ಪರಂ ಕಾರು ಚಾಲಕನ ವಿಚಾರಣೆ
Team Udayavani, Oct 14, 2019, 3:03 AM IST
ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕು ಗೊಳಿಸಿರುವ ಪಶಿrಮ ವಿಭಾಗ ಪೊಲೀಸರು, ಭಾನುವಾರ ಪರಮೇಶ್ವರ್ ಕಾರು ಚಾಲಕ ಅನಿಲ್ ಎಂಬುವರನ್ನು ವಿಚಾರಣೆ ನಡೆಸಿದ್ದಾರೆ.
ಪರಮೇಶ್ವರ್ ಬಳಿ ಅನಿಲ್ ಸುಮಾರು ವರ್ಷಗಳಿಂದ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮೃತ ರಮೇಶ್ ಹಾಗೂ ಅನಿಲ್ ಉತ್ತಮ ಸ್ನೇಹಿತರಾಗಿದ್ದರು. ರಮೇಶ್ ಆಪ್ತವಲಯಗಳ ಬಗ್ಗೆ ಮಾಹಿತಿ ಪಡೆಯಲು ಅನಿಲ್ ವಿಚಾರಣೆ ಮಾಡಿ ಕಳುಹಿಸಿ ಕೊಡಲಾಗಿದೆ. ಇದೊಂದು ಸಾಮಾನ್ಯ ಪ್ರಕ್ರಿಯೆ ಅಷ್ಟೇ ಎಂದು ಪೊಲೀಸರು ಹೇಳಿದರು.
ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಲ್ಲಾಳ ರಸ್ತೆಯಲ್ಲಿರುವ ರಮೇಶ್ ಮನೆ ಅಕ್ಕ-ಪಕ್ಕದ ನಿವಾಸಿಗಳು ಸೇರಿ ಭಾನುವಾರ ಒಂದೇ ದಿನ ಸುಮಾರು 40ಕ್ಕೂ ಹೆಚ್ಚು ಮಂದಿಯಿಂದ ಹಲವು ರೀತಿಯ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಎಫ್ಎಸ್‌ಎಲ್‌ಗೆ ರವಾನೆ: ರಮೇಶ್ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್, ಅವರ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲದೆ, ರಮೇಶ್ ಕೊನೇ ಬಾರಿಗೆ ಕರೆ ಮಾಡಿದವರ ವಿವರ ಹಾಗೂ ಬಳಸುತ್ತಿದ್ದ ಸಿಮ್‌ಕಾರ್ಡ್‌ಗಳ ಬಗ್ಗೆಯೂ ಸೇವಾ ಸಂಸ್ಥೆಗಳಿಗೆ ಮಾಹಿತಿ ನೀಡುವಂತೆ ಪತ್ರ ಬರೆದು ಕೋರಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಡೆತ್‌ನೋಟ್ ಅನ್ನು ರಮೇಶ್ ಅವರೇ ಬರೆದಿದ್ದಾರೆ ಎಂಬುದು ಗೊತ್ತಾಗಿದೆ. ಆದರೂ ಪತ್ನಿ ಅಥವಾ ಕುಟುಂಬ ಸದಸ್ಯರಿಂದ ದೃಢಪಡಿಸಿಕೊಳ್ಳಬೇಕಿದೆ. ಜತೆಗೆ ಅವರ ಬರವಣಿಗೆಯ ಇತರೆ ಸಾಕ್ಷ ಸಂಗ್ರಹ ಮಾಡಬೇಕಿದೆ. ಆದರೆ, ಅವರ ಪತ್ನಿ, ಕುಟುಂಬ ಸದಸ್ಯರು ರಾಮನಗರದ ಮೇಳಹಳ್ಳಿಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿರುವುದರಿಂದ ಒಂದೆರಡು ದಿನ ತಡ ಆಗಬಹುದು.
