ಜೈನ ಮುನಿ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಬಿಜೆಪಿ ಪಟ್ಟು
ಉಭಯ ಸದನಗಳಲ್ಲಿ ಧ್ವನಿಯೆತ್ತಿದ ಶಾಸಕರು
Team Udayavani, Jul 11, 2023, 7:00 AM IST
ಬೆಂಗಳೂರು:ಜೈನಮುನಿ ಕಾಮಕುಮಾರ ನಂದಿ ಮಹಾರಾಜ್ ಭೀಕರ ಹತ್ಯೆ ಪ್ರಕರಣ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅನುರಣಿಸಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದಾರೆ. ಜತೆಗೆ ಟಿ.ನರಸಿಪುರದಲ್ಲಿ ನಡೆದ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣದ ಬಗ್ಗೆಯೂ ಬಿಜೆಪಿ ಧ್ವನಿ ಎತ್ತಿದ್ದು, ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಆರೋಪಿಸಿದೆ.
ಶೂನ್ಯವೇಳೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಶಾಸಕರಾದ ಅಭಯ್ ಪಾಟೀಲ್, ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಬಸನಗೌಡ ಪಾಟೀಲ್ ಯತ್ನಾಳ್, ವಿ.ಸುನಿಲ್ ಕುಮಾರ್, ಸಿದ್ದು ಸವದಿ ಮೊದಲಾದವರು ಘಟನೆಗೆ ಸಂಬಂಧಪಟ್ಟಂತೆ ಸರ್ಕಾರದ ಗಮನ ಸೆಳೆದರು. ಸಿಬಿಐ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ. ಈ ಪ್ರಕರಣದಲ್ಲಿ ಒಂದು ಕೋಮಿಗೆ ಸೇರಿದ ವ್ಯಕ್ತಿಗಳ ತುಷ್ಟೀಕರಣಕ್ಕೆ ಪ್ರಯತ್ನ ನಡೆಯುತ್ತಿದೆ. ಹಣಕಾಸು ಕಾರಣಕ್ಕೆ ಕೊಲೆಯಾಗಿದೆ ಎಂದು ಬಿಂಬಿಸಲಾಗುತ್ತಿದೆ. ಎಲ್ಲ ಸತ್ಯಾಸತ್ಯತೆ ಬಯಲಾಗಬೇಕಾದರೆ ತಕ್ಷಣ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಶಾಸಕ ಅಭಯ್ ಪಾಟೀಲ್ ಮಾತನಾಡಿ, ಈಗ ಅನೇಕ ಊಹಾಪೋಹಗಳನ್ನು ಹರಿಬಿಡಲಾಗುತ್ತಿದೆ. ಪೊಲೀಸರು ಎರಡನೇ ಆರೋಪಿಯ ಹೆಸರು ಹೇಳುತ್ತಿಲ್ಲ. ಜತೆಗೆ ಆರ್ಥಿಕ ವ್ಯವಹಾರದ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ದಿಗಂಬರ ಸ್ವಾಮೀಜಿಗಳು ಯಾವುದೇ ಕಾರಣಕ್ಕೂ ಹಣ ಮುಟ್ಟುವುದಿಲ್ಲ. ಆದರೆ ಇದೇ ರೀತಿಯ ಹೇಳಿಕೆ ಕೊಡಬೇಕೆಂದು ಪೊಲೀಸರು ಎಲ್ಲರ ಮೇಲೆ ಒತ್ತಡ ಹೇರುತ್ತಿದ್ದಾರೆ. ನಮಗೆ ಮೇಲಿನಿಂದ ಒತ್ತಡ ಇದೆ ಎನ್ನುತ್ತಿದ್ದಾರೆ. ಇದರಿಂದ ಜೈನ ಸಮುದಾಯದ ಹೆಸರು ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಸಿಬಿಐ ತನಿಖೆ ಸೂಕ್ತ ಎಂದು ಅಭಿಪ್ರಾಯಪಟ್ಟರು.
ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಇದು ನಾಗರಿಕ ಸಮಾಜ ತಲೆತಗ್ಗಿಸುವಂಥ ಕೃತ್ಯ. ಜೈನ ಮುನಿಗಳ ಜತೆಗೆ ನಾನು ನಿಕಟ ಸಂಪರ್ಕ ಹೊಂದಿದ್ದೆ. ಅವರು ನನ್ನ ಕ್ಷೇತ್ರದ ಕವಟಗುಪ್ಪ ಗ್ರಾಮದವರು. ಜಮೀನುದಾರ ವಂಶಸ್ಥರಾಗಿದ್ದರೂ ಎಲ್ಲವನ್ನೂ ತ್ಯಜಿಸಿ ಜೈನ ಮುನಿಯಾಗಿದ್ದರು. 15 ವರ್ಷಗಳ ಕಾಲ ದಿಲ್ಲಿಯಲ್ಲಿದ್ದು ಶಾಂತಿ ಹಾಗೂ ಅಹಿಂಸೆಯ ಸಂದೇಶ ಸಾರಿದ್ದರು. ದೂರು ದಾಖಲಾದ 6 ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಿಷ್ಪಕ್ಷ ತನಿಖೆ ನಡೆಸಿ ಆರೋಪಿಗಳಿಗೆ ಮರಣ ದಂಡನೆಯಾಗುವಂತೆ ನೋಡಿಕೊಳ್ಳಬೇಕು. ಪತ್ರಿಕೆಗಳಲ್ಲಿ ಬಂದಿದ್ದೆಲ್ಲ ಬ್ರಹ್ಮಲಿಪಿಯಲ್ಲ. ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಬೇಡ ಎಂದು ಅಭಿಪ್ರಾಯಪಟ್ಟರು.
ಪಾಕಿಸ್ತಾನ ಧ್ವಜ ಹಾರುತ್ತಿದೆ:
ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಈ ಸರ್ಕಾರ ಬಂದ ನಂತರ ಒಂದು ಕೋಮಿನವರ ತುಷ್ಟೀಕರಣಕ್ಕೆ ಪ್ರಯತ್ನ ನಡೆಯುತ್ತಿದೆ. ಪ್ರಕರಣವನ್ನು ಮುಚ್ಚಿ ಹಾಕುವುದಕ್ಕೆ ಹಣಕಾಸು ಪ್ರಕರಣದ ನೆಪ ಹೇಳುತ್ತಿದ್ದಾರೆ. ಇದು ಪೊಲೀಸ್ ಇಲಾಖೆಯ ಸೃಷ್ಟಿ. ಪೊಲೀಸರು ರಾಜಕೀಯ ಒತ್ತಡದ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಈ ಸರ್ಕಾರ ಬಂದ ನಂತರ ಎಲ್ಲೆಲ್ಲೂ ಪಾಕಿಸ್ತಾನದ ಧ್ವಜ ಹಾರಿಸಲಾಗುತ್ತಿದೆ. ಟಿ.ನರಸೀಪುರದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ನಡೆದಿದೆ. ಸರ್ವ ಸಂಘ ಪರಿತ್ಯಾಗಿಗಳಾದ ಜೈನ ಮುನಿಗಳ ಹತ್ಯೆ ಮಾಡಿರುವುದು ಆತಂಕಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿಗಳು ಸಂತಾಪವನ್ನೂ ವ್ಯಕ್ತಪಡಿಸಿಲ್ಲ. ಹೀಗಾಗಿ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಮಾಡಬೇಕೆಂದು ಆಗ್ರಹಿಸಿದರು.
