Channapatana ಉಪ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ ಖಚಿತ?
ಡಿಕೆಶಿ- ಎಚ್‌ಡಿಕೆ ಮಧ್ಯೆ ಮತ್ತೊಂದು ಸುತ್ತಿನ ಜಿದ್ದಾಜಿದ್ದಿ ಗ್ಯಾರಂಟಿ
Team Udayavani, Jun 6, 2024, 6:50 AM IST
ಬೆಂಗಳೂರು: ಲೋಕಸಭೆಗೆ ಮೂವರು ಶಾಸಕರು ಹಾಗೂ ವಿಧಾನ ಪರಿಷತ್ತಿನಿಂದ ಒಬ್ಬರು ಆಯ್ಕೆಯಾಗಿರುವುದರಿಂದ ಅವರ ಸ್ಥಾನಗಳಿಗೆ 6 ತಿಂಗಳ ಒಳಗೆ ಉಪ ಚುನಾವಣೆ ಘೋಷಣೆಯಾಗಲಿದ್ದು, ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಮಧ್ಯೆ ಮತ್ತೊಂದು ಸುತ್ತಿನ ಜಿದ್ದಾಜಿದ್ದಿ ಹೋರಾಟ ನಡೆಯುವುದು ಗ್ಯಾರಂಟಿಯಾಗಿದೆ.
ಚನ್ನಪಟ್ಟಣ ಶಾಸಕರಾಗಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ, ಶಿಗ್ಗಾವಿ ಶಾಸಕರಾಗಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ, ಸಂಡೂರು ಶಾಸಕ ತುಕಾರಾಂ ಅವರು ಬಳ್ಳಾರಿ ಹಾಗೂ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ತಿನ ಸದಸ್ಯ ಶ್ರೀನಿವಾಸ ಪೂಜಾರಿ ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿರುವುದರಿಂದ ಅವರು ಸದ್ಯ ಪ್ರತಿನಿಧಿಸುತ್ತಿರುವ ಶಾಸಕ ಹಾಗೂ ವಿಧಾನ ಪರಿಷತ್ತಿನ ಸ್ಥಾನಗಳಿಗೆ ಶೀಘ್ರವೇ ರಾಜೀನಾಮೆ ಸಲ್ಲಿಸಲಿದ್ದಾರೆ. ಇವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗಲಿದೆ.
ಮತ್ತೊಂದು ಅಗ್ನಿಪರೀಕ್ಷೆ
ಆಗ ಸುರೇಶ್ ವಿರುದ್ಧ ಮೈತ್ರಿಕೂಟದ ಅಭ್ಯರ್ಥಿಯಾಗಿ ಬಿಜೆಪಿಯ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಇಲ್ಲವೇ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖೀಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂಬ ಚರ್ಚೆ ಈಗಲೇ ಆರಂಭವಾಗಿವೆ.
ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದಲೂ ಶಾಸಕರಾಗಿ ಆಯ್ಕೆಯಾಗಿದ್ದ ಕುಮಾರಸ್ವಾಮಿ ಅವರು ಈ ಕ್ಷೇತ್ರಗಳು ನನಗೆ ಎರಡು ಕಣ್ಣುಗಳು ಇದ್ದಂತೆ ಎಂದು ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದರು. ಹೀಗಾಗಿ ಕಣ್ಣು ಕಳೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲದ ಕುಮಾರಸ್ವಾಮಿಗೆ ಚನ್ನಪಟ್ಟಣ ಉಪ ಚುನಾವಣೆ ಮತ್ತೂಂದು ಅಗ್ನಿಪರೀಕ್ಷೆ.