ಅಸಹಜ ಸಾವು ಪ್ರಕರಣ: ರಮೇಶ್ ಆತ್ಮಹತ್ಯೆ ಬೆನ್ನಲ್ಲೇ ಅವರ ಸಹೋದರ, ಕುಟುಂಬ ಸದಸ್ಯರು ಆತ್ಮಹತ್ಯೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಈ ಸಂಬಂಧ ರಮೇಶ್ ಸಹೋದರ ಸತೀಶ್ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಐಟಿ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರಿದ್ದರು.
ಆದರೆ, ತತ್‌ಕ್ಷಣ ಈ ಕುರಿತು ಯಾವುದೇ ಸಾಕ್ಷಗಳು ಸಿಗದ ಹಿನ್ನೆಲೆಯಲ್ಲಿ ಸಿಆರ್‌ಪಿಸಿ 174 ಅಡಿಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಒಂದು ವೇಳೆ ದೂರುದಾರರ ಆರೋಪಕ್ಕೆ ಸೂಕ್ತ ಸಾಕ್ಷ್ಯಗಳು ದೊರೆತರೆ ಹೆಚ್ಚುವರಿಯಾಗಿ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಐಟಿ ಅಧಿಕಾರಿಗಳ ವಿರುದ್ಧ ಅನುಮಾನ: ಅ.10ರ ಮಧ್ಯಾಹ್ನ ಐಟಿ ಅಧಿಕಾರಿಗಳು ರಮೇಶ್ ಅವರ ಉಲ್ಲಾಳ ಮುಖ್ಯ ರಸ್ತೆಯಲ್ಲಿರುವ ಮನೆ ಮೇಲೆ ದಾಳಿ ನಡೆಸಿರುವ ದೃಶ್ಯಗಳು ಮನೆ ಮುಂಭಾಗ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೂ ಐಟಿ ಅಧಿಕಾರಿಗಳು ಯಾವ ಕಾರಣಕ್ಕೂ ದಾಳಿ ನಡೆಸಿಲ್ಲ, ವಿಚಾರಣೆಯೂ ಮಾಡಿಲ್ಲ ಎಂದು ಪತ್ರಿಕಾ ಹೇಳಿಕೆ ಹೊರಡಿಸಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಅಗತ್ಯವಿದ್ದಲ್ಲಿ ಅವರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ನೋಟಿಸ್ ಜಾರಿ: ಸದಾಶಿವನಗರದ ಪರಮೇಶ್ವರ್ ಮನೆಯಿಂದ ಅ.12ರ ಮುಂಜಾನೆ ಐದು ಗಂಟೆಗೆ ಮನೆಗೆ ಬಂದ ರಮೇಶ್ ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದರು. ಬಳಿಕ ಪತ್ನಿ ಜತೆ ಐಟಿ ಅಧಿಕಾರಿಗಳ ವಿಚಾರಣೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಅನಂತರ ಮನೆಯಿಂದ ಹೊರಬಂದು ಇಬ್ಬರು ಸ್ನೇಹಿತರು, ಕೆಲ ಮಾಧ್ಯಮ ಮಿತ್ರರಿಗೂ ಕರೆ ಮಾಡಿದ್ದಾರೆ. ಹೀಗಾಗಿ ಸೋಮವಾರ ಅಥವಾ ಮಂಗಳವಾರ ಎಲ್ಲರಿಗೂ ನೋಟಿಸ್ ಜಾರಿ ಮಾಡಿ ಕಾನೂನು ಬದ್ಧವಾಗಿ ವಿಚಾರಣೆ ನಡೆಸಲಾಗುವುದು. ಇದರೊಂದಿಗೆ ರಮೇಶ್ ಕಾಲ್ ಡಿಟೇಲ್ಸ್ ಆಧರಿಸಿ ಇತರೆ ವ್ಯಕ್ತಿಗಳಿಗೂ ನೋಟಿಸ್ ಕೊಡಲಾಗುವುದು ಎಂದು ಪೊಲೀಸರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.