ರಾಜ್ಯವ್ಯಾಪಿಯಾಗಿ ಮುಂದುವರಿದ ಮಳೆಗೆ ಜನ ಕಂಗಾಲು
ನದಿ ಪಾತ್ರದ ಗ್ರಾಮಗಳಲ್ಲಿ ನೆರೆ ಭೀತಿ : ಮುಂಜಾಗ್ರತಾ ಕ್ರಮವಾಗಿ ಹಲವೆಡೆ ಜನರ ಸ್ಥಳಾಂತರ
Team Udayavani, Jul 8, 2022, 11:51 PM IST
ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಪುನರ್ವಸು ಮಳೆ ಬಿರುಸು ಮುಂದುವರಿದಿದ್ದು, ನದಿಗಳು ತುಂಬಿ ಹರಿಯುತ್ತಿವೆ. ನದಿ ಪಾತ್ರದ ಗ್ರಾಮಗಳಲ್ಲಿ ನೆರೆ ಆವರಿಸುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ತುಂಗಾ, ಭದ್ರಾ, ಹೇಮಾ ವತಿ ನದಿಗಳು ಅಪಾಯದ ಮಟ್ಟದಲ್ಲೇ ಹರಿಯುತ್ತಿವೆ. ಬಯಲು ಸೀಮೆ ಭಾಗದಲ್ಲಿ ಮಳೆ ಇಳಿಮುಖವಾಗಿದೆ. ಜು.9ರ ವರೆಗೂ ಶಾಲೆ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಶಿವಮೊಗ್ಗ ಜಿಲ್ಲಾದ್ಯಂತ ಧಾರಾಕಾರ ಮಳೆ ಮುಂದುವರಿದಿದ್ದು, ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ತುಂಗಾ, ಶರಾವತಿ, ವರದಾ ಮೊದಲಾದ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಸಾಗರ, ತೀರ್ಥಹಳ್ಳಿ, ಹೊಸನಗರ ತಾಲೂಕುಗಳ ಶಾಲೆಗಳಿಗೆ ಶುಕ್ರವಾರವೂ ರಜೆ ಘೋಷಿಸಲಾಗಿತ್ತು.
ತುಂಗಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಾಶಯಕ್ಕೆ 48,209 ಕ್ಯೂಸೆಕ್ ಒಳಹರಿವಿದ್ದು, 54,065 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 588.24 ಅಡಿ ಇದ್ದು, ಶುಕ್ರವಾರದ ಮಟ್ಟ 586.51 ಅಡಿಯಷ್ಟು ಇದೆ. ತುಂಗಾ ನದಿಯಿಂದ ಭಾರೀ ಪ್ರಮಾಣದ ನೀರನ್ನು ಹೊರ ಬಿಡುತ್ತಿ ರುವುದರಿಂದ ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಮುಂದು ವರಿದಿದ್ದು, ಜು.9 ಮತ್ತು 10ರಂದು ಬೆಳಗಿನ 8.30ರ ತನಕ ಭಾರೀ ಮಳೆಯ ಮುನ್ಸೂಚನೆ ಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಹಾಗೂ ಘಟ್ಟದ ತಾಲೂಕುಗಳಲ್ಲಿ ಭಾರೀ ಮಳೆ ಸುರಿಯಲಿದ್ದು, ರೆಡ್ ಅಲರ್ಟ್ ಘೋಷಿ ಸಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾ ವರ, ಭಟ್ಕಳ, ಘಟ್ಟದ ಮೇಲಿನ ಜೊಯಿಡಾ, ಶಿರಸಿ, ಸಿದ್ದಾಪುರ ತಾಲೂಕಿನ ಅಂಗನವಾಡಿ, ಶಾಲೆ-ಕಾಲೇಜು, ತಾಂತ್ರಿಕ ಕಾಲೇಜುಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿ ಒಟ್ಟು ಎಂಟು ಕಾಳಜಿ ಕೇಂದ್ರ ಪ್ರಾರಂಭಿಸಲಾಗಿದೆ.
ಹೊನ್ನಾವರ ತಾಲೂಕಿನ ಗುಂಡಬಾಳ, ಭಾಸ್ಕೇರಿ, ಬಡಗಣಿ ಹೊಳೆಗಳು ಉಕ್ಕಿ ಹರಿದ ಪರಿ ಣಾಮ ತೀರದಲ್ಲಿದ್ದ 66 ಮನೆಗಳಿಗೆ ನೀರು ನುಗ್ಗಿವೆ.
