Ayodhya; ಪ್ರತೀ ವಾರ ಮೋದಿಯವರಿಂದಲೇ ಸ್ವತಃ ಮಂದಿರದ ಪ್ರಗತಿ ಪರಿಶೀಲನೆ
ಹಿಂದಿನ ವಾರದ ಕೆಲಸದ ಪ್ರಗತಿ ಪರಿಶೀಲಿಸಿ, ಮುಂದಿನ ವಾರದ ಗುರಿಯನ್ನು ಚರ್ಚಿಸುತ್ತಿದ್ದರು
Team Udayavani, Jan 29, 2024, 7:15 AM IST
ಬೆಂಗಳೂರು: ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಂಡ ಭವ್ಯ ರಾಮಮಂದಿರದ ನಿರ್ಮಾಣದ ಹಿಂದೆ ಅನೇಕರ ಪರಿಶ್ರಮವಿದ್ದು, ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರತೀ ವಾರ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸುತ್ತಿದ್ದರು ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.
ತಮ್ಮ ಕಾರ್ಯಭಾರ ಎಷ್ಟಿದ್ದರೂ ಅವೆಲ್ಲವನ್ನೂ ಪೂರೈಸಿ ಕೊಂಡು ಪ್ರತೀ ಶನಿವಾರ ಸಂಜೆ ಅಯೋಧ್ಯೆ ಶ್ರೀರಾಮಜನ್ಮಭೂಮಿ ಟ್ರಸ್ಟ್ ಹಾಗೂ ಮಂದಿರ ನಿರ್ಮಾಣದ ಗುತ್ತಿಗೆ ದಾರರೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸುತ್ತಿದ್ದ ಪ್ರಧಾನಿ ಮೋದಿ, ಹಿಂದಿನ ವಾರದ ಕೆಲಸದ ಪ್ರಗತಿ ಹಾಗೂ ಮುಂದಿನ ವಾರದ ಗುರಿಯ ಬಗ್ಗೆ ಚರ್ಚಿಸುತ್ತಿದ್ದರು. ಒಂದು ವೇಳೆ ಆ ವಾರಕ್ಕೆ ನಿಗದಿಪಡಿಸಿದ ಕೆಲಸ ಆಗದೆ ಇದ್ದರೆ ಅದಕ್ಕೇನು ಕಾರಣ, ಏನು ಪರಿಹಾರ ಎಂಬಿತ್ಯಾದಿ ಕುರಿತು ಮಾಹಿತಿ ಪಡೆದು ಸಲಹೆ ನೀಡುತ್ತಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ 15 ದಿನಗಳಿಗೊಮ್ಮೆ ಕಾಮಗಾರಿಯ ಪರಿಶೀಲನೆ ನಡೆಸುತ್ತಿದ್ದರು.
ಹೀಗೆ ಮಂದಿರ ನಿರ್ಮಾಣದಲ್ಲಿ ಕೇಂದ್ರ ಸರಕಾರ ಹಾಗೂ ಉತ್ತರ ಪ್ರದೇಶ ರಾಜ್ಯ ಸರಕಾರದ ಮುಖ್ಯಸ್ಥರು ತೊಡಗಿಕೊಂಡ ಪರಿಯನ್ನು ಎಳೆಎಳೆಯಾಗಿ ವಿವರಿಸಿದವರು ಬೆಂಗಳೂರಿನ ಶಂಕರ್ ಎಲೆಕ್ಟ್ರಿಕಲ್ಸ್‌ನ ಸಂಸ್ಥಾಪಕ ರಾಜೇಶ್ ಆರ್. ಶೆಟ್ಟಿ. ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಸಮೀಪದ ಮಿಜಾರು ಮೂಲದವರಾದ ರಾಜೇಶ್ ಇತ್ತೀಚೆಗೆ “ಉದಯವಾಣಿ’ಯ ಬೆಂಗಳೂರು ಕಚೇರಿಗೆ ಭೇಟಿ ನೀಡಿದ್ದರು. ಸುದೀರ್ಘ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, 2023ರ ಜನವರಿಯಿಂದ ಡಿಸೆಂಬರ್‌ವರೆಗೆ ತಮ್ಮಕಾರ್ಯ ಹೇಗಿತ್ತು ಎನ್ನುವ ರೋಚಕ ಕಥಾನಕವನ್ನು ಸಂಪಾದಕೀಯ ಸಿಬಂದಿಯೆದುರು ವಿವರಿಸಿದರು.
