ಅಂಚೆ ಅಣ್ಣನ ಆನ್ ಲೈನ್‌ನಲ್ಲಿ ಬಣ್ಣ ಬಣ್ಣದ ರಾಖೀಗಳು: ರಾಖೀಪೋಸ್ಟ್ ಆನ್‌ಲೈನ್ ಸೇವೆ ಆರಂಭ
ಸೈನಿಕರಿಗೆ ಕಳುಹಿಸಲು ವಿಶೇಷ ಸಂದೇಶ ವ್ಯವಸ್ಥೆಯನ್ನು ಕೂಡ ಈ ವರ್ಷ ಕಲ್ಪಿಸಲಾಗಿದೆ
Team Udayavani, Aug 9, 2021, 10:16 AM IST
ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ರಾಖೀ ಪ್ರಿಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದಾಗಿ ಭಾರತೀಯ ಅಂಚೆ ಇಲಾಖೆ ರಾಖೀ ಪೋಸ್ಟ್ ಆನ್‌ಲೈನ್ ಸೇವೆ ಆರಂಭಿಸಿದ್ದು ಜನರಿಂದ ಮೆಚ್ಚುಗೆ ಪಾತ್ರವಾಗಿದೆ.
ಕಳೆದ ವರ್ಷ ಆರಂಭಿಸಲಾಗಿರುವ ಈ ಸೇವೆಗೆ ಈ ವರ್ಷ ಮತ್ತಷ್ಟು ಬಣ್ಣ ಬಣ್ಣದ ಆಕರ್ಷಕ ವಿನ್ಯಾಸದ ರಾಖೀ ಸೇರ್ಪಡೆಗೊಂಡಿವೆ. ಜತೆಗೆ ಭಿನ್ನ ಭಿನ್ನ ವಾಕ್ಯಗಳ ಸಂದೇಶಗಳು ಕೂಡ ಸಹೋದರ-ಸಹೋದರಿಯರಿಗೆ ಶುಭ ಹಾರೈಸಲಿವೆ. ಈ ಮೂಲಕ ಸಹೋದರತ್ವ ಸಂಬಂಧವನ್ನು ಮತ್ತಷ್ಟು ಹಸಿರಾಗಿಡಲಿವೆ.
ಆ.22 ರಂದು ರಾಖೀ ಹಬ್ಬ ಆಚರಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಈ ಸೇವೆಯನ್ನು ಅಂಚೆ ಇಲಾಖೆ ಆರಂಭಿಸಲಾಗಿದ್ದು ಆ.16ರ ವರೆಗೂ ಇರಲಿದೆ. ರಾಖೀ ಹಬ್ಬದ ಹಿನ್ನೆಲೆಯಲ್ಲಿ ಈ ವರ್ಷ 20 ವಿವಿಧ ಬಗೆಯ ರಾಖೀಗಳು ಗ್ರಾಹಕರಿಗೆ ಆನ್‌ಲೈನ್ ನಲ್ಲಿ ದೊರೆಯಲಿವೆ. ರಾಖೀ ಪ್ರಿಯರ ಬೇಡಿಕೆ ಅನುಗುಣವಾಗಿ ಈ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ:ಹಾಕಿ ಕ್ಯಾಪ್ಟನ್ ರಾಣಿ ರಾಂಪಾಲ್ ಎಂಬ ಹುಟ್ಟು ಹೋರಾಟಗಾರ್ತಿ
ರಾಖೀ ಪೋಸ್ಟ್ ಆನ್‌ಲೈನ್ ಸೇವೆ ಯನ್ನು ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಆರಂಭಿಸಲಾಗಿತ್ತು. 8ಕ್ಕೂ ಅಧಿಕ ಬಗೆಯ ರಾಖೀಗಳನ್ನು ಇಲಾಖೆ ಪರಿಚಯಿಸಿತ್ತು. ಆದರೆ ಈ ಬಾರಿ 20ಕ್ಕೂ ಅಧಿಕ ಭಿನ್ನ ಬಣ್ಣದ ರಾಖೀಗಳು ಮತ್ತು 5 ಸಂದೇಶಗಳನ್ನು ಗ್ರಾಹಕರು ಆಯ್ಕೆ ಮಾಡಿ ಕೊಳ್ಳಬಹುದಾಗಿದೆ ಎಂದು ಭಾರತೀಯ ಅಂಚೆ ಇಲಾಖೆಯ ವ್ಯಾಪಾರ ಮತ್ತು ಅಭಿವೃದ್ದಿ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಬಾರಿ 2 ಸಾವಿರ ರಾಖೀ ಮಾರಾಟ: ಕಳೆದ ಬಾರಿ ಆನ್‌ಲೈನ್ ಸೇವೆಯನ್ನು ಆರಂಭಿಸಿದಾಗ ರಾಖೀ ಪ್ರಿಯರು ಉತ್ಸಾಹದಿಂದ ಅಂಚೆ ಇಲಾಖೆಯ ಆನ್ ಲೈನ್‌ನಲ್ಲಿ ಖರೀದಿ ಮಾಡಿದ್ದರು.ಆಹಿನ್ನೆಲೆಯಲ್ಲಿ ಸುಮಾರು 2 ಸಾವಿರ ವಿವಿಧ ಬಣ್ಣದ ರಾಖೀಗಳು ಮಾರಾಟವಾಗಿದ್ದವು ಎಂದು ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಪಿ.ಗುರುಪ್ರಸಾದ್ ಹೇಳಿದ್ದಾರೆ.
