ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ ಹೇಳಿದ್ದ ಮಾತು ನಿಜವಾಯಿತೇ?
Team Udayavani, Jul 24, 2019, 3:06 AM IST
ಬೆಂಗಳೂರು: ಬಿಜೆಪಿಯನ್ನು ದೂರ ಇಡುವ ಜಾತ್ಯತೀತ ನಿಲುವಿನ “ಅಸ್ತ್ರ’ ಪ್ರಯೋಗದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಹದಿನಾಲ್ಕು ತಿಂಗಳಲ್ಲಿ ಪತನಗೊಳ್ಳುವ ಮೂಲಕ ಮೈತ್ರಿ ಸರ್ಕಾರ ರಾಜ್ಯದಲ್ಲಿ ಯಶಸ್ವಿಯಾ ಗುವುದಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ಹದಿನೈದು ವರ್ಷಗಳಲ್ಲಿ ಮೂರು ಸಮ್ಮಿಶ್ರ ಸರ್ಕಾರಗಳು ಅಲ್ಪಾಯುಷ್ಯದೊಂದಿಗೆ ಪತನಗೊಂ ಡಂತಾಗಿದ್ದು, ರಾಜ್ಯ ರಾಜಕಾರಣದ ದಿಗ್ಗಜರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಂತಹ ದಿಗ್ಗಜರಿದ್ದರೂ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಇದು ಹೆಚ್ಚು ದಿನ ಬಾಳುವುದಿಲ್ಲ ಎಂಬ ವಿಶ್ಲೇಷಣೆಗಳು ಇದ್ದವಾದರೂ ತಳಹದಿ ಗಟ್ಟಿಯಾಗಿದ್ದರಿಂದ ಕುತೂಹಲವಂತೂ ಇದ್ದೇ ಇತ್ತು. ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್‌ಗಾಂಧಿಯವರು ದೇಶದ ರಾಜಕಾರಣದ ಭವಿಷ್ಯದ ಬಗ್ಗೆ ಯೋಚಿಸಿ ತೀರ್ಮಾನ ಕೈಗೊಂಡಿದ್ದರಿಂದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದರು. ಆಗ ಬಿಎಸ್‌ಪಿ, ಎಸ್‌ಪಿ, ಆರ್‌ಜೆಡಿ, ಟಿಡಿಪಿ, ಎಎಪಿ ಸೇರಿ ಪ್ರಾದೇಶಿಕ ಪಕ್ಷಗಳ ನಾಯಕರೆಲ್ಲರೂ ಒಂದೇ ವೇದಿಕೆಯಡಿ ಬಂದು ಒಗ್ಗಟ್ಟು ಪ್ರದರ್ಶಿಸಿದ್ದರಿಂದ ರಾಜ್ಯದಲ್ಲಿನ ರಾಜಕೀಯ ಧ್ರುವೀಕರಣ ದೇಶದ ಮಟ್ಟದಲ್ಲಾಗುವ ಆಶಾಭಾವನೆ ಮೂಡಿಸಿತ್ತು.
ಧರ್ಮಸ್ಥಳದ “ಬಾಂಬ್’: ಆದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿದ್ದಾಗ ಲೋಕಸಭೆ ಚುನಾವಣೆವರೆಗೆ ಮಾತ್ರ ಈ ಸರ್ಕಾರ ಎಂಬ “ಬಾಂಬ್’ ಸಿಡಿಸಿದ್ದರು. ತಮ್ಮನ್ನು ಭೇಟಿ ಮಾಡಲು ಬಂದ ಬೆಂಬಲಿಗರ ಜತೆ ಸಹಜವಾಗಿ ರಾಜಕೀಯದ ವಿಚಾರಗಳನ್ನು ಪ್ರಸ್ತಾಪ ಮಾಡುವಾಗ ನೋಡೋಣ ಪಾರ್ಲಿಮೆಂಟ್ ಎಲೆಕ್ಷನ್ ನಂತರ ಏನಾಗುತ್ತದೆಯೋ ಎಂದು ಹೇಳಿದ್ದರು. ಆಗಲೇ, ಈ ಸಮ್ಮಿಶ್ರ ಸರ್ಕಾರ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂಬಂತೆಯೇ ಬಿಂಬಿತವಾಗುತ್ತಾ ಹೋಯಿತು.
ಈ ನಡುವೆ, ಆಗ್ಗಾಗ್ಗೆ ಸಂಪುಟ ಸ್ಥಾನಮಾನ, ನಿಗಮ-ಮಂಡಳಿ ನೇಮಕ, ವರ್ಗಾವಣೆ ವಿಚಾರಗಳಲ್ಲಿ ಉಂಟಾದ ಸಂಘರ್ಷಗಳಿಂದ ಸರ್ಕಾರ ಹೆಚ್ಚು ದಿನ ಉಳಿಯುವುದು ಕಷ್ಟ ಎಂಬ ಭಾವನೆಯೂ ಅಧಿಕಾರಿ ವರ್ಗದ ಮನಸ್ಸಿನಲ್ಲಿ ಬಂದಿತ್ತು. ಇದರ ಮಧ್ಯೆಯೂ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪ ಚುನಾವಣೆ ನಡೆದು ದೋಸ್ತಿ ಹೊಂದಾಣಿಕೆ ಯಶಸ್ವಿಯೂ ಆಗಿ ಇನ್ನೇನು ದೋಸ್ತಿ ಗಟ್ಟಿ ಎಂಬ ಸಂತೋಷ ಉಂಟಾಗಿತ್ತು.