ಕಟೀಲು ದೇವಸ್ಥಾನ, ಮಂತ್ರಾಲಯ ಮಠ ಸಹಿತ ಹಲವು ಧಾರ್ಮಿಕ ಕೇಂದ್ರಗಳಿಗೆ ವಿದ್ಯುದೀಕರಣ ಹಾಗೂ ಬೆಳಕಿನ ವ್ಯವಸ್ಥೆ ಮಾಡಿ ಕೊಟ್ಟಿರುವ ಅವರು, ಅಯೋಧ್ಯೆಯ ಮಂದಿರಕ್ಕೆ ಎಲೆಕ್ಟ್ರಿಕಲ್ ಸೌಕರ್ಯ ಒದಗಿಸುವ ಅವಕಾಶ ಸಿಕ್ಕಿದ್ದು ತಮ್ಮ ಸುದೈವ ಎನ್ನುತ್ತಾರೆ. ಏಳೆಂಟು ತಿಂಗಳ ಕಾಮಗಾರಿಯ ಹಿಂದಿನ ಸಂತಸವನ್ನು ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ. ಟಿಸಿಇ ನೆರವಿನಿಂದ ಕೆಲಸ ಮಾಡುವ ಅವಕಾಶ ರಾಮಮಂದಿರ ನಿರ್ಮಾಣ ಕಾಮಗಾರಿಯ ಹೊಣೆಯನ್ನು ಎಲ್ ಆ್ಯಂಡ್ ಟಿ ಕಂಪೆನಿಗೆ ವಹಿಸಲಾಗಿತ್ತು.
ಆದರೂ, ತಾಂತ್ರಿಕ ಮತ್ತು ತಾಂತ್ರಿಕೇತರ ವಿನ್ಯಾಸ ಹಾಗೂ ಕಾಮಗಾರಿಗಳನ್ನು ಜವಾಬ್ದಾರಿ ಯನ್ನು ಟಾಟಾ ಕನ್ಸಲ್ಟಿಂಗ್ ಎಂಜಿನಿ ಯರ್ (ಟಿಸಿಇ) ಸಂಸ್ಥೆಗೆ ನೀಡಲಾಗಿತ್ತು. ಕಳೆದ 25 ವರ್ಷಗಳಿಂದ ನಮ್ಮ ಸಂತೃಪ್ತ ಗ್ರಾಹಕರಾಗಿರುವ ಟಿಸಿಇ ಸಹಕಾರದಿಂದ ಈ ಕೆಲಸ ಮಾಡುವ ಪುಣ್ಯ ಲಭಿಸಿತು. ಪ್ರಧಾನಿ ಅಥವಾ ಉತ್ತರ ಪ್ರದೇಶ ಮುಖ್ಯ ಮಂತ್ರಿ ಕಾರ್ಯಾಲಯದ ಸಂಪರ್ಕ, ಪ್ರಭಾವಗಳು ಇಲ್ಲದೇ ಇದ್ದರಿಂದ ಹಾಗೂ ದಕ್ಷಿಣ ಭಾರತೀಯ ಎಂಬ ಕಾರಣದಿಂದ ಆರಂಭದಲ್ಲಿ ಈ ಕಾಮಗಾರಿಯನ್ನು ಪಡೆಯುವುದು ಕಷ್ಟವಾಗಿತ್ತು. ಪ್ರಭು ಶ್ರೀರಾಮ ಹಾಗೂ ಮಂತ್ರಾಲಯ ಪ್ರಭುಗಳ ಕೃಪೆಯಿಂದ ಅತೀ ಕಡಿಮೆ ದರ ಬಿಡ್ ಮಾಡಿದ್ದರಿಂದ ಈ ಮಹತ್ಕಾರ್ಯ ನನ್ನ ಪಾಲಾಯಿತು. ದುಡ್ಡು ಮಾಡಲು ಬಂದಿಲ್ಲ, ನಂಬಿಕೆ ಹಾಗೂ ಸೇವೆಯ ಲೆಕ್ಕದಲ್ಲಿ ಟೆಂಡರ್‌ನಲ್ಲಿ ಭಾಗವಹಿಸಿದ್ದೆ. ಕೊನೆಗೂ ಅವಕಾಶ ದೊರೆಯಿತು ಎಂದು ರಾಜೇಶ್ ಶೆಟ್ಟಿ ವಿವರಿಸಿದರು.
