ಸ್ವತಂತ್ರ ಧರ್ಮ ಹೋರಾಟ ಕಾಂಗ್ರೆಸ್ ಪ್ರಾಯೋಜಿತ
Team Udayavani, Nov 7, 2017, 12:33 PM IST
ಹುಬ್ಬಳ್ಳಿ: “ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವಾಗುತ್ತಿದೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
“ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ಮಾಡುವವರು ಈ ಸಮಾಜದವರಿಗೆ ಸೌಲಭ್ಯ ದೊರೆಯಬೇಕೆಂಬ ನಿಜವಾದ ಕಾಳಜಿ ಹೊಂದಿದ್ದರೆ ಅಲ್ಪಸಂಖ್ಯಾತರ ಗುರುತಿಗಾಗಿ (ಟ್ಯಾಗ್) ಪ್ರಾಮಾಣಿಕ ಹೋರಾಟ ಮಾಡಲಿ. ಅಲ್ಪಸಂಖ್ಯಾತರೆಂದು ಗುರುತಿಸುವಂತೆ ಮುಖ್ಯಮಂತ್ರಿ ಬಳಿ ಮನವಿ ಸಲ್ಲಿಸಲಿ’ ಎಂದರು.
ಲಿಂಗಾಯತರಿಗೆ ಸಿಎಂ ಅಲ್ಪಸಂಖ್ಯಾತರ ಟ್ಯಾಗ್ ಕೊಡಲು ಮುಂದಾದರೆ, ಇನ್ನುಳಿದ ಅಲ್ಪಸಂಖ್ಯಾತರು ಅವರನ್ನು ಬಿಡಲ್ಲ. ಹೀಗಾಗಿ ಅವರು ಇವರಿಗೆ ತಮ್ಮ ಮನೆಯ ಬಳಿ ಬಿಟ್ಟುಕೊಳ್ಳದೆ ಹೊರಗೆ ಹಾಕುತ್ತಾರೆ. ಪ್ರಾಮಾಣಿಕ ಯತ್ನ ನಡೆದರೆ ನಾವು ಸಹ ಬೆಂಬಲ ಕೊಡುತ್ತೇವೆ. ಹೋರಾಟಗಾರರು ತೋರಿಕೆಯ ನಾಟಕ ಆಡುವುದು ಬಿಡಲಿ ಎಂದರು.
ಹೋರಾಟ ಮಾಡುವವರು ರಾಜಕೀಯ ಗಡುವು ಹಾಕುತ್ತಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣದಲ್ಲಿ ಲಿಂಗಾಯತವನ್ನು ಹಿಂದುಳಿದ ವರ್ಗದಲ್ಲಿ ಸೇರಿಸಿದ್ದಾರೆ. ರಾಜ್ಯ ಸರಕಾರ ಸಹಿತ ಲಿಂಗಾಯತ ಧರ್ಮವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಘೋಷಣೆ ಮಾಡಲಿ. ಇದು ಸಿಎಂ ಕೈಯಲ್ಲಿಯೇ ಇದೆ. ಇದನ್ನೆಲ್ಲ ಸಚಿವರಾದ ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ ಸಿಎಂಗೆ ಹೇಳಿ ಮಾಡಬಹುದಲ್ಲ. ಅದನ್ನೆಲ್ಲ ಬಿಟ್ಟು ಸಮಾಜ ಒಡೆಯುವ ಕಾರ್ಯವನ್ನು ಸರಕಾರವು ಮಾಡುತ್ತಿದೆ ಎಂದರು.
ಯಾರ ವಿರುದ್ಧ ಹೋರಾಟ: ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ಮಾಡುವವರು ವೈಯಕ್ತಿಕವಾಗಿ ಮಾಡುತ್ತಿದ್ದಾರೆ. ಪ್ರಭಾಕರ ಕೋರೆ ಅವರಿಗೆ ರಾಜೀನಾಮೆ ಕೊಟ್ಟು ಹೋರಾಟಕ್ಕೆ ಬನ್ನಿ ಎಂದು ಸಚಿವ ಎಂ.ಬಿ. ಪಾಟೀಲ ಹೇಳುತ್ತಿದ್ದಾರೆ. ಹಾಗಾದರೆ ಸಚಿವರು ಜಲಸಂಪನ್ಮೂಲ ಇಲಾಖೆಯಲ್ಲಿ ವೈಫಲ್ಯ ತೋರಿದ್ದಾರೆ ಹಾಗಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆಯೇ?
