ಪತನದ ಹಾದಿಯಲ್ಲಿ ಕುತೂಹಲ ನಡೆ…
Team Udayavani, Jul 24, 2019, 3:06 AM IST
ಬೆಂಗಳೂರು: ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ಗೋಕಾಕ್‌ನ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿಯವರು ಜುಲೈ 1ರಂದು ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಮೈತ್ರಿ ಸರ್ಕಾರದ ಸಂಖ್ಯಾ ಬಲ ಕುಸಿಯಲಾರಂಭಿಸಿತು. ಇದೆ ಹೊತ್ತಿಗೆ ಬಿಜೆಪಿಗೆ ಸರ್ಕಾರ ರಚನೆಯ ಆಸೆಯೂ ಚಿಗುರೊಡೆಯಿತು.
ಜುಲೈ 2ರಿಂದ ಮತ್ತಷ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾಜೀನಾಮೆ ನೀಡುವ ಇಂಗಿತ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಬಿಜೆಪಿಯ ಕೇಂದ್ರ ನಾಯಕರು ಕೂಡ ಆಪರೇಷನ್ ಕಮಲಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮೈತಿಯಿಂದ “ರಿವರ್ಸ್ ಆಪರೇಷನ್’ ನಡೆದಿದೆ ಎಂಬ ಸವಾಲನ್ನು ಹಾಕಿದ್ದರು.
ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿಯವರು ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರಕ್ಕೆ ಮೊದಲ ಶಾಕ್ ನೀಡಿದರು. ಇದಾದ ನಾಲ್ಕೈದು ದಿನದಲ್ಲೇ (ಜುಲೈ 6ರಂದು) ಕಾಂಗ್ರೆಸ್‌ನ ಮತ್ತಷ್ಟು ಶಾಸಕರು ರಾಜೀನಾಮೆ ನೀಡಿದರು. ಇದರಿಂದಾಗಿ ಮೈತ್ರಿ ಸರ್ಕಾರದ ಸಂಖ್ಯಾ ಬಲ ಇನ್ನಷ್ಟು ಇಳಿಯಿತು. ಸರ್ಕಾರ ಬಹುಮತ ಕಳೆದುಕೊಳ್ಳುವ ಭೀತಿಗೆ ಸಿಲುಕುತ್ತಿದ್ದಂತೆ ಬಿಜೆಪಿಯ ಸಂಖ್ಯಾಬಲ ಹೆಚ್ಚಾಗುತ್ತದೆ ಎಂಬುದನ್ನು ಅರಿತ ನಾಯಕರು ಸರ್ಕಾರ ರಚನೆಯ ಗಂಭೀರ ಆಲೋಚನೆ ಆರಂಭಿಸಿದ್ದರಾದರೂ, ಎಲ್ಲಿಯೂ ಅದನ್ನು ಬಹಿರಂಗಪಡಿಸಲಿಲ್ಲ. ಹಾಗೆಯೇ ದುಡುಕಿ ಯಾವುದೇ ರೀತಿಯ ಬಹಿರಂಗ ಹೇಳಿಕೆ ನೀಡುವ ಪ್ರಯತ್ನವನ್ನು ಬಿಜೆಪಿ ನಾಯಕರು ಅಥವಾ ಶಾಸಕರು ಮಾಡಿಲ್ಲ.
ಬೆಂಗಳೂರಿನ ಕಾಂಗ್ರೆಸ್ ಪ್ರಭಾವಿ ಶಾಸಕ ರಾಮಲಿಂಗಾರೆಡ್ಡಿ (ಈಗ ರಾಜೀನಾಮೆ ವಾಪಸ್ ಪಡೆದಿದ್ದಾರೆ) ಸಹಿತವಾಗಿ ಬೈರತಿ ಬಸವರಾಜು, ಮುನಿರತ್ನ ಹಾಗೂ ಎಸ್.ಟಿ.ಸೋಮಶೇಖರ್ ರಾಜೀನಾಮೆ ನೀಡುತ್ತಿದ್ದಂತೆ ಸರ್ಕಾರದ ತಳಮಳ ಆರಂಭವಾಯಿತು. ಇವರ ಜತೆಯಲ್ಲೇ ಶಾಸಕ ಬಿ.ಸಿ.ಪಾಟೀಲ್, ಪ್ರತಾಪ್ ಗೌಡ, ಶಿವರಾಂ ಹೆಬ್ಟಾರ್, ಮಹೇಶ್ ಕುಮಟಳ್ಳಿ ರಾಜೀನಾಮೆ ನೀಡಿದ್ದು, ಮೈತ್ರಿ ನಾಯಕರಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿತು. ಇನ್ನೊಂದು ಕಡೆ ಬಿಜೆಪಿ ನಾಯಕರ ಸರ್ಕಾರ ರಚನೆಯ ಬೀಜ ನಿಧಾನವಾಗಿ ಮೊಳಕೆಯೊಡೆಯಲಾರಂಭಿಸಿತು.
