ಎಲ್ಲವೂ ನನ್ನೂರು ಎಲ್ಲರೂ ನನ್ನೋರು: ಆರ್ಚ್ ಬಿಷಪ್ ಡಾ| ಮೊರಾಸ್
Team Udayavani, Dec 6, 2017, 9:50 AM IST
ಜನಸೇವೆ, ಶಿಕ್ಷಣ, ಆರೋಗ್ಯ ವಲಯಗಳಲ್ಲಿ ತಮ್ಮ ನಿಸ್ವಾರ್ಥ ಕಾಯಕದಿಂದಲೇ ಗುರುತಿಸಿಕೊಂಡವರು ಕರ್ನಾಟಕ ಕೆಥೋಲಿಕ್ ಕ್ರೈಸ್ತ ಧರ್ಮಪ್ರಾಂತದ ಮಹಾಧರ್ಮಾಧ್ಯಕ್ಷರಾದ ಬೆಂಗಳೂರಿನ ಆರ್ಚ್ ಬಿಷಪ್ ಡಾ| ಬರ್ನಾರ್ಡ್ ಮೊರಾಸ್ ಅವರು. ಕರ್ನಾಟಕದ ಧರ್ಮಪ್ರಾಂತ ಮತ್ತು ವಿಶೇಷವಾಗಿ ಭಾರತೀಯ ಕೆಥೋಲಿಕ್ ಸಮುದಾಯದಲ್ಲಿ ಡಾ| ಮೊರಾಸ್‌ಅವರ ಹೆಸರು ಸ್ಥಾಯಿ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಪುಟ್ಟ ಊರು ಕುಪ್ಪೆಪದವಿನಿಂದ ರೋಮ್‌ವರೆಗೆ ಕ್ರೈಸ್ತ ಧರ್ಮದ ಧಾರ್ಮಿಕ, ಸಾಮಾಜಿಕ ಕೆಲಸಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಡಾ| ಮೊರಾಸ್ ಗುರುದೀಕ್ಷೆ ಪಡೆದು ಡಿ. 6ಕ್ಕೆ 50 ವರ್ಷಗಳಾಗುತ್ತಿವೆ. ಈ ಸುವರ್ಣ ವರ್ಷಗಳ ಪಯಣದತ್ತ ತಿರುಗಿನೋಡಿ ಡಾ| ಮೊರಾಸ್ ಹೇಳುವುದಿಷ್ಟು…
ನಾನು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಸುಮಾರು 35 ಕಿಲೋಮೀಟರ್ ದೂರವಿರುವ ಕುಪ್ಪೆಪದವು ಎನ್ನುವ ಪುಟ್ಟ ಗ್ರಾಮ ದಲ್ಲಿ. ಆ ಸಮಯದಲ್ಲಿ ಅದು ಅತ್ಯಂತ ಹಿಂದುಳಿದ ಹಳ್ಳಿಯಾಗಿತ್ತು. ತಂದೆ-ತಾಯಿಗೆ ನಾವು 9 ಜನ ಮಕ್ಕಳು. ಬಡತನದಲ್ಲೇ ಬೆಳೆದೆವು. ಮೊದಲು ಅಪ್ಪ-ಅಮ್ಮ ಸಾಗುವಳಿ ಮಾಡುತ್ತಿದ್ದರಾದರೂ ನಂತರ ಕಿರಾಣಿ ಅಂಗಡಿ ತೆರೆದರು. ತಾಯಿ ಮೊಂಥಿನಾ ಮೊರಾಸ್, ತಂದೆ ಫ್ರಾನ್ಸಿಸ್ ಮೊರಾಸ್. ಆದರೆ ಅವರಿಗೆ ಅಲೆಕ್ಸಾಂಡರ್ ಎಂಬ ಇನ್ನೊಂದು ಹೆಸರಿತ್ತಾದ್ದರಿಂದ, ಊರಿನ ಜನರೆಲ್ಲ ಅವರನ್ನು “ಅಲ್ಲೂ’ ಮೊರಾಸ್ ಎನ್ನುತ್ತಿದ್ದರು. ಈಗಲೂ ಅಷ್ಟೆ, ನಾನು ಹಳ್ಳಿಗೆ ಹೋದಾಗಲೆಲ್ಲ ಕೆಲವು ಹಿರಿಯರು “ನೀನು ಅಲ್ಲೂ ಮೊರಾಸ್ ಮಗನಲ್ಲವಾ?’ ಅಂತಲೇ ಕೇಳುತ್ತಾರೆ ನೋಡಿ!
