Vidhana Soudha; ಅರ್ಧದಿನ ಪಾಕ್ ಗಲಾಟೆ:ಸರಕಾರದ ಉತ್ತರವನ್ನು ಖಂಡಿಸಿ ಬಿಜೆಪಿ ಧರಣಿ
Team Udayavani, Feb 28, 2024, 10:41 PM IST
ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿದ ಪ್ರಕರಣ ಬುಧವಾರ ವಿಧಾನಸಭೆಯಲ್ಲಿ ಮಾರ್ದನಿಸಿತಲ್ಲದೆ, ಗಂಭೀರ ಚರ್ಚೆ ನಡೆಯಿತು. ಸರಕಾರದ ಉತ್ತರವನ್ನು ವಿರೋಧಿಸಿ ವಿಪಕ್ಷ ಬಿಜೆಪಿ ಧರಣಿ ನಡೆಸಿತು.
ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು. ಇದರ ನೈತಿಕ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊರಬೇಕು ಹಾಗೂ ಸರಕಾರ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ಸದಸ್ಯರು ಆಗ್ರಹಿಸಿದರು. ಇದಕ್ಕೆಲ್ಲ ಉತ್ತರ ನೀಡಿದ ಗೃಹ ಸಚಿವ ಡಾ| ಜಿ.ಪರಮೇಶ್ವರ್ ಅವರು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವೀಡಿಯೋಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ(ಎಫ್ಎಸ್‌ಎಲ್)ಕ್ಕೆ ಕಳುಹಿಸಿದ್ದು ವರದಿ ಬಂದ ಬಳಿ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಹೇಳಿದರು.
ಈ ಉತ್ತರದಿಂದ ಸಮಾಧಾನ ಆಗದ ವಿಪಕ್ಷ ಸದಸ್ಯರು, ಬಾವಿಗಿಳಿದು ಧರಣಿ ನಡೆಸಿದರು. ಅರ್ಧ ದಿನ ನಡೆದ ಕಲಾಪದಲ್ಲಿ ಆಡಳಿತ ಹಾಗೂ ವಿಪಕ್ಷಗಳ ಆರೋಪ-ಪ್ರತ್ಯಾರೋಪಗಳ ನಡುವೆ ಎರಡು ಬಾರಿ ಮುಂದೂಡಿಕೆಯಾಗಿದ್ದ ಕಲಾಪವು ಗುರುವಾರಕ್ಕೆ ವಿಸ್ತರಣೆ ಆಯಿತು.
ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ, ಕರ್ನಾಟಕದ ಇತಿಹಾಸದಲ್ಲಿ ನೂರಾರು ಅಧಿವೇಶನ ನಡೆದಿದೆ. ಕೆಂಗಲ್ ಹನುಮಂತಯ್ಯ ಕಟ್ಟಿರುವ ಈ ವಿಧಾನಸೌಧವು 7 ಕೋಟಿ ಕನ್ನಡಿಗರ ಹೃದಯವಿದ್ದಂತೆ. ಇದೊಂದು ಸುರಕ್ಷಿತ ತಾಣ ಎನ್ನುವ ಭಾವನೆ ಇದೆ. ಸಂವಿಧಾನವನ್ನು ರಕ್ಷಿಸಬೇಕಾದ ಸ್ಥಳವಿದು. ಇಂತಹ ಜಾಗದಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿದ್ದು, ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಇವರನ್ನು ಹೀಗೇ ಬಿಟ್ಟರೆ ಗಲ್ಲಿ ಗಲ್ಲಿಗಳಲ್ಲೂ ಪಾಕಿಸ್ಥಾನವನ್ನೇ ಸೃಷ್ಟಿಸುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪಾಕ್ ಪರ ಇರುವವರು ವಿಧಾನಸೌಧದ ಒಳಗೆ ಹೇಗೆ ಬಂದರು, ಅವರನ್ನು ಕರೆ ತಂದವರು ಯಾರು, ಘೋಷಣೆ ಕೂಗಲು ಅವರಿಗೆಷ್ಟು ಧೈರ್ಯ, ಅವರು ಇಲ್ಲಿಂದ ತಪ್ಪಿಸಿಕೊಳ್ಳಲು ಸಹಕರಿಸಿದವರು ಯಾರು, ತತ್‌ಕ್ಷಣವೇ ಯಾಕೆ ಬಂಧಿಸಲಿಲ್ಲ, ಏನೂ ನಡೆದೇ ಇಲ್ಲ ಎನ್ನುವಂತೆ ಸರ್ಕಾರ ವರ್ತಿಸುತ್ತಿರುವುದೇಕೆ ಮುಂತಾದ ಪ್ರಶ್ನೆಗಳ ಸುರಿಮಳೆಗರೆದರು.
