ಸಾಮಾನ್ಯ ಸಂಗ್ರಹಣ ನಿಧಿಗೆ ಹುಂಡಿ ಹಣ: ಸರಕಾರಕ್ಕೆ ಮಸೂದೆ ವಾಪಸ್ ಕಳುಹಿಸಿದ ರಾಜ್ಯಪಾಲರು
Team Udayavani, Mar 20, 2024, 11:49 PM IST
ಬೆಂಗಳೂರು: ಮುಜರಾಯಿ ಇಲಾಖೆಯಡಿ ಬರುವ ಎ ಮತ್ತು ಬಿ ದರ್ಜೆ ದೇವಸ್ಥಾನಗಳ ಆದಾಯದಲ್ಲಿ ಸಾಮಾನ್ಯ ಸಂಗ್ರಹಣ ನಿಧಿಗೆ ಪಾಲು ಕೊಡಬೇಕೆನ್ನುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಮಸೂದೆ-2024ವನ್ನು ರಾಜ್ಯಪಾಲರು ರಾಜ್ಯ ಸರಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.
ಇತ್ತೀಚೆಗೆ ನಡೆದಿದ್ದ ಅಧಿವೇಶನದ ಸಂದರ್ಭ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿ ಹೋಗಿದ್ದ ಮಸೂದೆಗೆ ವಿಧಾನಪರಿಷತ್ತಿನಲ್ಲಿ ಹಿನ್ನಡೆಯುಂಟಾಗಿತ್ತು. 10 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗಿನ ವರಮಾನದಲ್ಲಿ ಶೇ. 5 ರಷ್ಟನ್ನು ಹಾಗೂ 1 ಕೋಟಿ ರೂ.ಗೂ ಅಧಿಕ ವರಮಾನವಿರುವ ದೇಗುಲಗಳ ಹುಂಡಿಯಿಂದ ಶೇ.10 ರಷ್ಟು ಹಣವನ್ನು ಸಾಮಾನ್ಯ ಸಂಗ್ರಹಣಾ ನಿಧಿಗೆ ಸಲ್ಲಿಸಬೇಕು ಎಂಬುದು ಈ ತಿದ್ದುಪಡಿ ಮಸೂದೆಯಲ್ಲಿ ಉಲ್ಲೇಖವಾಗಿತ್ತು.
ವಿಧಾನಪರಿಷತ್ತಿನಲ್ಲಿ ತಿರಸ್ಕೃತ ಗೊಂಡಿದ್ದ ಇದನ್ನು ವಿಧಾನಸಭೆಯಲ್ಲಿ ಮರುಮಂಡಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ಇದೇ ರೀತಿ ಕಳುಹಿಸಿದ್ದ ಸುಮಾರು 12 ಮಸೂದೆಗಳಿಗೆ ಮಾ. 7 ರಂದು ರಾಜ್ಯಪಾಲರು ಅಂಕಿತ ಹಾಕಿದ್ದರು. ಆದರೆ, ಇದೊಂದು ಮಸೂದೆಯನ್ನು ಮಾ. 14ರಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸರಕಾರಕ್ಕೆ ಹಿಂದಿರುಗಿಸಿದ್ದು, ಎರಡು ಪ್ರಮುಖ ಸ್ಪಷ್ಟನೆಗಳನ್ನು ಕೇಳಿದ್ದಾರೆ.
ಹೈಕೋರ್ಟ್ ತಡೆ ನೀಡಿದೆ
1997ರ ಈ ಕಾಯ್ದೆಗೆ 2011 ಮತ್ತು 2012ರಲ್ಲಿ ಅಂದಿನ ರಾಜ್ಯ ಸರಕಾರ ತಂದಿದ್ದ ತಿದ್ದುಪಡಿಗೆ ಧಾರವಾಡ ಹೈಕೋರ್ಟ್ ತಡೆ ನೀಡಿದೆ. ಇದನ್ನು ರಾಜ್ಯ ಸರಕಾರವೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಪ್ರಕರಣವು ಅಂತಿಮ ಹಂತದ ವಿಚಾರಣೆಯಲ್ಲಿದೆ.
ಇಡೀ ಕಾಯ್ದೆಗೇ ಹೈಕೋರ್ಟ್ ತಡೆ ನೀಡಿರುವುದು ಒಂದೆಡೆಯಾದರೆ, ಸುಪ್ರೀಂ ಕೋರ್ಟ್ ಮುಂದೆ ಇನ್ನೂ ವಿಚಾರಣೆಗೆ ಬಾಕಿ ಇರುವ ಈ ಹಂತದಲ್ಲಿ ತಿದ್ದುಪಡಿ ತರಬಹುದೇ ಎಂಬ ವಿಚಾರದಲ್ಲಿ ಹೆಚ್ಚಿನ ಸ್ಪಷ್ಟತೆ ಪಡೆಯುವ ಆವಶ್ಯಕತೆ ಇದೆ.
ಮತ್ತೆ ರಾಜ್ಯಪಾಲರಿಗೆ
ಇತರ ಧಾರ್ಮಿಕ ಸಂಸ್ಥೆಗಳಿಗೂ ಇದೇ ಮಸೂದೆ ರೀತಿಯಲ್ಲಿ ಯಾವುದಾದರೂ ಶಾಸನ ರಚಿಸುವ ಯೋಚನೆ ರಾಜ್ಯ ಸರಕಾರಕ್ಕಿದೆಯೇ? ಸ್ಪಷ್ಟನೆಗಳೊಂದಿಗೆ ಕಡತವನ್ನು ಮರುಸಲ್ಲಿಕೆ ಮಾಡುವಂತೆ ನಿರ್ದೇ ಶನ ನೀಡಿ ರಾಜ್ಯ ಸರಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಈ ಕಡತವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆಗೆ ಕಳುಹಿಸಲಾಗಿದ್ದು, ಸೂಕ್ತ ಸ್ಪಷ್ಟನೆಗಳೊಂದಿಗೆ ರಾಜ್ಯಪಾಲರಿಗೆ ಮತ್ತೆ ಕಳುಹಿಸುವುದಾಗಿ ಸರಕಾರದ ಮೂಲಗಳು ಸ್ಪಷ್ಟಪಡಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.