ಪಿಎಫ್‌ಐ ನನ್ನಿಂದಲೇ ಬೆಳೆದಿದ್ದು ಅನ್ನುವುದು ಸುಳ್ಳು: ಸಿದ್ದರಾಮಯ್ಯ ಕಿಡಿ
ಬಿಜೆಪಿ, ಸಂಘ ಪರಿವಾರ ಸುಳ್ಳಿನ ಭಜನೆ ಮಾಡಿದರೆ ಜನ ನಂಬುವುದಿಲ್ಲ
Team Udayavani, Sep 29, 2022, 6:08 PM IST
ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿಎಫ್‌ಐ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಬಿಜೆಪಿ ಆರೋಪವನ್ನು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
“ಸುಳ್ಳು” ಬಿಜೆಪಿ ಮತ್ತು ಸಂಘ ಪರಿವಾರದವರ ಮನೆ ದೇವರು. ಆಧಾರ ರಹಿತ ಸುಳ್ಳು ಪ್ರಚಾರಗಳಿಂದಲೇ ತಮ್ಮ ಅಸ್ತಿತ್ವ ಉಳಿಸಿಕೊಂಡಿರುವ ಈ ಪರಿವಾರ ನನ್ನ ವಿರುದ್ಧ ಇದುವರೆಗೂ ಸಾವಿರದೊಂದು ಸುಳ್ಳುಗಳನ್ನು ಪ್ರಚಾರ ಮಾಡಿದೆ. ಈ ಸುಳ್ಳುಗಳಲ್ಲಿ ಪಿಎಫ್‌ಐ ಸಂಘಟನೆ ನನ್ನಿಂದಲೇ ಬೆಳೆದಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿಎಫ್‌ಐ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಸಾವಿರ ಸುಳ್ಳುಗಳನ್ನು ಹಿಂದಕ್ಕೆ ಪಡೆದಿದ್ದೇನೆ ಎಂದು ಸುಳ್ಳು ಉದುರಿಸಿಕೊಳ್ಳುತ್ತಾ ತಿರುಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಗೂ ಪಿಎಫ್‌ಐಗೂ ವ್ಯತ್ಯಾಸವೇ ಇಲ್ಲ, ಯಾಕೆಂದರೆ..: ಬಿ.ಸಿ.ನಾಗೇಶ್
ಇದೇ ಆರೋಪವನ್ನು ಈ ಹಿಂದೆಯೂ ಮಾಡಿದ್ದರು. ಆಗಲೇ ನಾನು ಬಿಜೆಪಿ ಸರ್ಕಾರಕ್ಕೆ ಈ ಬಗ್ಗೆ ನಾಲ್ಕು ಪತ್ರಗಳನ್ನು ಬರೆದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿಎಫ್‌ಐ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆಯೇ? ಯಾವುದೇ ರಾಜಕೀಯ ಪಕ್ಷ ಮತ್ತು ಸಂಘಟನೆಗಳ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತೇ ಎನ್ನುವ ಪ್ರಶ್ನೆ ಕೇಳಿದ್ದೆ.ನನ್ನ ಪ್ರಶ್ನೆಗಳಿಗೆ ಬಿಜೆಪಿ ಸರ್ಕಾರವೇ ನೀಡಿರುವ ಉತ್ತರದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾವುದೇ ಪಿಎಫ್‌ಐ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದರ ಬಗ್ಗೆ ಉಲ್ಲೇಖಗಳೇ ಇಲ್ಲ ಎಂದಿದ್ದಾರೆ.
ನಾನು ಮುಖ್ಯಮಂತ್ರಿ ಆಗಿದ್ದ ಸರ್ಕಾರದ ಅವಧಿಯಲ್ಲಿ ರೈತ, ದಲಿತ, ಕಾರ್ಮಿಕ, ಕಮ್ಯುನಿಸ್ಟ್ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರುಗಳ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಬಗ್ಗೆ ಬಿಜೆಪಿ ಸರ್ಕಾರವೇ ಉತ್ತರಿಸಿದೆ. ಕಾಂಗ್ರೆಸ್ ಸರ್ಕಾರ ಹಿಂದಕ್ಕೆ ಪಡೆದ ಪ್ರಕರಣಗಳ ಸ್ವರೂಪ ಮತ್ತು ಘಟನೆಗಳ ಕುರಿತಾಗಿ ಬಿಜೆಪಿ ಸರ್ಕಾರವೇ ನೀಡಿರುವ ಉತ್ತರದ ಕೆಲವೊಂದು ಸ್ಯಾಂಪಲ್‌ಗಳನ್ನು ಮಾತ್ರ ಇಲ್ಲಿ ನೀಡಿದ್ದೇನೆ. ನೂರಾರು ಪುಟಗಳಲ್ಲಿ ಸರ್ಕಾರ ಉತ್ತರ ನೀಡಿದೆ. ಯಾವ ಉತ್ತರದಲ್ಲೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿಎಫ್‌ಐ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳ ಉಲ್ಲೇಖವಿಲ್ಲ ಎಂದು ಹೇಳಿದ್ದಾರೆ.