ವಿವಿಧ ಹಂತಗಳಲ್ಲಿ ಕೆಲಸ : ಮೊದಲಿಗೆ ನಮ್ಮನ್ನು ಪರೀಕ್ಷೆ ಮಾಡಲೆಂದೇ ಗರ್ಭ ಗುಡಿಗೆ ಎಲೆಕ್ಟ್ರಿಕಲ್ ಇನ್‌ಫ್ರಾಸ್ಟ್ರಕ್ಚರ್ ವಹಿ ಸುವ ಪ್ಯಾಕೇಜ್ ನೀಡಿದ್ದರು. 2023ರ ಜನವರಿಯಲ್ಲಿ 30 ಜನರ ತಂಡ ದೊಂದಿಗೆ ಕೆಲಸ ಆರಂಭಿಸಿದೆವು. ಜೂನ್ ವೇಳೆಗೆ ಕೆಲಸ ಹೆಚ್ಚಾದ್ದರಿಂದ 100 ಮಂದಿ ಸೇರಿ ಕೆಲಸ ಮಾಡಿದೆವು. ಅದರಲ್ಲಿ ಶೇ.80ರಷ್ಟು ಕನ್ನಡಿಗರೇ ಕೆಲಸ ಗಾರರಾಗಿದ್ದೆವು. ಅವರಿಗೆ ಉಳಿಯಲು ಲೇಬರ್ ಕ್ಯಾಂಪ್, ಕನ್ನಡಿಗ ಬಾಣಸಿಗರ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೆವು. ಗರ್ಭಗುಡಿಯ ಕೆಲಸ ಇಷ್ಟವಾದ್ದರಿಂದ ಇಡೀ ದೇಗುಲದ ಪರಿಸರಕ್ಕೇ ಎಲೆಕ್ಟ್ರಿಕಲ್ ಇನ್‌ಫ್ರಾಸ್ಟ್ರಕ್ಚರ್ ಅಳವಡಿಸಲು ನಿರ್ದೇ ಶನ ಬಂತು. ಅದರಂತೆ ಅಷ್ಟೂ ಕಾಮ ಗಾರಿಯನ್ನೂ ಪೂರ್ಣಗೊಳಿಸಿದ್ದೇವೆ.
ಕಾಮಗಾರಿ ವೇಳೆ ಮಂದಿರದ ಆವರಣ 6 ಸುತ್ತಿನ ಕೋಟೆ!
