Railway ಹಾಸನ-ಮಂಗಳೂರು ಜೋಡಿ ಮಾರ್ಗ ಚರ್ಚೆ; ಕೇಂದ್ರ ಸಚಿವರ ಜತೆ ಸಭೆ ಆಯೋಜನೆ
ರಾಜ್ಯದ ರೈಲ್ವೇ ಯೋಜನೆ
Team Udayavani, Sep 10, 2024, 6:40 AM IST
ಬೆಂಗಳೂರು: ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಹಾಗೂ ಬೆಂಗಳೂರು- ಹಾಸನ-ಮಂಗಳೂರು ನಡುವೆ ಜೋಡಿ ರೈಲ್ವೇ ಮಾರ್ಗ ನಿರ್ಮಾಣ ಕುರಿತು ಶೀಘ್ರದಲ್ಲೇ ಕೇಂದ್ರ ಸಚಿವರೊಂದಿಗೆ ಸಭೆ ಆಯೋಜಿಸಿ ಆಹ್ವಾನ ನೀಡುವುದಾಗಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ಗೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.
ಬೆಂಗಳೂರು ಉಪನಗರ ರೈಲು ಯೋಜನೆ ಕುರಿತಂತೆ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಹಲವು ರೈಲ್ವೇ ಯೋಜನೆಗಳ ಕುರಿತು ಮನವಿ ಮಾಡಿದ ಸಚಿವ ಎಂ.ಬಿ. ಪಾಟೀಲ್, ಬಂದರು ನಗರಿಗೆ ರೈಲ್ವೇ ಸಂಪರ್ಕ ಕಲ್ಪಿಸುವುದರಿಂದ ಉತ್ತರ ಕರ್ನಾಟಕ ಭಾಗಕ್ಕೂ ಅನುಕೂಲ ಆಗಲಿದ್ದು, ಅದೇ ರೀತಿ ಉತ್ತರ ಕರ್ನಾಟಕ ಭಾಗದ ಹಲವೆಡೆ ರೈಲ್ವೇ ವಿಸ್ತರಣೆ ಆಗಬೇಕಿದೆ ಎಂದು ಕೋರಿದರು.
ಹುಬ್ಬಳ್ಳಿ-ಅಂಕೊಲಾ ರೈಲ್ವೇ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯ ತೀರುವಳಿ ಅವಶ್ಯಕತೆ ಇದ್ದು, ಒಟ್ಟಾರೆ ರಾಜ್ಯದ ರೈಲ್ವೇ ಯೋಜನೆಗಳ ಕುರಿತಂತೆ ಸಮಾಲೋಚನೆ ಮಾಡಲು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಸಭೆ ಏರ್ಪಾಡು ಮಾಡುವುದಾಗಿ ಭರವಸೆ ಕೊಟ್ಟರು. ಅಷ್ಟೇ ಅಲ್ಲದೆ, ರಾಜ್ಯಕ್ಕೆ ಯಾವೆಲ್ಲ ಯೋಜನೆಗಳಿಗೆ ಎಷ್ಟೆಷ್ಟು ಖರ್ಚು ಮಾಡಲಾಗಿದೆ ಎಂಬುದರ ಶ್ವೇತಪತ್ರವನ್ನೂ ಬೇಕಿದ್ದರೆ ಹೊರಡಿಸೋಣ ಎಂದು ಸೋಮಣ್ಣ ಹೇಳಿದರು.
50 ವರ್ಷದಲ್ಲಿ ಆಗದೇ ಇದ್ದದ್ದನ್ನು
ಮೋದಿ ಮಾಡಿದ್ದಾರೆ: ವಿ. ಸೋಮಣ್ಣ
ಪತ್ರಿಕಾಗೋಷ್ಠಿಯಲ್ಲಿ ಸಚಿವ ಎಂ.ಬಿ. ಪಾಟೀಲ್‌ರನ್ನು ಪಕ್ಕದಲ್ಲೇ ಕೂರಿಸಿಕೊಂಡೇ ರಾಜ್ಯ ಸರಕಾರವನ್ನು ಮಾತಿನಿಂದ ತಿವಿದ ವಿ. ಸೋಮಣ್ಣ, ದೇಶಾದ್ಯಂತ 40 ಸಾವಿರ ಜೋಡಿ ರೈಲ್ವೇ ಮಾರ್ಗ ನಿರ್ಮಿಸಿದ್ದು, ಶೇ. 90ರಷ್ಟು ವಿದ್ಯುದೀಕರಣ ಆಗಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ಹಾಗೂ ಹುಬ್ಬಳ್ಳಿ-ಧಾರವಾಡ ಮಾರ್ಗದ ಯೋಜನೆಗಳಿಗೆ ಭೂಸ್ವಾಧೀನ ಸಮಸ್ಯೆಯಿದ್ದು, ರಾಜ್ಯ ಸರಕಾರ ಅದನ್ನು ಬಗೆಹರಿಸಿಕೊಟ್ಟರೆ ತ್ವರಿತವಾಗಿ ಯೋಜನೆಗಳು ಪೂರ್ಣಗೊಳ್ಳಲಿವೆ.
