ಎಚ್ಚರ ವಹಿಸಿ: ಹಸಿರು ಪಟಾಕಿಯಿಂದಲೂ ಹಾನಿ ತಪ್ಪಿದ್ದಲ್ಲ!
Team Udayavani, Nov 14, 2020, 8:40 AM IST
ಬೆಂಗಳೂರು: ಹಸಿರು ಪಟಾಕಿಗಳು ರಾಸಾಯನಿಕ ಮುಕ್ತವಾಗಿರುವುದಿಲ್ಲ. ಇಂತಹ ಪಟಾಕಿಗಳಿಂದಲೂ ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳಿದ್ದು, ಕಡ್ಡಾಯವಾಗಿ ಸುರಕ್ಷತಾ ಕ್ರಮಕೈಗೊಳ್ಳಬೇಕು ಎಂದು ಮಿಂಟೋ ಪ್ರಾದೇಶಿಕ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದ್ದಾರೆ.
ಶುಕ್ರವಾರ ಮಿಂಟೋ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಸಿರು ಪಟಾಕಿ ತಯಾರಿಕೆ ಯಲ್ಲಿಯೂ ರಾಸಾಯನಿಕ ಬಳಸಲಾಗಿರುತ್ತದೆ. ಸಾಮಾನ್ಯ ಪಟಾಕಿಗೆ ಹೋಲಿಸಿದರೆ ಬಳಕೆ ಪ್ರಮಾಣ ಶೇ.50 ರಷ್ಟು ಕಡಿಮೆ. ಪ್ರಮುಖ ರಾಸಾಯನಿಕಗಳಾದ ಬೇರಿಯಂ, ಲಿಥಿಯಂ ಹೊರತುಪಡಿಸಿ ಇತರೆ ರಾಸಾಯನಿಕ ಬಳಸುತ್ತಾರೆ. ಇದರಿಂದ ಮಾಲಿನ್ಯ ಪ್ರಮಾಣ ಕಡಿಮೆಯಾಗಿದ್ದರೂ, ಸ್ಫೋಟ ಮತ್ತು ಶಬ್ಧದ ತೀವ್ರತೆ ಸಾಮಾನ್ಯ ಪಟಾಕಿಗಳಂತೆ ಇರುತ್ತದೆ. ಹೀಗಾಗಿ, ಹಸಿರು ಪಟಾಕಿಯಿಂದ ಯಾವುದೇ ತರಹದ ಹಾನಿ ಇಲ್ಲ ಎಂಬ ತಪ್ಪು ಕಲ್ಪನೆ ಬೇಡ. ಪಟಾಕಿ ಸಿಡಿಸುವಾಗ ಕಡ್ಡಾಯವಾಗಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
24*7 ಅಗತ್ಯ ಸಿದ್ಧತೆ: ಪ್ರತಿ ವರ್ಷ ಬೆಳಕಿನ ಹಬ್ಬ ದೀಪವಾಳಿ ಬಂತೆಂದರೆ ಪಟಾಕಿ ಸಿಡಿತದಿಂದ ಗಾಯಗೊಂಡ 50ಕ್ಕೂ ಹೆಚ್ಚು ಮಂದಿ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗುತ್ತಾರೆ. ಈ ವರ್ಷ ಹಸಿರು ಪಟಾಕಿ ಕಡ್ಡಾಯ ಗೊಳಿಸಿರುವುದರಿಂದ ಗಾಯಳುಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಇದೆ. ಆದರೂ, ಮುಂಜಾಗ್ರತಾ ಕ್ರಮವಾಗಿ ತುರ್ತು ಸೇವೆ ಮಿಂಟೋ ಆಸ್ಪತ್ರೆಯಲ್ಲಿ 24*7 ಸೇವೆ ಲಭ್ಯವಿದೆ. ಹೆಚ್ಚಿನ ಗಾಯವಾಗಿ ದಾಖಲಾತಿ