ಚನ್ನಪಟ್ಟಣ ಸವಾಲಿನ ಕ್ಷೇತ್ರ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸೋಲಿನ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಕಾಂಗ್ರೆಸ್ ಅದರಲ್ಲೂ ವಿಶೇಷವಾಗಿ ಡಿ.ಕೆ. ಸಹೋದರರು ಚನ್ನಪಟ್ಟಣ ಉಪ ಚುನಾವಣೆಯನ್ನು ಗಂಭೀರವಷ್ಟೇ ಅಲ್ಲ ಸವಾಲಾಗಿ ಸ್ವೀಕರಿಸಿ ಗೆಲ್ಲಲು ಪಣತೊಡುವ ಸಾಧ್ಯತೆಗಳಿವೆ. ಇನ್ನು ಶಿಗ್ಗಾವಿನಿಂದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ, ಬಳ್ಳಾರಿಯಿಂದ ಸಂಸದ ತುಕಾರಾಂ ಪುತ್ರಿ ಚೈತನ್ಯಾ ಅವರು ಅಭ್ಯರ್ಥಿಗಳಾಗಬಹುದೆಂಬ ಚರ್ಚೆಗಳು ಶುರುವಾಗಿವೆ. ವಿಶೇಷವಾಗಿ ತುಕಾರಾಂ ಅವರು ತಮ್ಮ ಬದಲಿಗೆ ಪುತ್ರಿಗೆ ಲೋಕಸಭಾ ಚುನಾವಣೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ತಾವೇ ಸ್ಪರ್ಧಿಸಬೇಕೆಂದು ಸೂಚಿಸಿದಾಗ ಒಂದು ವೇಳೆ ತಾವು ಲೋಕಸಮರದಲ್ಲಿ ಗೆದ್ದರೆ ಉಪ ಚುನಾವಣೆಗೆ ಪುತ್ರಿಗೆ ಟಿಕೆಟ್ ಕೊಡಬೇಕೆಂಬ ಷರತ್ತು ವಿಧಿಸಿದ್ದರು. ಈಗ ತುಕಾರಾಂ ಗೆದ್ದಿರುವುದರಿಂದ ಪುತ್ರಿ ಅಭ್ಯರ್ಥಿಯಾಗುವುದು ಖಚಿತವಾಗಿದೆ.
ಮತ್ತೊಮ್ಮೆ ಕಾಳಗ
ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಮತ್ತೊಮ್ಮೆ ರಾಜ್ಯದ ಗಮನ ಸೆಳೆಯುವ ಸಾಧ್ಯತೆಗಳಿವೆ.
ಕಾರಣ ಈ ಚುನಾವಣೆಯಲ್ಲಿ ಬಿಜೆಪಿಯ ಡಾ| ಸಿ.ಎನ್. ಮಂಜುನಾಥ್ ವಿರುದ್ಧ ಸೋತಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಅವರು ಚನ್ನಪಟ್ಟಣಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. ಒಂದು ವೇಳೆ ಸುರೇಶ್ ಅವರೇ ಅಭ್ಯರ್ಥಿಯಾದರೆ ಕಾಂಗ್ರೆಸ್ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿ ಕೂಟದ ಮಧ್ಯೆ ಮತ್ತೂಮ್ಮೆ ಕಾಳಗ ನಡೆಯಲಿದೆ.
ಸಿಎಂ ಪುತ್ರ ಮೇಲ್ಮನೆಗೆ; ಡಿಸಿಎಂ ಸೋದರ ಕೆಳಮನೆಗೆ?
ತಂದೆಗಾಗಿ ವರುಣ ಕ್ಷೇತ್ರ ತ್ಯಾಗ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ| ಯತೀಂದ್ರ ಸಿದ್ದರಾಮಯ್ಯ ವಿಧಾನ ಪರಿಷತ್‌ಗೆ ಆಯ್ಕೆಯಾಗುವುದು ಖಚಿತವಾಗಿದೆ. ಇತ್ತ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸೋತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಚನ್ನಪಟ್ಟಣ ಉಪಚುನಾವಣೆ ಮೂಲಕ ವಿಧಾನಸಭೆ ಪ್ರವೇಶಿಸುವ ಸಾಧ್ಯತೆ ಇದೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಸ್ಪರ್ಧೆ ಮಾಡುವುದು ಅವರಿಗೆ, ಹೈಕಮಾಂಡ್‌ಗೆ ಬಿಟ್ಟ ವಿಚಾರ. ಈ ಉಪ ಚುನಾವಣೆಯಲ್ಲಿ ಚನ್ನಪಟ್ಟಣ ನಮ್ಮ ಕೈವಶ ಆಗುತ್ತದೆ. ಅಲ್ಲಿ ಯಾರೂ ಇಲ್ಲದೇ 80 ಸಾವಿರ ಮತ ಪಡೆದಿದ್ದೇವೆ. ಕುಮಾರಸ್ವಾಮಿ ಅವರು ಈಗ ನಮ್ಮ ಜಿಲ್ಲೆಯಲ್ಲಿ ಇಲ್ಲ. ಅವರು ಮಂಡ್ಯಕ್ಕೆ ಹೋಗಾಯ್ತು.
– ಎಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.