ನಕಲಿ ಗೌರವ ಡಾಕ್ಟರೇಟ್ ದಂಧೆ: ಕೇಂದ್ರಕ್ಕೆ ನೋಟಿಸ್
Team Udayavani, Nov 29, 2019, 3:03 AM IST
ಬೆಂಗಳೂರು: ನಕಲಿ ಗೌರವ ಡಾಕ್ಟರೇಟ್ ದಂಧೆ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ನಿರ್ದೇಶ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಗೊಳಿಸಿದೆ.
ಈ ಸಂಬಂಧ ಮಂಡ್ಯ ಜಿಲ್ಲೆ ಮದ್ದೂರಿನ ಸಿ.ಎಚ್. ಸುರೇಶ್ ಸಲ್ಲಿಸಿರುವ ಪಿಐಎಲ್‌ನ ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠ ನೋಟಿಸ್ ಜಾರಿಗೆ ಆದೇಶಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಾನ್ಯತೆ ಇಲ್ಲದ ನಕಲಿ ವಿಶ್ವವಿದ್ಯಾಲಯಗಳು ಅರ್ಹತೆ ಇಲ್ಲದಿದ್ದರೂ ಹಣ ಪಡೆದು ಗೌರವ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿವೆ. ಇದರಿಂದ ಗೌರವ ಡಾಕ್ಟರೇಟ್ ಘನತೆ ಕುಂದುತ್ತಿದೆ. ನಿಜ ವಾಗಿಯೂ ಗೌರವ ಡಾಕ್ಟರೇಟ್ ಅರ್ಹರಾಗಿರುವ ಬಗ್ಗೆಯೇ ಅನುಮಾನ ಮೂಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಹಲವು ವಿ.ವಿ.ಗಳು ತಮ್ಮ ಮಾನ್ಯತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಮತ್ತು ಅಂಥ ಸಂಸ್ಥೆಗಳಿಂದ ಡಾಕ್ಟರೇಟ್ ಪಡೆದವರು ತಮ್ಮ ಹೆಸರಿನಲ್ಲಿ ಮುಂದೆ ಡಾಕ್ಟರೇಟ್ ಎಂದು ಹಾಕಿಕೊಂಡು ಆ ಗೌರವವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಅಥವಾ ಯುಜಿಸಿ ಅಂಥ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಬೆಂಗಳೂರಿನ ಇಂಡಿಯನ್ ವರ್ಚುಯಲ್ ಅಕಾಡೆಮಿ ಫಾರ್ ಪೀಸ್ ಆ್ಯಂಡ್ ಎಜುಕೇಷನ್ ಸಂಸ್ಥೆ “ಮೊಟ್ಟೆ ಮಂಜ’ ಎಂಬಾತನಿಗೆ ಗೌರವ ಡಾಕ್ಟರೇಟ್ ನೀಡಿರುವುದನ್ನು ಅರ್ಜಿಯಲ್ಲಿ ಉಲ್ಲೇಖೀಸಲಾಗಿದ್ದು, ಹಣ ಮಾಡುವ ಏಕೈಕ ಉದ್ದೇಶದಿಂದ ನಕಲಿ ವಿ.ವಿ.ಗಳು ಅಪರಾಧ ಹಿನ್ನೆಲೆಯುಳ್ಳವರು ಮತ್ತು ಅನಕ್ಷರಸ್ಥರಿಗೂ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿದೆ. ಹಾಗಾಗಿ ಆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶ ನೀಡಬೇಕು ಮತ್ತು ಗೌರವ ಡಾಕ್ಟರೇಟ್ ನೀಡಲು ನಿಗದಿತ ಮಾನದಂಡಗಳನ್ನು ರೂಪಿಸಬೇಕು ಎಂದು ಅರ್ಜಿ ದಾರರು ಕೋರಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.