ಆ ಸಮಯದಲ್ಲಿ ಕುಪ್ಪೆಪದವಿನಲ್ಲಿ ಚರ್ಚ್ ಇರಲಿಲ್ಲ. ಹೀಗಾಗಿ ರವಿವಾರದ ಪ್ರಾರ್ಥನೆಗೆ ನಮ್ಮೂರಿಂದ 10 ಕಿ.ಮೀ. ದೂರವಿದ್ದ ಹೊಸಬೆಟ್ಟು ಚರ್ಚ್‌ಗೆ ನಡೆದುಕೊಂಡೇ ಹೋಗಬೇಕಿತ್ತು. ಟಿಪ್ಪುವಿನ ಕಾಲದಲ್ಲಿ ಕರಾವಳಿ ಭಾಗದ ಸುಮಾರು 40 ಚರ್ಚ್ ಗಳನ್ನು ನಾಶ ಮಾಡಲಾಗಿತ್ತಂತೆ. ಆದರೆ ಹೊಸಬೆಟ್ಟುಚರ್ಚ್‌ಗೆ ಹೋಗುವ ಮಾರ್ಗ ದುರ್ಗಮವಾಗಿತ್ತಾದ್ದ ರಿಂದ ಅದು ಸುರಕ್ಷಿತವಾಗಿ ಉಳಿದುಬಿಟ್ಟಿತ್ತು. 300 ವರ್ಷಗಳ ಇತಿಹಾಸವಿರುವ ಚರ್ಚ್ ಅದು. ಆಗ ಬಸ್‌ಗಳಿರಲಿ, ರಸ್ತೆಗಳೇ ಇರಲಿಲ್ಲ. ಕಾಲ್ನಡಿಗೆ ಯಲ್ಲೇ ಗದ್ದೆ- ಹಳ್ಳಕೊಳ್ಳ ದಾಟಿ ಚರ್ಚ್ ತಲುಪಲು ಎರಡೂವರೆ ಗಂಟೆಯಾಗುತ್ತಿತ್ತು. ಅಂದರೆ ಹೋಗಿ ಬರುವುದಕ್ಕೇ 5 ತಾಸಾಗುತ್ತಿತ್ತು, ಆದರೆ ತ್ರಾಸಾಗು ತ್ತಿ ರಲಿಲ್ಲ. ಏಕೆಂದರೆ ಆಗ ನಾವು ಗುಂಪಾಗಿ ಹೋಗುತ್ತಿದ್ದೆವು; ಗೆಳೆಯರೆಲ್ಲರೂ ಸೇರಿ ಹರಟೆ ಹೊಡೆಯುತ್ತಾ, ನಗುನಗುತ್ತಾ…
ಸ್ಫೂರ್ತಿಯಾದರು ಹಿರಿಯರು
ನನಗೆ ಧಾರ್ಮಿಕತೆಯತ್ತ ಒಲವು ಮೂಡಲು, ಈ ಹಾದಿ ಯಲ್ಲೇ ನಾನು ಸಾಗಲು ನಿರ್ಧರಿಸಲು ಹಿಂದೆ ಫಾದರ್ ಜಾನ್ ಪಿಂಟೋ ಎನ್ನುವ ಗುರುಗಳೇ ಮುಖ್ಯ ಪ್ರೇರಣೆ. ಹೊಸಬೆಟ್ಟುವಿನ ಹೋಲಿ ಕ್ರಾಸ್ ಚರ್ಚ್‌ನಲ್ಲಿರುತ್ತಿದ್ದ ಅವರು, ನಮ್ಮ ವಯಸ್ಸಿನ ಮಕ್ಕಳನ್ನೆಲ್ಲ ತುಂಬಾ ಅಕ್ಕರೆಯಿಂದ ಮಾತನಾಡಿಸುತ್ತಿದ್ದರು. “”ನೀವೆಲ್ಲ ಶಾಲೆಗೆ ಹೋಗಿ ವಿದ್ಯಾವಂತರಾಗಬೇಕು. ಸಾಧ್ಯವಾದರೆ ದೇವರ ಕರೆಗೆ ಓಗೊಟ್ಟು ಜನ ಸೇವೆ ಮಾಡಲು ಮುಂದೆ ಬರಬೇಕು” ಎಂದು