ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ: ವಿಧಾನಸಭೆಯಲ್ಲಿ ಮತ್ತೆ ಸಿದ್ದರಾಮಯ್ಯ ವಾಗ್ಧಾಳಿ
ಪಾಲು ಕೇಳಿದರೆ ಸಂಘರ್ಷ ಹೇಗೆ?
Team Udayavani, Feb 21, 2024, 6:30 AM IST
ಬೆಂಗಳೂರು: ಅನುದಾನ ಹಂಚಿಕೆ ವಿಚಾರದಲ್ಲಿ ನಾವು ಕೇಂದ್ರ ಸರಕಾರದ ಜತೆ ಸಂಘರ್ಷಕ್ಕಿಳಿದಿಲ್ಲ. ರಾಜ್ಯದ ಪಾಲಿನ ಸಂವಿಧಾನಬದ್ಧ ಹಕ್ಕು ಕೇಳುವುದು ಸಂಘರ್ಷ ಹೇಗಾಗುತ್ತದೆ ಎಂದು ವಿಪಕ್ಷಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ರಾಜ್ಯಪಾಲರು ತಮ್ಮ ಭಾಷಣದಲ್ಲಿ ನಮ್ಮ ಸರಕಾರದ ನೀತಿ, ನಿಲುವು, ಮುನ್ನೋಟವನ್ನು ಸ್ಪಷ್ಟವಾಗಿ ಜನರ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ರಾಜ್ಯಪಾಲರ ಭಾಷಣವನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಮಂಗಳವಾರ ಬೆಳಗ್ಗೆ ಕಲಾಪ ಆರಂಭ ಆಗುತ್ತಿದ್ದಂತೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವಕಾಶ ಮಾಡಿಕೊಟ್ಟರು. ಅರ್ಧದಿನದ ಕಲಾಪವನ್ನು ತಮ್ಮ ಉತ್ತರಕ್ಕಾಗಿ ಬಳಸಿಕೊಂಡ ಸಿಎಂ 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ಪ್ರಧಾನಿ ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಕೇಂದ್ರ ಸರಕಾರದ ವಿರುದ್ಧ ನಡೆಸಿದ್ದ ವಾಗ್ಧಾಳಿ, ತಮ್ಮ ಸರಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಸ್ತೃತ ಪ್ರಸ್ತಾವ ಮಾಡಿದರು.
ಆದರೆ ಸರಕಾರದ ಉತ್ತರವನ್ನು ಒಪ್ಪದ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ಅಷ್ಟರಲ್ಲಿ ರಾಜ್ಯಪಾಲರ ಭಾಷಣ ಹಾಗೂ ಸಿಎಂ ಉತ್ತರಕ್ಕೆ ಅನುಮೋದನೆ ನೀಡಲಾಗಿತ್ತು.
ಸುಳ್ಳು-ಸತ್ಯಗಳ ಸಂಘರ್ಷ
ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಹೇಳಿಸಿರುವುದಾಗಿ ವಿಪಕ್ಷಗಳು ಆರೋಪಿಸಿವೆ. ಆದರೆ ಸರಕಾರದ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ ಹಾಗೂ ಜನಪರ ಯೋಜನೆಗಳಿಗೆ ರಾಜ್ಯಪಾಲರು ಕನ್ನಡಿ ಹಿಡಿದಿದ್ದಾರೆ. ನಾವು ಅಧಿಕಾರಕ್ಕೆ ಬಂದ 9 ತಿಂಗಳು ಗಳಲ್ಲಿ 77,000 ಕೋಟಿ ರೂ. ಬಂಡವಾಳ ಹೂಡಿಕೆ ಯಾಗಿದೆ. ಇದು ನಮ್ಮ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆಗೆ ಹಿಡಿದ ಕನ್ನಡಿ.