ಮಂದಿರ ಕಾಮಗಾರಿ ನಡೆಯುತ್ತಿದ್ದ ಜಾಗ ಅತ್ಯಂತ ಬಿಗಿ ಭದ್ರತೆಯನ್ನು ಹೊಂದಿದ್ದು, ಆರು ಸುತ್ತಿನ ಕೋಟೆಯ ಮಾದರಿಯಲ್ಲಿ ಭದ್ರತಾ ವ್ಯವಸ್ಥೆ ರೂಪಿಸಲಾಗಿತ್ತು. ಟ್ರಸ್ಟಿ ಗಳು, ಗುತ್ತಿಗೆದಾರರು ಹಾಗೂ ಕೆಲಸಗಾರರನ್ನು ಹೊರತು ಪಡಿಸಿ ಬೇರಾರಿಗೂ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಪ್ರವೇಶಾವಕಾಶ ಇರಲಿಲ್ಲ. ಪ್ರತೀ ದಿನವೂ ನಾವು ಆಧಾರ್ ಕಾರ್ಡ್ ಸ್ಕ್ಯಾನ್ ಮಾಡಿ, ನಮ್ಮ ವಾಹನದ ಸಂಖ್ಯೆ ದಾಖಲಿಸಿ ಒಳಪ್ರವೇಶಿಸಬೇಕಿತ್ತು. ಹಲವು ಹಂತದ ಭದ್ರತಾ ವ್ಯವಸ್ಥೆ ದಾಟಿ ಹೋಗಬೇಕಿತ್ತು. ಇದೆಲ್ಲವನ್ನೂ ಉತ್ತರ ಪ್ರದೇಶ ಸರಕಾರವೇ ನಿಭಾಯಿಸುತ್ತಿತ್ತು. ಬಹುತೇಕ ಕಡೆಗಳಲ್ಲಿ ಭೂಮಿಯೊಳಗೇ ಕೇಬಲ್ ಅಳವಡಿಸಿದ್ದು, ಕೆಲವು ಕಡೆ ದೇಗುಲದ ಹೊರ ಗೋಡೆ ಇತ್ಯಾದಿ ಕಡೆ ಮೇಲ್ಭಾಗದಲ್ಲಿ ಕಾಣುವಂತಿದೆ. ಯಾವುದೇ ಕೇಬಲ್ ಕಪ್ಪು ಬಣ್ಣದಲ್ಲಿ ಇರ ಬಾರದೆಂದು ದೇವಸ್ಥಾನದ ಬಣ್ಣವನ್ನೇ ಕೋಟಿಂಗ್ ಮಾಡಿ ಸಲು ಸಲಹೆ ನೀಡಿದ್ದರು. ಎಲ್ಲಿಯೂ ಜಿಎ, ಸ್ಟೀಲ್, ಬೈಂಡಿಂಗ್ ವೈರ್ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ತಾಮ್ರ ಹಾಗೂ ಜಿಂಕ್ ಮಿಶ್ರಿತ ಹಿತ್ತಾಳೆಯನ್ನೇ ಬಳಸಬೇ ಕೆಂಬ ನಿರ್ದೇಶನವಿತ್ತು. ಒಮ್ಮೆ ಮಣ್ಣು ಸಂಗ್ರಹಿಸುತ್ತಿದ್ದ ಲಾರಿಯೊಂದು ಮಗುಚಿ ಬಿದ್ದಾಗ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಹುಡುಗರು ರಕ್ಷಣೆ ಮಾಡಿದ್ದಕ್ಕೆ ಟ್ರಸ್ಟಿಗಳು ಅಭಿನಂದಿಸಿದ್ದರು. ಅದನ್ನೂ ಗಮನಿಸಿ ಶ್ಲಾ ಸಿದ್ದರು. ಪ್ರಾಣಪ್ರತಿಷ್ಠಾಪನೆ ವೇಳೆ ಎಲ್ಲ ಕಾರ್ಮಿಕರಂತೆ ನಮ್ಮ ಕಾರ್ಮಿಕರಿಗೂ ಪ್ರಧಾನಿ ಮೋದಿ ಪುಷ್ಪನಮನ ಸಲ್ಲಿಸಿದ್ದು ಅವಿಸ್ಮರಣೀಯ ಕ್ಷಣ. ಜ.22ರಂದು ಬಾಲರಾಮರ ಪ್ರಾಣಪ್ರತಿಷ್ಠೆ ವೇಳೆ ದೇಗುಲದ ಸುತ್ತ ಗರುಡ ಪ್ರದಕ್ಷಿಣೆ ಹಾಕಿದ್ದು, ನೂರಾರು ಸಾಧು ಸಂತರನ್ನು ಒಂದೆಡೆ ಕಂಡಿದ್ದು, ಪರದೆ ಸರಿಸಿದ ಅನಂತರ ಕಂಡ ಬಾಲರಾಮರ ಮೂರ್ತಿ ಯಲ್ಲಿದ್ದ ಕಳೆ ಎಲ್ಲವೂ ವರ್ಣಿಸಲಾಗದ ಅನುಭವ.
