“ಪರದೇಕೆ ಪೀಚೆ’ ಏನು ನಡೆಯುತ್ತಿದೋ ಗೊತ್ತಿಲ್ಲ: ಸದಾನಂದ ಗೌಡ ಆಕ್ರೋಶ
Team Udayavani, Mar 12, 2024, 10:22 PM IST
ಬೆಂಗಳೂರು: ಕೇಂದ್ರದ ನಾಯಕರ ವಿರುದ್ಧ ಹಾಲಿ ಸಂಸದ ಡಿ.ವಿ.ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಲೋಕಸಭಾ ಚುನಾವಣೆಯಲ್ಲೂ ಪ್ರಯೋಗ ಮುಂದುವರಿಸಿದರೆ ಕಳೆದ ಬಾರಿಯ ಪ್ರಯೋಗಶಾಲೆಯಲ್ಲಿ ಏನಾಗಿದೆ ಎಂದು ಗೊತ್ತಿದೆ. ಪರದೇಕೆ ಪೀಚೆ ಏನೇನು ನಡೆಯುತ್ತಿದೆಯೋ ಗೊತ್ತಿಲ್ಲ. ಆದರೆ ಒಕ್ಕಲಿಗ ಸಂಸದರು ಇರುವ ಕ್ಷೇತ್ರಗಳಲ್ಲಿ ಗೊಂದಲ ಸೃಷ್ಟಿಯಾಗಿರುವ ಬಗ್ಗೆ ಚರ್ಚೆ ಪ್ರಾರಂಭವಾಗಿದೆ ಎಂದು ಪರೋಕ್ಷ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು ಉತ್ತರಕ್ಕೆ ಶೋಭಾ ಕರಂದ್ಲಾಜೆಯವರನ್ನು ಕರೆತರುವ ವಿಚಾರ ನನಗೆ ಗೊತ್ತಿಲ್ಲ. ಯಾರಧ್ದೋ ಹಿತಾಸಕ್ತಿಗೆ ಏನೇನೋ ಮಾಡಿದರೆ ಕಾರ್ಯಕರ್ತರ ಮನಸ್ಸಿಗೆ ನೋವಾಗುತ್ತದೆ. ಪಕ್ಷಕ್ಕೂ ಹಾನಿಯಾಗುತ್ತದೆ ಎಂದು ಹೇಳಿದ್ದಾರೆ.
ನಾನು ನೇರವಾಗಿದ್ದೇನೆ. ಒತ್ತಾಯಕ್ಕೆ ಒಪ್ಪಿಕೊಂಡು ಮತ್ತೆ ಬಂದಿದ್ದೇನೆ. ಅದನ್ನು ಕೇಂದ್ರದವರು ಗೌರವಿಸುವ ವಿಶ್ವಾಸವಿದೆ. ಬೆಂಗಳೂರು ಉತ್ತರ ಒಕ್ಕಲಿಗರ ಪ್ರಾಬಲ್ಯದ ಪ್ರದೇಶ. ಒಕ್ಕಲಿಗರು ಹಾಗೂ ಉಳಿದ ಸಮುದಾಯದವರ ಸಹಮತ ಪಡೆದು ನಾನು ಗೆದ್ದಿದ್ದೇನೆ. ಮಾಜಿ ಸಿಎಂ ಆಗಿ, ಕೇಂದ್ರದ ಮಾಜಿ ಸಚಿವನಾಗಿ ನನಗೆ ಟಿಕೆಟ್ ನೀಡದೆ ಇದ್ದರೆ ಆಗುವ ಪರಿಣಾಮದ ಬಗ್ಗೆ ನಾನು ಹೇಳುವುದಕ್ಕಿಂತಲೂ ಪಕ್ಷ ತಿಳಿದುಕೊಳ್ಳುವುದು ಒಳ್ಳೆಯದು. ಮೋದಿ ಶಕ್ತಿಯ ಜತೆಗೆ ಕಾರ್ಯಕರ್ತರ ಶಕ್ತಿಯೂ ಅಗತ್ಯ. ರಾಜ್ಯದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನವನ್ನು ಬಹಳ ಸುಲಭವಾಗಿ ನಿಭಾಯಿಸಿ ಬಿಡಬಹುದೆಂದು ನನಗೆ ಅನ್ನಿಸುತ್ತಿಲ್ಲ. ವಿವಿಧ ಕ್ಷೇತ್ರದಲ್ಲಿ ಇರುವ ಗೊಂದಲವನ್ನು ಮುಂದುವರಿಸಲು ಬಿಡಬಾರದಿತ್ತು. ಈಗಲಾದರೂ ಅದನ್ನು ನಿಲ್ಲಿಸುವ ಕೆಲಸ ಮಾಡಲಿ ಎಂದು ಕಿವಿ ಮಾತು ಹೇಳಿದ್ದಾರೆ.
ನಾವು ಪಕ್ಷದಲ್ಲಿ ಈ ರೀತಿ ಗೊಂದಲ ಮಾಡಿಕೊಂಡರೆ ಖಂಡಿತ ಹಿನ್ನಡೆಯಾಗುತ್ತದೆ.ನನಗೆ ಟಿಕೆಟ್ ಕೊಡದೆ ಇದ್ದರೆ ಮುಂದೇನು ಎಂಬ ಪ್ರಶ್ನೆಗೆ ಈಗ ಪ್ರತಿಕ್ರಿಯೆ ನೀಡುವುದಿಲ್ಲ. ಒಕ್ಕಲಿಗ ಸಂಸದರು ಇರುವ ಕ್ಷೇತ್ರಗಳಲ್ಲಿ ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ ಎಂಬ ಚರ್ಚೆ ಈಗ ಪ್ರಾರಂಭವಾಗಿದೆ. ನನಗೆ ನೂರಾರು ಜನರು ಈ ವಿಚಾರ ತಿಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜವಂಶಸ್ಥ ಯದುವೀರ್ ಅವರನ್ನು ಪಕ್ಷಕ್ಕೆ ಕರೆತರಲು ನಡೆಸುತ್ತಿರುವ ಪ್ರಯತ್ನದ ಬಗ್ಗೆ ಪ್ರತಿಕ್ರಿಯಿಸಿ, ಮೈಸೂರಿನಲ್ಲಿ ಇದು ಹೊಸದಲ್ಲ. ಬೇರೆ ರಾಜ್ಯಗಳಲ್ಲೂ ರಾಜವಂಶಸ್ಥರನ್ನು ಕರೆ ತಂದಿದ್ದಾರೆ. ಆದರೆ ಪ್ರತಾಪಸಿಂಹ ಹಾಗೂ ಅನಂತ ಕುಮಾರ್ ಹೆಗಡೆಯವರಿಗೆ ಅವರ ಮಾತುಗಳೇ ಜಾಸ್ತಿಯಾಯಿತು ಎಂದರು.
ಬೆಂಗಳೂರು ಉತ್ತರಕ್ಕೆ ನೂರಕ್ಕೆ ನೂರು ನನ್ನದೊಂದೇ ಹೆಸರಿತ್ತು. ಕಾರ್ಯಕರ್ತರು ಒಮ್ಮತದ ಅಭಿಪ್ರಾಯ ಕೊಟ್ಟ ಬಳಿಕ ಕೇಂದ್ರದವರು ಅದಕ್ಕೆ ಮಣೆ ಹಾಕಬೇಕು. ಇಲ್ಲವಾದರೆ ಕಾರ್ಯಕರ್ತರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.