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳಿನ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ. ಸ್ಪಷ್ಟ ಬಹುಮತದಿಂದ ಬಿಜೆಪಿ ಎಂದಿಗೂ ಅಧಿಕಾರಕ್ಕೆ ಬಂದಿಲ್ಲ. ಜನರು ನಮ್ಮನ್ನು ತಿರಸ್ಕರಿಸಿ ವಿಪಕ್ಷದಲ್ಲಿ ಕುಳ್ಳಿರಿಸಿದಾಗ ಅದನ್ನು ಒಪ್ಪಿಕೊಂಡು ರಚನಾತ್ಮಕವಾಗಿ ಕೆಲಸ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ. ನಾವು ಸುಳ್ಳುಗಳ ಆಸರೆಗೆ ಹೋಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ವಿಪಕ್ಷದ ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ಇದಕ್ಕೆ ತಿರುಗೇಟು ನೀಡಿ ರಾಜ್ಯಪಾಲರಿಂದ ಸುಳ್ಳು ಹೇಳಿಸಿದವರ್ಯಾರು, ರಾಜ್ಯಪಾಲರ ಭಾಷಣದಲ್ಲಿ ಎಷ್ಟು ಸುಳ್ಳು ಹೇಳಿಸಿದ್ದೀರಿ ಎಂದು ಪ್ರಶ್ನಿಸಿದರು.
ನಮ್ಮ ಪಾಲು ಕೇಳುವುದು ತಪ್ಪಾ?ರಾಜ್ಯಕ್ಕೆ ತೀವ್ರ ಬರಗಾಲ ಬಂದಿದೆ. ಪ್ರಧಾನಿಯಿಂದ ಹಿಡಿದು ಕೇಂದ್ರದ ವಿವಿಧ ಸಚಿವರು, ಇಲಾಖೆಯ ಅಧಿಕಾರಿಗಳಿಗೆ ಪರಿಹಾರ ಕೇಳಿ 17 ಬಾರಿ ಪತ್ರ ಬರೆಯಲಾಗಿದೆ. ನಿಮ್ಮ ಪತ್ರ ತಲುಪಿದೆ ಎಂದು ಒಂದು ಪತ್ರಕ್ಕೆ ಮಾತ್ರ ಉತ್ತರ ಬಂದಿದೆ. ಉಳಿದ ಪತ್ರಗಳಿಗೆ ಉತ್ತರವೂ ಬಂದಿಲ್ಲ, ಬರ ಪರಿಹಾರವೂ ಸಿಕ್ಕಿಲ್ಲ. ಇದು ಸುಳ್ಳಾ? ಇದನ್ನು ಪ್ರಶ್ನಿಸುವುದಾ ತಪ್ಪಾ? ನರೇಗಾ ಅಡಿ 150 ಮಾನವ ದಿನಗಳನ್ನು ಸೃಷ್ಟಿಸಿ ಎಂದು ಮನವಿ ಮಾಡಿದರೂ ಸ್ಪಂದಿಸಿಲ್ಲ. 34 ರೂ.ಗಳಿಗೆ ಕೆ.ಜಿ. ಅಕ್ಕಿ ಕೊಡಿ ಎಂದು ಕೇಳಿದರೂ ಕೊಡದ ಕೇಂದ್ರ ಸರಕಾರ ಈಗ 29 ರೂ.ಗಳಿಗೆ ಮಾರುತ್ತಿದೆ. ಇದು ಸರಿಯೇ ಎಂದು ಸಿಎಂ ಪ್ರಶ್ನಿಸಿದರು.