ಭಟ್ಕಳದಲ್ಲಿ ಆತಂಕ ಸೃಷ್ಟಿಯಾಗಿದ್ದು, ಚೌಥನಿ ರಸ್ತೆ, ಮುಂಡಳ್ಳಿ ರಸ್ತೆ ಸಂಪೂರ್ಣ ಮುಚ್ಚಿದ್ದು, ಕುದ್ರೆ ಬೀರಪ್ಪ ದೇವಸ್ಥಾನ ಜಲಾವೃತವಾಗಿದೆ.
ನಗರದ ಚೌಥನಿಯಲ್ಲಿ ಹೊಳೆ ಉಕ್ಕಿ ಹರಿಯಲಾರಂಭಿಸಿದ್ದು, ಸೇತುವೆ ಮುಳುಗಡೆ ಯಾಗಿದೆ. ಕುದ್ರೆಬೀರಪ್ಪ ದೇವಸ್ಥಾನ ಅರ್ಧದಷ್ಟು ಮುಳುಗಿದ್ದು ಮುಂಡಳ್ಳಿ ಸಂಪರ್ಕ ಕಡಿತಗೊಂಡಿದೆ. ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ಹೊಳೆದಂಡೆಯಲ್ಲಿರುವ ಅಪಾಯದ ಅಂಚಿನ ಮನೆಗಳಲ್ಲಿ ಜನರನ್ನು ಸ್ಥಳಾಂತರ ಮಾಡಲಾಗಿದೆ. ಕಾರವಾರ ಹಾಗೂ ಸುತ್ತಲಿನ ಹಳ್ಳಿಗಳು ಜಲಮಯವಾಗಿವೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೆರೆಯ ನೀರು ತುಂಬಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ಕಾಳಿನದಿ ಯೋಜನೆ 2ನೇ ಹಂತ ಕದ್ರಾ ಜಲಾಶಯದಿಂದ ಶುಕ್ರವಾರ ಮಧ್ಯಾಹ್ನ 3.30ಕ್ಕೆ 7 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗಿದೆ.
5 ಸೇತುವೆ ಮುಳುಗಡೆ
ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ದೂಧ್‌ಗಂಗಾ ಮತ್ತು ಕೃಷ್ಣಾ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲೂಕಿನ ಐದು ಕೆಳಮಟ್ಟದ ಸೇತುವೆಗಳು ನೀರಿನಲ್ಲಿ ಮುಳುಗಿವೆ. ಭೋಜ-ಕಾರದಗಾ, ಮಲಿಕವಾಡ-ದತ್ತವಾಡ, ಭೋಜವಾಡಿ- ಕುನ್ನೂರ, ಕಲ್ಲೋಳ-ಯಡೂರ, ಬಾರವಾಡ-ಕುನ್ನೂರ ಗ್ರಾಮಗಳ ನಡುವಿನ ಸೇತುವೆ ಮುಳುಗಡೆಯಾಗಿವೆ. ಆದರೆ ಪರ್ಯಾಯ ಮಾರ್ಗ ಇರುವುದರಿಂದ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿಲ್ಲ. ನದಿಗಳ ಮಟ್ಟ ಏರಿಕೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎಸ್‌ಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.
ಕಬಿನಿ ಭರ್ತಿಗೆ 4 ಅಡಿ ಬಾಕಿ
ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ಒಳಹರಿವಿನಲ್ಲಿ ಕೊಂಚ ಇಳಿಕೆ ಯಾದರೂ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಸಂಪೂರ್ಣವಾಗಿ ಜಲಾಶಯ ಭರ್ತಿಯಾಗಲು ಕೇವಲ 4 ಅಡಿ ಬಾಕಿ ಇದೆ. ಕೇರಳದ ವಯನಾಡಿನಲ್ಲಿ ಮಳೆಯಾದರೆ ಮಾತ್ರ ಕಬಿನಿ ಒಳಹರಿವಿನಲ್ಲಿ ಏರಿಕೆಯಾಗಲಿದೆ. ಒಂದು ವಾರದಿಂದ ವಯನಾಡಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳ ಹರಿವು ಗಣನೀಯವಾಗಿ ಏರಿದ್ದು, ಜಲಾಶಯ ಬಹು ಬೇಗ ಭರ್ತಿಯಾಗುವ ಹಂತ ತಲುಪಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.