ಗಂಭೀರ ವಿಚಾರ: ಡಾ| ಜಿ. ಪರಮೇಶ್ವರ್
ಸದನಕ್ಕೆ ಉತ್ತರ ನೀಡಿದ ಗೃಹಸಚಿವ ಡಾ| ಜಿ. ಪರಮೇಶ್ವರ್, ಇದೊಂದು ಗಂಭೀರ ವಿಚಾರವಾಗಿದ್ದು, ಇದನ್ನು ರಾಜಕೀಯಕ್ಕೆ ಬಳಸುವುದು ಬೇಡ. ನೈಜ ಸ್ಥಿತಿಯನ್ನು ಚರ್ಚಿಸೋಣ. ಇಂತಹ ಘಟನೆಗಳು ಮರುಕಳಿಸದಂತೆ ಏನು ಮಾಡುವುದೆಂದು ತೀರ್ಮಾನಿಸೋಣ. ಈ ಘಟನೆ ಆಗಬಾರದಿತ್ತು. ಎರಡು ಮಾಧ್ಯಮಗಳಲ್ಲಿ ಈ ವಿಚಾರ ವರದಿಯಾಗಿದೆ. ಎರಡೂ ಕಡೆಯಿಂದ ಭಿನ್ನ ಹೇಳಿಕೆಗಳು ಬಂದಿವೆ. ಹೀಗಾಗಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಾಸಿರ್ ಹುಸೇನ್ 25 ಮಂದಿಗೆ ಅನುಮತಿ ಪಡೆದು ಕರೆದುಕೊಂಡು ಬಂದಿದ್ದರು. ಅವರೆಲ್ಲರೂ ಜೋಶ್‌ನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದರೆ, ಗಮನಕ್ಕೆ ಬಂದಿರುತ್ತಿತ್ತು ಎಂದು ಕೆಲವು ಮಾಧ್ಯಮದವರು ಹೇಳಿದ್ದಾರೆ. ಹೀಗಾಗಿ ವೀಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರಲ್ಲಿ ಯಾರನ್ನೂ ರಕ್ಷಿಸುವುದಿಲ್ಲ. ದೇಶ ಹಾಗೂ ಸಮಾಜದ ಹಿತ ಕಾಪಾಡಲು ಸರಕಾರ ಬದ್ಧವಾಗಿದೆ ಎಂದರು.
ಸದನದಲ್ಲಿ ಕೇಳಿಸಿದ್ದು…
ತಾಕತ್ತಿದ್ದರೆ ಸರಕಾರದ ವಿರುದ್ಧ ಕೇಂದ್ರದಿಂದ ದೇಶದ್ರೋಹಿ ಕೇಸು ಹಾಕಿಸಲಿ.
– ದೇಶದ್ರೋಹಿ ಸರಕಾರ ಎಂದು ಟೀಕಿಸಿದ ಬಿಜೆಪಿಯ ಎನ್. ರವಿಕುಮಾರ್‌ಗೆ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್
ಘೋಷಣೆ ಕೂಗಿದವನನ್ನು ಬಂಧಿಸುವ ತಾಕತ್ತಿಲ್ಲ. ಗೂಂಡಾಗಿರಿ ಮಾಡುತ್ತೀರಾ ಇಲ್ಲಿ?
