Politics: ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಪರ್ವದ್ದೇ ಸದ್ದು
ಅನ್ಯ ಪಕ್ಷಗಳ ಬುಟ್ಟಿಗೇ ಕೈ ಹಾಕಿದ ಕಾಂಗ್ರೆಸ್- ಕೆಲವು ಬಿಜೆಪಿ ನಾಯಕರ "ಹಸ್ತಾಂತರ' ಸಾಧ್ಯತೆ ಸೋಮಶೇಖರ್ ತೀವ್ರ ಚರ್ಚೆಯಲ್ಲಿ
Team Udayavani, Aug 17, 2023, 11:17 PM IST
ಬೆಂಗಳೂರು: ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿರುವಂತೆ ಪಕ್ಷಾಂತರ ಪರ್ವ ಸದ್ದು ಮಾಡುತ್ತಿದ್ದು, ಮುಂದಿನ 6 ತಿಂಗಳಲ್ಲಿ ಸರಕಾರ ಬೀಳುತ್ತದೆ ಎಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬೆನ್ನಲ್ಲೇ ಬಿಜೆಪಿ ನಾಯಕರೇ “ಹಸ್ತಾಂತರ’ ಆಗಲಿ ದ್ದಾರೆ ಎನ್ನುವ ಸುದ್ದಿಯೂ ಜೋರಾಗಿದೆ.
ತನ್ನ ಗೂಡಿಗೆ ಯಾರೂ ಕೈ ಹಾಕಬಾರದೆಂಬ ಸಂದೇಶ ರವಾನಿಸಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಬುಟ್ಟಿಗೆ ಕೈ ಇಟ್ಟಂತೆ ಕಾಣುತ್ತಿದೆ. ರಾಜ್ಯದಲ್ಲಿ ತಮ್ಮದೇ ಸರಕಾರ ಇರುವುದರಿಂದ ಅನ್ಯಪಕ್ಷಗಳಲ್ಲಿ ಇರುವವರನ್ನು ಸೆಳೆಯುವುದು ಕಷ್ಟವೇನಲ್ಲ ಎಂಬ ರಾಜಕೀಯ ದಾಳ ಉರುಳಿಸಿ ಎಚ್ಚರಿಕೆ ನೀಡಿದೆ.
ಅನರ್ಹ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಈ ಹಿಂದೆ ಸಿದ್ದರಾಮಯ್ಯ ಕಡ್ಡಿ ತುಂಡಾದಂತೆ ಹೇಳಿದ್ದರು. ಆದರೆ ಈಗ ಗೃಹ ಸಚಿವ ಪರಮೇಶ್ವರ್ ಸಹಿತ ಮೂಲ ಕಾಂಗ್ರೆಸಿನ ನಾಯಕರೆಲ್ಲರೂ ಅನ್ಯ ಪಕ್ಷದವರನ್ನು ಸೇರಿಸಿಕೊಳ್ಳಲು ಸಿದ್ಧರಿರುವು ದಾಗಿ ಹೇಳಿದ್ದಾರೆ.
ಇದೆಲ್ಲಕ್ಕೂ ಪುಷ್ಟಿ ನೀಡುವಂತೆ ನೆಲಮಂಗಲ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಅವರು ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಭೇಟಿ ಮಾಡಿ ಕುತೂಹಲ ಕೆರಳಿಸಿದ್ದಾರೆ. ಸೋಮಶೇಖರ್ ಅವರು ಕಾಂಗ್ರೆಸ್ ಸೇರುವ ತೀರ್ಮಾನಿಸಿರುವುದು ಒಳ್ಳೆಯ ಬೆಳವಣಿಗೆ ಎನ್ನುವ ಮೂಲಕ ಮೇಲ್ಮನೆ ಸದಸ್ಯ ಎಚ್. ವಿಶ್ವನಾಥ್ ಕೂಡ ಕುತೂಹಲ ಹೆಚ್ಚಿಸಿದ್ದಾರೆ. ಇದರ ನಡುವೆ ಆಯನೂರು ಮಂಜುನಾಥ್ ಅವರು, ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎನ್ನುವ ಮುಖಾಂತರ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.
ಬಿಜೆಪಿ ಸಭೆಯಲ್ಲಿ ಕೈ ಶಾಸಕ!
