ಕಲಬುರಗಿ ಪಾಲಿಕೆ: ದೋಸ್ತಿ ವಿಚಾರದಲ್ಲಿ ಸ್ಥಳೀಯರ ಮುಖಂಡರ ಮಾತಿಗೆ ಮನ್ನಣೆ ಎಂದ ಎಚ್ ಡಿಡಿ
Team Udayavani, Sep 7, 2021, 3:33 PM IST
ಬೆಂಗಳೂರು: ಕಲಬುರಗಿ ಪಾಲಿಕೆಯಲ್ಲಿ ಬೆಂಬಲದ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ನನ್ನ ಬಳಿ ಮಾತಾಡಿದ್ದಾರೆ, ಕುಮಾರಸ್ವಾಮಿ ಹತ್ತಿರವೂ ಮಾತಾಡಿದ್ದಾರೆ. ಆದರೆ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆಯದೇ ನಾವೇ ತೀರ್ಮಾನ ಮಾಡಬಾರದು ಎಂದು ಕುಮಾರಸ್ವಾಮಿಗೆ ಸೂಚಿಸಿದ್ದೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದರು.
ಇಂದು ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನನ್ನ ಜೊತೆ ಯಾರೂ ಮಾತಾನಾಡಿಲ್ಲ. ಖರ್ಗೆ ಅವರು ಪಕ್ಷದವರನ್ನೇ ಸಂಪರ್ಕಿಸಿ ಮಾತಾಡಿದ್ದಾರೆ, ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಅವರು ಕೂತು ಮಾತಾಡ್ತಾರೆ ನೋಡೋಣ. ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಜೊತೆ ಮಾತಾಡಿರಬಹುದು, ನನ್ನ ಜೊತೆ ಬಿಜೆಪಿಯಾ ಯಾವ ನಾಯಕರು ಮಾತನಾಡಿಲ್ಲ ಎಂದರು.
ಕಲಬುರಗಿ ಪಾಲಿಕೆಯಲ್ಲಿ ನಮಗೆ ನಾಲ್ಕು ಸೀಟ್ ಬಂದಿದೆ. ನಾಲ್ಕು ಸೀಟ್ ಬರುತ್ತದೆಂದೂ ನಾನು ಅಂದುಕೊಂಡಿರಲಿಲ್ಲ. ಹೆಚ್ ಡಿಕೆ ಹೋಗಿ ಪ್ರಚಾರ ಮಾಡಿದ್ದರು. ಎಲ್ಲಿಯೂ ಇಲ್ಲವೇ ಇಲ್ಲ ಅನ್ನುವ ಸ್ಥಿತಿ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬೆಳಗಾವಿಯಲ್ಲಿ ನಮ್ಮ ಸ್ಥಿತಿ ಚೆನ್ನಾಗಿರಲಿಲ್ಲ. ಅಲ್ಲಿ ಬಿಜೆಪಿ ಸ್ವೀಪ್ ಮಾಡಿದೆ, ಕಾಂಗ್ರೆಸ್ ಬಗ್ಗೆ ಮಾತಾಡಲು ಹೋಗುವುದಿಲ್ಲ. ಹುಬ್ಬಳ್ಳಿ ಧಾರವಾಡದಲ್ಲಿ ಮೂರು- ನಾಲ್ಕು ಸೀಟ್ ನಿರೀಕ್ಷೆ ಮಾಡಿದ್ದೇವು, ಒಂದು ಸೀಟ್ ಬಂದಿದೆ , ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕೆಲ ಕಡೆ ಪೈಪೋಟಿ ಕೊಟ್ಟಿದ್ದೇವೆ ಎಂದರು.