ರೈಲ್ವೇ ಮೇಲ್ಸೇತುವೆ ಮತ್ತು ಕೆಳಸೇತುವೆ ಯೋಜನೆಗಳನ್ನು ಕೇಂದ್ರ ಸರಕಾರವೇ ಅನುಷ್ಠಾನಗೊಳಿಸಲು ತಯಾರಿದೆ. ರಾಯ ದುರ್ಗ-ಮಡಕಶಿರ-ತುಮಕೂರು ನಡುವಿನ 200 ಕಿ.ಮೀ. ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಹೆಜ್ಜಾಲ-ಕನಕಪುರ-ಸಾತನೂರು-ಚಾಮರಾಜನಗರ ರೈಲ್ವೇ ಯೋಜನೆಗಾಗಿ ಮಂಡಳಿ ಮುಂದೆ 400 ಕೋಟಿ ರೂ.ಗಳ ಪ್ರಸ್ತಾವನೆ ಮಂಡಿಸಿದ್ದೇನೆ. 10 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳ ಪೈಕಿ ಸಚಿವ ಎಂ.ಬಿ. ಪಾಟೀಲ್‌ರ ಕ್ಷೇತ್ರವಾದ ವಿಜಯಪುರಕ್ಕೂ ಒಂದು ಸಿಗಬಹುದು. ಒಟ್ಟಾರೆ ರೈಲ್ವೇ ಇಲಾಖೆಯಲ್ಲಿ ಕಳೆದ 50 ವರ್ಷದಲ್ಲಿ ಆಗದೇ ಇರುವ ಹಲವು ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಹಲವು ರಾಜ್ಯಗಳಲ್ಲಿ ಅಭಿವೃದ್ಧಿ ವಿಚಾರ ಬಂದಾಗ ರಾಜಕೀಯ ಪಕ್ಕಕ್ಕಿಡುತ್ತಾರೆ. ಕರ್ನಾಟಕದಿಂದಲೂ ಸಹಕಾರ ಸಿಗುತ್ತಿದೆ, ಮುಂದೆಯೂ ಸಿಗಬೇಕು ಎಂದು ಟಾಂಗ್ ನೀಡಿದರು.
ಸಕಲೇಶಪುರ-ಸುಬ್ರಹ್ಮಣ್ಯ ಸುರಂಗ ಮಾರ್ಗ
ಸಭೆ ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪಾಟೀಲ್, ಮಂಗಳೂರಿಗೆ ರೈಲ್ವೇ ಸಂಪರ್ಕ ಇದ್ದರೂ ಜೋಡಿ ಮಾರ್ಗ ಆಗದೇ ಇರುವುದರಿಂದ ಸರಕು ಸಾಗಣೆ ಸೇರಿದಂತೆ ಕೈಗಾರಿಕಾ ಬೆಳವಣಿಗೆಯೂ ಕುಂಠಿತವಾಗಿದೆ. ಹೀಗಾಗಿ ಬೆಂಗಳೂರು-ಹಾಸನ-ಮಂಗಳೂರು ನಡುವಿನ ರೈಲ್ವೇಯನ್ನು ಜೋಡಿ ಮಾರ್ಗವಾಗಿ ಮಾರ್ಪಡಿಸಬೇಕು. ಇತ್ತೀಚೆಗೆ ಮಳೆಯಿಂದಾಗಿ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ಗುಡ್ಡ ಕುಸಿತ ಪ್ರಕರಣ ಹೆಚ್ಚುತ್ತಿದ್ದು, ಈ ಮಾರ್ಗದಲ್ಲಿ ಸುರಂಗ ನಿರ್ಮಾಣದ ಅಗತ್ಯವಿದೆ. ಅದೇ ರೀತಿ ಹುಬ್ಬಳ್ಳಿ-ಅಂಕೋಲಾ ನಡುವೆ ರೈಲ್ವೇ ಮಾರ್ಗ ನಿರ್ಮಿಸಿದರೆ ಉತ್ತರ ಕರ್ನಾಟಕಕ್ಕೂ ಅನುಕೂಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.