ಸೋಮಶೇಖರ್ ಬೆಂಬಲಿಗರ ಸಭೆಯಲ್ಲಿ ನೆಲಮಂಗಲ ಕಾಂಗ್ರೆಸ್ ಶಾಸಕ ಎನ್.ಶ್ರೀನಿವಾಸ್ ಭಾಗವಹಿಸಿ ಅಚ್ಚರಿ ಮೂಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವರೆಕೆರೆ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ನನ್ನ ಮನೆ ಇದೆ. ಕ್ಷೇತ್ರದ ಮತದಾರನಾಗಿದ್ದೇನೆ. ಹಲವು ಸ್ನೇಹಿತರು ಕರೆದಿದ್ದರಿಂದ ಸಭೆಗೆ ಬಂದಿದ್ದೇನೆ. ಕಾಂಗ್ರೆಸ್ ಸೇರ್ಪಡೆ ವಿಷಯ ಪ್ರಸ್ತಾವವಾಗಿಲ್ಲ. ಆ ವಿಷಯವನ್ನು ಪ್ರಮುಖರಾ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೋಡಿಕೊಳ್ಳುತ್ತಾರೆ. ಪಕ್ಷದ ಸಂಘಟನೆ ಮಾಡುವಂತೆ ಮತ್ತು ಜನಪರ ನಾಯಕರನ್ನು ಮನವೊಲಿಸುವಂತೆ ಆದೇಶ ನೀಡಿದ್ದರೆ ಯಶಸ್ವಿಯಾಗಿ ನಿರ್ವಹಿಸು ತ್ತೇನೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.
ವಿಶ್ವನಾಥ್ ಸ್ವಾಗತ
ಮಾನಸಿಕವಾಗಿ ಕಾಂಗ್ರೆಸ್ ಜತೆಗೆ ಗುರುತಿಸಿ ಕೊಂಡಿರುವ ಬಿಜೆಪಿಯ ಮೇಲ್ಮನೆ ಸದಸ್ಯ ಎಚ್.ವಿಶ್ವನಾಥ್ ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಟಿ ಸೋಮಶೇಖರ್ ಮೂಲತಃ ಕಾಂಗ್ರೆಸಿನವರೇ. ಕಾರಣಾಂತರದಿಂದ ಪಕ್ಷ ತೊರೆದಿದ್ದರು. ಈಗ ಮತ್ತೆ ಸೇರುವ ತೀರ್ಮಾನ ಸರಿಯಿದೆ ಎನ್ನುವ ಮೂಲಕ ತಾವೂ ಕಾಂಗ್ರೆಸ್‌ನತ್ತ ಮುಖ ಮಾಡಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಯಾವುದೇ ತೀರ್ಮಾನ ಮಾಡಿಲ್ಲ
ಆಯನೂರು ಮಂಜುನಾಥ್ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನ ಯಾವ ನಾಯಕರನ್ನೂ ಭೇಟಿ ಮಾಡಿಲ್ಲ. ನಾನು ಕಾಂಗ್ರೆಸ್ ಸೇರಿ ಸ್ಪರ್ಧಿಸುತ್ತೇನೆ ಎನ್ನುವ ಕಾರಣ
ದಿಂದ ಹಾಗೂ ತಮಗೆ ಟಿಕೆಟ್ ಕೈತಪ್ಪುತ್ತದೆ ಎಂದು ಕಳೆದ ಚುನಾವಣೆಯಲ್ಲಿ ಯೋಗೇಶ್ ಎಂಬವರು ಅಪಪ್ರಚಾರ ಮಾಡಿದ್ದರು. ಅವರೀಗ ಪರಾಜಿತರಾಗಿದ್ದಾರೆ. ಕೆಲವು ನಾಯ ಕರು ಭೇಟಿ ಮಾಡಿದ್ದರಾದರೂ ನಾನಿನ್ನೂ ತೀರ್ಮಾನ ಮಾಡಿಲ್ಲ ಎಂದಿದ್ದಾರೆ.
ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ
ಬಿಜೆಪಿ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನನ್ನು ಸೋಲಿಸಲು ಬಿಜೆಪಿಯ ಕೆಲವು ಮುಖಂಡರು ಆಡಿಯೋ ಮಾಡಿ ಹರಿಬಿಟ್ಟಿರುವ ವ್ಯಕ್ತಿಗಳ ವಿರುದ್ಧ ಅಸಮಾಧಾನವಿದೆಯೇ ಹೊರತು, ರಾಜ್ಯ ಮಟ್ಟದ ನಾಯಕರಿಂದ ಯಾವುದೇ ತೊಂದರೆ ಆಗಿಲ್ಲ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು. ಕ್ಷೇತ್ರದ ಅಭಿವೃದ್ಧಿ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಅಭಿವೃದ್ಧಿಗಾಗಿ ಮತ್ತು ಒಳ್ಳೆಯ ಕೆಲಸ ಮಾಡುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರ ಬಗ್ಗೆ ಮೆಚ್ಚುಗೆಯ ಮಾತನ್ನಾಡಿರುವುದು ತಪ್ಪೇ ಎಂದು ಪ್ರಶ್ನಿಸಿದರು. ಅಲ್ಲದೆ, ಇದನ್ನೇ ನೆಪವಾಗಿಟ್ಟುಕೊಂಡು ಬಿಜೆಪಿ ಬಿಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಬಿಜೆಪಿಯವರೇ ಪಕ್ಷದಿಂದ ಕಳುಹಿಸಲು ಮುಂದಾಗಿದ್ದಾರೆ ಎಂದು ಬೇಸರಗೊಂಡರು.
ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತು ಸತ್ಯಕ್ಕೆ ದೂರ. ಕಾಂಗ್ರೆಸ್ ಮೇಲೆ ಕಮಿಷನ್ ಆರೋಪ ಕೇಳಿ ಬಂದಿದ್ದು, ಅದರಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಈ ರೀತಿಯ ವದಂತಿ ಹಬ್ಬಿಸುತ್ತಿದ್ದಾರೆ. ಯಶವಂತಪುರದಲ್ಲಿ ಸ್ಥಳೀಯವಾಗಿ ಕೆಲವು ಸಮಸ್ಯೆ ಇರುವ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ಅದನ್ನು ಪರಿಹರಿಸಲಾಗುವುದು. ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ.
-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ
ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಯಾವುದೇ ನಾಯಕರು ಬಿಜೆಪಿ ತೊರೆಯುವುದಿಲ್ಲ. ಜೆಡಿಎಸ್, ಕಾಂಗ್ರೆಸ್‌ಗಿಂತ ಹೆಚ್ಚಿನ ಗೌರವ ಸಿಕ್ಕಿದೆ. ಯಾರೂ ಕಾಂಗ್ರೆಸ್‌ಗೆ ಹೋಗುವವರು ಇಲ್ಲ. ಈಗಾಗಲೇ ಮುನಿರತ್ನ ಅವರು ಸ್ಪಷ್ಟಪಡಿಸಿದ್ದು, ಅವರ ಮನಸ್ಥಿತಿಯಲ್ಲೇ ಉಳಿದವರೂ ಇದ್ದಾರೆ.
-ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವ
ಎಸ್.ಟಿ. ಸೋಮಶೇಖರ್‌ರನ್ನು ಸೋಲಿಸಲು ಮುಂದಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲದಿ ದ್ದರೆ ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಯಲ್ಲಿ ಹಿನ್ನಡೆ ಖಚಿತ. ಪಕ್ಷದ ನಾಯಕರು ಶಿಸ್ತು ಕ್ರಮ ಕೈಗೊಳ್ಳದಿದ್ದರೆ ಶಾಸಕರ ಜತೆ ಚರ್ಚಿಸಬೇಕಾಗುತ್ತದೆ.
-ಆರ್ಯ ಶ್ರೀನಿವಾಸ್, ಪಾಲಿಕೆ ಮಾಜಿ ಸದಸ್ಯ
ಒಳ್ಳೆಯ ಕೆಲಸ ಮಾಡಿದ ಸಿಎಂ, ಡಿಸಿಎಂರನ್ನು ಹೊಗಳಿದ್ದಕ್ಕೆ ಬಿಜೆಪಿ ಬಿಡುತ್ತೇನೆಂದು ಅಪಪ್ರಚಾರ ಮಾಡಲಾಗುತ್ತಿದೆ. ಪಕ್ಷದಲ್ಲಿ ಇರುವವರೇ ಕೆಲವರು ಕಳುಹಿಸಲು ನೋಡುತ್ತಿ ದ್ದಾರೆ. ನಾನು ಬಿಜೆಪಿ ಬಿಡುವ ಪ್ರಶ್ನೆಯೆ ಇಲ್ಲ.
-ಎಸ್.ಟಿ. ಸೋಮಶೇಖರ್, ಬಿಜೆಪಿ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.