ಹಿಂಪಡೆಯಲಾದ ಮೊಕದ್ದಮೆಗಳ ಪಟ್ಟಿಯನ್ನೂ ಮಾಜಿ ಸಿಎಂ ಬಿಡುಗಡೆ ಮಾಡಿ, ಹಿಂದಕ್ಕೆ ಪಡೆಯಲಾದ ಈ ಪ್ರಕರಣಗಳಲ್ಲಿ ಪಿಎಸ್‌ಐ ಕಾರ್ಯಕರ್ತರು ಆರೋಪಿಗಳಾಗಿದ್ದರು ಎನ್ನುವುದರ ಬಗ್ಗೆ ಬಿಜೆಪಿ ಸರ್ಕಾರ ಕೊಟ್ಟ ಉತ್ತರದಲ್ಲಿ ಯಾವುದೇ ಉಲ್ಲೇಖಗಳಿಲ್ಲ. ಹೀಗಾಗಿ ಬಿಜೆಪಿ ಮತ್ತು ಪರಿವಾರದ ಮಂದಿ ಸಾರ್ವಜನಿಕವಾಗಿ ಸುಳ್ಳನ್ನೇ ಆರಾಧಿಸುತ್ತಾ, ಸುಳ್ಳನ್ನೇ ಭಜಿಸುತ್ತಾ, ಸುಳ್ಳನ್ನೇ ತೀರ್ಥ ಪ್ರಸಾದದಂತೆ ಹಂಚುತ್ತಾ ತಿರುಗುವುದನ್ನು ನಿಲ್ಲಿಸಬೇಕು. ಯಾವ ಪಿಎಫ್‌ಐ ಕಾರ್ಯಕರ್ತರ ಮೇಲಿನ ಯಾವ ಪ್ರಕರಣವನ್ನು ಕಾಂಗ್ರೆಸ್ ಅವಧಿಯಲ್ಲಿ ಹಿಂದಕ್ಕೆ ಪಡೆಯಲಾಗಿತ್ತು ಎನ್ನುವುದನ್ನು ಬಿಜೆಪಿ ಹೇಳಬೇಕು ಎಂದು ಸವಾಲೆಸೆದಿದ್ದಾರೆ.
ಸಂಘ ಪರಿವಾರದ ಅಂಗಳದಲ್ಲೇ ಇರುವ ಪ್ರಮೋದ್ ಮುತಾಲಿಕ್ ಅವರೇ ಕೆಲವು ದಿನಗಳ ಹಿಂದಷ್ಟೇ, “ಪಿಎಫ್‌ಐ ಮತ್ತು ಎಸ್‌ಡಿಪಿಐ ಎರಡಕ್ಕೂ ಬಿಜೆಪಿಯೇ ಪೋಷಕ. ಬಿಜೆಪಿಯಿಂದಲೇ ಈ ಎರಡೂ ಬೆಳೆದಿವೆ” ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಇದುವರೆಗೂ ಬಿಜೆಪಿಯವರಾಗಲೀ, ಸಂಘ ಪರಿವಾರವಾಗಲೀ ಅಲ್ಲಗಳೆದಿಲ್ಲ ಏಕೆ? ಹಾಗಾದರೆ ಪ್ರಮೋದ್ ಮುತಾಲಿಕ್ ಅವರ ಮಾತು ನಿಜ ತಾನೆ?
ಹಾಗೆಯೇ ಸಂಘ ಪರಿವಾರದ ಅಂಗಳದಲ್ಲೇ ಇರುವ ಸತ್ಯಜಿತ್ ಸುರತ್ಕಲ್ ಅವರು, ಪಿಎಫ್‌ಐ ಮತ್ತು ಎಸ್‌ಡಿಪಿಐ ಎರಡೂ ಬಿಜೆಪಿಯ ಬಿ ಟೀಮ್ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಬಿಜೆಪಿ ಮತ್ತು ಸಂಘ ಪರಿವಾರ ಅಲ್ಲಗಳೆದಿಲ್ಲ ಎಂದು ಹೇಳಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಚಟುವಟಿಕೆಗಳಿಂದ ಅತ್ಯಂತ ಹೆಚ್ಚು ರಾಜಕೀಯ ಲಾಭ ಮಾಡಿಕೊಳ್ಳುತ್ತಿರುವುದು ಬಿಜೆಪಿಯೇ ಎನ್ನುವುದು ಇಡಿ ರಾಜ್ಯದ ಜನತೆಗೆ ಗೊತ್ತಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರು, ಕಾರ್ಮಿಕರು, ದಲಿತರು, ಪೌರ ಕಾರ್ಮಿಕರು, ಕಬ್ಬು ಬೆಳೆಗಾರರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದೇ ಹೆಚ್ಚು. ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳು ಮುಸ್ಲಿಮರಾಗಿದ್ದಾರೆ. ಅವರೆಲ್ಲರನ್ನೂ ಪಿಎಫ್‌ಐ ಎಂದು ಬಿಂಬಿಸಿ ತಮ್ಮ ಸುಳ್ಳಿನ ಭಜನೆ ಮಾಡಿದರೆ ಜನ ನಂಬುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.