50 ಕಿ.ಮೀ. ಕೇಬಲ್ ಅಳವಡಿಕೆ!
ಪ್ರಸ್ತುತ ಬಾಲರಾಮ ಪ್ರತಿಷ್ಠಾಪನೆಗೊಂಡಿರುವ ಗರ್ಭಗುಡಿ ಇರುವ ನೆಲಮಹಡಿ, ಪಿಎಫ್ಸಿ, ಬ್ಯಾಗೇಜ್, ಸ್ಕ್ಯಾನಿಂಗ್ ಘಟಕ, ಫೈರ್ ಪ್ಯಾನಲ್, ತ್ಯಾಜ್ಯ ನೀರು ಸಂಸ್ಕರಣ ಘಟಕ (ಎಸ್‌ಟಿಪಿ), 25 ಸಾವಿರ ಮಂದಿ ವಾಸ್ತವ್ಯ ಹೂಡಬಹುದಾದ ಪಿಎಫ್ಸಿ, ಹೊರ ಆವರಣಕ್ಕೆ ವಿದ್ಯುತ್ ಸಂಪರ್ಕ ನೀಡಲಾಗಿದೆ.
ಮೊದಲ ಮಹಡಿ ಹಾಗೂ ಎರಡನೇ ಮಹಡಿಯ ಕಾಮಗಾರಿ ಇನ್ನೂ ಪ್ರಗತಿಯಲ್ಲಿದ್ದು, ಅದಕ್ಕೂ ವೈರಿಂಗ್, ಲೈಟಿಂಗ್ ಎಲ್ಲವನ್ನೂ ಮಾಡಬೇಕಿದೆ. ಪಿಎಫ್ಸಿ 2, ಎಸ್‌ಟಿಪಿ 2, ಲ್ಯಾಂಡ್ ಸ್ಕೇಪಿಂಗ್, 5 ಸಣ್ಣ ದೇಗುಲಗಳು, ಲಾನ್ ನಡುವೆ ಅಲ್ಲಲ್ಲಿ ಬೊಲಾರ್ಡ್ ಲೈಟ್ ಫಿಟ್ಟಿಂಗ್, ಚಿಕ್ಕ ಕೊಳ ಎಲ್ಲವೂ ಬರಲಿದ್ದು, ಅವೆಲ್ಲಕ್ಕೂ ಈ ವರ್ಷಾಂತ್ಯದ ವೇಳೆಗೇ ಎಲೆಕ್ಟ್ರಿಕ್ ಸೌಕರ್ಯ ಒದಗಿಸುವ ಗುರಿ ಹೊಂದಿದ್ದೇವೆ.
ಸದ್ಯಕ್ಕೆ ರಾಮಮಂದಿರದ ಪರಿಸರಕ್ಕೆ 2 ಸಾವಿರ ಕಿಲೋವ್ಯಾಟ್ ಸಾಕಾಗುತ್ತದೆಯಾದರೂ ಭವಿಷ್ಯದ ದೃಷ್ಟಿಯಿಂದ 5 ಸಾವಿರ ಕೆವಿ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ.
ಸ್ಟೆಪ್‌ಡೌನ್ ಟಿಸಿ, ದೊಡ್ಡ ಎಲ್‌ಟಿ ಪ್ಯಾನಲ್ ಡಿಸ್ಟ್ರಿಬ್ಯೂಶನ್, 400 ಚದರ ಎಂಎಂ ಅಳತೆಯ 30 ಕಿ.ಮೀ. ಕೇಬಲ್ ಹಾಗೂ 300 ಚದರ ಎಂಎಂ ಅಳತೆಯ 20 ಕಿ.ಮೀ. ಕೇಬಲ್ ಸೇರಿ ಒಟ್ಟು 50 ಕಿ.ಮೀ. ಉದ್ದದ ಕೇಬಲ್ ಅಳವಡಿಸಿದೆ.