ಹೇಳುತ್ತಿದ್ದರು. ಕಿತ್ತುತಿನ್ನುವ ಬಡತನವಿದ್ದ ನಮ್ಮ ಮನೆಯಲ್ಲಿ ಆಧ್ಯಾತ್ಮಿಕ ಶ್ರೀಮಂತಿಕೆ ಯಿತ್ತು. ನನ್ನ ತಂದೆ-ತಾಯಿ ಶ್ರದ್ಧಾವಂತ ಕ್ರಿಶ್ಚಿಯನ್ನರಾಗಿದ್ದರು. ದೈವನಿಷ್ಠೆ ಎಷ್ಟಿತ್ತೆಂದರೆ ಮನೆಯಲ್ಲಿ ಬೆಳಗ್ಗೆ-ಮಧ್ಯಾಹ್ನ ಮತ್ತು ರಾತ್ರಿಯ ಪ್ರಾರ್ಥನೆ ಎಂದಿಗೂ ತಪ್ಪಿದ್ದೇ ಇಲ್ಲ. ಇವೆಲ್ಲದರಿಂದಾಗಿ ಧರ್ಮದ ಜತೆಗೆ ಶಿಕ್ಷಣವೂ ಮುಖ್ಯ ಎನ್ನುವ ಅರಿವು ನನಗೆ ಬಹಳ ಬೇಗನೇ ಆಯಿತು.
ಆಗ ನಮ್ಮ ಹಳ್ಳಿಯಲ್ಲಿ 5ನೇ ಕ್ಲಾಸ್‌ವರೆಗೆ ಮಾತ್ರ ಸರಕಾರಿ ಶಾಲೆಯಿತ್ತು. ಹೀಗಾಗಿ ನಾನು ಓದು ಮುಂದುವರಿಸಲು ಮಂಗಳೂರಿಗೆ ಬರಬೇಕಾ ಯಿತು. ಸೈಂಟ್ ಅಲೋಶಿಯಸ್ ಕಾಲೇಜಿಗೆ ಬಂದು ಎಸ್‌ಎಸ್‌ಎಲ್‌ಸಿ ಓದಿದೆ. ಆ ಸಮಯದಲ್ಲಿ ನಮ್ಮೂರಲ್ಲಿ ಎಸ್‌ಎಸ್‌ಎಲ್‌ಸಿವರೆಗೂ ಓದಿದವ ರೆಂದರೆ ನಾನು, ಮತ್ತೂಬ್ಬ ಗೆಳೆಯನಷ್ಟೆ (ನನಗೆ ಅವರ ಹೆಸರು ನೆನಪಿಲ್ಲ). ಎಸ್‌ಎಸ್‌ಎಲ್‌ಸಿ ಅನಂತರ, ಅಂದರೆ 1959ರಲ್ಲಿ ಮಂಗಳೂರಿನ ಸೇಂಟ್ ಜೋಸೆಫ್ ಸೆಮಿನರಿ ಸೇರಿಕೊಂಡು ಒಂಬತ್ತು ವರ್ಷ ಗುರುದೀಕ್ಷೆ ತರಬೇತಿ ಪಡೆದೆ. ಸರಿಯಾಗಿ 50 ವರ್ಷಗಳ ಹಿಂದೆ, ಅಂದರೆ 1967ರ ಡಿಸೆಂಬರ್ 6ರಂದು ಮಂಗಳೂರಿನ ಬಿಷಪ್ ಬೆಸಿಲ್ ನಮ್ಮ ಹಳ್ಳಿಗೇ ಬಂದು ನನಗೆ ಗುರುದೀಕ್ಷೆ ಕೊಟ್ಟರು. ದೀಕ್ಷೆ ಸ್ವೀಕರಿಸಿದವರು ಬಿಷಪ್ಪರು ಎಲ್ಲಿಗೆ ಕಳುಹಿಸುತ್ತಾರೋ ಅಲ್ಲಿಗೆ ತೆರಳಿ ಸೇವೆ ಸಲ್ಲಿಸಬೇಕೆಂಬ ನಿಯಮ ನಮ್ಮಲ್ಲಿದೆ. ದೀಕ್ಷೆ ಪಡೆದು ಮನೆಯಿಂದ ಹೊರಟವನಿಗೆ ಜಗತ್ತೇ ಮನೆಯಾಯಿತು.