ಶಾಸಕರಾದ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೋಳಿ ಸೇರಿ ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕರ ಸಂಖ್ಯೆ 9ಕ್ಕೆ ಏರಿತ್ತು. ಹಾಗೆಯೇ ಜೆಡಿಎಸ್‌ನ ಎಚ್.ವಿಶ್ವನಾಥ್, ಕೆ.ಗೋಪಾಲಯ್ಯ ಹಾಗೂ ನಾರಾಯಣ ಸ್ವಾಮಿ ಕೂಡ ರಾಜೀನಾಮೆ ನೀಡಿದರು. ಇದರಿಂದ ರಾಜೀನಾಮೆ ನೀಡಿದ ಶಾಸಕರ ಸಂಖ್ಯೆ 11ಕ್ಕೆ ಏರಿತ್ತು. ಇದೇ ಸಂದರ್ಭದಲ್ಲಿ ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಕೂಡ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದರು. ಬಿಎಸ್‌ಪಿ ಶಾಸಕ ಎನ್.ಮಹೇಶ್ ವರಿಷ್ಠರ ನಿರ್ಣಯದಂತೆ ಮೈತ್ರಿ ಸರ್ಕಾರದಿಂದ ಅಂತರ ಕಾಯ್ದುಕೊಂಡರು. ಇದರಿಂದ ಸರ್ಕಾರದ ಸಂಖ್ಯ ಬಲ 100ಕ್ಕೆ ಇಳಿಯುತ್ತಿದ್ದಂತೆ ಬಿಜೆಪಿಯ ಸಂಖ್ಯಾ ಬಲ 105ಕ್ಕೆ ಏರಿತ್ತು.
ಜುಲೈ 9ರಂದು 8 ಮಂದಿ ಅತೃಪ್ತರ ರಾಜೀನಾಮೆ ಕ್ರಮಬದ್ಧವಿಲ್ಲವೆಂದು ತಿರಸ್ಕರಿಸಲಾಗಿತ್ತು. ನಂತರ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಆದೇಶದಂತೆ ಮುಂಬೈನಿಂದ ಬೆಂಗಳೂರಿಗೆ ಬಂದು ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿ ವಾಪಸ್ಸಾದರು. ಮುಂಬೈನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅತೃಪ್ತ ಶಾಸಕರ ಜತೆಗೆ ಬಿಜೆಪಿ ಮುಖಂಡರಾದ ಆರ್.ಅಶೋಕ್, ಅಶ್ವತ್ಥ್ ನಾರಾಯಣ ಮೊದಲಾದವರು ಕಾಣಿಸಿಕೊಂಡರು.
ಅತೃಪ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬೆಳಗ್ಗೆ ಕಾಂಗ್ರೆಸ್ ಮುಖಂಡರೊಂದಿಗೆ ಕಾಣಿಸಿಕೊಂಡಿದ್ದ ಹೊಸಕೋಟೆ ಶಾಸಕ ಹಾಗೂ ಸಚಿವ ಎಂ.ಟಿ.ಬಿ.ನಾಗರಾಜ್ ಕೂಡ ಜುಲೈ 14ರಂದು ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಎಂ.ಟಿ.ಬಿ.ನಾಗರಾಜ್ ಅವರು ಮುಂಬೈಗೆ ಹೋಗಲು ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಅವರೇ ವಿಮಾನದ ವ್ಯವಸ್ಥೆ ಮಾಡಿ, ವಿಮಾನ ನಿಲ್ದಾಣದವರೆಗೂ ಅವರೊಂದಿಗೆ ಹೋಗಿದ್ದಾರೆ ಎಂಬ ಸುದ್ದಿಯೂ ಹರಿದಾಡಿತು. ಕೆಲವೇ ಗಂಟೆಯಲ್ಲಿ ಎಂ.ಟಿ.ಬಿ.ನಾಗರಾಜ್ ಮುಂಬೈನಲ್ಲಿದ್ದ ಅತೃಪ್ತ ಶಾಸಕರ ದಂಡನ್ನು ಸೇರಿಕೊಂಡರು.
