Karnataka; ಇಂಧನ ಇಲಾಖೆಗೆ ಅನುದಾನ ಸವಾಲು: ಇಲಾಖೆಗೆ 23,159 ಕೋ. ರೂ. ಮೀಸಲು
ಅರ್ಧಕ್ಕೂ ಹೆಚ್ಚು ಉಚಿತಗಳ ಪಾಲು; ಉಳಿದುದರಲ್ಲಿ ವೆಚ್ಚ ನಿಭಾವಣೆ ಸವಾಲು
Team Udayavani, Feb 19, 2024, 7:30 AM IST
ಬೆಂಗಳೂರು: ಬಜೆಟ್‌ನಲ್ಲಿ ಇಂಧನ ಇಲಾಖೆಗೆ ಒದಗಿಸಿದ ಅನುದಾನವು “ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಾಗಿದೆ!
2024-25ನೇ ಹಣಕಾಸು ವರ್ಷಕ್ಕೆ ಇಂಧನ ಇಲಾಖೆಗೆ ಒಟ್ಟಾರೆ 23,159 ಕೋ. ರೂ. ಮೀಸಲಿಡಲಾಗಿದೆ. ಈ ಪೈಕಿ 12,785 ಕೋಟಿ ರೂ. ಕೃಷಿ ಪಂಪ್‌ಸೆಟ್‌ಗಳ ಸಹಾಯಧನಕ್ಕೆ ಖರ್ಚಾದರೆ, 9,657 ಕೋಟಿ ರೂ. ಗೃಹಜ್ಯೋತಿಗೆ ಹೋಗುತ್ತದೆ. ಮೂಲ ಬಂಡವಾಳ ಹೂಡಿಕೆಗೆ ಉಳಿಯುವುದು ಕೇವಲ 717 ಕೋಟಿ ರೂ. ಮಾತ್ರ. ಇದರಲ್ಲೇ ತನ್ನ ವಿದ್ಯುತ್ ಸಾಮರ್ಥ್ಯ ವೃದ್ಧಿಗೆ ಯೋಜನೆ ರೂಪಿಸುವುದು ಮತ್ತಿತರ ಖರ್ಚುವೆಚ್ಚಗಳನ್ನು ನಿರ್ವಹಿ ಸಬೇಕಾಗಿದೆ.
ಈ ಮಧ್ಯೆ ಮುಂದಿನ ಏಳು ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯವನ್ನು 32 ಸಾವಿರದಿಂದ 60 ಸಾವಿರ ಮೆಗಾವಾಟ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಅದರಂತೆ ಪ್ರತಿವರ್ಷ ನಾಲ್ಕು ಸಾವಿರ ಮೆ.ವಾ. ವಿದ್ಯುತ್ ಸೇರ್ಪಡೆ ಆಗಬೇಕಾಗುತ್ತದೆ. ಇದಕ್ಕೆ ಅಗತ್ಯ ಉತ್ಪಾದನ ಘಟಕಗಳನ್ನು ಸ್ಥಾಪಿಸಬೇಕಾಗುತ್ತದೆ. ಇದಕ್ಕಾಗಿ ಸಾಲ ಪಡೆದರೂ ಹೊಸ ಮಾರ್ಗಗಳ ಸೇರ್ಪಡೆ, ದುರಸ್ತಿ ಮತ್ತಿತರ ಕನಿಷ್ಠ ವೆಚ್ಚಗಳಿಗೂ ಪ್ರಸ್ತುತ ಒದಗಿಸಿರುವ ಅನುದಾನ ಸಾಕಾಗದು ಎಂಬ ಮಾತುಗಳು ಸ್ವತಃ ಇಲಾಖೆಯಿಂದ ಕೇಳಿಬರುತ್ತಿವೆ.
ಇಲಾಖೆ ಅಂಕಿಅಂಶಗಳ ಪ್ರಕಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್)ದಲ್ಲಿ ಅಂದಾಜು ಸಾವಿರ ಕೋಟಿ ರೂ. ಮೂಲ ಬಂಡವಾಳ ಹೂಡಿಕೆ ಮೊತ್ತ ಇದೆ. ಉಳಿದ ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳು ನಕಾರಾತ್ಮಕ ಬೆಳವಣಿಗೆ ಹೊಂದಿದ್ದು, ಮೂಲ ಬಂಡವಾಳ ಹೂಡಿಕೆಗೆ ಹಣ ಲಭ್ಯವಿಲ್ಲ. ಅವೆಲ್ಲವೂ ಗ್ರಾಹಕರನ್ನು ಅವಲಂಬಿಸಿವೆ. ಜತೆಗೆ ಮತ್ತಷ್ಟು ಸಾಲದ ಮೊರೆಹೋಗುವುದು ಅನಿವಾರ್ಯ ಆಗಿದೆ.