ಮನೆ ಎಲ್ಲಿದೆ?
ಧರ್ಮ ಕ್ಷೇತ್ರದಲ್ಲಿ ಕಾನೂನಿನ ಪ್ರಕಾರ 75ನೇ ವರ್ಷವಾದ ಮೇಲೆ ಒಬ್ಬ ಗುರುಗಳು, ಇಲ್ಲವೇ ಬಿಷಪ್ಪರು ನಿವೃತ್ತಿಯಾಗಬೇಕು ಎಂಬ ನಿಯಮವಿದೆ. ನಿವೃತ್ತಿಯಾದ ಮೇಲೆ ದೇವರ ದಯೆಯಿಂದ ಆರೋಗ್ಯ ಚೆನ್ನಾ ಗಿದ್ದರೆ ಸೇವೆ ಸಲ್ಲಿಸಬಹುದು. ಆಗದು ಎಂದರೆ ಪ್ರತಿ ಕ್ಷೇತ್ರದಲ್ಲೂ ಹೇಗಿದ್ದರೂ ರಿಟೈರ್ಮೆಂಟ್ ಹೋಂಗಳಿರುತ್ತವೆ. ನಮ್ಮ ಖರ್ಚುವೆಚ್ಚ ಗಳನ್ನೆಲ್ಲ ಅವರೇ ನೋಡಿಕೊಳ್ಳುತ್ತಾರೆ. ಹಾಗೆ ನೋಡಿದರೆ ನಾನಾಗಲೇ 75 ವಸಂತಗಳನ್ನು ದಾಟಿ 1 ವರ್ಷ 3 ತಿಂಗಳಾಗಿವೆ. ಟರ್ಮ್ ಮುಗಿ ಯುವ ಮೂರು ತಿಂಗಳು ಮೊದಲೇ “ಸೇವಾವಧಿ ಮುಗಿದಿದೆ’ ಎಂದು ರೋಮ್‌ಗೆ ಪತ್ರ ಬರೆ ದಿದ್ದೇವೆ. ಆದರೆ ಅಲ್ಲಿಂದ “”ನಾವು ಹೇಳುವ ವರೆಗೂ ನೀವೇ ಜವಾಬ್ದಾರಿ ಮುಂದು ವರಿಸಿ” ಎಂಬ ಉತ್ತರ ಬಂದಿದೆ. ಹೀಗಾಗಿ ಅಲ್ಲಿಯ ವರೆಗೂ ಈ ಜವಾಬ್ದಾರಿ ಯನ್ನು ನಿರ್ವ ಹಿಸುತ್ತೇನೆ. ಮುಂದೆ ಏನಾಗು ತ್ತದೋ ನೋಡೋಣ…
ನಿವೃತ್ತಿ ಎಂದಾಕ್ಷಣ ಎಲ್ಲರೂ “ನಿಮ್ಮೂರು ಕುಪ್ಪೆಪದವಿಗೆ ವಾಪಸ್ ಹೋಗುತ್ತೀರಾ? ನಿಮ್ಮ ಕುಟುಂಬದವರ ಜತೆ ಇರುತ್ತೀರಾ?’ ಎಂದು ಕೇಳುತ್ತಾರೆ. ಆದರೆ ನಾನು ಹೇಳುವು ದಿಷ್ಟೆ- ನನ್ನೂರು ಅನ್ನುವುದು ಎಲ್ಲಿದೆ? ಸೇವೆಗೆಂದು ಎಲ್ಲವನ್ನೂ ತೊರೆದು ಬಂದ ದ್ದಾಯಿತು. ಮನೆ ಬಿಟ್ಟ ಮೇಲೆ ನನಗೆ ಒಂದು ಮನೆ ಅಂತ ಇಲ್ಲ. ಎಲ್ಲಾ ಮನೆಗಳೂ ನನ್ನ ಮನೆಗಳೇ, ಎಲ್ಲರೂ ನನ್ನ ಮಕ್ಕಳೇ, ಎಲ್ಲರೂ ನನ್ನ ಮನೆಯವರೇ, ಅಲ್ಲವೇನು?