ಇವರು ನಡೆಸುತ್ತಿರುವ ಹೋರಾಟ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿಯೋ, ಪ್ರಭಾಕರ ಕೋರೆ, ವಿರಕ್ತಮಠದ ಸ್ವಾಮಿಗಳು ಇಲ್ಲವೇ ಪಂಚ ಪೀಠಾಧೀಶರ ವಿರುದ್ಧವೋ? ಅವರ ಉದ್ದೇಶವಾದರೂ ಏನೆಂಬುದು ಗೊತ್ತಾಗುತ್ತಿಲ್ಲ. ಹೋರಾಟ ಮಾಡುವುದಾದರೆ ನೇರವಾಗಿ ಮಾಡಲಿ ಎಂದರು.
ಈ ಹೋರಾಟ ರಾಜಕೀಯ ಉದ್ದೇಶಕ್ಕಾಗಿ ವಿನಃ ಸಮಾಜದ ಉದ್ಧಾರಕ್ಕಾಗಿ ಅಲ್ಲ. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೆದುಳು ಕೆಲಸ ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಈ ಹೋರಾಟ ಮಾಡಲಾಗುತ್ತಿದೆ. ಸಮಾಜ ಒಡೆಯುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಸಿಎಂ: ಸಿಎಂ ಒಂದೆಡೆ ಮೌಡ್ಯತೆ ನಂಬಬಾರದು ಎನ್ನುತ್ತಾರೆ. ಇನ್ನೊಂದೆಡೆ ಆಣೆ ಪ್ರಮಾಣ ಮಾಡುತ್ತಾರೆ. ಇನ್ನೇನು ನಾನು ಅಧಿಕಾರಕ್ಕೆ ಬರಲ್ಲವೆಂಬುದು ಗೊತ್ತಾಗಿದೆ. ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ.ಇನ್ನು ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇದು ಸೂರ್ಯ-ಚಂದ್ರನಷ್ಟೇ ಸತ್ಯ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರ್ಯಾಲಿ ವಿಫಲಕ್ಕೆ ಕುತಂತ್ರ: ರಾಜ್ಯ ಸರಕಾರ ಬಿಜೆಪಿ ಹಮ್ಮಿಕೊಳ್ಳುವ ರ್ಯಾಲಿಗಳನ್ನು ವಿಫಲಗೊಳಿಸಲು ಎಲ್ಲ ಕುತಂತ್ರ ನಡೆಸಿದೆ. ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ರ್ಯಾಲಿ ಉದ್ಘಾಟನೆ ವೇಳೆ ಇದರಲ್ಲಿ ಪಾಲ್ಗೊಳ್ಳದಂತೆ ಪಕ್ಷದ ಕಾರ್ಯಕರ್ತರಿಗೆ ಎಲ್ಲ ಬಗೆಯ ಅಡೆತಡೆ ಮಾಡಿತು. ಪೊಲೀಸರ ಮೂಲಕ ಹಲವು ತೊಂದರೆ ನೀಡಿತು. ಆದರೂ ಇದರಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದರು.
ಅಲ್ಲಿನ ವ್ಯವಸ್ಥೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿತ್ತು ಅಷ್ಟೇ. ಪಕ್ಷದ ರ್ಯಾಲಿಗಳನ್ನು ವಿಫಲಗೊಳಿಸಲು ರಾಜ್ಯ ಸರಕಾರ ನೇರವಾಗಿ ಕೈವಾಡ ಮಾಡುತ್ತಿದೆ ಎಂದು ಆರೋಪಿಸಿದರು. ತುಮಕೂರ, ಹಾಸನ ಸೇರಿದಂತೆ ಎಲ್ಲೆಡೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಅಧಿವೇಶನದ ನಂತರ ನಾನು ಮತ್ತೆ ರ್ಯಾಲಿಯಲ್ಲಿ ಪಾಲ್ಗೊಳ್ಳುವೆ ಎಂದರು.