– ಏಕವಚನದಲ್ಲಿ ರವಿಕುಮಾರ್ ಅವರನ್ನು ಟೀಕಿಸಿದ ಜಬ್ಬರ್ ಖಾನ್‌ಗೆ ಬಿಜೆಪಿ ಸದಸ್ಯರು
ಪಾಕಿಸ್ಥಾನ ಶತ್ರುರಾಷ್ಟ್ರವಲ್ಲ; ನೆರೆರಾಷ್ಟ್ರ ಅಷ್ಟೇ.- ಶತ್ರುರಾಷ್ಟ್ರ ಎಂದ ರವಿಕುಮಾರ್‌ಗೆ ಬಿ.ಕೆ. ಹರಿಪ್ರಸಾದ್ ತಿರುಗೇಟು
ಬೆನ್ನು ಹಿಂದೆ ಗೋಡ್ಸೆಯನ್ನು ಕಟ್ಟಿಕೊಂಡು ಬರುತ್ತಿದ್ದೀರಿ. ಅದು ತುಂಬಾ ಭಾರವಾದದ್ದು ಎಂಬ ಎಚ್ಚರ ಇರಲಿ.- ವಿಪಕ್ಷ ಬಿಜೆಪಿಯನ್ನು ಉದ್ದೇಶಿಸಿ ಸಚಿವ ಎಚ್.ಕೆ. ಪಾಟೀಲ್ ಮಾತು
ಕೇಸರಿ ಶಾಲು ನಮ್ಮದು; ಘೋಷಣೆ ಕೂಗಿದ ಜನ ಅವರ ಕಡೆಯವರು.
– ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡು ಶತ್ರುರಾಷ್ಟ್ರಕ್ಕೆ ಜಿಂದಾಬಾದ್ ಹಾಕಿದ್ದರು ಎಂದ ಆಡಳಿತ ಪಕ್ಷದ ಟೀಕೆಗೆ ಕೋಟ ಶ್ರೀನಿವಾಸ ಪೂಜಾರಿ
ಪಾಕ್ ಪರ ಘೋಷಣೆ ಕೂಗಿರುವುದು ಅಕ್ಷಮ್ಯ ಅಪರಾಧ. ಈಗಾಗಲೇ ಪರಿಷತ್ ಹಾಗೂ ವಿಧಾನ ಸಭೆಯಲ್ಲಿ ಚರ್ಚೆ ನಡೆದಿದೆ. ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ
– ಬಿ.ಎಸ್.ಯಡಿಯೂರಪ್ಪ , ಮಾಜಿ ಸಿಎಂ
ವಿಧಾನಸೌಧದೊಳಗೆ ಪಾಕ್ ಪರ ಘೋಷಣೆ ಹೇಗೆ ಬಂತು? ಮೊದಲ ಮಹಡಿ ಮಾತ್ರವಲ್ಲದೆ ತಳಮಹಡಿಯಲ್ಲೂ ಹೋಗಿ ಘೋಷಣೆ ಕೂಗಿದ್ದಾರೆ. ಆ ಸಮುದಾಯವರಿಗೆ ಎಷ್ಟು ಧೈರ್ಯ? ದೇಶ ವಿರೋಧಿ ಚಟುವಟಿಕೆಗೆ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದ್ದು, ಪಾಕಿಸ್ಥಾನದ ಏಜೆಂಟರಂತೆ ವರ್ತಿಸುತ್ತಿದೆ. ಕೇಂದ್ರ ಸರಕಾರದ ವಿರುದ್ಧ ನಿರ್ಣಯ ಕೈಗೊಂಡ ಕಾಂಗ್ರೆಸ್ ಸರಕಾರ, ದೇಶ ವಿರೋಧಿಗಳ ವಿರುದ್ಧವೂ ಸರ್ವಾನುಮತದ ನಿರ್ಣಯ ಕೈಗೊಳ್ಳಬೇಕು.
– ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ವಿಧಾನಸೌಧದಲ್ಲಿ ಯಾರೂ ಪಾಕಿಸ್ಥಾನ ಪರ ಘೋಷಣೆ ಕೂಗಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿಯವರು ಇದನ್ನು ತಿರುಚುತ್ತಿ¨ªಾರೆ. ಈ ಬಗ್ಗೆ ತನಿಖೆ ಮಾಡುವಂತೆ ಸೂಚಿಸಿದ್ದೇವೆ. ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಸುಳ್ಳು ಹಬ್ಬಿಸಿದ್ದರೆ, ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.
– ಡಿ.ಕೆ. ಶಿವಕುಮಾರ್, ಡಿಸಿಎಂ
ಶೃಂಗೇರಿಯ ದರ್ಗಾ ಮೇಲಿದ್ದ ಹಸಿರು ಹೊದಿಕೆಯನ್ನು ತೆಗೆದು ಶಂಕಾರಾಚರ್ಯರ ಮೇಲೆ ಹೊದಿಸಿದ್ದ ಬಜರಂಗದಳದ ಕಾರ್ಯಕರ್ತನನ್ನು ಮಾನಸಿಕ ಅಸ್ವಸ್ಥ ಎಂದು ಬಿಡುಗಡೆ ಮಾಡಲಾಯಿತು. ಎಲ್ಲವೂ ಮಸೀದಿಯ ಸಿಸಿಟಿವಿಯಲ್ಲಿ ದಾಖಲಾಗಿವೆ. ಆತ ಚಿನ್ನದಂಗಡಿಯೊಂದರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಆತನನ್ನು ಬಿಡಿಸಿದವರೇ ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದಾರೆ.
– ಟಿ.ಡಿ. ರಾಜೇಗೌಡ, ಕಾಂಗ್ರೆಸ್ ಶಾಸಕ
ಎಫ್ಎಸ್‌ಎಲ್ ವರದಿ ಬಂದ ಬಳಿಕ ಕ್ರಮ ಎಂದರೆ ಏನರ್ಥ? ಅಲ್ಲಿಯವರೆಗೆ ಯಾರ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದಿಲ್ಲವೇ? ಯಾರನ್ನೂ ವಿಚಾರಣೆಗೂ ಒಳಪಡಿಸುವುದಿಲ್ಲವೇ? ಪಾಕ್ ಪರ ಘೋಷಣೆ ಕೂಗಿದವರನ್ನೂ ಬಂಧಿಸಲಾಗದಿದ್ದರೆ ಈ ಸರಕಾರ ಯಾಕೆ ಅಧಿಕಾರದಲ್ಲಿರಬೇಕು?
– ವಿ.ಸುನಿಲ್ ಕುಮಾರ್, ಬಿಜೆಪಿ ಶಾಸಕ
ನಾಡಿನ ಆತ್ಮದಂತಿರುವ ವಿಧಾನಸೌಧದಲ್ಲಿ ನಡೆದ ಪ್ರಕರಣವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಪಾಕ್ ಪರ ಧ್ವನಿ ಅಡಗಿಸದಿದ್ದರೆ ಈ ದೇಶಕ್ಕೆ ಉಳಿಗಾಲ ಇಲ್ಲ. ನಮಗೆ ವಿಧಾನಸೌಧದ ಭದ್ರತೆ ಬಗ್ಗೆ ಇಷ್ಟು ದಿನ ಅನುಮಾನ ಇರಲಿಲ್ಲ. ಈಗ ಅನುಮಾನ ಬರುವಂತಾಗಿದೆ.
– ಆರಗ ಜ್ಞಾನೇಂದ್ರ, ಮಾಜಿ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.