ಪ್ರೀತಿಯ ಪಾಠ
ಮಂಗಳೂರಿನ ಜೆಪ್ಪುವಿನಲ್ಲಿರುವ ಸೈಂಟ್ ಆ್ಯಂಟನೀಸ್ ಚಾರಿಟೆಬಲ್ ಇನ್ಸ್‌ಟಿ ಟ್ಯೂಷನ್‌ಗೆ ನನ್ನ ಮೊದಲ ಪೋಸ್ಟಿಂಗ್ ಆಯಿತು. ಅಲ್ಲಿ ಅನಾಥ ಮಕ್ಕಳಿದ್ದರು, ನೂರಾರು ದೈಹಿಕ-ಮಾನಸಿಕ ರೋಗಿಗಳಿದ್ದರು. ಇವರಿಗೆಲ್ಲ ಉಚಿತ ಸೇವೆ ಒದಗಿಸಲಾಗುತ್ತಿತ್ತು. ನಿಜ ಹೇಳಬೇಕೆಂದರೆ ಅನಾಥರು ಮತ್ತು ರೋಗಿಗಳ ಬಗ್ಗೆ ನನಗೆ ಪ್ರೀತಿ-ವಾತ್ಸಲ್ಯ ಉದ್ಭವಿಸಿದ್ದೇ ಅಲ್ಲಿ. ಕೆಲವರಂತೂ ತಮ್ಮ 1 ತಿಂಗಳ ಮಗುವನ್ನು ಗೇಟ್ ಹೊರಗೆ ಬಿಟ್ಟು ಹೋಗಿಬಿಡುತ್ತಿದ್ದರು. ಅವನ್ನು ಎತ್ತಿಕೊಂಡು ಬಂದು ಸಾಕುತ್ತಿದ್ದೆವು. ಇನ್ನು ಅಲ್ಲಿದ್ದ 600 ಜನರಲ್ಲಿ ಸುಮಾರು 90 ಪ್ರತಿಶತ ಮಂದಿ ಸಂಪೂರ್ಣವಾಗಿ ಹಾಸಿಗೆ ಹಿಡಿದವರಿದ್ದರು. ಆ ಸಮಯದಲ್ಲಿ ಮಂಗಳೂರು ಪ್ರಾಂತ್ಯದಲ್ಲಿ ಫೈಲೇರಿಯಾಸಿಸ್ ಹೆಚ್ಚಾಗಿ ಕಾಡುತ್ತಿತ್ತು. ಆ ರೋಗಿಗಳ ಸೇವೆಯನ್ನೂ ಮಾಡಿದ್ದೇನೆ.
