Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್ ವ್ಯವಹಾರ ಪರಿಶೀಲನೆ
ಶೀಘ್ರ 6 ಖಾತೆ ಮುಟ್ಟುಗೋಲು ಸಾಧ್ಯತೆ; ಪ್ಯಾನ್ ನಂಬರ್ ಮೂಲಕ ಖಾತೆ ನಿಗಾ; ಆರ್ಥಿಕವಾಗಿ ಕಟ್ಟಿಹಾಕಲು ಸಿದ್ಧತೆ
Team Udayavani, May 19, 2024, 6:45 AM IST
ಬೆಂಗಳೂರು: ಅಶ್ಲೀಲ ಪೆನ್‌ಡ್ರೈವ್ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಪತ್ತೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ)ಹೊಸ ಅಸ್ತ್ರವನ್ನು ಬಳಸಲು ಸಿದ್ಧತೆ ನಡೆಸಿದ್ದು, ಅವರ ಬ್ಯಾಂಕ್ ಖಾತೆ ಮೇಲೆ ಕಣ್ಣಿಟ್ಟಿದೆ.
ಇನ್ನೊಂದೆಡೆ ಹೊಳೆನರಸೀಪುರ ಠಾಣೆ ಯಲ್ಲಿ ದಾಖಲಾದ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಎಸ್‌ಐಟಿ ಅಧಿಕಾರಿಗಳು ನ್ಯಾಯಾ ಲಯದಿಂದ ಆರೆಸ್ಟ್ ವಾರೆಂಟ್ ಪಡೆದಿ ದ್ದಾರೆ ಎನ್ನಲಾಗಿದೆ. ಆದರೆ ಎಸ್‌ಐಟಿ ಅಧಿಕಾರಿಗಳು ಈ ವಿಚಾರವನ್ನು ದೃಢ ಪಡಿಸಲು ನಿರಾಕರಿಸಿದ್ದಾರೆ. ಲುಕೌಟ್, ಬ್ಲೂಕಾರ್ನರ್ ನೋಟಿಸ್ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇಬ್ಬರು ಸ್ನೇಹಿತರ
ಜತೆ ತಿರುಗಾಟ?
ಪ್ರಜ್ವಲ್ ವಿದೇಶದಲ್ಲಿ ದುಬಾೖ ಹಾಗೂ ಬೆಂಗಳೂರು ಮೂಲದ ಇಬ್ಬರು ಸ್ನೇಹಿತರ ಜತೆಗಿದ್ದಾರೆ ಎನ್ನಲಾಗುತ್ತಿದೆ. ಮೂವರೂ ಜತೆಗೂಡಿ ತಿರುಗಾಡುತ್ತಿ ರುವ ಸಾಧ್ಯತೆಗಳಿವೆ. ಕೆಲವು ದಿನಗಳಿಂದ ಅವರು ಕುಟುಂಬ ಸದಸ್ಯರ ಜತೆಗೆ ನೇರ ಫೋನ್ ಸಂಪರ್ಕದಲ್ಲಿಲ್ಲ ಎನ್ನಲಾಗಿದೆ.
ಖಾತೆಗಳ ಸ್ತಂಭನ
ಪ್ರಜ್ವಲ್‌ಗಾಗಿ ಶೋಧ ಮುಂದುವರಿಸಿರುವ ಎಸ್‌ಐಟಿಯು ಈಗ ಒಂದು ಹೆಜ್ಜೆ ಮುಂದೆ ಹೋಗಿ ಅವರ ಬ್ಯಾಂಕ್ ಖಾತೆಗಳ ಜಾಡು ಹಿಡಿಯಲು ಹೊರಟಿದೆ. ಎಸ್‌ಐಟಿ ಶೀಘ್ರದಲ್ಲೇ ನ್ಯಾಯಾಲಯದ ಅನುಮತಿ ಪಡೆದು ಬ್ಯಾಂಕ್ ಖಾತೆ ಸ್ತಂಭನ ಮಾಡುವ ಸಾಧ್ಯತೆ ಇದೆ. ಅವರ ಖಾತೆಗೆ ಹಣ ಸಂದಾಯವಾಗಿದೆಯೇ, ಜರ್ಮನಿಯಲ್ಲಿ ಯಾರ ಸಹಾಯ ಪಡೆದಿದ್ದಾರೆ, ಎಲ್ಲಿ ಆಶ್ರಯ ಪಡೆದಿದ್ದಾರೆ, ಅಲ್ಲಿ ಉಳಿದುಕೊಳ್ಳುವ ವೆಚ್ಚವನ್ನು ಹೇಗೆ ಭರಿಸುತ್ತಿದ್ದಾರೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಎಸ್‌ಐಟಿ ತಂಡ ಗೌಪ್ಯವಾಗಿ ಮಾಹಿತಿ ಕಲೆ ಹಾಕುತ್ತಿದೆ.
ಖಾತೆಯ ಮೇಲೆ ಹದ್ದುಗಣ್ಣು
ಮೂಲಗಳ ಪ್ರಕಾರ, ಪ್ರಜ್ವಲ್ ಸುಮಾರು 6 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಹಲವು ಬ್ಯಾಂಕ್‌ಗಳಲ್ಲಿರುವ ಈ ಖಾತೆಗಳ ಮೇಲೆ ಪಾನ್ ನಂಬರ್ ಮೂಲಕ ನಿಗಾ ಇರಿಸಲಾಗುತ್ತಿದೆ. ಈ ಮೂಲಕ ಆರ್ಥಿಕವಾಗಿ ಪ್ರಜ್ವಲ್ ರೇವಣ್ಣ ಅವರನ್ನು ಕಟ್ಟಿಹಾಕಿ ಜರ್ಮನಿಯಲ್ಲಿ ಓಡಾಟ, ವಸತಿ ಪಡೆಯಲು ಸಾಧ್ಯವಾಗದಂತೆ ಮಾಡಲು ಎಸ್‌ಐಟಿ ತಂತ್ರ ರೂಪಿಸಿದೆ. ಲೋಕಸಭಾ ಚುನಾವಣ ಫಲಿತಾಂಶದ ಬಳಿಕ ಈ ಪ್ರಕರಣದಲ್ಲಿ ಇನ್ನಷ್ಟು ಬೆಳವಣಿಗೆಗಳು ಆಗಲಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.