ಕಾಂಗ್ರೆಸ್ ಕೋಳಿ ಕೂಗಿದರೆ ಬೆಳಕು ಹರಿಯುತ್ತದೆಂಬ ಕಾಲ ಹೋಯಿತು: ಕುಮಾರಸ್ವಾಮಿ
Team Udayavani, Aug 9, 2022, 1:09 PM IST
ಬೆಂಗಳೂರು: ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಯಿತು. ಡಿ.ಕೆ.ಶಿವಕುಮಾರ್ ಅವರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು. ಅಲ್ಲದೆ, ಪಕ್ಷದಲ್ಲಿ ನಿಮ್ಮ ಸ್ವಾತಂತ್ರ್ಯಹರಣ ಮಾಡುತ್ತಿರುವವರ ಕಡೆ ಗಮನ ಹರಿಸಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾಸ್ವಾಮಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ ಮಾಡಿದ್ದೆ ಜೆಡಿಎಸ್ ನವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಎಂದು ಡಿ.ಕೆ.ಶಿವಕುಮಾರ್ ಮಾಡಿರುವ ವ್ಯಂಗ್ಯಕ್ಕೆ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಅವರು, ಈಗ ಸ್ವಾತಂತ್ರೋತ್ಸವದ ನಡಿಗೆ ಎಂದು ಹೊರಟಿದ್ದೀರಿ. ಯಾರ ಸ್ವಾತಂತ್ರ್ಯಕ್ಕಾಗಿ ಎಂದು ಸ್ವಲ್ಪ ಬಿಡಿಸಿ ಹೇಳುವಿರಾ? ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟ ಮಾಡಿದ್ದೇ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆ ಅಪ್ರಭುದ್ಧತೆಯ ಪ್ರತೀಕ ಮತ್ತು ಪರಮ ಬಾಲಿಶ ಎಂದು ಟೀಕಿಸಿದ್ದಾರೆ.
ಅವರಿಗೆ ಗೊತ್ತಿರಲಿ, 1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ. ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಡಲು ಮಹಾತ್ಮಗಾಂಧಿ ನೇತೃತ್ವದ ಕಾಂಗ್ರೆಸ್ ಹೋರಾಟ ಮಾಡಿತ್ತು. ನಂತರದ ಕಾಂಗ್ರೆಸ್ ಮಾಡಿದ್ದೇ ಸ್ವಾತಂತ್ರ್ಯದ ಮಾರಣಹೋಮ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಈದ್ಗಾ ಮೈದಾನದಲ್ಲಿ ಶಿವಲಿಂಗ ಸ್ಥಾಪನೆ ಎಚ್ಚರಿಕೆ: ಇಂದು ಡಿಸಿಪಿ ನೇತೃತ್ವದಲ್ಲಿ ಶಾಂತಿ ಸಭೆ
ಮಾಡಿದ ಪಾಪಕ್ಕೆ ಇವತ್ತಿನ ಕಾಂಗ್ರೆಸ್ ಶಾಸ್ತಿ ಅನುಭವಿಸುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದು ಅಂದು ರಾಷ್ಟ್ರಪಿತರು ತಂದುಕೊಟ್ಟ ಸ್ವಾತಂತ್ರ್ಯ ಹಾಗೂ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಜಗತ್ ಮಾನ್ಯ ಸಂವಿಧಾನದ ಕಾರುಣ್ಯದಿಂದ. ಇದರಲ್ಲಿ ಕಾಂಗ್ರೆಸ್ ಪಾತ್ರ ಶೂನ್ಯ. ನಾನು ಪಂಡಿತ್ ನೆಹರು, ಲಾಲ ಬಹದ್ದೂರ ಶಾಸ್ತ್ರಿ ಅವರ ಬಗ್ಗೆ ಹಗುರವಾಗಿ ಮಾತನಾಡಲಾರೆ. ಅವರ ನಂತರ ಕಾಂಗ್ರೆಸ್ ಹೇಗೆಲ್ಲಾ ಹಾದಿತಪ್ಪಿ ಜನರ ಸ್ವಾತಂತ್ರ್ಯ ಹರಣ ಮಾಡಿತು ಎನ್ನುವದನ್ನು ಡಿ.ಕೆ.ಶಿವಕುಮಾರ್ ಅವರು ಇತಿಹಾಸ ಓದಿದರೆ ಸತ್ಯ ಅರಿವಾಗುತ್ತದೆ ಎಂದು ಹೇಳಿದ್ದಾರೆ.
ಸಂವಿಧಾನ ಕೊಟ್ಟವರು, ದೇಶದ ಮೊದಲನೇ ಸಂಪುಟದಲ್ಲಿ ಸಚಿವರಾಗಿದ್ದವರು ಡಾ.ಬಿ.ಆರ್.ಅಂಬೇಡ್ಕರ್ ಅವರು. ಅಂಥ ಮಹನೀಯರನ್ನು ಸಂಸತ್ತಿಗೇ ಮತ್ತೆ ಬಾರದಂತೆ ತಡೆದು, ಭಾರತದ ದೀನದಲಿತರ ದನಿಯನ್ನು ನಿರ್ದಯವಾಗಿ ಅಡಗಿಸಿದ ಪಕ್ಷದ ನಾಯಕರು ಇವತ್ತು ಸ್ವಾತಂತ್ಯದ ಭಜನೆ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.