ಸಣ್ಣ ಡಿಸ್ಟ್ರಿಬ್ಯೂಶನ್ ಸಿಸ್ಟಂಗಳು ಸಾಕಷ್ಟಿವೆ. ಆರ್‌ಎಂಸಿ ಪೈಪ್ ಅಳವಡಿಸಿದೆ. 60 70 ರಷ್ಟು ಡಿಸ್ಟ್ರಿಬ್ಯೂಶನ್ ಡಿವಿ, ಲಕ್ಷಕ್ಕೂ ಅಧಿಕ ವೈರ್ ಅಳವಡಿಸಿದೆ. ತುರ್ತು ಸನ್ನಿವೇಶದಲ್ಲಿ ಬಳಸಲು 500 ಕೆವಿ ಮತ್ತು 750 ಕೆವಿ ಸಾಮರ್ಥ್ಯದ ಎರಡೆರಡು ಜನರೇಟರ್ ಇವೆ. ಅಲ್ಲದೆ, 40 ಕೆವಿ ಮತ್ತು 200 ಕೆವಿ ಸಾಮರ್ಥ್ಯದ ಹಲವು ಯುಪಿಎಸ್‌ಗಳನ್ನು ಅಳವಡಿಸಲಾಗಿದೆ.
ಈ ಎಲ್ಲ ಎಲೆಕ್ಟ್ರಿಕಲ್ ಇನ್‌ಫ್ರಾಸ್ಟ್ರಕ್ಚರ್‌ನೂ° 5 ವರ್ಷಗಳ ನಿರ್ವಹಣೆ ಮಾಡುವ ಹೊಣೆ ನಮ್ಮ ಮೇಲಿದ್ದು, ಇದಕ್ಕಾಗಿ ಪ್ರತೀ ದಿನ ಮೂರು ಪಾಳಿಯಲ್ಲಿ 9 ಮಂದಿ ಕೆಲಸ ಮಾಡಲಿದ್ದಾರೆ. ಪ್ರತೀ ಪಾಳಿಯಲ್ಲಿ ಕೆಲಸ ಮಾಡುವ 9 ಜನರ ಪೈಕಿ ಒಬ್ಬರನ್ನು ಗರ್ಭಗುಡಿಯ ಲೈಟಿಂಗ್ ವ್ಯವಸ್ಥೆ ನಿರ್ವಹಣೆಗೆಂದೇ ಇಡಲಾಗಿದೆ.
ಬೆಳಕಿಗೆ ಚಾಲನೆ ನೀಡಿದ್ದು ಮಂತ್ರಾಲಯಶ್ರೀ
ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲರಾಮನಿಗೆ “ಪ್ರಾಣ ಪ್ರತಿಷ್ಠೆ’ ನೆರವೇರಿಸಿದ್ದು ಕನ್ನಡಿಗರಾದ ಸ್ವಾಮೀಜಿ, ಪೇಜಾವರದ ವಿಶ್ವಪ್ರಸನ್ನ ಶ್ರೀಗಳು. ಹಾಗೆಯೇ ಇಡೀ ರಾಮಮಂದಿರಕ್ಕೆ ವಿದ್ಯುದೀಕರಣದ ಉದ್ಘಾಟನೆ ನೆರವೇರಿಸಿದ್ದು ಮಂತ್ರಾಲಯದ ಸುಬುಧೇಂದ್ರತೀರ್ಥರು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ರಾಜೇಶ್ ಶೆಟ್ಟಿ ಅವರು ವ್ಯವಸ್ಥೆ ಮಾಡಿರುವ ವಿದ್ಯುದೀಕರಣವನ್ನು ಮಂತ್ರಾಲಯ ಸ್ವಾಮೀಜಿಗಳು ಉದ್ಘಾಟಿಸಿದರು.