ಈ ಮಧ್ಯೆ ಜುಲೈ 12ರಂದು ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ರಾಜ್ಯ ಸರ್ಕಾರಕ್ಕೆ ಬಹುಮತ ಇಲ್ಲ, ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಶಾಸಕರು ಸದನದ ಒಳಗೆ ಆಗ್ರಹ ಆರಂಭಿಸಿದರು. ಅದೇ ದಿನ ಬೆಳಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯ ಮಂಡನೆ ಮಾಡಿದರು. ಹಾಗೆಯೇ ಬಿಜೆಪಿ ಶಾಸಕರು ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್ ಸೇರಿಕೊಂಡರು. ಬಿಜೆಪಿಯ ಬಹುತೇಕ ಶಾಸಕರು ಯಡಿಯೂರಪ್ಪ ಅವರ ಮಾರ್ಗದರ್ಶನದಂತೆ ರೆಸಾರ್ಟ್‌ನಲ್ಲೇ ಇದ್ದರು. ಇನ್ನು ಕೆಲವರು ಅನುಮತಿ ಪಡೆದು ಸ್ವಕ್ಷೇತ್ರಕ್ಕೆ ತೆರಳಿದ್ದರು. ಆದರೆ, ಕಲಾಪಕ್ಕೆ ಎಲ್ಲರೂ ಹಾಜರಾಗುತ್ತಿದ್ದರು.
ಜುಲೈ 12ರಿಂದ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಸಹಿತವಾಗಿ ಬಿಜೆಪಿಯ ಎಲ್ಲ ಶಾಸಕರು ವಿಧಾನಸಭೆಯಲ್ಲಿ ಯಾವುದೇ ರೀತಿಯಲ್ಲೂ ತಾಳ್ಮೆ ಕಳೆದುಕೊಳ್ಳದೆ, ಆಡಳಿತ ಪಕ್ಷದ ನಾಯಕರ ಎಲ್ಲ ರೀತಿಯ ಟೀಕೆಗಳನ್ನು ಸಹಿಸಿಕೊಂಡರು. ಚರ್ಚೆ ಎಷ್ಟೇ ತಾರಕಕ್ಕೆ ಏರಿದ್ದರೂ, ಬಿಜೆಪಿಯ ಶಾಸಕರು ತಾಳ್ಮೆ ಕಳೆದುಕೊಳ್ಳದೆ ವಿಶ್ವಾಸ ಮತ ಸಾಬೀತಿಗೆ ಆಗಾಗ ಒತ್ತಾಯ ಮಾಡುತ್ತಿದ್ದರು. ಜುಲೈ 22ರ ರಾತ್ರಿಯ ವರೆಗೂ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಎಲ್ಲಿಯೂ ಪ್ರತಿಭಟಿಸುವ ಅಥವಾ ಸಭಾತ್ಯಾಗ ಮಾಡುವ ಯಾವುದೇ ನಿರ್ಧಾರ ತೆಗೆದುಕೊಳ್ಳದೆ, ಸಹನೆಯಿಂದ ಕಲಾಪದಲ್ಲಿ ಪೂರ್ಣ ಪ್ರಮಾಣದಲ್ಲಿ ಕುಳಿತಿದ್ದರು. ಈ ಮಧ್ಯೆ ವಿಧಾನ ಪರಿಷತ್ತಿನಲ್ಲಿ ಜುಲೈ 12ರಿಂದಲೇ ಪ್ರತಿಪಕ್ಷದ ನಾಯಕರು ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿ, ಒಂದು ದಿನವೂ ಸುಸೂತ್ರವಾಗಿ ಕಲಾಪ ನಡೆಸಲು ಬಿಟ್ಟಿಲ್ಲ.
ಪ್ರಮುಖ ಘಟನಾವಳಿ!
-ಜುಲೈ 1ರಂದು ಶಾಸಕರಾದ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೋಳಿ ರಾಜೀನಾಮೆ.
-ಜುಲೈ 2ರಂದು “ರಿವರ್ಸ್ ಆಪರೇಷನ್’ಗೆ ಬಿಎಸ್‌ವೈ ಸವಾಲು.
-ಜುಲೈ 6ರಂದು 9 ಮಂದಿ ಅತೃಪ್ತ ಶಾಸಕರ ರಾಜೀನಾಮೆ.
-ಜುಲೈ6ರಂದೇ ಮುಂಬೈಗೆ ಹಾರಿದ ಅತೃಪ್ತ ಶಾಸಕರು.
-ರಾಜೀನಾಮೆ ಅಂಗೀಕಾರಕ್ಕೆ ಕೋರಿ ಸುಪ್ರೀಂಗೆ ಅರ್ಜಿ.
-ಕ್ರಮಬದ್ಧವಾಗಿ ರಾಜೀನಾಮೆ ನೀಡಲು ಜುಲೈ 11ರಂದು ಓಡೋಡಿ ಬಂದ ಅತೃಪ್ತರು.
-ಜುಲೈ 12ರಿಂದ ಅಧಿವೇಶನ ಆರಂಭ.
-ಬಿಜೆಪಿಯ ಎಲ್ಲ ಶಾಸಕರು ತಾಳ್ಮೆಯಿಂದ ಸದನದಲ್ಲಿ ಭಾಗಿಯಾಗಿದ್ದರು.
* ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ
Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!
Communalization ಜತೆ ಆರೆಸ್ಸೆಸ್ ಆರಂಭ: ಬಿಳಿಮಲೆ ಹೇಳಿದ್ದು ವಿವಾದ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.