ಪುನೀತ್ ನಿಧನದ ಬಳಿಕ ಹೃದಯ ತಪಾಸಣೆಗೆ ಒಳಗಾಗುವವರ ಸಂಖ್ಯೆ ಹೆಚ್ಚಳ
Team Udayavani, Nov 2, 2021, 6:50 AM IST
ಬೆಂಗಳೂರು: ನಟ ಪುನೀತ್ ರಾಜಕುಮಾರ್ ಹೃದಯ ಸ್ತಂಭನದಿಂದ ನಿಧನರಾದ ಬಳಿಕ ಯುವಕರಲ್ಲಿ ಹೃದಯ ತಪಾಸಣೆ ಜಾಗೃತಿ ಮೂಡಿದೆ. ಭಾನುವಾರ ಮತ್ತು ಸೋಮವಾರ ಸರ್ಕಾರಿ ರಜೆ ದಿನಗಳಾಗಿದ್ದರೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೃದಯ ತಪಾಸಣೆಗೆ ಒಳಗಾಗುವವರ ಸಂಖ್ಯೆ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿದೆ.
ನಟ ಪುನೀತ್ ರಾಜಕುಮಾರ್ ಕಳೆದ ಶುಕ್ರವಾರವಷ್ಟೇ ನಿಧನರಾದರು. ಆದರೆ, ನಂತರದ ಬೆಳವಣಿಗೆಯಲ್ಲಿ ಮಾಧ್ಯಮಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಎದೆ ನೋವು ಬರುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ ಎಂಬ ವೈದ್ಯರ ಸಲಹೆಗಳು ಹೆಚ್ಚು ಕೇಳಿಬಂದಿದ್ದವು. . ಇದರಿಂದ ಆತಂಕಗೊಂಡಿರುವ ಜನರು ಯಾವುದಕ್ಕೂ ಒಮ್ಮೆ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ನಿರ್ಧರಿಸಿ ಆಸ್ಪತ್ರೆಗಳಿಗೆ ದೌಡಾಯಿಸಿ ತಪಾಸಣೆಗೆ ಒಳಗಾಗಿದ್ದಾರೆ.
ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಸಾಮಾನ್ಯ ದಿನಗಳಲ್ಲಿ ಸರಾಸರಿ 1000ದಿಂದ 1100 ಜನರು ಹೃದಯ ತಪಾಸಣೆಗೆ ಒಳಗಾಗುತ್ತಾರೆ. ರಜೆ ದಿನಗಳಲ್ಲಿ 50ರಿಂದ 100 ಮಾತ್ರ ತಪಾಣೆಗೆ ಒಳಗಾಗುತ್ತಿದ್ದರು. ಆದರೆ, ಭಾನುವಾರ ಮತ್ತು ಸೋಮವಾರ ಕ್ರಮವಾಗಿ 500ರಿಂದ 550 ಜನರು ತಪಾಸಣೆಗೆ ಒಳಗಾಗಿದ್ದಾರೆ.
ಈ ಕುರಿತು ಮಾತನಾಡಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರು, ನಟ ಪುನೀತ್ ನಿಧನರಾದ ಬಳಿಕ ಸಾಮಾನ್ಯ ದಿನಗಳಿಗಿಂತ ಹೃದಯ ತಪಾಸಣೆಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿಕೊಂಡರೆ ಕನಿಷ್ಠ 300ಕ್ಕಿಂತ ಹೆಚ್ಚಿನ ಜನರು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಮೈಸೂರು ಜಯದೇವದಲ್ಲಿ ಕೂಡ ಭಾನುವಾರ 450 ಮಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ನ.8, 9ರಂದು ಚಿತ್ರದುರ್ಗದಲ್ಲಿ ಬುಡಕಟ್ಟು ಉತ್ಸವ: ಸಚಿವ ಶ್ರೀರಾಮುಲು
ಜೀವನಶೈಲಿ ಬದಲಾಯಿಸಿಕೊಳ್ಳಿ:
ಪುನೀತ್ ನಿಧನದಿಂದ ದಿಢೀರ್ ಬೆಳವಣಿಗೆಯಲ್ಲಿ ಜನರು ತಪಾಸಣೆಗೆ ಮುಂದಾಗುತ್ತಿದ್ದಾರೆ. ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳುವ ಬದಲು ವರ್ಷದಲ್ಲಿ ಒಮ್ಮೆಯಾದರೂ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇದರ ಜೊತೆಗೆ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈಗಿನ ಕಾಲದ ಯುವಕರಲ್ಲಿ ತಾಳ್ಮೆ ಇಲ್ಲ. ಯಾವುದೇ ಕೆಲಸವಾದರೂ ಕ್ಷಣಾರ್ಧದಲ್ಲಿ ಮಾಡಿಬಿಡಬೇಕು ಎಂಬ ಉದ್ದೇಶದಿಂದ ಹೆಚ್ಚು ಒತ್ತಡ ಮಾಡಿಕೊಳ್ಳುತ್ತಾರೆ. ಒತ್ತಡ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿಕೊಂಡು ಜೀವನ ಶೈಲಿ ಬದಲಾಯಿಸಿಕೊಂಡರೆ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗಲಿದೆ ಎಂದು ತಿಳಿಸಿದರು.
ವಿಕ್ರಂ ಆಸ್ಪತ್ರೆಯಲ್ಲಿಯೂ ಸಂಖ್ಯೆ ಹೆಚ್ಚಳ
ವಿಕ್ರಂ ಆಸ್ಪತ್ರೆ, ಮಣಿಪಾಲ್ ಆಸ್ಪತೆ ಸೇರಿದಂತೆ ಕಡೆ ತಪಾಸಣೆಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಸಾಮಾನ್ಯವಾಗಿ ರಜೆ ದಿನಗಳಲ್ಲಿ 2ರಿಂದ 5 ಜನರು ಬರುತ್ತಿದ್ದರು. ಆದರೆ, ಭಾನುವಾರು ಮತ್ತು ಸೋಮವಾರ 12ರಿಂದ 15 ಜನರು ತಪಾಸಣೆಗೆ ಒಳಗಾಗಿದ್ದಾರೆ ಎಂದು ವಿಕ್ರಂ ಆಸ್ಪತ್ರೆ ಮಣಿಪಾಲ್ ಶಾಖೆಯ ಹೃದಯ ತಜ್ಞ ಡಾ. ರಂಜನ್ ಶೆಟ್ಟಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.