ಲೋಕಸಭೆ ಚುನಾ ವಣೆಯಲ್ಲೂ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ, ಸೀಟು ಹಂಚಿಕೆಯ ಕಸರತ್ತುಗಳು ಪ್ರಾರಂಭವಾದ ನಂತರ ತಳಮಟ್ಟದಲ್ಲಿ ಎರಡೂ ಪಕ್ಷಗಳಲ್ಲಿ ಕಾರ್ಯಕರ್ತರು, ಮುಖಂಡರ ವಿರೋಧ, ಟಿಕೆಟ್ ಘೋಷಣೆಯಾದ ನಂತರ ಕೈ ಕೊಡುವ ವಿದ್ಯಮಾನಗಳು ಹಾಗೂ ಮತದಾನದ ನಂತರದ ಫಲಿತಾಂಶ ನಿಜಕ್ಕೂ ಎರಡೂ ಪಕ್ಷದ ಬುಡ ಅಲ್ಲಾಡಿಸಿದವು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪರಸ್ಪರ ವಿಶ್ವಾಸದಿಂದ ಕೆಲಸ ಮಾಡಲಿಲ್ಲ.
ವೇದಿಕೆಯಲ್ಲಿ ಬಹಿರಂಗವಾಗಿ ಏನೇ ಭಾಷಣ ಮಾಡಿದರೂ ಆಂತರಿಕವಾಗಿ ಬೇರೆಯದೇ ಲೆಕ್ಕಾಚಾರದಡಿ ತಮಗಾಗದವರ ಸೋಲಿಗೆ ವೈಯಕ್ತಿಕ ಅಜೆಂಡಾದಡಿ ತಮ್ಮ, ತಮ್ಮ ಕೈಲಾದ “ಕಾಣಿಕೆ’ ಸಲ್ಲಿಸಿದರು ಎಂಬುದು ಫಲಿತಾಂಶ ಹೊರ ಬಿದ್ದ ನಂತರ ಒಂದೊಂದೇ ಬಹಿರಂಗವಾಗುತ್ತಾ ಹೋಯಿತು. ಕಾಂಗ್ರೆಸ್‌ನ ಕೆಲವು ನಾಯಕರಂತೂ ಮೈತ್ರಿ ಹೆಚ್ಚು ದಿನ ಉಳಿದರೆ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬ ಸಂಗತಿಯನ್ನು ಹೊರ ಹಾಕಿದರು. ಜತೆಗೆ, ಬಹಿರಂಗವಾಗಿಯೇ ದೇವೇಗೌಡರ ಕುಟುಂಬ, ಎಚ್.ಡಿ.ಕುಮಾರಸ್ವಾಮಿ ಹಾಗೂ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು.
ಅತೃಪ್ತರ ಆಟ: ಇದರ ಮಧ್ಯೆಯೇ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಸಚಿವ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಸಂಸದೀಯ ಕಾರ್ಯದರ್ಶಿ ಸ್ಥಾನ ಸೇರಿ ಎಲ್ಲ ಹುದ್ದೆ ಹೊಂದಿದ್ದರೂ ಒಂದು ಅತೃಪ್ತರ ಗುಂಪು ಸದಾ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಲೇ ಇತ್ತು. ಇದರ ಮಾಹಿತಿ ಬದಲಿ ಸರ್ಕಾರದ ರಚನೆಯ ಪ್ರಯತ್ನದಲ್ಲಿರುವ ಬಿಜೆಪಿಗೆ ಗೊತ್ತಿತ್ತು. ಅತೃಪ್ತರ ಬೇಡಿಕೆಗಳ ಮಾಹಿತಿ ಪಡೆದ ಬಿಜೆಪಿ, ಸಮಯ ಕಾದು “ರಂಗಪ್ರವೇಶ’ ಮಾಡಿ ಹದಿನೈದು ಶಾಸಕರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಯಿತು.
ಇದರೊಂದಿಗೆ ಸಮ್ಮಿಶ್ರ ಸರ್ಕಾರ ಪತನದ ಹಾದಿ ಹಿಡಿಯಿತು. ಇದರೊಂದಿಗೆ 2004ರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 20 ತಿಂಗಳು, 2006ರ ಬಿಜೆಪಿ-ಜೆಡಿಎಸ್ ಸರ್ಕಾರ 20 ತಿಂಗಳು, 2018 ರ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಹದಿನಾಲ್ಕು ತಿಂಗಳು ಮಾತ್ರ ಆಯುಷ್ಯ ಹೊಂದಿದಂತಾಗಿದೆ.
ಕೌಂಟ್‌ಡೌನ್ ಆರಂಭ ಯಾವಾಗ?: ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಾದ ನಂತರ ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖೀಲ್ ಕುಮಾರಸ್ವಾಮಿ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಹಾಗೂ ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಸೇರಿದಂತೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರೇ ಮೈತ್ರಿ ಅಭ್ಯರ್ಥಿಗಳಾಗಿ ಸೋಲು ಅನುಭವಿಸಿದ್ದರು. ಇಲ್ಲಿಂದ ಸಮ್ಮಿಶ್ರ ಸರ್ಕಾರದ ಕೌಂಟ್ ಡೌನ್ ಆರಂಭವಾಯಿತು ಎಂದೇ ಹೇಳಬಹುದು.
* ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.