ಜೂ.3: ಶಿಕ್ಷಕ, ಪದವೀಧರ ಕ್ಷೇತ್ರಗಳಿಗೆ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿದ್ದರು?
Team Udayavani, May 3, 2024, 6:30 AM IST
ಬೆಂಗಳೂರು: ಜೂನ್ 21ರಂದು ಅವಧಿ ಮುಕ್ತಾಯಗೊಳ್ಳಲಿರುವ ವಿಧಾನಪರಿಷತ್‌ನ 6 ಸ್ಥಾನಗಳಿಗೆ ದ್ವೆ„ವಾರ್ಷಿಕ ಚುನಾ ವಣೆ ಘೋಷಣೆಯಾಗಿದೆ. ಜೂ.3 ರಂದು ಮತದಾನ ನಡೆಯಲಿದ್ದು, 6ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಕೇಂದ್ರ ಚುನಾವಣ ಆಯೋಗ ತಿಳಿಸಿದೆ.
3 ಪದವೀಧರ, 3 ಶಿಕ್ಷಕ ಕ್ಷೇತ್ರ
2018ರ ಚುನಾವಣೆಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಚಂದ್ರಶೇಖರ್ ಪಾಟೀಲ್, ನೈಋತ್ಯ ಪದವೀಧರ ಕ್ಷೇತ್ರವನ್ನು ಬಿಜೆಪಿಯಿಂದ ಪ್ರತಿನಿಧಿಸಿದ್ದ ಆಯನೂರು ಮಂಜುನಾಥ್, ಬೆಂಗಳೂರು ಪದವೀಧರ ಕ್ಷೇತ್ರದ ಬಿಜೆಪಿ ಸದಸ್ಯ ಅ. ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ನೈಋತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಸದಸ್ಯ ಭೋಜೇಗೌಡ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ನಿಂದ ಪ್ರತಿನಿಧಿಸುತ್ತಿದ್ದ ಮರಿತಿಬ್ಬೇಗೌಡ ಅವರ ಅಧಿಕಾರಾವಧಿಯು ಜೂ.21ಕ್ಕೆ ಮುಕ್ತಾಯಗೊಳ್ಳಲಿದೆ.
ರಾಜೀನಾಮೆ ಸಲ್ಲಿಸಿದ್ದ ಇಬ್ಬರು
ಈ ನಡುವೆ ಆಯನೂರು ಮಂಜುನಾಥ್ 2023ರ ಎ.19 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ದ್ದರು. ಮರಿತಿಬ್ಬೇಗೌಡರು 2024ರ ಮಾ.21ರಂದು ರಾಜೀನಾಮೆ ನೀಡಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ದ್ದರು. ಇದರಿಂದ 2 ಸ್ಥಾನಗಳು ಅವಧಿಗೂ ಮುನ್ನವೇ ತೆರವುಗೊಂಡಿದ್ದವು. ಅಧಿಕಾರಾವಧಿ ಪೂರ್ಣಗೊಳ್ಳುವ ಸಮಯವೂ ಹತ್ತಿರದಲ್ಲೇ ಇದ್ದರಿಂದ ಉಪಚುನಾವಣೆ ಘೋಷಿಸಿರಲಿಲ್ಲ. ಈಗ ಎಲ್ಲದಕ್ಕೂ ಸೇರಿ ಸಾರ್ವತ್ರಿಕ ಚುನಾವಣೆಯನ್ನೇ ಘೋಷಿಸಲಾಗಿದೆ.
ಮಾದರಿ ನೀತಿ ಸಂಹಿತೆ ಜಾರಿ
ಚುನಾವಣೆ ನಡೆಯಲಿರುವ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಮೇ 9ರಂದು ಅಧಿಕೃತ ಅಧಿಸೂಚನೆ ಹೊರಬೀಳಲಿದೆ. ಅಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ, ಮೇ 16ರ ವರೆಗೆ ಉಮೇದುವಾರಿಕೆಗೆ, 17ರಂದು ನಾಮಪತ್ರಗಳ ಪರಿಶೀಲನೆ, ಹಿಂಪಡೆ ಯಲು ಮೇ 20ರ ವರೆಗೆ ಕಾಲಾವಕಾಶ ಇದೆ. ಜೂ.3ರ ಬೆಳಗ್ಗೆ 8ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಜೂ.6ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಶೆಟ್ಟರ್, ತೇಜಸ್ವಿನಿ, ನಂಜುಂಡಿ ಸ್ಥಾನವೂ ತೆರವು
ಇವಿಷ್ಟೇ ಅಲ್ಲದೆ, ಇತ್ತೀಚೆಗೆ ಕಾಂಗ್ರೆಸ್‌ನಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿಯ ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ ಕೂಡ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಸ್ಥಾನಗಳೂ ತೆರವಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಹುದ್ದೆಗಳಿಗೂ ಚುನಾವಣೆ ನಡೆಯಬೇಕಾಗುತ್ತದೆ.
ಯಾವ ಕ್ಷೇತ್ರದಲ್ಲಿ ಯಾರಿದ್ದರು?
ಈಶಾನ್ಯ ಪದವೀಧರ: ಚಂದ್ರಶೇಖರ್ ಪಾಟೀಲ್ ( ಕಾಂಗ್ರೆಸ್)
ನೈಋತ್ಯ ಪದವೀಧರ: ಆಯನೂರು ಮಂಜುನಾಥ್ (ಹಿಂದೆ ಬಿಜೆಪಿ, ಈಗ ಕಾಂಗ್ರೆಸ್)
ಬೆಂಗಳೂರು ಪದವೀಧರ: ಅ.ದೇವೇಗೌಡ (ಬಿಜೆಪಿ)
ಆಗ್ನೇಯ ಶಿಕ್ಷಕರು: ವೈ.ಎ.ನಾರಾಯಣ ಸ್ವಾಮಿ (ಬಿಜೆಪಿ)
ನೈಋತ್ಯ ಶಿಕ್ಷಕರು: ಭೋಜೇಗೌಡ (ಜೆಡಿಎಸ್)
ದಕ್ಷಿಣ ಶಿಕ್ಷಕರು: ಮರಿತಿಬ್ಬೇಗೌಡ (ಹಿಂದೆ ಜೆಡಿಎಸ್, ಈಗ ಕಾಂಗ್ರೆಸ್)
ಪರಿಷತ್‌ನ ಸದ್ಯದ ಬಲಾಬಲ
ಬಿಜೆಪಿ 32
ಕಾಂಗ್ರೆಸ್ 29
ಜೆಡಿಎಸ್ 07
ಸ್ವತಂತ್ರ 01
ಖಾಲಿ 05
ಸಭಾಪತಿ 01
ಒಟ್ಟು 75
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.