ಕರ್ನಾಟಕದ ಸಂಸ್ಥೆಯಿಂದ ಸಿಡಿಲು ನಿರೋಧಕ
ಕಟ್ಟಡ ನಿರ್ಮಾಣ, ವಿದ್ಯುದೀಕರಣ, ಮೂರ್ತಿ ಕೆತ್ತನೆ, ಪ್ರಾಣ ಪ್ರತಿಷ್ಠೆ ಪೂರೈಸಿದ ಪೇಜಾವರ ಶ್ರೀಗಳ ಸಹಿತ ಶೇ. 60ರಷ್ಟು ಪ್ರಕ್ರಿಯೆಗಳಲ್ಲಿ ಕನ್ನಡಿಗರದ್ದೇ ಸಿಂಹಪಾಲಿತ್ತು. ರಾಮಮಂದಿರವನ್ನು ಕಣ್ಮನ ಸೆಳೆಯುವಂತೆ ಅಲಂಕೃತಗೊಳಿ ಸಿರುವುದು ಮಿಜಾರು ಮೂಲದ ರಾಜೇಶ್ ಶೆಟ್ಟಿ ಎಂಬುದು ಹೆಗ್ಗಳಿಕೆಯ ವಿಚಾರ. ಜತೆಗೆ ದೇವಸ್ಥಾನದ ಮೇಲಿನ ಕಲಶದಿಂದ ಅರ್ಥಿಂಗ್ ಕೆಲಸ ಮಾಡಿದ್ದೂ ಕನ್ನಡಿಗರು ಎನ್ನುವುದು ಮತ್ತೂಂದು ಹೆಮ್ಮೆಯ ಸಂಗತಿ. ಮಿಂಚು, ಸಿಡಿಲಿನಿಂದ ದೇಗುಲಕ್ಕೆ ಹಾನಿ ಸಂಭವಿಸಬಾರದೆಂದು ಸಿಡಿಲು ನಿರೋಧಕ ಅಳವಡಿಸಿದ ಜೆಇಎಫ್ ಟೆಕ್ನೋ ಎನ್ನುವ ಸಂಸ್ಥೆ ಬೆಂಗಳೂರು ಮೂಲದ್ದಾದರೆ, ಅದರ ಮುಖ್ಯಸ್ಥ ಪ್ರಶಾಂತ್ ಎನ್ನುವವರು ಕನ್ನಡಿಗರೆಂಬುದು ಹೆಮ್ಮೆ.
ಇನ್ನೊಂದು ಮೆಗಾ ಪ್ರಾಜೆಕ್ಟ್
ಅಯೋಧ್ಯೆ ಮೂಲಕ ಉತ್ತರ ಭಾರತದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದೇವೆ. ನೋಯ್ಡಾದ ಜೇವರ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇ ನಿರ್ಮಾಣ ಆಗುತ್ತಿದ್ದು, ಅಲ್ಲಿನ ಟರ್ಮಿ ನಲ್‌ಗೆ ಎಲೆಕ್ಟ್ರಿಕಲ್ ಇನ್‌ಫ್ರಾ ಸ್ಟ್ರಕ್ಚರ್ ಅಳವಡಿಸುವ ಕಾಮಗಾರಿಯೂ ಟಾಟಾ ಪ್ರಾಜೆಕ್ಟ್ ಲಿಮಿಟೆಡ್ (ಟಿಪಿಎಲ್) ಮೂಲಕ ಸಿಕ್ಕಿದೆ. ಇದೂ ಪ್ರಭು ಶ್ರೀರಾಮನದ್ದೇ ಕೃಪೆ.
– ರಾಜೇಶ್ ಆರ್. ಶೆಟ್ಟಿ ,
ಶಂಕರ್ ಎಲೆಕ್ಟ್ರಿಕಲ್ಸ್ ಸಂಸ್ಥಾಪಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.