ಪತನ ಸಂದರ್ಭದಲ್ಲೂ ವರ್ಗಾವಣೆಗೆ ಬ್ರೇಕಿಲ್ಲ
Team Udayavani, Jul 24, 2019, 3:05 AM IST
ಬೆಂಗಳೂರು: ಸರ್ಕಾರ ಪತನದ ನಡುವೆಯೂ ವರ್ಗಾವಣೆಗಳ ಸುಗ್ಗಿ ಜೋರಾಗಿದೆ. ಇತ್ತ ಸರ್ಕಾರ ಅತಂತ್ರ ಪರಿಸ್ಥಿತಿಯಲ್ಲಿದ್ದರೂ ರಾಜಕಾರಣಿಗಳು ಮಾತ್ರ ತರಾತುರಿಯಲ್ಲಿ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿಯೆ ಮಾಡಿಕೊಂಡಿದ್ದಾರೆ. ಕಳೆದ 15 ದಿನಗಳಿಂದ ಮೈತ್ರಿ ಸರ್ಕಾರ ತಮ್ಮ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ನಡುವೆಯೇ ರಾಜ್ಯದಲ್ಲಿ 2000ಕ್ಕೂ ಅಧಿಕ ವರ್ಗಾವಣೆಗಳು ನಡೆದಿವೆ.
ಜುಲೈ 6ರಂದು ಸರ್ಕಾರದ ಕಾರ್ಯಾಲಯದ ವಿವಿಧ ಹುದ್ದೆಗಳಲ್ಲಿನ 105ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಮರು ದಿನ ಜುಲೈ 8ರಂದು 81 ಕೆಎಎಸ್ ಅಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ 39 ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.
ಜುಲೈ 9ರಂದು ಅರಣ್ಯ ಇಲಾಖೆಯಲ್ಲಿ 434 ಅಧಿಕಾರಿಗಳ ವರ್ಗಾವಣೆ ನಡೆದಿದೆ. ಇವುಗಳ ಪೈಕಿ 65 ವಲಯ ಅರಣ್ಯ ಅಧಿಕಾರಿಗಳು ,168 ಉಪ ವಲಯ ಅರಣ್ಯ ಅಧಿಕಾರಿಗಳು, 152 ಅರಣ್ಯ ರಕ್ಷಕರು ಹಾಗೂ 39 ಅರಣ್ಯ ವೀಕ್ಷಕರು ಸೇರಿದ್ದಾರೆ. ಇದೇ ದಿನ 17 ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.
ಜುಲೈ 9ರಿಂದ ಜುಲೈ 20ರ ತನಕ ಕೇವಲ ಲೋಕೋಪಯೋಗಿ ಇಲಾಖೆಯೊಂದರಲ್ಲಿಯೇ ಒಟ್ಟು 826 ಇಂಜಿನಿಯರ್‌ಗಳ ವರ್ಗಾವಣೆ ಮಾಡಲಾಗಿದೆ. ಈ ಇಲಾಖೆಯಲ್ಲಿ ವರ್ಗಾವಣೆಗಳು ನಿರಂತರವಾಗಿ ನಡೆಯುತ್ತಿವೆ.
ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಮತ್ತು ಸಣ್ಣ ನೀರಾವರಿ ಇಲಾಖೆಯ 500ಕ್ಕೂ ಅಧಿಕ ಇಂಜಿನಿಯರ್‌ಗಳ ವರ್ಗಾವಣೆ ಶನಿವಾರ (ಜುಲೈ 20ರಂದು)ಮಾಡಲಾಗಿದೆ. ಈ ಎಲ್ಲಾ ವರ್ಗಾವಣೆಗಳು ಶನಿವಾರವೇ ನಡೆದಿದ್ದು, ಆದೇಶದ ಪ್ರತಿಗಳಲ್ಲಿ ಮಾತ್ರ ಹಿಂದಿನ ದಿನಾಂಕಗಳನ್ನು ನಮೂದಿಸಲಾಗಿದೆ ಎಂಬ ಮಾಹಿತಿ ಯನ್ನು ಇಲಾಖಾ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಜುಲೈ 11ರಂದು 14 ಕೆಎಎಸ್ ಅಧಿಕಾರಿಗಳು, ಜುಲೈ12ರಂದು 28 ಕಂದಾಯ ಇಲಾಖೆಯ ಸಿಬ್ಬಂದಿ, ಜುಲೈ15ರಂದು 13 ಕೆಎಎಸ್ ಮತ್ತು ಜುಲೈ 17ರಂದು 146 ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಸಾರಿಗೆ ಇಲಾಖೆ ಕೂಡ ಸರ್ಕಾರದ ಅತಂತ್ರ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ಸಾಮೂಹಿಕ ವರ್ಗಾವಣೆ ಮಾಡಿದೆ. ಸುಮಾರು 250ರಿಂದ 300 ವರ್ಗಾವಣೆಗಳನ್ನು 10ದಿನಗಳ ಅಂತರದಲ್ಲಿ ಮಾಡಿ, ವಿವಾದಕ್ಕೆ ಸಿಲುಕಿತ್ತು.
ಕಳೆದ 11ವರ್ಷಗಳಿಂದ ವರ್ಗಾವಣೆಯನ್ನೇ ಮಾಡದ ಸಾರಿಗೆ ಇಲಾಖೆ ಏಕಕಾಲಕ್ಕೆ 250ಕ್ಕೂ ಅಧಿಕ ವರ್ಗಾವಣೆಗಳನ್ನು ಮಾಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದಷ್ಟೇ ಅಲ್ಲದೆ ಶುಕ್ರವಾರ (ಜುಲೈ 18 ರಂದು) ಅರಣ್ಯ ಇಲಾಖೆಯ ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರ ನೇಮಕ ಮಾಡಲಾಗಿದೆ. ಕಳೆದ ಹಲವು ತಿಂಗಳುಗಳಿಂದ ಖಾಲಿ ಇದ್ದ ವನ್ಯಜೀವಿ ಪರಿಪಾಲಕರ ಹುದ್ದೆಯನ್ನು ರಾತ್ರೋ ರಾತ್ರಿ ನೇಮಿಸಲಾಗಿದೆ. ಇದಕ್ಕೆ ಅನುಸರಿಸಬೇಕಿದ್ದ ಮಾನದಂಡಗಳನ್ನು ಅನುಸರಿಸದೆ ಅಕ್ರಮವಾಗಿ ನೇಮಕಾತಿ ಆದೇಶ ಹೊರಡಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ರಾಜ್ಯಪಾಲರ ಸೂಚನೆ: ಜುಲೈ 19ರಂದು (ಶನಿವಾರ) ಪೊಲೀಸ್ ಇಲಾಖೆಯಲ್ಲಿ 131 ವರ್ಗಾವಣೆಗಳನ್ನು ಮಾಡಿ ಆದೇಶ ಹೊರಡಿಸಲಾಗಿತ್ತು. ಆದೇಶ ಹೊರಡಿಸಿದ ಕೆಲವೇ ನಿಮಿಷಗಳಲ್ಲಿ ಆದೇಶವನ್ನು ಹಿಂಪಡೆಯಲಾಗಿತ್ತು. ರಾಜ್ಯಪಾಲರು ಸರ್ಕಾರದ ಅತಂತ್ರದ ನಡುವೆ ಯಾವುದೇ ಮಹತ್ವದ ಆದೇಶಗಳನ್ನು ಹೊರಡಿಸಲು ಅವಕಾಶ ನೀಡಬಾರದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ರಾಜ್ಯಪಾಲರ ಸೂಚನೆ ಹಿನ್ನೆಲೆಯಲ್ಲಿ ಆದೇಶವನ್ನು ಕೂಡಲೆ ಹಿಂಪಡೆಯಲಾಗಿತ್ತು.
* ಲೋಕೇಶ್ ರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.