ಸಹಾಯಧನದ ಹೊರೆ
ವರ್ಷದಿಂದ ವರ್ಷಕ್ಕೆ ಸಹಾಯ ಧನ ಪ್ರಮಾಣ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಹೊರೆಯಾಗಿ ಪರಿಣಮಿಸಲಿದೆ ಹಾಗೂ ಎಸ್ಕಾಂಗಳ ತೀವ್ರ ಆದಾಯ ಕೊರತೆಗೆ ಕಾರಣ ವಾಗಲಿವೆ ಎಂದು 2023-24ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ.
ನೀರಾವರಿ ಪಂಪ್‌ಸೆಟ್(10 ಎಚ್‌ಪಿವರೆಗೆ)ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2018-19ರಲ್ಲಿ 29.68 ಲಕ್ಷ ಇದ್ದದ್ದು, 2023ರ ನವೆಂಬರ್ ಅಂತ್ಯಕ್ಕೆ 34.10ಗೆ ಏರಿಕೆಯಾಗಿವೆ. ಗೃಹಜ್ಯೋತಿ ಅಡಿ ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪೂರಸಲಾಗುತ್ತಿದ್ದು, ಈ ಯೋಜನೆಗೆ ವಾರ್ಷಿಕ 13,910 ಕೋಟಿಗಳ ಸಹಾಯಧನದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. 2023ರ ಜುಲೈಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಇದಕ್ಕೆ 9,000 ಕೋಟಿ ರೂ. ಒದಗಿಸಲಾಗಿದ್ದು, ಈವರೆಗೆ (2023ರ ಡಿಸೆಂಬರ್) 4,400 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳಿದಂತೆ ಭಾಗ್ಯಜ್ಯೋತಿ/ ಕುಟೀರಜ್ಯೋತಿ, ಅಮೃತ ಜ್ಯೋತಿ ಸ್ಥಾಪನೆಗಳ ಸಂಖ್ಯೆಯೂ ಏರಿಕೆಯಾಗಿದ್ದು, ಇವುಗಳ ಗ್ರಾಹಕರ ಬಳಕೆಯ ಪ್ರಮಾಣವನ್ನು ಮಾಸಿಕ 18ರಿಂದ 48 ಯೂನಿಟ್‌ಗೆ ಹೆಚ್ಚಿಸಲಾಗಿದೆ. ಪರಿಣಾಮವಾಗಿ ಸಹಾಯಧನದ ಹೊರೆಯೂ ಅಧಿಕವಾಗುತ್ತಿದೆ.
ಅಲ್ಲದೆ ವಿದ್ಯುತ್ ಮಾರಾಟದಿಂದ ಬರುತ್ತಿರುವ ಆದಾಯಕ್ಕೂ ಒಟ್ಟಾರೆ ಸರಬರಾಜು ವೆಚ್ಚಕ್ಕೂ ಹೊಂದಾಣಿಕೆ ಆಗುತ್ತಿಲ್ಲ. ಜತೆಗೆ ಪ್ರತಿ ವರ್ಷ ಆದಾಯದಲ್ಲಿ ಕೊರತೆ ಆಗುತ್ತಿದೆ. ಈ ಆದಾಯ ಕೊರತೆಯನ್ನು ತುಂಬಲು ಎಸ್ಕಾಂಗಳು ಅಲ್ಪಾವಧಿ ಸಾಲಗಳನ್ನು ಪಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇದರ ಅಂತರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಸಮೀಕ್ಷೆ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಇಲಾಖೆಯ ಭವಿಷ್ಯದ ಮುನ್ನೋಟ
– ನವೀಕರಿಸಬಹುದಾದ ಇಂಧನ ವಲಯದಡಿ ನೈಸರ್ಗಿಕ ಸಂಪನ್ಮೂಲಗಳ ಗರಿಷ್ಠ ಬಳಕೆ
– ತಾಂತ್ರಿಕ ಮತ್ತು ವಾಣಿಜ್ಯ ನಷ್ಟ ಕಡಿಮೆಗೊಳಿಸುವುದು
– ವಿದ್ಯುತ್ ಅಪಘಾತ ಕಡಿಮೆಗೊಳಿಸುವುದು
– ಬೇಡಿಕೆ ಪೂರೈಸಲು ಉತ್ಪಾದನೆ ಸಾಮರ್ಥ್ಯ ಹೆಚ್ಚಿಸುವುದು
– ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.