ಕೆಪಿಎಸ್ ಸಿ ಬಾಗಿಲು ತಟ್ಟಿ ಪ್ರತಿಭಟನೆಗೆ ಮಾಜಿ ಸಚಿವ ಸುರೇಶ್ ಕುಮಾರ್ ನಿರ್ಧಾರ
Team Udayavani, May 29, 2022, 5:13 PM IST
ಬೆಂಗಳೂರು : ಆಡಳಿತ ಯಂತ್ರದ ಸಮರ್ಪಕ ನಿರ್ವಹಣೆಗೆ ದಕ್ಷ, ಸಮರ್ಥ ಮಾನವ ಸಂಪನ್ಮೂಲದ ನಿರಂತರ ಪೂರೈಕೆ ಮಾಡಬೇಕಿರುವ ಕೆಪಿಎಸ್ ಸಿ ಸಂಸ್ಥೆ ತನ್ನ ನಿಷ್ಕ್ರಿಯ ಆಡಳಿತದ ಮೂಲಕ, ಸರ್ಕಾರಿ ವ್ಯವಸ್ಥೆಯ ಮೇಲೆ ಬೀರುತ್ತಿರುವ ಪ್ರತಿಕೂಲ ಪರಿಣಾಮದ ಬಗ್ಗೆ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದೇ ಮೇ 31 ರಂದು ಬೆಳಗ್ಗೆ 10ಕ್ಕೆ ಕೆಪಿಎಸ್ ಸಿ ಕಚೇರಿಯ ಬಾಗಿಲು ತಟ್ಟಿ ಮಾಹಿತಿ ಆಗ್ರಹಿಸುವ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದ್ದಾರೆ.
2021ರ ಫೆಬ್ರುವರಿಯಲ್ಲಿ ನಡೆದ ಕೆಎಎಸ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಒಂದೂವರೆ ವರ್ಷದ ಬಳಿಕವೂ ಪ್ರಕಟವಾಗಿಲ್ಲ. ಅದೇ ರೀತಿ ಹತ್ತಾರು ಇಲಾಖೆಗಳಿಗೆ ಸಿಬ್ಬಂದಿ ನೇಮಕಾತಿಗೆ ಸಂಸ್ಥೆ ಅನುಸರಿಸುತ್ತಿರುವ ವಿಳಂಬ ಧೋರಣೆಯಿಂದ ಇಡೀ ಆಡಳಿತ ವ್ಯವಸ್ಥೆ ನಲುಗುತ್ತಿದೆ. ತಾವು ಸಚಿವರಾಗಿದ್ದ ಸಂದರ್ಭದಲ್ಲಿಯೂ ಹಲವು ಉದ್ಯೋಗಾಂಕ್ಷಿಗಳಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಿದ್ದು, ಸಂಸ್ಥೆಯ ಸ್ವಾಯತ್ತತೆಯೇ ಅದರ ಜವಾಬ್ದಾರಿ ನಿರ್ವಹಣೆಗೆ ಪ್ರತಿಕೂಲವಾಗಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಯು.ಪಿ.ಎಸ್.ಸಿ ಮಾದರಿಯಲ್ಲಿ ಸಂಸ್ಥೆ ವೃತ್ತಿಪರವಾಗಿ ಕಾರ್ಯ ನಿರ್ವಹಿಸಲು ಏಕೆ ಸಾಧ್ಯವಿಲ್ಲ? ಕೆ.ಪಿ.ಎಸ್.ಸಿ ಕಳೆದ ಹಲವು ವರ್ಷಗಳಲ್ಲಿ ನಡೆಸಿರುವ ಪರೀಕ್ಷೆಗಳೆಷ್ಟು? ಎಷ್ಟು ಫಲಿತಾಂಶ ನೀಡಲಾಗಿದೆ? ಎಷ್ಟು ಯುವಕರಿಗೆ ಉದ್ಯೋಗ ದೊರಕಿಸಲಾಗಿದೆ? ವಿಳಂಬ ಧೋರಣೆಗೆ ಕಾರಣ ಏನು? ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಸಂಸ್ಥೆಯ ಕ್ರಿಯಾಯೋಜನೆ ಏನು? ಎನ್ನುವ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಕೆ.ಪಿ.ಎಸ್.ಸಿ ಬಾಗಿಲ ಮುಂದೆ ನಿಲ್ಲಲಿದ್ದೇನೆ. ಸಂಸ್ಥೆಯ ಬಾಗಿಲು ತಟ್ಟುವ ಮೂಲಕ ಮಾಹಿತಿ ಒದಗಿಸಲು ಆಗ್ರಹಿಸುತ್ತೇನೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.