾಜಕಾರಣಿ. ಕಲಬುರಗಿಯಂತಹ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ತಮ್ಮ ಜೀವನುದ್ದಕ್ಕೂ ಶ್ರಮಿಸಿದ್ದರು. ಅವರ ನಿಧನದಿಂದ ಕಾಂಗ್ರೆಸ್ ಪಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ತುಂಬ ನಷ್ಟವಾಗಿದೆ.
●ಡಿ.ಕೆ.ಶಿವಕುಮಾರ್, ಇಂಧನ ಸಚಿವ
ಖಮರುಲ್ ಇಸ್ಲಾಂ ಸಾಹೇಬ್ರು ಕಾಂಗ್ರೆಸ್‌ನ ಹಿರಿಯ ನಾಯಕರು. ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದವರು. ನನ್ನ ಸಹೋದ್ಯೋಗಿಯಾಗಿದ್ದರು. ಅವರ ಅಗಲಿಕೆಯಿಂದ ತುಂಬಾ ನೋವಾಗಿದೆ.
●ಕೆ.ಜೆ. ಜಾರ್ಜ್, ಬೆಂಗಳೂರು ಅಭಿವೃದ್ಧಿ ಸಚಿವ
ರಾಜ್ಯದ ಒಬ್ಬ ಹಿರಿಯ ನಾಯಕ. ಅವರ ನಿಧನದಿಂದ ರಾಜ್ಯ, ಕಾಂಗ್ರೆಸ್ ಪಕ್ಷ ಹಾಗೂ ಸಮುದಾಯಕ್ಕೆ ತುಂಬಾ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.
●ಕೆ.ರೆಹಮಾನ್ ಖಾನ್, ರಾಜ್ಯಸಭಾ ಸದಸ್ಯ
ಖಮರುಲ್ ಇಸ್ಲಾಂ ಸಜ್ಜನರು, ಮಿತಭಾಷಿ, ಯಾರಿಗೂ ತೊಂದರೆ ಕೊಟ್ಟವರಲ್ಲ. ಅವರು ನನ್ನ ಕ್ಷೇತ್ರದ ನಿವಾಸಿಯಾಗಿದ್ದರು. ಅವರ ಸಾವು ದುಃಖ ತಂದಿದೆ.
●ವೈ.ಎ.ನಾರಾಯಣಸ್ವಾಮಿ, ಹೆಬ್ಟಾಳ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.