ಜಿಎಸ್‌ಟಿ: ಬೆಲೆ ಇಳಿಸದ 194 ವರ್ತಕರ ವಿರುದ್ಧ ಪ್ರಕರಣ
Team Udayavani, Dec 8, 2017, 11:15 AM IST
ಬೆಂಗಳೂರು: ಜನ ಸಾಮಾನ್ಯರು ಬಳಸುವ ಆಯ್ದ ವಸ್ತುಗಳಿಗೆ ಜಿಎಸ್‌ಟಿಯಡಿ ವಿಧಿಸಿದ್ದ ತೆರಿಗೆ ಪ್ರಮಾಣ ಇತ್ತೀಚೆಗೆ ಇಳಿಕೆಯಾದರೂ ಅದರ ಲಾಭ ವನ್ನು ಗ್ರಾಹಕರಿಗೆ ವರ್ಗಾಯಿಸದೆ ದುಬಾರಿ ಬೆಲೆಯಲ್ಲೇ ಮಾರಾಟ ಮಾಡುತ್ತಿದ್ದ 194 ವರ್ತಕರ
ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆ ಬಿಸಿ ಮುಟ್ಟಿಸಿದೆ.
ನವೆಂಬರ್‌ನಲ್ಲಿ 4 ದಿನ ವಿಶೇಷ ಅಭಿಯಾನದಡಿ ರಾಜ್ಯಾದ್ಯಂತ ದಿಢೀರ್ ತಪಾಸಣೆ ನಡೆಸಿದ ಇಲಾಖೆ ಅಧಿಕಾರಿಗಳು ಜಿಎಸ್‌ಟಿ ತೆರಿಗೆ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ವರ್ತಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಾಜ್ಯಾದ್ಯಂತ ದಾಖಲಾದ 194 ಪ್ರಕರಣಗಳ ಪೈಕಿ 102 ಪ್ರಕರಣ ಬೆಂಗಳೂರಿನಲ್ಲೇ ದಾಖಲಾಗಿವೆ. ವರ್ತಕರು ಮಾತ್ರವಲ್ಲದೆ ಉತ್ಪಾದಕರು, ವಿತರಕರ ಪಾತ್ರವೂ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಜರುಗಿಸಲು ಇಲಾಖೆ ಸಿದ್ಧತೆ ನಡೆಸಿದೆ.
ದೇಶಾದ್ಯಂತ ಜುಲೈ 1ರಿಂದ ಜಿಎಸ್‌ಟಿ ವ್ಯವಸ್ಥೆ ಜಾರಿಯಾಗಿದ್ದು, ಸರಕು, ಸೇವೆಗಳಿಗೆ ಕನಿಷ್ಠ ಶೇ.5 ರಿಂದ ಗರಿಷ್ಠ ಶೇ.28ರವರೆಗೆ ಒಟ್ಟು ನಾಲ್ಕು ಹಂತದ ತೆರಿಗೆ ವಿಧಿಸಿತ್ತು. ಆದರೆ ಆಯ್ದ ಸರಕುಗಳ ತೆರಿಗೆ ದುಬಾರಿಯಾಗಿದ್ದು, ಇಳಿಕೆ ಮಾಡುವಂತೆ ಸಾರ್ವಜನಿಕರು ಸೇರಿದಂತೆ ಉತ್ಪಾದನಾ, ವಿತರಣಾ ವಲಯದಿಂದ ನಿರಂತರವಾಗಿ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ 177 ವಸ್ತುಗಳ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಸಿತ್ತು. ಇದರಲ್ಲಿ “ವೇಗವಾಗಿ ಮಾರಾಟವಾಗುವ ಗ್ರಾಹಕ ವಸ್ತು’ಗಳೇ (ಎಫ್ಎಂಸಿಜಿ) ಹೆಚ್ಚಾಗಿದ್ದವು. ಬಹಳಷ್ಟು ವಸ್ತುಗಳ ತೆರಿಗೆ ಪ್ರಮಾಣವನ್ನು ಶೇ.28ರಿಂದ ಶೇ.18ಕ್ಕೆ ಹಾಗೂ ಶೇ.18 ಇದ್ದ ಆಯ್ದ ವಸ್ತುಗಳ ತೆರಿಗೆಯನ್ನು ಶೇ.12ಕ್ಕೆ ಇಳಿಕೆ ಮಾಡಲಾಗಿತ್ತು. ಹಾಗೆಯೇ ಕೆಲವೊಂದು ವಸ್ತುಗಳ ತೆರಿಗೆ ಶೇ.12ರಿಂದ ಶೇ.5ಕ್ಕೂ ಇಳಿಕೆಯಾಗಿದ್ದು, ಜನರಲ್ಲೂ ಹರ್ಷ ಮೂಡಿಸಿತ್ತು.