ಅಗತ್ಯವಿದ್ದರೆ ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಸೋಂಕು ದೃಢಪಟ್ಟರೆ ವಿಕ್ಟೋರಿಯಾ ಆಸ್ಪತ್ರೆ ಟ್ರಾಮಾ ಕೇರ್‌ಗೆ ವರ್ಗಾಹಿಸಿ ಅಲ್ಲಿನ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಮನೆ ಮದ್ದು ಬೇಡ: ಕಳೆದ ವರ್ಷ 46 ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡು ಮಿಂಟೋಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅವರಲ್ಲಿ ಮೂವರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡರು. ಗಾಯಾಳುಗಳಲ್ಲಿ ಶೇ. 40ರಷ್ಟು 14 ವರ್ಷದೊಳಗಿನ ಮಕ್ಕಳಿರುತ್ತಾರೆ. ಪಟಾಕಿಯಿಂದ ಕಣ್ಣಿಗೆ ಘಾಸಿಯಾದಾಗ ಮನೆ ಮದ್ದು ಮಾಡದೆ, ಶುದ್ಧ ಬಟ್ಟೆಯಲ್ಲಿ ಕಣ್ಣು ಮುಚ್ಚಿ ತಕ್ಷಣ ಆಸ್ಪತ್ರೆಗೆ ತೆರಳಬೇಕು. ನಗರ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದ್ದಲ್ಲಿ ಸಹಾಯವಾಣಿ 9480832430 ಕರೆ ಮಾಡಿ ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಶೇ.80 ಹಸಿರು ಪಟಾಕಿ
ಈ ಬಾರಿ ಮಾರುಕಟ್ಟೆಗೆ ಬರುವ ಪಟಾಕಿ ಪೈಕಿ ಶೇ.80 ಹಸಿರು ಪಟಾಕಿಯಾಗಿರುತ್ತದೆ. ಅವುಗಳನ್ನು ತಮಿಳುನಾಡಿನ ಶಿವಕಾಶಿಯಲ್ಲಿ ತಯಾರಿಸಲಾಗುತ್ತಿದ್ದು, ನಗರಕ್ಕೂ ಹಸಿರು ಪಟಾಕಿ ಹಂಚಿಕೆಯಾಗುತ್ತಿವೆ. ಈ ಬಗ್ಗೆ ಮಾಹಿತಿ ನೀಡಿದ ತಮಿಳುನಾಡು ಪಟಾಕಿ ಮತ್ತು ಸಿಡಿಮದ್ದು ತಯಾರಕರ ಸಂಘದ ಅಧ್ಯಕ್ಷ ಪಿ.ಗಣೇಶನ್, ತಮಿಳುನಾಡಿನ ಶಿವಕಾಶಿಯಲ್ಲಿರುವ ಬಹುಪಟಾಕಿ ತಯಾರಕರು ನ್ಯಾಷನಲ್ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ರೀಸರ್ಚ್ ಇನ್ಸ್‌ಟಿಟ್ಯೂಟ್ (ಎನ್‌ಇಇಆರ್‌ಐ) ಜತೆಗೆ ಒಪ್ಪಂದ ಮಾಡಿಕೊಂಡಿವೆ. ಕಳೆದ ವರ್ಷದಿಂದಲೇ ಹಸಿರು ಪಟಾಕಿ ತಯಾರಿಸಲು ಪ್ರಾರಂಭಿಸಿದ್ದು, ದೇಶಾದ್ಯಂತ ಪಟಾಕಿ ವರ್ತಕರಿಗೆ ಈಗಾಗಲೇ ಹಸಿರು ಪಟಾಕಿ ಹಂಚಿಕೆಯಾಗಿದೆ. ಹೀಗಾಗಿ, ಈ ವರ್ಷ ಮಾರುಕಟ್ಟೆಯಲ್ಲಿ ಶೇ.80ರಷ್ಟು ಹಸಿರು ಪಟಾಕಿಗಳು ಎಂದು ಹೇಳಿದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.