ಜೆಪ್ಪುವಿಂದ ನನಗೆ ಎರಡನೇ ಪೋಸ್ಟಿಂಗ್ ಆದದ್ದು ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ. ಅಲ್ಲಿ 8 ವರ್ಷ ಇದ್ದೆ. ಆ ಸಮಯದಲ್ಲಿ ಮಂಗಳೂರಿನಲ್ಲಿ ಕೆಲಸಗಾರರ ಕೊರತೆಯಿತ್ತು. ಹೀಗಾಗಿ ಈ ಆಸ್ಪತ್ರೆಯಲ್ಲಿ ಬಹಳಷ್ಟು ಜವಾಬ್ದಾರಿಗಳನ್ನು ನಾನು ನೋಡಿಕೊಳ್ಳಬೇಕಾಯಿತು. ವೈದ್ಯರು, ನರ್ಸ್‌ಗಳೊಂದಿಗೆ ವ್ಯವಹರಿಸುವ ಚಾಕಚಕ್ಯತೆ ಅಲ್ಲಿಂದಲೇ ಬಂದದ್ದು. ನಿಜಕ್ಕೂ ಅತ್ಯಂತ ಸವಾಲಿನಿಂದ ಕೂಡಿದ ವರ್ಷಗಳವು. ಬಹುಶಃ ನಾನು ಅಡ್ಮಿನಿಸ್ಟ್ರೇಷನ್‌ನ ಒಳಹೊರಗನ್ನು ಅಲ್ಲಿಂದಲೇ ಕಲಿತಿರಬೇಕು. ಒಟ್ಟಿನಲ್ಲಿ ಗುರುದೀಕ್ಷೆ ಪಡೆದ ಈ 50 ವರ್ಷಗಳಲ್ಲಿ 28 ವರ್ಷಗಳನ್ನು ನಾನು ರೋಗಿಗಳ ಸೇವೆಯಲ್ಲಿ ಕಳೆದಿದ್ದೇನೆ ಎನ್ನುವ ತೃಪ್ತಿಯಿದೆ.
ನಡೆದು ಬಂದ ಹಾದಿ
1941ರ ಆ.10ರಂದು ಫ್ರಾನ್ಸಿಸ್ ಮೊರಾಸ್-ಮೊಂಥಿನಾ ಮೊರಾಸ್ ದಂಪತಿಗೆ ಜನನ.
1967ರ ಡಿ.6ರಂದು ಧರ್ಮಗುರುಗಳಾಗಿ ದೀಕ್ಷೆ
ಕರ್ನಾಟಕ ವಿವಿಯಲ್ಲಿ ಪದವಿ, ಹೊಸದಿಲ್ಲಿಯಲ್ಲಿ ಆಸ್ಪತ್ರೆ ಆಡಳಿತದಲ್ಲಿ ಡಿಪ್ಲೊಮಾ, ಗ್ರಾಮೀಣ ವೈದ್ಯಕೀಯ ಸೇವೆ ಕುರಿತ ಡಿಪ್ಲೊಮಾ ಕಲಿಕೆ
ಸೈಂಟ್ ಆ್ಯಂಟನಿ ಚಾರಿಟೇಬಲ್ ಸಂಸ್ಥೆಯ ಸಹಾಯಕ ನಿರ್ದೇಶಕರಾಗಿ ನಿಯುಕ್ತಿ, ಬಳಿಕ ಮಂಗಳೂರಿನ ಪ್ರಸಿದ್ಧ ಫಾದರ್ ಮುಲ್ಲರ್ ಚಾರಿ ಟೇಬಲ್ ಸಂಸ್ಥೆಯ ಸಹಾಯಕ ನಿರ್ದೇಶಕರಾಗಿ ಸೇವೆ. ಅಪ್ರತಿಮ ಸೇವೆ ಗಾಗಿ ಭಾರತೀಯ ಕೆಥೋಲಿಕ್ ಆಸ್ಪತ್ರೆಗಳ ಅಸೋಸಿಯೇಷನ್‌ನ ಕಾರ್ಯ ನಿರ್ವಾ ಹಕ ನಿರ್ದೇಶಕ ಸ್ಥಾನ. 1980ರಲ್ಲಿ ಬೆಂಗಳೂರಿನ ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ನಿಯುಕ್ತಿ
1996ರ ಡಿ.31ರಂದು ಬೆಳಗಾವಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಆಯ್ಕೆ. 2004ರಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ಆಗಿ ನಿಯುಕ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.