ದ್ವೇಷ ಭಾಷಣ: ಸ್ವಾಮೀಜಿ, ಶಾಸಕ, ಸಂಸದರ ವಿರುದ್ಧ ಅರ್ಜಿ
Team Udayavani, Apr 2, 2022, 7:40 AM IST
ಬೆಂಗಳೂರು: ಮುಸ್ಲಿಂ ಸಮದಾಯದ ವಿರುದ್ಧ ದ್ವೇಷ ಕಾರುವ ಹಾಗೂ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ಮುಖಂಡರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಸರಕಾರಕ್ಕೆ ಆದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಈ ಅರ್ಜಿಯ ತುರ್ತು ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ.
ಈ ಕುರಿತು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಿವಾಸಿ ಮೊಹಮ್ಮದ್ ಖಲೀಲುಲ್ಲಾ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಎಂ.ಪಿ. ರೇಣುಕಾಚಾರ್ಯ, ಸಿ.ಟಿ. ರವಿ, ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ರಿಷಿಕುಮಾರ ಸ್ವಾಮೀಜಿ, ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಮತ್ತು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿರುದ್ಧ ಕಾನೂನು ಕ್ರಮ ಜರಗಿಸಲು ಸರಕಾರಕ್ಕೆ ಆದೇಶಿಸುವಂತೆ ಅರ್ಜಿದಾರರು ಕೋರಿದ್ದರು.
ಅರ್ಜಿದಾರರ ಪರ ವಕೀಲ ರಹ್ಮತುಲ್ಲಾ ಕೊತ್ವಾಲ್ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾಗಿ, ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು. ಈ ಮನವಿಯನ್ನು ತಳ್ಳಿ ಹಾಕಿದ ನ್ಯಾಯಪೀಠ, ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವ ಅಗತ್ಯವೇ ನಿಲ್ಲ. ನಿಗದಿತ ಕ್ರಮದಲ್ಲೇ ಅರ್ಜಿಯು ವಿಚಾರಣೆಗೆ ಬರಲಿ ಎಂದು ಸೂಚಿಸಿತು.
ಬಿಜೆಪಿ ಮುಖಂಡರು ಪದೇ ಪದೇ ಪ್ರಚೋದನಾಕಾರಿ ಮತ್ತು ದ್ವೇಷಕಾರುವ ಭಾಷಣ ಮಾಡುತ್ತಿದ್ದಾರೆ. ಆ ಮೂಲಕ ಸಮಾಜದಲ್ಲಿ ತಾರತಮ್ಯ ಉಂಟು ಮಾಡಲು, ಕೋಮು ಭಾವನೆ ಹುಟ್ಟುಹಾಕಲು ಮತ್ತು ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಈ ಕುರಿತು ಮಾ. 28ರಂದು ರಾಜ್ಯ ಸರಕಾರದa ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. ಅದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.