ಗ್ರಾಹಕರಿಗೆ ಸಿಗದ ಲಾಭ: ನವೆಂಬರ್‌ನಲ್ಲಿ 177 ವಸ್ತುಗಳ ಜಿಎಸ್‌ಟಿ ತೆರಿಗೆ ಪ್ರಮಾಣ ಇಳಿಕೆ ಮಾಡಿದ ಕೇಂದ್ರ ಸರ್ಕಾರವು ಪರಿಷ್ಕೃತ ತೆರಿಗೆ ಮೊತ್ತವನ್ನು ನ.15ರಿಂದ ಜಾರಿಗೊಳಿಸಿತ್ತು. ಅದ ರಂತೆ ತೆರಿಗೆ ಇಳಿಕೆಯಾದ ವಸ್ತುಗಳ ಬೆಲೆ ನ.15ರಿಂದಲೇ ಪರಿಷ್ಕರಣೆಯಾಗಿ ಗ್ರಾಹಕರಿಗೆ ಅದರ ಲಾಭ ಸಿಗಬೇಕಿತ್ತು. ಆದರೆ ಬಹಳಷ್ಟು ಕಡೆ ಗ್ರಾಹಕರಿಗೆ ತೆರಿಗೆ ಇಳಿಕೆ ಲಾಭ ಸಿಗದಿರುವುದು
ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆ ನಡೆಸಿದ ತಪಾಸಣೆಯಿಂದ ಬಯಲಾಗಿದೆ.
ಎಂಆರ್‌ಪಿಯೇ ಇಲ್ಲ!: ತೆರಿಗೆ ಇಳಿಕೆ ಪ್ರಮಾಣಕ್ಕೆ ಪೂರಕವಾಗಿ ದರ ಪರಷ್ಕರಿಸಿ ಹೊಸ ದರ ಪಟ್ಟಿ ಮುದ್ರಿಸಿ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಹಳೆಯ ದುಬಾರಿ ದರದಲ್ಲೇ ಮಾರಾಟ ಮಾಡುವುದು ನಿಯಮಬಾಹಿರ. ಆದರೆ ಹಲವೆಡೆ ಬೆಲೆ ಇಳಿಸಿ ಪರಿಷ್ಕೃತ ದರ ಪಟ್ಟಿ ನಮೂದಿಸದಿರುವುದು ಕಂಡುಬಂದರೆ ಬಹಳಷ್ಟು ವಸ್ತುಗಳಿಗೆ ಗರಿಷ್ಠ ಮಾರಾಟ ದರ ಪಟ್ಟಿಯನ್ನೇ (ಎಂಆರ್‌ಪಿ) ನಮೂದಿ ಸದಿರುವುದು ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಒಟ್ಟು 194 ಮಳಿಗೆದಾರರ ವಿರುದ್ಧ ಇಲಾಖೆಯು ಕಾನೂನು
ಮಾಪನಶಾಸ್ತ್ರ (ಪ್ಯಾಕೇಜ್ಡ್ ಕಮಾಡಿಟಿ) ನಿಯಮ 18 (3)ರಡಿ ಪ್ರಕರಣ ದಾಖಲಿಸಿದೆ.
ದಂಡದ ಜತೆಗೆ ಜೈಲು ಶಿಕ್ಷೆ
ಜಿಎಸ್‌ಟಿ ತೆರಿಗೆ ಇಳಿಕೆ ಹಿನ್ನೆಲೆಯಲ್ಲಿ ತೆರಿಗೆ ಇಳಿಕೆ ಲಾಭ ಗ್ರಾಹಕರಿಗೆ ಸಿಗುತ್ತಿದೆಯೇ ಎಂಬುದರ ಪರಿಶೀಲನೆಗೆ ನವೆಂಬರ್‌ನಲ್ಲಿ ನಾಲ್ಕು ದಿನ ರಾಜ್ಯಾದ್ಯಂತ ವಿಶೇಷ ಅಭಿಯಾನ ನಡೆಸಲಾಯಿತು. ಈ ವೇಳೆ ತೆರಿಗೆ ಇಳಿಕೆಯಂತೆ ದರ ಇಳಿಕೆ ಮಾಡದೆ ಹಳೆಯ ದರದಲ್ಲೇ ಮಾರಾಟ ಮಾಡುತ್ತಿದ್ದ 194 ವರ್ತಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮೊದಲ ಬಾರಿ ನಿಯಮ ಉಲ್ಲಂಘನೆಗೆ 2,500 ರೂ. ದಂಡ ವಿಧಿಸಲಾಗುತ್ತದೆ. 2ನೇಬಾರಿ ನಿಯಮ ಉಲ್ಲಂಘನೆಗೆ ದಂಡದ ಜತೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾರ್ವಜನಿಕರು ದೂರು ನೀಡಬಹುದು
ರಾಜ್ಯದಲ್ಲಿ ಯಾವುದೇ ಪ್ಯಾಕೇಜ್ಡ್ ಕಮಾಡಿಟಿಯ ಮೇಲೆ ಎಂಆರ್‌ಪಿ ಮುದ್ರಿಸದಿರುವುದು, ಜಿಎಸ್‌ಟಿ ತೆರಿಗೆಗಿಂತಲೂ ಹೆಚ್ಚು ತೆರಿಗೆ
ವಿಧಿಸಿ ಗ್ರಾಹಕರನ್ನು ಶೋಷಿಸುತ್ತಿ ದ್ದರೆ ಆ ಬಗ್ಗೆ ಇಲಾಖೆಯ ಇ-ಮೇಲ್ ವಿಳಾಸಕ್ಕೆ ದೂರು ನೀಡಿದರೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಜರುಗಿಸಲಿದ್ದಾರೆ. ಇ-ಮೇಲ್ ವಿಳಾಸ: [email protected]
ಎಂ.ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.