ಕುಂಭದ್ರೋಣ ಮಳೆ ಸಿಡಿಲಿಗೆ ಎಂಟು ಬಲಿ
Team Udayavani, Oct 6, 2017, 7:47 AM IST
ಬೆಂಗಳೂರು: ಮುಂಗಾರು ಆರಂಭದಲ್ಲಿ ಹೆಚ್ಚಾ ಕಡಿಮೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆರಾಯ, ಈಗ ಭೋರ್ಗರೆಯುವ ರೀತಿಯಲ್ಲಿ ಪ್ರತಾಪ ತೋರುತ್ತಿದ್ದಾನೆ. ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಒಟ್ಟು 8 ಮಂದಿ ಸಾವಿಗೀಡಾಗಿದ್ದರೆ, ನಾಲ್ವರೂ ತೀವ್ರ ಸ್ವರೂಪದ ಗಾಯಕ್ಕೆ ತುತ್ತಾಗಿದ್ದಾರೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ಆರು ಮಂದಿ, ಅರಕಲಗೂಡಿನಲ್ಲಿ ಒಬ್ಬರು ಮತ್ತು ಚಿಂಚೋಳಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇದೇ ವೇಳೆ ಇನ್ನೂ ಎರಡು-ಮೂರು ದಿನ ಇದೇ ರೀತಿಯಲ್ಲೇ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಒಂದೇ ಕಡೆ ಆರು ಬಲಿ: ಪಿರಿಯಾಪಟ್ಟಣ ತಾಲೂಕು ಕಸಬಾ ಹೋಬಳಿಗೆ ಸೇರಿದ ಹುಣಸವಾಡಿ ಗ್ರಾಮದಲ್ಲಿ ಸಿಡಿಲು ಬಡಿದು ಆರು ಮಂದಿ ಮೃತಪಟ್ಟಿದ್ದು, ಮೂವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಗ್ರಾಮದ ತಿಮ್ಮೇಗೌಡ(70), ಪುಟ್ಟೇಗೌಡ (60), ಸುವರ್ಣಮ್ಮ(50), ಸುದೀಪ್ (17), ಸುಜಯ್ (18) ಮತ್ತು ಉಮೇಶ್(23) ಮೃತಪಟ್ಟ ದುರ್ದೈವಿಗಳು. ಇದೇ ಗ್ರಾಮದ ಗಣೇಶ, ವಿಜಯ್ ಮತ್ತು ಮಾದೇಶ್ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಣಸವಾಡಿ ಗ್ರಾಮದ ಇವರು ದನ ಮೇಯಿಸಲು ತೆರಳಿದ್ದರು. ಇದ್ದಕ್ಕಿದ್ದಂತೆ ಜೋರು ಮಳೆ ಬಂದಿದ್ದರಿಂದ ಹೊರ ವಲಯದಲ್ಲಿರುವ ದೊಡ್ಡಮ್ಮತಾಯಿ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಬಡಿದ ಸಿಡಿಲಿನ ರಭಸಕ್ಕೆ ದೇವಸ್ಥಾನದೊಳಗಿದ್ದವರು ನೋಡ ನೋಡುತ್ತಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳದಿಂದ ಚೀರಾಟ ಕೇಳಿದ ಗ್ರಾಮಸ್ಥರು ದೇವಸ್ಥಾನದ ಬಳಿ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಆರು ಮಂದಿ ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಮೂವರನ್ನು ಖಾಸಗಿ ವಾಹನದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆ ಸಲುವಾಗಿ ಮೈಸೂರಿಗೆ ಕರೆದುಕೊಂಡು ಹೋಗಲಾಗಿದೆ.