ಸೈನಿಕರಿಗೆ ಕಳುಹಿಸಲು ವಿಶೇಷ ಸಂದೇಶ ವ್ಯವಸ್ಥೆಯನ್ನು ಕೂಡ ಈ ವರ್ಷ ಕಲ್ಪಿಸಲಾಗಿದೆ. ಚೆಂದದ ಅಂಚೆ ಲಕೋಟೆಯೊಂದಿಗೆ ಗ್ರಾಹಕರ ತಮ್ಮ ಪ್ರೀತಿ ಪಾತ್ರರಿಗೆ ತ್ವರಿತವಾಗಿ ಅಂಚೆ ಮೂಲಕ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.
ರಾಖೀ ಆಯ್ಕೆ ಹೇಗೆ?
ರಾಖೀ ಪೋಸ್ಟ್‌ಗೆ100 ರೂ. ಶುಲ್ಕ ನಿಗದಿಪಡಿಸಲಾಗಿದ್ದು ದೇಶದ ಯಾವುದೇ ಮೂಲೆಯಲ್ಲಾದರೂ ತ್ವರಿತವಾಗಿ ಅಂಚೆ ಸೇವೆ ಮೂಲಕ ರಾಖೀಗಳನ್ನು ಕಳುಹಿಸಬಹುದಾಗಿದೆ. ಈ ಸೇವೆ ಬಳಸಲು ಆಸಕ್ತರು http://karnatakapost.gov.in/rakhi&post ಅಥವಾ ಕರ್ನಾಟಕ ಪೋಸ್ಟ್ ಹೋಮ್ ಪೇಜ್‌ಗೆ ಭೇಟಿ ನೀಡಿದರೆ ಆಗ ಅಂತರ್ಜಾಲ ಪುಟ ತೆರೆದುಕೊಳ್ಳಲಿದೆ. ಅಲ್ಲಿ ರಾಖೀ ವಿನ್ಯಾಸ ಮತ್ತು ಸಂದೇಶ ವಿಭಾಗ ಹಾಗೂ ಬುಕ್ ರಾಖೀ ವಿಭಾಗಕ್ಕೆ ಭೇಟಿ ನೀಡಿ ನಿಮಗಿಷ್ಟದ ರಾಖೀಗಳನ್ನು ನೋಂದಣಿ ಮಾಡಬಹುದಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲ ವಾಗಲಿಎಂಬ ಉದ್ದೇಶದಿಂದ ಅಂಚೆ ಇಲಾಖೆ ರಾಖೀ ಪೋಸ್ಟ್ ಆನ್‌ಲೈನ್ ಸೇವೆಯನ್ನು ಆರಂಭಿಸಿದೆ. ಈ ಬಾರಿ ಕೂಡ ಅಧಿಕ ಸಂಖ್ಯೆಯಲ್ಲಿ ಜನರು ಈ ಸೇವೆಯನ್ನು ಬಳಕೆ ಮಾಡುತ್ತಾರೆ ಎಂಬ ನಿರೀಕ್ಷೆಯಿದೆ. –ಪಿ.ಗುರುಪ್ರಸಾದ್, ಸಹಾಯಕ ಅಂಚೆ ನಿರೀಕ್ಷಕ, ಜಿಪಿಒ ಬೆಂಗಳೂರು
ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.