“ಲೋಕ ಸಮರ’ ಆಯೋಗಕ್ಕೆ ಬೇಕು 500 ಕೋ.ರೂ.
ಚುನಾವಣ ಆಯೋಗದಿಂದ ಒಂದು ಲೋಕಸಭಾ ಕ್ಷೇತ್ರಕ್ಕೆ ಸರಾಸರಿ 17ರಿಂದ 18 ಕೋಟಿ ರೂ. ವೆಚ್ಚ
Team Udayavani, Mar 27, 2024, 7:30 AM IST
ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣ ವೆಚ್ಚ 500 ಕೋಟಿ ರೂ. ಗಡಿ ದಾಟಲಿದೆ. ರಾಜ್ಯದಿಂದ 28 ಸಂಸದರನ್ನು ಲೋಕಸಭೆಗೆ ಕಳಿಸಬೇಕಾದರೆ ಚುನಾವಣ ಆಯೋಗ ಇಷ್ಟೊಂದು ಭಾರಿ ಮೊತ್ತ ಖರ್ಚು ಮಾಡಬೇಕಾಗುತ್ತದೆ. ಅದರಂತೆ ನಮ್ಮ ಒಬ್ಬ ಸಂಸದ ಲೋಕಸಭೆ ಮೆಟ್ಟಿಲೇರಬೇಕಾದರೆ ಚುನಾವಣ ಆಯೋಗ ಒಂದು ಕ್ಷೇತ್ರಕ್ಕೆ ಸರಾಸರಿ 17ರಿಂದ 18 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ಗಮನದಲ್ಲಿರಲಿ ಇದೆಲ್ಲವೂ ನಮ್ಮ ತೆರಿಗೆ ಹಣ.
ರಾಜ್ಯದಲ್ಲಿ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ 511 ಕೋಟಿ ರೂ. ವೆಚ್ಚವಾಗಿತ್ತು. ಒಂದು ವರ್ಷದೊಳಗೆ ಲೋಕಸಭೆ ಚುನಾವಣೆ ಬಂದಿರುವುದರಿಂದ ಚುನಾವಣ ವೆಚ್ಚದಲ್ಲಿ ಅಷ್ಟೊಂದು ವ್ಯತ್ಯಾಸವಾಗಲಿಕ್ಕಿಲ್ಲ. ಅಷ್ಟೇ ಹಣ ಲೋಕಸಭೆ ಚುನಾವಣೆಗೆ ಬೇಕಾಗಬಹುದು. ಅದರಂತೆ 2024ರ ಲೋಕಸಭೆ ಚುನಾವಣೆಯ ವೆಚ್ಚ 500 ಕೋಟಿ ದಾಟಬಹುದು ಎಂದು ಚುನಾವಣ ಆಯೋಗ ಅಂದಾಜಿಸಿದೆ.
ವಿಧಾನಸಭೆ, ಲೋಕಸಭೆಗೆ ಈಗಿನ ದಿನಗಳಲ್ಲಿ ಬಹುತೇಕ ಕೋಟ್ಯಾಧೀಶರೆ ಪ್ರವೇಶಿಸುತ್ತಿರುವುದು ವಾಸ್ತವ. ಆದರೆ, ಈ ಕೋಟ್ಯಾಧೀಶರರನ್ನು ಜನರ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿ ಕಳಿಸಲು ಚುನಾವಣ ಆಯೋಗವೂ ಕೋಟಿ ಕೋಟಿ ಖರ್ಚು ಮಾಡಬೇಕಾಗುತ್ತದೆ.
ಚುನಾವಣೆಯ ಹಿಂದಿನ ಒಂದು ವರ್ಷದಿಂದ ಆಯೋಗ ಸಿದ್ದತೆಗಳನ್ನು ಆರಂಭಿಸಿರುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಚುನಾವಣೆ ಘೋಷಣೆಯಾಗಿ ಮತದಾನದ ದಿನದವರೆಗೆ ಹಲವು ಹಂತಗಳಲ್ಲಿ ಆಯೋಗ ಚುನಾವಣ ವೆಚ್ಚ ಮಾಡಬೇಕಾಗುತ್ತದೆ.
ವೆಚ್ಚ ಹೆಚ್ಚಿಸಿದ ಇವಿಎಂ
ಚುನಾವಣ ವೆಚ್ಚ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲು ಇವಿಎಂ ಬಳಕೆಯೂ ಒಂದು ಕಾರಣ. ಸಾರ್ವತ್ರಿಕ ಚುನಾವಣೆಗಳಲ್ಲಿ ಇವಿಎಂ ಬಳಕೆ ಜಾರಿಗೆ ಬಂದ ಮೇಲೆ ವೆಚ್ಚವೂ ದುಬಾರಿ ಆಯಿತು. ಏಕೆಂದರೆ, ಬಹುಪಾಲು ಹಣ ಇವಿಎಂಗಳ ಖರೀದಿಗೆ ತಗಲುತ್ತದೆ. ಉಳಿದಂತೆ ಆಯಾ ಸಂದರ್ಭದ ಬೆಲೆ ಏರಿಕೆ ಸೂಚ್ಯಂಕವೂ ಚುನಾವಣ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ಅದರಂತೆ 2014ರ ಲೋಕಸಭಾ ಚುನಾವಣೆ ವೇಳೆ 320 ಕೊಟಿ ರೂ. ವೆಚ್ಚವಾಗಿತ್ತು. ಆಗ ಒಂದು ಕ್ಷೇತ್ರಕ್ಕೆ ಸರಾಸರಿ 11 ಕೋಟಿ ರೂ. ವೆಚ್ಚವಾಗಿತ್ತು. 2019ರಲ್ಲಿ ಒಟ್ಟು ವೆಚ್ಚ 400 ಕೋಟಿ ರೂ. ಆಗಿತ್ತು. ಅದರಲ್ಲಿ ಒಂದು ಕ್ಷೇತ್ರಕ್ಕೆ ಸರಾಸರಿ 17 ಕೋಟಿ ರೂ. ವೆಚ್ಚ ತಗುಲಿತ್ತು. 2024ರಲ್ಲಿ ವೆಚ್ಚದ ಮಿತಿ 500 ಕೋಟಿ ರೂ.ಗಳ ಗಡಿ ದಾಟಲಿದ್ದು, ಒಂದು ಕ್ಷೇತ್ರಕ್ಕೆ 17ರಿಂದ 18 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
ದೇಶಕ್ಕೆ ಬೇಕು 4ರಿಂದ 5 ಸಾವಿರ ಕೋಟಿ?