ಸಂಬಂಧಿಗಳ ಆಕ್ರಂದನ:
ಮೃತಪಟ್ಟವರ ಪೋಷಕರು ಹಾಗೂ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಪಟ್ಟಣದ ಶವಾಗಾರದ ಬಳಿ ನೆರೆದು, ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ತಲಾ 5 ಲಕ್ಷ ರೂ. ಪರಿಹಾರ: ಮೃತಪಟ್ಟವರ ಕುಟುಂಬಗಳಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ತಲಾ 4 ಲಕ್ಷ ರೂ. ಹಾಗೂ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ತಲಾ 1 ಲಕ್ಷ ರೂ. ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾಧಿಕಾರಿ ರಂದೀಪ್ ಅವರಿಗೆ ಸೂಚಿಸಿದ್ದಾರೆ. ಇನ್ನು, ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದುಮ್ಮಿಕೊಪ್ಪಲು ಗ್ರಾಮದ ರಾಜೇಗೌಡ (55) ಎಂಬುವರು ತಮ್ಮ ಜಮೀನಿನ ಬಳಿ ಹೋಗಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅದೃಷ್ಟವಶಾತ್ ಸಮೀಪದಲ್ಲೇ ಇದ್ದ ಅವರ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮಧ್ಯೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಟ್ಟೂರಿನಲ್ಲಿ ಮೈಸಪ್ಪ ಅನಂತಪ್ಪ ಮಾದರ(28) ಎಂಬ ರೈತ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಸಿಡಿಲು ಬಡಿದು ಮಹಿಳೆ ಗಾಯಗೊಂಡಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಪಜಯ್ಯನದೊಡ್ಡಿ ಗ್ರಾಮದಲ್ಲಿ ಸುರಿದ ಭಾರೀ ಮಳೆಯಿಂದ ಮನೆ ಗೋಡೆ ಕುಸಿದು ಆರು ಮೇಕೆಗಳು ಸಾವನ್ನಪ್ಪಿವೆ.
ಸುಳಿಗಾಳಿ ಕಾರಣ
ಬೆಂಗಳೂರು ಸೇರಿ ರಾಜ್ಯಾದ್ಯಂತ ಗುರುವಾರ ಮಳೆ ಅಬ್ಬರಿಸಿದ್ದು, ಇನ್ನೂ ಮೂರ್‍ನಾಲ್ಕು ದಿನ ವರುಣನ ಆರ್ಭಟ ಮುಂದುವರಿ ಯುವ ಸಾಧ್ಯತೆ ಇದೆ. ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದಲ್ಲಿ ಮೇಲ್ಮೆ„ ಸುಳಿಗಾಳಿ ಉಂಟಾಗಿದ್ದು, ಇವುಗಳ ಮಧ್ಯೆ “ಕಡಿಮೆ ಒತ್ತಡ ತಗ್ಗು’ ಕಾಣಿಸಿಕೊಂಡಿದೆ. ಪರಿಣಾಮ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಇದು ಇನ್ನೂ 2 ದಿನ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನಂತರ ಈ ಮಳೆ ಉತ್ತರ ಒಳನಾಡಿನತ್ತ ಮುಖಮಾಡುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರಬ್ಬೀ ಸಮುದ್ರದಲ್ಲಿ ಮೇಲ್ಮೆ„ ಸುಳಿಗಾಳಿ ಇದ್ದು, ಇದು ಕರ್ನಾಟಕದ ಕರಾವಳಿ ಮತ್ತು ಕೇರಳದಲ್ಲಿ ಹಾದು ಹೋಗಿದೆ. ಇದರಿಂದ ದಕ್ಷಿಣ ಒಳನಾಡು ಬಹುತೇಕ ಕಡೆಗಳಲ್ಲಿ ಮಳೆ ಆಗುತ್ತಿದೆ. ಇದು ಇನ್ನೂ ಮೂರ್‍ನಾಲ್ಕು ದಿನ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸುಂದರ್ ಎಂ. ಮೇತ್ರಿ ತಿಳಿಸಿದ್ದಾರೆ. ಈ ಮಧ್ಯೆ ಗುರುವಾರ ರಾತ್ರಿ 9ರವರೆಗೆ ಉಡುಪಿಯಲ್ಲಿ ಅತಿ ಹೆಚ್ಚು 131.3 ಮಿ.ಮೀ ಮಳೆ ದಾಖಲಾಗಿದೆ. ಅದೇ ರೀತಿ ಬೆಂಗಳೂರು ನಗರ 75.5 ಮಿ.ಮೀ, ಮಂಡ್ಯ 60.4, ಹಾಸನ, 60, ಕೋಲಾರ 60, ಉತ್ತರ ಕನ್ನಡ 56.9, ದಕ್ಷಿಣ ಕನ್ನಡ 55.5, ಕೊಡಗು 53.5, ಬೆಂಗಳೂರು ಗ್ರಾಮಾಂತರ 52, ರಾಮನಗರ 45.2, ಮೈಸೂರು 43.4, ತುಮಕೂರು 39.1, ಯಾದಗಿರಿ 34.5, ಚಿತ್ರದುರ್ಗ 29.5, ಶಿವಮೊಗ್ಗ 29, ಚಾಮರಾಜನಗರ 28.5, ಚಿಕ್ಕಬಳ್ಳಾಪುರ 27 ಮಿ.ಮೀ. ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.