ಯಾರೂ ನಿರಾಶೆಯಾಗಬೇಕಿಲ್ಲ, ನಾವು ಹೆಚ್ಚಿನ ಸದಸ್ಯತ್ವ ನೋಂದಣಿ ಬಗ್ಗೆ ಗಮನ ಕೊಡುತ್ತೇವೆ. ಪಕ್ಷ ಕಟ್ಟುವ ಕಡೆ ಹೆಚ್ಚು ಗಮನ ಕೊಡುತ್ತೇವೆ. ನಾನು ಮತ್ತು ಪಕ್ಷದ ಎಲ್ಲಾ ನಾಯಕರು ಒಳಗೊಂಡಂತೆ ಪಕ್ಷ ಕಟ್ಟುವ ಕೆಲಸಕ್ಕೆ ಆದ್ಯತೆ ಕೊಡುತ್ತೇವೆ, ಒಟ್ಟಾಗಿ ಐಕ್ಯತೆಯಿಂದ ಪಕ್ಷ ಸಂಘಟನೆ ಮಾಡುತ್ತೇವೆ. ಸೋಲು- ಗೆಲುವು ಅಂತಾ ನೋಡಿ ಕುಳಿತುಕೊಳ್ಳಲು ಆಗುವುದಿಲ್ಲ. ಸೋಲು-ಗೆಲುವು, ಸಿಹಿ-ಕಹಿ ನೋಡಿದ್ದೇವೆ ನಾವು ಎಂದು ಎಚ್ ಡಿಡಿ ಹೇಳಿದರು.
ಇದನ್ನೂ ಓದಿ:ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಡಿಜಿಟಲೈಸ್ಡ್ ವ್ಯವಸ್ಥೆ ಜಾರಿ: ಸಚಿವ ಮಾಧುಸ್ವಾಮಿ
ಜಿಟಿಡಿಯಿಂದ ಹಾನಿಯಿಲ್ಲ: ಜಿ.ಟಿ.ದೇವೇಗೌಡ ದೂರ ಇದ್ದಾರೆ, ಆದರೆ ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ಕೊಟ್ಟಿಲ್ಲ , ತನಗೂ -ಮಗನಿಗೂ ಟಿಕೆಟ್ ಕೊಡುವ ವಿಚಾರವಾಗಿ ಸಿದ್ದರಾಮಯ್ಯ ಬಳಿ ಮಾತಾನಾಡಿದ್ದೀನೆಂದು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಹೈಕಮಾಂಡ್ ಗಮನಕ್ಕೆ ತರುವುದಾಗಿ ಹೇಳಿದ್ದಾರೆ ಎಂದೂ ಹೇಳಿದ್ದಾರೆ. ಆದರೆ ಜೆಡಿಎಸ್ ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ಕೊಟ್ಟಿಲ್ಲ, ಹಾಗಾಗಿ ಕ್ರಮ ಕೈಗೊಂಡಿಲ್ಲ ಎಂದರು.
ಜಿ.ಟಿ.ದೇವೇಗೌಡ ಜೊತೆ ನಾನು ರಾಜಕೀಯ ಮಾತನಾಡಿಲ್ಲ. ತಿರುಪತಿಗೆ ಹೋಗಿದ್ದಾಗ ಜಿ.ಟಿ.ದೇವೇಗೌಡ ಸಿಕ್ಕಿದ್ದರು. ಆಗ ನಾನೇ ನೋಡಿ ಕರೆದು ತಮಾಷೆ ಮಾಡಿದ್ದೆ, ನಿನ್ನ ದರ್ಶನ ಇಲ್ಲಿ ಆಯ್ತಲ್ಲಪ್ಪಾ ಎಂದಿದ್ದೆ, ಆಗ ನಿಮ್ಮ ದರ್ಶನ ಆಗಿದ್ದು ಖುಷಿ ಆಯ್ತು ಸರ್ ಅಂದಿದ್ರು ಅಷ್ಟೇ. ಯಾವುದೇ ರಾಜಕೀಯ ಮಾತುಕತೆ ಆಗಿಲ್ಲ ಎಂದು ಮಾಜಿ ಪ್ರಧಾನಿ ಹೇಳಿದರು.
ಕೋಲಾರ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಜೊತೆ ಸೇರಿ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿ ಮಾತಾಡಿದ್ದರೆ. ಅವರ ವಿರುದ್ಧ ರಾಜ್ಯಾಧ್ಯಕ್ಷರು ಕ್ರಮ ತೆಗೆದುಕೊಳ್ಳುತ್ತಾರೆ. ಕೋಲಾರ ವಿಚಾರದಲ್ಲಿ ಸಹಿಸಲಾಗದು. ಕೀಳಾಗಿ ಮಾತನಾಡಿದ್ದರೆ ಕ್ರಮ ಅನಿವಾರ್ಯವಾಗಿದೆ, ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.