ಮಾಜಿ ಸಚಿವ ವಿ.ಸುನಿಲ್ ಕುಮಾರ್ ಮಾತನಾಡಿ, ಈ ಪ್ರಕರಣವನ್ನು ನಾವೆಲ್ಲರೂ ಒಂದೇ ಧ್ವನಿಯಿಂದ ಖಂಡಿಸಬೇಕು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬರ ಹೆಸರನ್ನು ಮಾತ್ರ ಉಲ್ಲೇಖೀಸಲಾಗಿದೆ. ಇದು ಅನುಮಾನ ಸೃಷ್ಟಿಸಿದೆ. ತನಿಖೆಯ ದಿಕ್ಕು ಪ್ರಾಥಮಿಕ ಹಂತದಲ್ಲೇ ತಪ್ಪಿದೆ. ಕೇವಲ 6 ಲಕ್ಷ ರೂ.ಗೆ ಒಂದು ಕೊಲೆ ನಡೆದಿದೆ ಎಂದರೆ ನಂಬಲು ಸಾಧ್ಯವಿಲ್ಲ. ಸ್ಥಳೀಯ ಪೊಲೀಸರು ಸತ್ಯವನ್ನು ಮುಚ್ಚಿಡುವ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲೇಬೇಕು ಎಂದು ಆಗ್ರಹಿಸಿದರು.
ಸಿದ್ದು ಸವದಿ ಮಾತನಾಡಿ, ಐಸಿಸ್ ಉಗ್ರರಿಗಿಂತಲೂ ಭೀಕರವಾಗಿ ಹತ್ಯೆ ನಡೆಸಲಾಗಿದೆ. ಇದರ ಹಿಂದೆ ಬೇರೆ ಷಡ್ಯಂತ್ರ ಇರುವಂತೆ ಕಾಣುತ್ತಿದೆ. ಉತ್ತರ ಪ್ರದೇಶ ರೀತಿಯಲ್ಲಿ ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಇದೊಂದು ಪೂರ್ವ ನಿಯೋಜಿತ ಪಾಶವೀ ಕೃತ್ಯ. ಮಾತು ಬಿರುಸಾಗಿದ್ದಾಗ ಮಾತ್ರ ಜಗಳವಾಗುತ್ತದೆ. ಆದರೆ ಜೈನ ಮುನಿಗಳು ಮೌನಕ್ಕೆ ಶರಣಾಗಿದ್ದರು. ಇನ್ನು, ಟಿ.ನರಸಿಪುರದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ. ಹೊಸ ಸರ್ಕಾರ ಬಂದ ನಂತರ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ. ವ್ಯವಸ್ಥೆ ಬಿಗಿಗೊಳಿಸಲು ಸರ್ಕಾರ ಸಿಬಿಐ ತನಿಖೆ ನಡೆಸಬೇಕು.
– ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ
ಅಗತ್ಯ ಬಿದ್ದರೆ ನಾನೇ ಉತ್ತರಿಸುತ್ತೇನೆ: ಸಿಎಂ
ಜೈನ ಮುನಿಗಳ ಹತ್ಯೆ ಅತ್ಯಂತ ಕ್ರೂರ ಘಟನೆ. ಇದು ಖಂಡನೀಯ. ಈ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಥಳಕ್ಕೆ ತೆರಳಿದ್ದಾರೆ. ಅವರು ಬಂದ ಬಳಿಕ ಮಂಗಳವಾರ ಉತ್ತರ ನೀಡಲಾಗುವುದು. ಅಗತ್ಯ ಬಿದ್ದರೆ ನಾನೇ ಉತ್ತರ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟ ಚರ್ಚೆಯನ್ನು ಸಂಪೂರ್ಣವಾಗಿ ಕೇಳಿಸಿಕೊಂಡ ಬಳಿಕ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ಎಲ್ಲ ಸದಸ್ಯರು ಮಾತನಾಡಿದ್ದಾರೆ. ಕೆಲವರು ಇದರಲ್ಲಿ ರಾಜಕೀಯ ಬೆರೆಸುವ ಪ್ರಯತ್ನವನ್ನೂ ಮಾಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಆಮರಣಾಂತ ಉಪವಾಸ ಘೋಷಿಸಿದ್ದ ಹುಬ್ಬಳ್ಳಿಯ ಜೈನ ಮುನಿಗಳ ಜತೆಗೆ ಮಾತನಾಡಿದ್ದೇವೆ. ಅವರು ಉಪವಾಸ ಕೈ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
MUST WATCH
ಹೊಸ ಸೇರ್ಪಡೆ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.