ಶ್ರೀಗಳ ವಿರುದ್ಧ ಎರಡು ದೂರು ದಾಖಲು
ನರಗುಂದ/ಮುದ್ದೇಬಿಹಾಳ: ಲಿಂಗಾಯತ ಪ್ರತ್ಯೇಕ ಧರ್ಮ ರ್ಯಾಲಿ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸಾxಮೀಜಿ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ನರಗುಂದ ಹಾಗೂ ಮುದ್ದೇಬಿಹಾಳದಲ್ಲಿ ಸೋಮವಾರ ವೀರಶೈವ ಲಿಂಗಾಯತ ಸಮಾಜದ ಪರವಾಗಿ ಎರಡು ಪ್ರತ್ಯೇಕ ದೂರು ದಾಖಲಾಗಿವೆ.
ಕೂಡಲಸಂಗಮ ಶ್ರೀಗಳು ಉದ್ದೇಶ ಪೂರ್ವಕವಾಗಿ ವೀರಶೈವ ಲಿಂಗಾಯತರ ಕುರಿತು ಕೀಳುಮಟ್ಟದ ಪದಗಳನ್ನು ಬಳಸಿದ್ದಾರೆ. ಸಮಾಜ ಬಾಂಧವರಿಗೆ ಅವಮಾನಿಸಿದ್ದಾರೆ. ಇದು ಸಮಾಜದಲ್ಲಿ ಅಶಾಂತಿ ಮೂಡಲು ಕಾರಣವಾಗಿದೆ ಎಂದು ಆರೋಪಿಸಿ ನರಗುಂದ ತಾಲೂಕು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಮುಖಂಡ ಚನ್ನಯ್ಯ ಸಂಗಳಮಠ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದೇ ವೇಳೆ ಮುದ್ದೇಬಿಹಾಳದಲ್ಲೂ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಢವಳಗಿ ಗದ್ದುಗೆಮಠದ ಘನಮಠೇಶ್ವರ ಸ್ವಾಮೀಜಿ ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಚಿವ ಪಾಟೀಲ ಖಾದಿಬಿಟ್ಟು ಕಾವಿ ಧರಿಸಲಿ: ನಡಹಳ್ಳಿ
ರಾಯಚೂರು: ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹಾಗೂ ಇತರರು ಖಾದಿ ಬಟ್ಟೆ ಬಿಟ್ಟು ಕಾವಿ ಧರಿಸಲು ಮುಂದಾಗಲಿ. ಈಗ ಅವರಿಗೆ ಲಿಂಗಾಯತ ಧರ್ಮ ಸ್ಥಾಪನೆ ನೆನಪಾಗಿದೆ. 60 ವರ್ಷಗಳ ಕಾಲ ಅ ಧಿಕಾರ ನಡೆಸಿದ ಕಾಂಗ್ರೆಸ್ ಚುನಾವಣೆ ಹತ್ತಿರವಾಗುತ್ತಿದ್ದಂತೆ ಲಿಂಗಾಯತ ಸಮಾಜವನ್ನು ಒಡೆಯಲು ಮುಂದಾಗಿದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ಜನರ ಮುಖ್ಯಮಂತ್ರಿಯಾಗಿ ಆಡಳಿತ ನಿರ್ವಹಿಸದೇ ಜಾತಿ ಜಾತಿಗಳ ಮಧ್ಯೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ಧರ್ಮ ರಾಜಕಾರಣ ಮಾಡುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಸಾಮರ್ಥ್ಯವಿದ್ದರೆ ಪ್ರತ್ಯೇಕ ಧರ್ಮದ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲು ಮುಂದಾಗಲಿ. ಲಿಂಗಾಯತ ಸಮಾಜವನ್ನು ಒಡೆಯಲು ಸಿದ್ದರಾಮಯ್ಯ ಅವರು ಸಚಿವರಾದ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ ಮೂಲಕ ಷಡ್ಯಂತ್ರ ನಡೆಸಿದ್ದಾರೆ. ಸಚಿವರಿಗೆ ಹಣ ನೀಡಿದ್ದಾರೆ ಎಂದರು.
ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವೀರಶೈವರ ಬಗ್ಗೆ ಹಗುರವಾಗಿ ಮಾತನಾಡಿದ್ದು ನೋವು ತಂದಿದೆ. ಜನಸಾಮಾನ್ಯರು ಸಹಿತ ಈ ರೀತಿಯ ಶಬ್ದ ಬಳಸಲ್ಲ. ಸಮಾಜದಲ್ಲಿ ಸ್ವಾಮಿಗಳ ಬಗ್ಗೆ ಅಪಾರ ಗೌರವವಿದೆ. ಅವರ ಸಂಸ್ಕೃತಿ, ಪರಂಪರೆ, ನಡವಳಿಕೆ ಇನ್ನಿತರರಿಗೆ ಮಾದರಿ ಆಗಬೇಕು.
-ಜಗದೀಶ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ನಾಯಕ
ಉತ್ತರ ಕರ್ನಾಟಕದ ಭಾಗದಲ್ಲಿ ಗುರುಗಳಿಗೆ ತಂದೆ ಸ್ಥಾನ ಕೊಟ್ಟು ಅಪ್ಪ, ಅಜ್ಜ, ಅಪ್ಪಗೋಳ, ಬುದ್ಧಿ ಎಂದೆಲ್ಲ ಕರೆಯುತ್ತಾರೆ. ಶಿಷ್ಯರಿಗೆ ಶಿಷ್ಯಮಕ್ಕಳು ಎನ್ನುವುದು ವಾಡಿಕೆ. ಆ ತಾತ್ವಿಕ ಅರ್ಥದಲ್ಲಿ ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಮಾತನಾಡಿದ್ದೇನೆ. ಆ ಮಾತಿನಲ್ಲಿ ಯಾರನ್ನಾದರು ಹೀಯಾಳಿಸುವುದಾಗಲಿ, ನೋಯಿಸುವುದಾಗಲಿ ನನ್ನ ಉದ್ದೇಶವಿರಲಿಲ್ಲ.
-ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮ ಪೀಠ
ವೀರಶೈವ ಲಿಂಗಾಯತರು ಗುಡುಗಿದರೆ ವಿಧಾನಸೌಧವೇ ನಡುಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಜಾತಿ ಒಡೆಯುವ ಕೆಲಸಕ್ಕೆ ಯಾರೂ ಕೈ ಹಾಕಬಾರದು, ಒಗ್ಗಟ್ಟು ಪ್ರದರ್ಶಿಸಿ ಶಕ್ತಿ ಸಾಬೀತು ಮಾಡಬೇಕು.
-ಜ್ಯೋತಿಪ್ರಕಾಶ್ ಮಿರ್ಜಿ ವೀರಶೈವ ಲಿಂಗಾಯತ ಒಕ್ಕೂಟದ ಅಧ್ಯಕ್ಷ
ವೀರಶೈವರ ಕುರಿತು ಜಯ ಮೃತ್ಯುಂಜಯ ಸ್ವಾಮೀಜಿ ನೀಡಿರುವ ಹೇಳಿಕೆ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಸಾಧು-ಸಂತರು ಸಮಾಜ ಒಂದುಗೂಡಿಸುವ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ. ಸಮಾಜಕ್ಕೆ ಒಳಿತಾಗಲು ಜೀವನವನ್ನೇ ಮುಡಿಪಾಗಿಟ್ಟಿರುವ ತ್ಯಾಗಿಗಳು ಈ ರೀತಿ ಮಾತನಾಡಿರುವುದು ನೋವುಂಟು ಮಾಡಿದೆ. ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ.
-ಕೆ.ಎಸ್.ಈಶ್ವರಪ್ಪ, ವಿಧಾನಪರಿಷತ್ ಪ್ರತಿಪಕ್ಷದ ನಾಯಕ
ವೀರಶೈವ, ಲಿಂಗಾಯತ ಜಾತಿಗಳನ್ನು ಎತ್ತಿ ಕಟ್ಟುವ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿಲ್ಲ. ಇಬ್ಬರೂ ಒಗ್ಗಟ್ಟಿನಿಂದ ಬಂದರೆ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ ಅಷ್ಟೆ.
-ಎಚ್. ಆಂಜನೇಯ, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.