ನಿಗದಿತ ಕಾಲಮಿತಿಯೊಳಗೆ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ : ಸಿಎಂ
Team Udayavani, Aug 5, 2022, 6:41 PM IST
ಬೆಂಗಳೂರು: ಜಲಜೀವನ್ ಮಿಷನ್ ಯೋಜನೆ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಈ ಯೋಜನೆಯನ್ನು ನಿಗದಿತ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ವಿಶೇಷ ಆಸಕ್ತಿ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.
ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಕಳೆದ ವರ್ಷ 19 ಲಕ್ಷ ಮನೆಗಳಿಗೆ ನಳ ಸಂಪರ್ಕ ನೀಡಲಾಗಿದೆ. ಪ್ರಸ್ತುತ ಪ್ರತಿ ದಿನ ಸರಾಸರಿ 7,000 ಮನೆಗಳಿಗೆ ಸಂಪರ್ಕ ನೀಡಲಾಗುತ್ತಿದೆ ಎಂದು ತಿಳಿಸಿದರು. ಅದಾಗ್ಯೂ ಅನುಮೋದನೆಯಾದ ಕಾಮಗಾರಿಗಳಿಗೆ ತ್ವರಿತವಾಗಿ ಕಾರ್ಯಾದೇಶ ನೀಡುವುದು ಹಾಗೂ ಕಾರ್ಯಾದೇಶ ನೀಡಿದ ಕಾಮಗಾರಿಗಳು ಪ್ರಾರಂಭಗೊಳಿಸುವುದನ್ನು ಖಾತರಿ ಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯ ಮುಖ್ಯಾಂಶಗಳು
ಕೆಲವು ಯೋಜನೆಗಳಲ್ಲಿ ಗುರಿ ತಲುಪಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ಒಟ್ಟಾರೆ ಸಾಧನೆ ಉತ್ತಮವಾಗಿದ್ದರೂ, ಕೆಲವು ಜಿಲ್ಲೆಗಳ ಸಾಧನೆ ಕಡಿಮೆ ಇದೆ. ಇದನ್ನು ಸರಿ ಪಡಿಸಿ ಈ ವರ್ಷದ ಗುರಿಯನ್ನು ನಿಗದಿತ ಅವಧಿಯಲ್ಲಿ ಸಾಧಿಸುವಂತೆ ಸೂಚಿಸಿದರು.
ಸದಸ್ಯರು ಕ್ಷೇತ್ರ ಭೇಟಿ ನೀಡಲು ವ್ಯವಸ್ಥೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಪ್ರತಿ ಜಿಲ್ಲೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ದಿಶಾ ಸಮಿತಿ ಸಭೆ ಕಡ್ಡಾಯವಾಗಿ ನಡೆಸುವಂತೆ ಸೂಚಿಸಿದರು.
ಐಟಿಐ, ಜಿಟಿಟಿಸಿ, ಡಿಪ್ಲೊಮಾ ಕಾಲೇಜುಗಳು- ವರ್ಷದಲ್ಲಿ ಎರಡು ಸಲ ಮೂರು ತಿಂಗಳ ಕೋರ್ಸ್ ಆಯೋಜಿಸಬೇಕು- ಇದಕ್ಕೆ ಗುರಿ ನಿಗದಿ ಪಡಿಸಲು ಸೂಚಿಸಿದರು.
ಫಸಲ್ ಬೀಮಾ ಯೋಜನೆ-ಇನ್ಷೂರೆನ್ಸ್ ಕಂಪೆನಿಗಳ ನ್ಯೂನ್ಯತೆ ಸರಿಪಡಿಸಲು – ಕ್ಲೇಮುಗಳು ಬಾಕಿ ಇರುವುದನ್ನು ಜಿಲ್ಲಾಧಿಕಾರಿಗಳು ಸಭೆ ನಡೆಸಿ ಬಾಕಿ ಮೊತ್ತವನ್ನು ಕೂಡಲೇ ಇತ್ಯರ್ಥಪಡಿಸಲು ಸೂಚಿಸಿದರು.
ಯಾದಗಿರಿ, ರಾಯಚೂರು, ಬೀದರ್ ನಲ್ಲಿ ಅಪೌಷ್ಟಿಕತೆ ನಿವಾರಣೆಗೆ ಕೇಂದ್ರ ಸರ್ಕಾರದ ಯೋಜನೆಯೊಂದಿಗೆ, ರಾಜ್ಯ ಸರ್ಕಾರದಿಂದಲೂ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಸೂಚಿಸಿದರು.
ಈ ಕುರಿತು ಎಲ್ಲ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲು ಮುಖ್ಯ ಮಂತ್ರಿಗಳು ಸೂಚಿಸಿದರು.
ಸಂಸದೆ ಸುಮಲತಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.