ಹಿಮವದ್ ಗೋಪಾಲಸ್ವಾಮಿ ದರ್ಶನಕ್ಕೆ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ಅವಕಾಶ
ಕಾಡಾನೆ ಬಳಿ ತೆರಳಿ ಸೆಲ್ಪಿ.... ದೃಶ್ಯ ವೈರಲ್ ಆದ ಬೆನ್ನಲ್ಲೇ..
Team Udayavani, Feb 15, 2024, 7:30 PM IST
ಗುಂಡ್ಲುಪೇಟೆ(ಚಾಮರಾಜನಗರ): ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ತಾಲೂಕು ಆಡಳಿತ ಶಾಕ್ ನೀಡಿದ್ದು, ಭಕ್ತಾದಿಗಳಿಗೆ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ದೇವರ ದರ್ಶನಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಈ ಹಿಂದೆ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರು ಮತ್ತು ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಸಂಜೆ ಸಮಯದಲ್ಲಿ ಬರುವ ಪ್ರವಾಸಿಗರು ದೇವಸ್ಥಾನದ ಬಳಿ ಆಗಮಿಸುವ ಕಾಡಾನೆಯ ಬಳಿ ತೆರಳಿ ಸೆಲ್ಪಿ ತೆಗೆದುಕೊಳ್ಳುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ರೀತಿಯಲ್ಲಿ ಹರಿದಾಡುತ್ತಿತ್ತು. ಕಾಡಾನೆಯಿಂದ ಪ್ರವಾಸಿಗರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಬಂಡೀಪುರ ಸಹಾಯಕ ಅರಣ್ಯ ಅಧಿಕಾರಗಳ ಕೋರಿಕೆಯ ಮೇರೆಗೆ ತಹಶೀಲ್ದಾರ್ ಟಿ.ರಮೇಶ್ ಬಾಬು ಮಧ್ಯಾಹ್ನ 3 ಗಂಟೆ ಬಳಿಕ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಈ ಮೂಲಕ ಬೆಳಗ್ಗೆ 9 ಗಂಟೆಯಿಂದ ಸಂಜೆ 3ರವರೆಗೆ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. 3 ಗಂಟೆಗೆ ದೇವಸ್ಥಾನದಿಂದ ಹೊರಡುವ ಬಸ್‌ನಲ್ಲಿ ಭಕ್ತಾದಿಗಳು ಹಾಗೂ 4-30 ಗಂಟೆಗೆ ಹೊರಡುವ ಬಸ್ಸಿನಲ್ಲಿ ದೇವಸ್ಥಾನದ ಸಿಬಂದಿಗಳು ವಾಪಸ್ ತೆರಳಲು ಸೂಚನೆ ನೀಡಿದ್ದಾರೆ. ಜತೆಗೆ ಭಕ್ತರಿಗೆ ನೀಡುವ ಪ್ರಸಾದದ ವಾಸನೆಯಿಂದ ಕಾಡಾನೆಯು ದೇವಸ್ಥಾನದ ಬಳಿ ಬರುವ ಸಂಭವವಿರುವುದರಿಂದ ಪ್ರಸಾದ ನೀಡಲು ಅರಣ್ಯದ ಹೊರಗಿನ ಬೆಟ್ಟದ ತಪ್ಪಲಿನಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಅರ್ಚಕರಿಗೆ ಸೂಚನೆ ನೀಡಿದ್ದಾರೆ.
ಹಂಗಳ ಹೋಬಳಿ ವ್ಯಾಪ್ತಿಯಲ್ಲಿರುವ ಇಬ್ಬರು ಅಧಿಕಾರಿಗಳನ್ನು ಪ್ರತಿ ಶನಿವಾರ ಮತ್ತು ಭಾನುವಾರ ಭಕ್ತಾದಿಗಳನ್ನು ನಿಯಂತ್ರಿಸಲು ನಿಯೋಜನೆ ಮಾಡುವಂತೆ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.