ಪ್ರಪಂಚದ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಅಗ್ರಗಣ್ಯ ಸ್ಥಾನದಲ್ಲಿರುವ ಭಾರತದ ಲೋಕಸಭೆಗೆ ಚುನಾಯಿತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಡೆಸಲಾಗುವ ಸಾರ್ವತ್ರಿಕ ಚುನಾವಣೆಗೆ ಸರಕಾರದ ಖಜಾನೆಯಿಂದ ಕೋಟಿಗಟ್ಟಲೆ ಹಣ ವೆಚ್ಚ ಮಾಡಲಾಗುತ್ತದೆ. 2024ರ ಲೋಕಸಭೆ ಚುನಾವಣೆಗೆ ಇಡೀ ದೇಶದಲ್ಲಿ ವೆಚ್ಚ ಮಾಡಲು ಚುನಾವಣ ಆಯೋಗಕ್ಕೆ 4ರಿಂದ 5 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. 1952ರಲ್ಲಿ ನಡೆದ ದೇಶದ ಮೊದಲ ಲೋಕಸಭೆ ಚುನಾವಣೆಗೆ 10.45 ಕೋಟಿ ರೂ. ವೆಚ್ಚವಾಗಿತ್ತು. 2004ರಲ್ಲಿ ವೆಚ್ಚದ ಪ್ರಮಾಣ ಸಾವಿರ ಕೋಟಿ ಗಡಿ ದಾಟಿತು. 2004ರಲ್ಲಿ 1,113 ಕೋಟಿ ರೂ., 2009ರಲ್ಲಿ 1,483 ಕೋಟಿ ರೂ., 2014ರಲ್ಲಿ 3,870 ಕೋಟಿ ರೂ., 2019ರಲ್ಲಿ 4 ಸಾವಿರ ಕೋಟಿಗೂ ಅಧಿಕ ವೆಚ್ಚವಾಗಿತ್ತು. ಈ ಬಾರಿ 5 ಸಾವಿರ ಕೋಟಿ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.
ಚುನಾವಣ ವೆಚ್ಚ ಏನೆಲ್ಲ ಒಳಗೊಂಡಿರುತ್ತದೆ?
ಕೇಂದ್ರ ಚುನಾವಣ ಆಯೋಗದ ಮಾರ್ಗಸೂಚಿಯಂತೆ ಮತದಾರರ ಪಟ್ಟಿ ಪರಿಷ್ಕರಣೆ, ಮತಗಟ್ಟೆಗಳ ಸ್ಥಾಪನೆ, ಮತಗಟ್ಟೆಗಳಿಗೆ ಬೇಕಾಗುವ ವ್ಯವಸ್ಥೆಗಳ ಪೂರೈಕೆ, ಮತ ಎಣಿಕೆ ಕೇಂದ್ರಗಳ ಸ್ಥಾಪನೆ, ಚುನಾವಣ ಸಿಬಂದಿಗೆ ವೇತನ-ಭತ್ತೆ, ಚುನಾವಣ ಸಿಬಂದಿಗೆ ಸಾರಿಗೆ ವ್ಯವಸ್ಥೆ, ಚುನಾವಣ ಸಾಮಗ್ರಿ ಸಾಗಾಣಿಕೆ, ಚುನಾವಣ ಸಿಬಂದಿಗೆ ತರಬೇತಿ, ಮತದಾನದ ದಿನದ ಖರ್ಚು ಇನ್ನಿತರ ಖರ್ಚುಗಳು ಒಟ್ಟಾರೆ ಚುನಾವಣ ವೆಚ್ಚದಲ್ಲಿ ಸೇರುತ್ತವೆ. ಲೋಕಸಭಾ ಚುನಾವಣೆಗೆ ಕಾನೂನು-ಸುವ್ಯವಸ್ಥೆಯ ವೆಚ್ಚ ಹೊರತುಪಡಿಸಿ ಉಳಿದಲ್ಲ ವೆಚ್ಚವನ್ನೂ ಕೇಂದ್ರ ಸರಕಾರ ಭರಿಸುತ್ತದೆ. ಕಾನೂನು-ಸುವ್ಯವಸ್ಥೆಗೆ ಬೇಕಾಗುವ ವೆಚ್ಚವನ್ನು ಆಯಾ ರಾಜ್ಯ ಸರಕಾರಗಳು ಭರಿಸುತ್ತವೆ.
– ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.