15ನೇ ಹಣಕಾಸು ಆಯೋಗ ರಾಜ್ಯಕ್ಕೆ ಒಟ್ಟು 11,495 ಕೋಟಿ ರೂ. ನೀಡಲು ಶಿಫಾರಸು ಮಾಡಿತ್ತು. ಅದನ್ನು ತನ್ನಿ ಎಂದು ಹಿಂದಿನ ಸರಕಾರಕ್ಕೂ ಹೇಳಿದ್ದೆ. ಮಧ್ಯಂತರ ವರದಿಯಲ್ಲಿ ಉಲ್ಲೇಖೀಸಿದ್ದ ವಿಶೇಷ ಅನುದಾನ 5,495 ಕೋಟಿ ರೂ.ಗಳನ್ನು ಅಂತಿಮ ವರದಿಯಲ್ಲಿ ಕೈಬಿಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ 5,300 ಕೋಟಿ ರೂ.ಗಳಲ್ಲಿ ಬಿಡಿಗಾಸೂ ಬಿಡುಗಡೆಯಾಗಿಲ್ಲ. ಇದನ್ನು ಪ್ರಶ್ನಿಸುವುದು ತಪ್ಪಾ? ಇದನ್ನು ಕೇಂದ್ರ ಸರಕಾರದ ವಿರುದ್ಧ ಸಂಘರ್ಷಕ್ಕಿಳಿದಿದ್ದೇವೆ ಎಂದು ವ್ಯಾಖ್ಯಾನಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
ಡಿ.ಕೆ. ಸುರೇಶ್ ಹೇಳಿಕೆಗೆ ಸಮರ್ಥನೆ
ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಶೇ. 50ರಷ್ಟು ತೆರಿಗೆ ಪಾಲು ನೀಡುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದರು. ಈಗ ರಾಜ್ಯದಿಂದ 4.30 ಲಕ್ಷ ಕೋಟಿ ರೂ. ಸಂದಾಯವಾದರೆ 50 ಸಾವಿರ ಕೋಟಿ ರೂ. ಕೂಡ ಹಿಂದಿರುಗಿ ಬರುತ್ತಿಲ್ಲ. ಈ ಅನ್ಯಾಯಗಳ ಬಗ್ಗೆ ಸಂಸದರು ಬಾಯಿ ಬಿಡುವುದೇ ಇಲ್ಲ. ಇಲ್ಲಿ ನಮಗೆ ಅನ್ಯಾಯ ಆಗುತ್ತಿರುವುದನ್ನು ಸಂಸದ ಡಿ.ಕೆ. ಸುರೇಶ್ ಪ್ರಶ್ನಿಸಿದರೆ ದೇಶ ವಿಭಜನೆ ಎಂದು ಬಿಜೆಪಿಯವರು ಬಿಂಬಿಸಿದರು ಎಂದು ಸಿಎಂ ಹೇಳಿದರು. ಇದಕ್ಕೆ ಸಚಿವ ಜಮೀರ್ ಖಾನ್ ಧ್ವನಿಗೂಡಿಸಿ ಬಿಜೆಪಿಯ 25 ಸಂಸದರಿದ್ದಾರೆ, ಅವರು ಬಾಯಿ ಬಿಡಬೇಕು ಎಂದು ಕೆಣಕಿದರು. ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಏಕೆ ಪ್ರಶ್ನಿಸುವುದಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್, ಉಪನಾಯಕ ಅರವಿಂದ ಬೆಲ್ಲದ್ ತಿರುಗೇಟು ಕೊಟ್ಟರು.
ರಾಜ್ಯಪಾಲರ ಬಾಯಿ
ಯಿಂದ ಹೇಳಿಸಿರುವ ಸುಳ್ಳು ಗಳನ್ನು ಸಮರ್ಥನೆ ಮಾಡಿಕೊಳ್ಳುವ ಮೂಲಕ ಸರಕಾರ ಅತ್ಯಂತ ನೀಚ ಮಟ್ಟಕ್ಕೆ ಇಳಿದಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಇಂತಹ ಉತ್ತರವನ್ನು ಸಿಎಂ ಅವರಿಂದ ನಿರೀಕ್ಷಿಸಿರಲಿಲ್ಲ. ಇದನ್ನು ವಿರೋಧಿಸಿ ನಾವು ಸಭಾತ್ಯಾಗ ಮಾಡಿದ್ದೇವೆ.
-ಆರ್. ಅಶೋಕ್, ವಿಪಕ್ಷ ನಾಯಕ
ಕೇಂದ್ರದಿಂದ ಅನ್ಯಾಯ ಆಗುತ್ತಿದೆ ಎಂದು ನೀವು ನಿರೂಪಿಸಿದರೆ ನಿಮ್ಮ ಜತೆ ನಾವೂ ದನಿ ಎತ್ತುತ್ತೇವೆ. ರಾಜ್ಯಸಭೆ ಯಲ್ಲಿ ಮೇಕೆದಾಟು ವಿಷಯದಲ್ಲಿ ದೇವೇ ಗೌಡರು ಮಾತನಾಡಿ ದಾಗ ಕಾಂಗ್ರೆಸ್ ಸದಸ್ಯರು ಯಾಕೆ ಬೆಂಬಲ ಕೊಡಲಿಲ್ಲ? ಮಲ್ಲಿಕಾರ್ಜುನ ಖರ್ಗೆ ಏಕೆ ಮಾತನಾಡಲಿಲ್ಲ?
-ಕುಮಾರಸ್ವಾಮಿ, ಜೆಡಿಎಸ್ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.