ಕೂಡ್ಗಿ ವಿದ್ಯುತ್ ಪಂಜಾಬಿಗೆ ವಿನಿಮಯ: ಇಂಧನ ಇಲಾಖೆಯಿಂದ 500 ಕೋಟಿ ರೂ. ಉಳಿತಾಯ
Team Udayavani, Jul 9, 2022, 5:27 PM IST
ಬೆಂಗಳೂರು : ಕೂಡ್ಗಿ ವಿದ್ಯುತ್ ಸ್ಥಾವರದಿಂದ ರಾಜ್ಯಕ್ಕೆ ಹಂಚಿಕೆಯಾದ ವಿದ್ಯುತ್ ನ್ನು ಪಂಜಾಬ್ ರಾಜ್ಯಕ್ಕೆ ವರ್ಗಾಯಿಸುವ ಮೂಲಕ ಸುಮಾರು 500 ಕೋಟಿ ರೂ. ನಿಗದಿತ ಶುಲ್ಕ ಉಳಿತಾಯ ಮಾಡುವಲ್ಲಿ ಇಂಧನ ಇಲಾಖೆ ಯಶಸ್ವಿಯಾಗಿದೆ.
ಕೂಡ್ಗಿ ವಿದ್ಯುತ್ ಸ್ಥಾವರದಿಂದ ರಾಜ್ಯಕ್ಕೆ ಹಂಚಿಯಾದ ವಿದ್ಯುತ್ ಬಳಕೆ ಮಳೆಗಾಲದಲ್ಲಿ ಅಗತ್ಯವಿಲ್ಲ ಎಂದು ಮೊದಲೇ ಗ್ರಹಿಸಿದ್ದ ಇಂಧನ ಇಲಾಖೆ ರಾಜ್ಯದ ಪಾಲನ್ನು ಅನ್ಯ ರಾಜ್ಯಗಳಿಗೆ ವಿನಿಮಯ ಮಾಡಲು ಅವಕಾಶ ಕೊಡಿ ಎಂದು ಈ ಮೊದಲೇ ಕೇಂದ್ರ ಸರಕಾರಕ್ಕೆ ಪತ್ರ ಬರೆದಿತ್ತು. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದರಿಂದ ಸುಮಾರು 20 ದಿನಗಳವರೆಗೆ ಕೂಡ್ಗಿ ವಿದ್ಯುತ್ ವರ್ಗಾವಣೆ ಕಾರ್ಯವನ್ನು ರಾಷ್ಟ್ರೀಯ ಸಂಪನ್ಮೂಲ ವಿನಿಮಯ ಒಪ್ಪಂದ ನೀತಿ ಅನ್ವಯ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ವಿ.ಸುನೀಲ್ ಕುಮಾರ್ ಇಂಧನ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜು ಪ್ರಕ್ರಿಯೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವುದರ ಜತೆಗೆ ವೆಚ್ಚ ಕಡಿತಕ್ಕೂ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮುಂಚಿತವಾಗಿಯೇ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಹಂಚಿಕೆಯಾದ ವಿದ್ಯುತ್ ವಿನಿಮಯಕ್ಕೆ ಅನುಮತಿ ಕೋರಿದ್ದರು. ಇದರಿಂದಾಗಿ ನಿಗದಿತ ಶುಲ್ಕದಲ್ಲಿ 500 ಕೋಟಿಗೂ ಹೆಚ್ಚು ಉಳಿತಾಯ ಮಾಡಿದಂತಾಗಿದೆ. ಹಿಂದಿನ ಸರಕಾರದ ಅವಧಿಯಲ್ಲಿ ಇಂಥ ವಿಚಾರಗಳಿಗೆ ಆದ್ಯತೆ ನೀಡದೇ ಇದ್ದುದರಿಂದ ನಿಗದಿತ ಉತ್ಪಾದನಾ ಶುಲ್ಕದ ಹೊರೆಯನ್ನು ಅನಗತ್ಯವಾಗಿ ರಾಜ್ಯ ಭರಿಸಬೇಕಾಗಿತ್ತು.
ಇಲಾಖೆಯ ಈ ಕ್ರಮವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ಶ್ಲಾಘಿಸಿದ್ದಾರೆ.
ಬೇಡಿಕೆ ಇಳಿಕೆ
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಇದರಿಂದ ವಿದ್ಯುತ್ ಬೇಡಿಕೆಯಲ್ಲಿ ಇಳಿಕೆಯಾಗಿದೆ. ಜಲಾನಯನ ಪ್ರದೇಶ ಮತ್ತು ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನಾ ಕಾರ್ಯವನ್ನು ಕಾಯ್ದಿಟ್ಟು ಸ್ಥಗಿತಗೊಳಿಸಲಾಗಿದೆ ( ಆರ್ ಎಸ್ ಡಿ ). ಕೆಪಿಸಿಎಲ್ ಥರ್ಮಲ್ ಪ್ಲಾಂಟ್‌ಗಳಲ್ಲಿ ಕಲ್ಲಿದ್ದಲನ್ನು ಸಂರಕ್ಷಿಸಲಾಗುತ್ತಿದೆ.
ರಾಜ್ಯದಲ್ಲಿ ಈಗ ಶೇ.85ರಷ್ಟು ಹಸಿರು ಶಕ್ತಿಯೊಂದಿಗೆ ಗ್ರಿಡ್ ಅನ್ನು ನಡೆಸಲಾಗುತ್ತಿದೆ. ಶರಾವತಿಯ ಒಳಹರಿವು 57,000 ಕ್ಯೂಸೆಕ್, ಸೂಪಾ 40,000 ಕ್ಯುಸೆಕ್ ಮತ್ತು ಮಾಣಿ 10,000 ಕ್ಯೂಸೆಕ್ ತಲುಪಿದೆ. ಕದ್ರಾ, ಕೊಡಸಹಳ್ಳಿ, ಗೇರುಸೊಪ್ಪಾ, ವಾರಾಹಿ, ಎಸ್‌ಜಿಎಸ್ ಮತ್ತು ಎನ್‌ಪಿಎಚ್ ಘಟಕಗಳು ಕಡ್ಡಾಯವಾಗಿ (1000ಮೆಗಾವ್ಯಾಟ್) ಚಾಲನೆಯಲ್ಲಿವೆ.
KPCL ಥರ್ಮಲ್ ಪ್ಲಾಂಟ್‌ಗಳಲ್ಲಿ ಒಟ್ಟು ಕಲ್ಲಿದ್ದಲು ಸಂಗ್ರಹವು 3,00000MT ಯಷ್ಟು ಇದೆ. ಇಂಧನ ಇಲಾಖೆಯ ಈ ಮುಂಧೋರಣೆಯ ಬಗ್ಗೆ ಆಡಳಿತಾತ್ಮಕವಾಗಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಇಂಧನ ಇಲಾಖೆಯ ಮುಂಜಾಗ್ರತೆ ಹಾಗೂ ಯೋಜನಾ ಬದ್ಧ ಕ್ರಮದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ.ರಾಷ್ಟ್ರೀಯ ಸಂಪನ್ಮೂಲ ವಿನಿಮಯ ನೀತಿಯ ಪ್ರಕಾರ ಇದೊಂದು ಮಾದರಿ ಹೆಜ್ಜೆಯಾಗಿದೆ. ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜಿನ ಜತೆಗೆ ಅನಪೇಕ್ಷಿತ ವೆಚ್ಚ ಕಡಿಮೆ ಮಾಡುವುದು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಉದ್ದೇಶವಾಗಿದೆ.
ವಿ.ಸುನೀಲ್‌ಕುಮಾರ್, ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.